ಮಂಗಳವಾರ, ಜುಲೈ 14, 2020
26 °C

ಬೆರಗು ಕಂಗಳ ಹುಡುಗ ಮಹಾನ್ ಶಿಲ್ಪಿಯಾದ!

ಸುಕುಮಾರ್ ಮುನಿಯಾಲ್ Updated:

ಅಕ್ಷರ ಗಾತ್ರ : | |

ಬೆರಗು ಕಂಗಳ ಹುಡುಗ ಮಹಾನ್ ಶಿಲ್ಪಿಯಾದ!

ಹೆಬ್ರಿ: ಪ್ರಸಿದ್ಧ ಶಿಲ್ಪಿ ರೆಂಜಾಳ ಆರ್. ಗೋಪಾಲಕೃಷ್ಣ ಶೆಣೈ ಕರಿಯಕಲ್ಲಿನ ಊರು ಕಾರ್ಕಳದಲ್ಲಿ ಶಿಲ್ಪ ಕೆತ್ತನೆ ನಡೆಸುತ್ತಿದ್ದ ದಿನಗಳಿವು. ಸಪೂರ ದೇಹದ ನಸುಗಪ್ಪು ಬಣ್ಣದ ಹುಡುಗ ಬೆರಗುಕಣ್ಣಿನಿಂದ ನಿತ್ಯವು ಬಂದು ಗಂಟೆಗಟ್ಟಲೆ ತದೇಕಚಿತ್ತದಿಂದ ವೀಕ್ಷಿಸುತ್ತಿದ್ದ. ಆತನ ಕಂಗಳಲ್ಲಿದ್ದುದು ಒಂದೇ ಕನಸು. ತಾನೂ ದೊಡ್ಡ ಶಿಲ್ಪಿ ಆಗಬೇಕು!ವಾಸ್ತುಶಿಲ್ಪಿ ಜೋಗಪ್ಪ ಆಚಾರ್ಯ ಮತ್ತು ಕಲ್ಯಾಣಿ ದಂಪತಿಯ ಪುತ್ರ ಕನಸನ್ನು ಮೀರಿ ಬೆಳೆದ.

ಉಡುಪಿ ತಾಲ್ಲೂಕಿನ ಕಟಪಾಡಿಯಲ್ಲಿ1926ರಲ್ಲಿ ಜನಿಸಿದ ಶ್ಯಾಮರಾಯ ಆಚಾರ್ಯ ಶ್ರೀಮದ್ ಭುವನೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ವಿದ್ಯಾಭ್ಯಾಸ ಮುಗಿಸಿದರು.ಅದಾಗಲೇ ಪ್ರಸಿದ್ಧ ವಾಸ್ತು ಮತ್ತು ಕಾಷ್ಠಶಿಲ್ಪಿ ತಂದೆಯವರಲೇ ಕೆತ್ತನೆ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ತಂದೆಯ ಕೆತ್ತನೆ ಕಾರ್ಯ ನೋಡಿಯೇ ಬೆರಗಾಗಿದ್ದ ಬಾಲಕ ಶ್ಯಾಮರಾಯರನ್ನು ಬಾಲ್ಯದಿಂದಲೂ  ಬಹಳವಾಗಿ ಸೆಳೆದುದು ರೆಂಜಾಳ ಗೋಪಾಲಕೃಷ್ಣ ಶೆಣೈ ಅವರ ಕರಕೌಶಲ.ಅವರಂತೆಯೇ ದೊಡ್ಡ ಶಿಲ್ಪಿ ಆಗಬೇಕೆಂಬ ಹಂಬಲ ಬಾಲ್ಯದಲ್ಲೇ ಚಿಗುರೊಡೆದಿತ್ತು. 1947ರಿಂದ ಗೋಪಾಲಕೃಷ್ಣ ಶೆಣೈ ಸಹಾಯಕರಾಗಿ ಸೇರಿಕೊಂಡರು. 22 ವರ್ಷ ಕಾಲ ಕಾಷ್ಠ, ಪಂಚಲೋಹ, ಚಿನ್ನ, ಬೆಳ್ಳಿ ಮತ್ತು ಶಿಲಾಶಿಲ್ಪ ಕಲೆಗಳಲ್ಲಿ ನಿರಂತರ ತರಬೇತಿ ಪಡೆದರು.ರೆಂಜಾಳರ ಪಾಳಯದಲ್ಲಿ ಸತತ ಎರಡು ದಶಕಗಳಲ್ಲಿ ಅಭ್ಯಾಸನಿರತರಾಗಿದ್ದಾಗ ಆಚಾರ್ಯ ಅವರಿಗಿಂತ ಅವರೊಳಗಿದ್ದ ಶಿಲ್ಪಕಲೆ ಪೂರ್ಣ ಪ್ರಮಾಣದಲ್ಲಿ ಅರಳಿತ್ತು. ಅಷ್ಟರಲ್ಲೇ ಗುರುವನ್ನೂ ಮೀರಿಸುವ ಶಿಲ್ಪಿ ರೂಪ ತಳೆದಿದ್ದ.ಶಿಲ್ಪಕಲೆಯ ಕಲ್ಪತರು: ಗುರುವಿಗೆ ಭಕ್ತಿಪೂರ್ವಕವಾಗಿ ನಮಿಸಿ, 1970ರಲ್ಲಿ  ಕಾರ್ಕಳದಲ್ಲಿ ಸ್ವತಂತ್ರವಾಗಿ  ಶ್ರೀವಿಜಯ ಶಿಲ್ಪಕಲಾ ಶಾಲೆ ಆರಂಭಿಸಿದ ಶ್ಯಾಮರಾಯ ಆಚಾರ್ಯರು  ಶಾಸ್ತ್ರೋಕ್ತ ಶಿಲ್ಪಕಲಾ ಪರಂಪರೆ ಮುಂದುವರಿಯಲು ತಳಪಾಯ ಹಾಕಿದರು.ಇಂದು ಕಾರ್ಕಳದಲ್ಲಿ ನೂರಾರು ಶಿಲ್ಪಿಗಳು ರೂಪುಗೊಂಡಿರುವುದು ಶ್ಯಾಮರಾಯ ಆಚಾರ್ಯರ ದೂರದೃಷ್ಟಿಯ ಫಲ. ನೂರಾರು ವಿದ್ಯಾರ್ಥಿಗಳಿಗೆ ಶಿಲ್ಪಕಲಾ ತರಬೇತಿ ನೀಡಿದ ಅವರು ಭಾವಿ ಶಿಲ್ಪಿಗಳ ಬಳಗವನ್ನೇ ಸಮಾಜಕ್ಕೆ ಕೊಡುಗೆಯಾಗಿ ನೀಡಿದರು.ಕಾರ್ಕಳಕ್ಕೆ ಅಂತರರಾಷ್ಟ್ರೀಯ ಖ್ಯಾತಿ: ರೂಪಮಂಡನಾ, ತಂತ್ರ ಸಮುಚ್ಛಯ ಮುಂತಾದ ಗ್ರಂಥಗಳನ್ನು ಅಭ್ಯಾಸ ಮಾಡಿದ ಶ್ಯಾಮರಾಯರು 700ಕ್ಕೂ ಮಿಕ್ಕಿ ವಿಭಿನ್ನ ಶೈಲಿಯ ಶಿಲ್ಪಗಳನ್ನು ರಚಿಸಿದ್ದಾರೆ. ದೇಶ ವಿದೇಶದಲ್ಲಿ ಅವರ ಕಲಾಕುಸುರಿಗಳು ರಾರಾಜಿಸುತ್ತಿವೆ.ಮಹಾವೀರನ 13.5 ಅಡಿ ಎತ್ತರದ ಶಿಲಾಮೂರ್ತಿ ದೆಹಲಿಯ ಕುತುಬ್ ಮಿನಾರ್ ಪಕ್ಕದಲ್ಲಿ ರಾರಾಜಿಸುತ್ತಿದೆ. 17 ಅಡಿ ಎತ್ತರದ ಆಸಿನ ಭಂಗಿಯ ಚಂದ್ರಪ್ರಭಾ ತೀರ್ಥಂಕರ ಮೂರ್ತಿ ಅವರ ಪ್ರತಿಭೆಗೆ ಹಿಡಿದ ಕನ್ನಡಿ. ದೇಶಾದ್ಯಂತ ಹಲವಾರು ದೇವಾಲಯಗಳಿಗೆ ಇವರು ವಾಸ್ತುಶಿಲ್ಪದ ಬುನಾದಿ ಹಾಕಿದ್ದಾರೆ.1970ರಲ್ಲಿ ಮಂಗಳೂರಿನಲ್ಲಿ ಜರುಗಿದ ಅಖಿಲ ಭಾರತ ವಿಶ್ವಕರ್ಮ ಮಹಾ ಸಮ್ಮೇಳನದಲ್ಲಿ ‘ಪ್ರಥಮ ಶಿಲಾಶಿಲ್ಪಿ’ ಗೌರವಕ್ಕೆ ಭಾಜನರಾದ ಆಚಾರ್ಯರನ್ನು ಆ ಬಳಿಕ ಸಾಲು ಸಾಲು ಪ್ರಶಸ್ತಿ, ಹಾರ ತುರಾಯಿಗಳು ಹುಡುಕಿಕೊಂಡು ಬಂದವು.1974ರಿಂದ ಯಶೋಗಾಥೆ ಆರಂಭ:  ಕಾರ್ಕಳದ ಕಾಬೆಟ್ಟಿನಲ್ಲಿ ಶ್ರೀ ವಿಜಯ ಶಿಲ್ಪಕಲಾ ಶಾಲೆಯ ಆರಂಭದಿಂದ ಕಾರ್ಕಳದ ಶಿಲ್ಪಿ ಶ್ಯಾಮರಾಯ ಆಚಾರ್ಯರ ಯಶೋಗಾಥೆ ಆರಂಭಗೊಂಡಿತು. ಕರ್ನಾಟಕ ರಾಜ್ಯ ಶಿಲ್ಪಕಲಾ ಅಕಾಡೆಮಿ ಸ್ಥಾಪಕ ಅಧ್ಯಕ್ಷರಾಗಿ ಆಯ್ಕೆಯಾಗಿ ನಾಡಿನ ಶಿಲ್ಪಕಲೆಗೆ ವಿಶೇಷ ಸೇವೆ ಸಲ್ಲಿಸಿದರು. 1994ರಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಇದ್ದರು.1999ರಲ್ಲಿ ಶಿಲ್ಪಿ ಶ್ಯಾಮರಾಯ ಆಚಾರ್ಯರ ಶ್ರೀವಿಜಯ ಶಿಲ್ಪಕಲಾ ಶಾಲೆಯ ರಜತ ಸಂಭ್ರಮ. ಆ ಸಂಭ್ರಮಕ್ಕೆ ಕಳಸವಿಟ್ಟಂತೆ ಅದೇ ವರ್ಷ ಶಿಲ್ಪಕಲೆಯ ಅತ್ಯುನ್ನತ ಪ್ರಶಸ್ತಿಯಾದ ಜಕಣಾಚಾರಿ ಪ್ರಶಸ್ತಿ ಅರ್ಹವಾಗಿಯೇ ಅವರಿಗೆ ಸಂದಿತು.ಗ್ರಂಥ ರಚನೆ: ಶಿಲ್ಪಿಗಳನ್ನು ಸಮಾಜಕ್ಕೆ ಪರಿಚಯಿಸುವುದಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡರು. ‘ಶ್ರೀ ಕಾಶ್ಯಪ ಶಿಲ್ಪ ಶಾಸ್ತ್ರಂ’ ಎಂಬ ಗ್ರಂಥವನ್ನ ಕನ್ನಡದಲ್ಲಿ ಪ್ರಕಟಿಸಿದರು. ತಮ್ಮ ಬೆಳವಣಿಗೆಗೆ, ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಿ.ವೀರೇಂದ್ರ ಹೆಗ್ಗಡೆ, ಶಿಲ್ಪಶಾಸ್ತ್ರ ಪಂಡಿತ ಮುನಿಯಂಗಳ ಕೃಷ್ಣ ಭಟ್, ಸುಂಕದಕಟ್ಟೆಯ ನಿರಂಜನ ಸ್ವಾಮೀಜಿ, ಕುಕ್ಕಿಕಟ್ಟೆಯ ಕಾಳುತಂತ್ರಿಗಳು, ದೆಹಲಿಯ ಪಿ.ಸಿ.ಜೈನ್ ನೀಡಿದ ಪ್ರೋತ್ಸಾಹವನ್ನು ಶ್ಯಾಮರಾಯ ಆಚಾರ್ಯರು ಸದಾ ಸ್ಮರಿಸುತಿದ್ದರು.ದೇಶ ಕಂಡ ವಹಾನ್ ಶಿಲ್ಪಿ ಕರಿಯಕಲ್ಲಿನ (ಕಾರ್ಕಳ) ಶಿಲೆಯ ಕಲೆಯೊಳಗೆ ಲೀನವಾಗಿದ್ದಾರೆ. ಕರಾವಳಿಯ ಶಿಲ್ಪಕಲಾ ಪ್ರತಿಭೆ ತಾನೇ ಕೆತ್ತಿದ ಖ್ಯಾತಿಯ ಕಲಾ ಮೂರ್ತಿಯ ಪಾದ ಸೇರಿದೆ. ಆದರೆ ಅವರು ಕಾರ್ಕಳದಲ್ಲಿ ಹುಟ್ಟುಹಾಕಿದ ಶಿಲ್ಪ ಕಲಾ ಪರಂಪರೆ ಮಾತ್ರ ಇನ್ನೂ ಜೀವಂತ... 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.