ಮಂಗಳವಾರ, ಫೆಬ್ರವರಿ 18, 2020
23 °C

ಬೆನಜೀರ್‌ ಹತ್ಯೆ ಪ್ರಕರಣ: ಪ್ರಮುಖ ಸಾಕ್ಷಿಗೆ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್‌ ಭುಟ್ಟೊ ಅವರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯೆನ್ನಲಾದ ಐಎಸ್ಐ ಪದಾಧಿಕಾರಿಗೆ ಜೀವ ಬೆದರಿಕೆಯ ಕಾರಣ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಲು  ನಿರಾಕರಿಸಿದ್ದಾನೆ.

ಎರಡು ಅವಧಿಗೆ ಪ್ರಧಾನಿಯಾಗಿದ್ದ ಭುಟ್ಟೊ ಅವರನ್ನು 2007ರಲ್ಲಿ ರಾವಲ್ಪಿಂಡಿಯಲ್ಲಿ ಬಾಂಬ್‌ ಸ್ಫೋಟಿಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡಿದ್ದ ಪಾಕಿಸ್ತಾನ ಸರ್ಕಾರವು ಹತ್ಯೆಗೆ ತೆಹ್ರೀಕ್‌-ಇ-ತಾಲಿಬಾನ್‌ (ಟಿಟಿಪಿ) ಹೊಣೆ ಎಂದು ಪ್ರಕಟಿಸಿತ್ತು.

ಪ್ರಕರಣದ ಪ್ರತ್ಯಕ್ಷ ಸಾಕ್ಷಿ, ಕರಾಕ್‌ ಜಿಲ್ಲೆಯ ಖೈಬರ್‌ ಫುಕ್ತುಂಖ್ವಾ ಪ್ರದೇಶದ ನಿವಾಸಿ ಹಾಗೂ ಇಂಟರ್‌ ಸರ್ವಿಸಸ್‌ ಇಂಟೆಲಿಜೆನ್ಸ್‌ (ಐಎಸ್ಐ)ನ ಮಾಜಿ ಟೆಲಿಫೋನ್‌ ಆಪರೇಟರ್‌ ತನಗೆ ಜೀವ ಬೆದರಿಕೆ ಇರುವ ಕಾರಣ ಸಾಕ್ಷ್ಯ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾನೆ.

ಶಂಕಿತ ಆರೋಪಿಗಳು ಹಾಗೂ ಟಿಟಿಪಿ ಭಯೋತ್ಪಾದಕರ ನಡುವೆ ನಡೆದಿದ್ದ ಸಂಭಾಷಣೆಗಳ ಬಗೆಗಿನ ವಿವರಗಳನ್ನು ಭುಟ್ಟೊ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಎದುರು ಈ ಹಿಂದೆ ಆತ ದಾಖಲಿಸಿದ್ದ. ಇದೀಗ ಆತ ಸಾಕ್ಷ್ಯ ಹೇಳಲು ನಿರಾಕರಿಸಿದ್ದರಿಂದ ಈ ಹಿಂದೆ ಆತ ನೀಡಿದ್ದ ಹೇಳಿಕೆಗಳನ್ನು ನ್ಯಾಯಾಲಯವು ಕೈಬಿಟ್ಟಿದೆ.

ಇದೇ ವೇಳೆ, ಪ್ರಕರಣದ ಮತ್ತೋರ್ವ ಸಾಕ್ಷಿಯಾದ ಅಮೆರಿಕದ ಪತ್ರಕರ್ತ ಮಾರ್ಕ್‌ ಸೈಗಲ್‌ ಸಹ ನ್ಯಾಯಾಲಯದ ಮುಂದೆ ಹಾಜರಾಗಲು ನಿರಾಕರಿಸಿರುವ ಕಾರಣ, ವಿಡಿಯೊ ಚಿತ್ರೀಕರಣದ ಮೂಲಕ ಅವರು ತಮ್ಮ ಹೇಳಿಕೆಯನ್ನು ನೀಡಬಹುದು ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)