ಸೋಮವಾರ, ಜೂನ್ 14, 2021
22 °C

ಬೆಲ್ಲಕ್ಕೆ ನಂಟರು ಬೇವು ಒಲ್ಲೆನೆಂಬರು

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಬೆಲ್ಲಕ್ಕೆ ನಂಟರು ಬೇವು ಒಲ್ಲೆನೆಂಬರು

ಯೌವನ ಎನ್ನುವುದು ಶಾಶ್ವತವಾದ ಅವಸ್ಥೆಯಾದರೆ ಹೇಗೆ? ಇದು ಯಯಾತಿ ಮತ್ತು ಪುರುವಿನ ಕಥೆಯಲ್ಲ. ಮುಪ್ಪನ್ನು ಗೆಲ್ಲಲು ಹಂಬಲಿಸಿದ ವಿಜ್ಞಾನಿಯ ಪ್ರಯೋಗ ಉಂಟುಮಾಡುವ ಯಡವಟ್ಟಿನ ಕಥೆ.

 

ಪ್ರಯೋಗದಲ್ಲಿ ಏರುಪೇರಾಗಿ, ಪ್ರಯೋಗಕ್ಕೆ ತುತ್ತಾದ ತರುಣನೊಬ್ಬ ವಿಚಿತ್ರ ಮನೋ-ದೈಹಿಕ ಸಮಸ್ಯೆಗೆ ಗುರಿಯಾಗುತ್ತಾನೆ. ಮೃಗ ಸದೃಶ ಶಕ್ತಿ ಹಾಗೂ ದೈಹಿಕ ವಾಂಛೆ ಹೊಂದುವ ಈ ತರುಣ ಅಂದವಾದ ಯುವತಿಯರನ್ನು ಕಾಡಿ ಭೋಗಿಸುತ್ತಾನೆ, ನಂತರ ಕೊಲ್ಲುತ್ತಾನೆ.ಅನೇಕ ಯುವತಿಯರು ಅವನ ದಾಹಕ್ಕೆ ಬಲಿಯಾಗುತ್ತಾರೆ. ಅಂದಹಾಗೆ, ವಾಂಛೆ ಕೆರಳಿದಾಗಲೆಲ್ಲ `ರಸಗುಲ್ಲ~ ಸವಿಯುವುದು ಆ ಯುವಕನಿಗಿಷ್ಟ. ಮೇಲಿನದು, ಒಂದಾನೊಂದು ಕಾಲದ ಮಲಯಾಳಂ ಚಿತ್ರವೊಂದರ ಕಥೆಯಲ್ಲ. `ನಿರ್ದೋಷಿ~ (2009) ಎನ್ನುವ ಕನ್ನಡ ಚಿತ್ರದ ಕಥೆಯಿದು.

`ಸಬ್ಸಿಡಿ ಸಮಿತಿ ಯಾವ ತಪ್ಪನ್ನೂ ಮಾಡಿಲ್ಲ. ಅದು ಮಾಡಿರುವ ಕೆಲಸ ಸರಿಯಾಗಿಯೇ ಇದೆ~ ಎಂದು 2009- 10ನೇ ಸಾಲಿನ ಚಲನಚಿತ್ರ ಸಬ್ಸಿಡಿ ಸಲಹಾ ಸಮಿತಿಯ ಅಧ್ಯಕ್ಷರಾದ ಹಿರಿಯ ನಟ ಶಿವರಾಂ ಸುದ್ದಿಗೋಷ್ಠಿಯಲ್ಲಿ ನಿರ್ಭಿಡೆಯಿಂದ ಹೇಳಿದರಲ್ಲ; ಆಗ ನೆನಪಾದುದು ಇದೇ `ನಿರ್ದೋಷಿ~. ಚಿತ್ರದ ನಾಯಕ ತನಗರಿವಿಲ್ಲದಂತೆ ಅಪರಾಧಗಳನ್ನು ಎಸಗುವುದರಿಂದ ಆತ `ನಿರ್ದೋಷಿ~. ಈ ಅರ್ಥದಲ್ಲಿ ಶಿವರಾಂ ಮತ್ತವರ ತಂಡವನ್ನು ಕೂಡ `ನಿರ್ದೋಷಿ~ ಎನ್ನಬಹುದೇನೊ?`ನಿರ್ದೋಷಿ~ ಬಗ್ಗೆ ಪ್ರಸ್ತಾಪಿಸಲಿಕ್ಕೆ ಕಾರಣವಿದೆ. 2009ರ ಸಾಲಿನಲ್ಲಿ ಸರ್ಕಾರದ ಸಹಾಯಧನಕ್ಕೆ ಆಯ್ಕೆಯಾಗಿರುವ ಚಿತ್ರಗಳಲ್ಲಿ ಇದೂ ಒಂದು. ಅರೆಬೆತ್ತಲೆ ಬೆಡಗಿಯರು ಮೈದೋರುವ, ಗಂಡು-ಹೆಣ್ಣು ಎಗ್ಗಿಲ್ಲದೆ ಲಲ್ಲೆಗರೆಯುವ, ನೆಪ ಮಾತ್ರಕ್ಕೆ ವಿಜ್ಞಾನದ ಕಥನವೊಂದಕ್ಕೆ ತಳುಕು ಹಾಕಿಕೊಂಡಿರುವ ಈ ಸಿನಿಮಾ `ಯಾವ ಬಗೆಯದು~ ಎನ್ನುವುದನ್ನು ಜನಸಾಮಾನ್ಯರೂ ಹೇಳಬಲ್ಲರು. ಆದರೆ, ಸಿನಿಮಾ ವ್ಯಾಕರಣ ಗೊತ್ತಿರುವವರೂ, ಹಿರಿಯರೂ, ವಿವಿಧ ಕ್ಷೇತ್ರಗಳ ಸಾಧಕರೂ ಇರುವ ಸಬ್ಸಿಡಿ ಸಮಿತಿ `ನಿರ್ದೋಷಿ~ಯನ್ನು ಸಹಾಯಧನಕ್ಕೆ ಆಯ್ಕೆ ಮಾಡಿದೆ!ಸಮಿತಿಯ ಸದಸ್ಯರೊಬ್ಬರು ಲಂಚ ಪಡೆದಿರುವುದನ್ನು ಒಪ್ಪಿಕೊಂಡಿರುವ ದೃಶ್ಯಗಳು ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿದ್ದರೂ, ಅದನ್ನು ನಿರಾಕರಿಸುವ ಕೆಲಸವನ್ನು ಸಮಿತಿಯ ಅಧ್ಯಕ್ಷರು ಮಾಡಿದ್ದಾರೆ. ಟೀವಿ ದೃಶ್ಯಾವಳಿಗಳ ಸಾಕ್ಷಿಯಿದ್ದರೂ ಲಂಚದ ಆರೋಪವನ್ನು ನಿರಾಕರಿಸುವವರು, ಲೈಂಗಿಕ ದೃಶ್ಯಗಳನ್ನೇ ಬಂಡವಾಳವಾಗುಳ್ಳ ಚಿತ್ರವನ್ನು ಮೆಚ್ಚಿಕೊಳ್ಳುವುದರಲ್ಲಿ ಆಶ್ಚರ್ಯವೇನು?`ನಿರ್ದೋಷಿ~ಯಂಥ ಚಿತ್ರವನ್ನು ಮೆಚ್ಚಿಕೊಳ್ಳುತ್ತಾರೆ ಎಂದಮಾತ್ರಕ್ಕೆ ಶಿವರಾಂ ಅಥವಾ ಅವರ ತಂಡದ ಸದಸ್ಯರ ಅಭಿರುಚಿ ಮತ್ತು ಸಿನಿಮಾ ಜ್ಞಾನವನ್ನು ಅನುಮಾನಿಸಬೇಕಾಗಿಲ್ಲ. ಅವರೆಲ್ಲರೂ ದೊಡ್ಡವರೇ, ತಜ್ಞರೇ. ಪ್ರತಿ ವರ್ಷದ ಸಮಿತಿಗಳಲ್ಲಿ ಇಂಥ ದೊಡ್ಡವರೇ ಇರುತ್ತಾರೆ. ಆದರೆ, ಅಂಥವರ‌್ಯಾರೂ `ಗುಣಾತ್ಮಕ ಕನ್ನಡ ಸಿನಿಮಾ~ದ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲ. `ಕನಸೆಂಬೊ ಕುದುರೆಯನೇರಿ~ ಚಿತ್ರ ಚೆನ್ನಾಗಿದೆ ಎಂದವರೇ ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ಬೇರೆ ರಾಗ ಹಾಡುತ್ತಾರೆ.ಮತ್ತೆ ಮತ್ತೆ ಕಾಸರವಳ್ಳಿ ಅವರಿಗೆ ಯಾಕೆ ಪ್ರಶಸ್ತಿ ಕೊಡಬೇಕು ಎನ್ನುವುದು ಅವರ ಪ್ರಶ್ನೆ! ಅಂದರೆ, ಅವರ ಕಾಳಜಿ ಇರುವುದು ಪ್ರಶಸ್ತಿ ಹಂಚಿಕೆಯಲ್ಲೇ ಹೊರತು ಗುಣಮಟ್ಟದ ಕುರಿತಾಗಿಯಲ್ಲ.

ಆಯ್ಕೆಯ ಸಂದರ್ಭದಲ್ಲಿ ಮತ್ತೊಂದು ಸಮಸ್ಯೆಯೂ ಇದೆ. ಸಿನಿಮಾಕ್ಕೆ ಸಂಬಂಧಿಸಿದ ಹಿರಿಯ ತಂತ್ರಜ್ಞರು, ಕಲಾವಿದರು ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ವಯಸ್ಸಿನ ಕಾರಣದಿಂದಾಗಿ ಸಿನಿಮಾ ಆಸಕ್ತಿ ಇವರಲ್ಲಿ ಸಹಜವಾಗಿಯೇ ಕುಗ್ಗಿರುತ್ತದೆ.ತಮ್ಮ ಕಾಲದ `ಸುವರ್ಣ ಯುಗ~ವನ್ನು ಚಪ್ಪರಿಸುವ, ಇವತ್ತಿನ ಸಿನಿಮಾದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲಾಗದ ಅಂಥವರಿಂದ ಸರಿಯಾದ ತೀರ್ಪನ್ನು ಹೇಗೆ ನಿರೀಕ್ಷಿಸುವುದು? `ಗುಣಾತ್ಮಕ ಚಿತ್ರ~ಗಳಿಗೆ ಕೊಡಲಿ ಕಾವಾಗಿ ಪರಿಣಮಿಸುವವರು ಇಂಥವರೇ. ವಿವಿಧ ಕ್ಷೇತ್ರಗಳ ಕೆಲವು ತಜ್ಞರು ಸಮಿತಿಯಲ್ಲಿ ಇರುತ್ತಾರಾದರೂ, ಅವರು ಗುಂಪಿನಲ್ಲಿ ಯಾವಾಗಲೂ ಅಲ್ಪಸಂಖ್ಯಾತರು.ಹಾಗೆ ನೋಡಿದರೆ ಪ್ರಶಸ್ತಿ ಮತ್ತು ಸಹಾಯಧನದ ವಿಷಯದಲ್ಲಿ ಸರ್ಕಾರದ ನಡವಳಿಕೆ ಶಿಸ್ತಿನಿಂದ ಕೂಡಿಲ್ಲ. ಆಯಾ ವರ್ಷದ ರಾಷ್ಟ್ರ ಪ್ರಶಸ್ತಿಗಳು ಆಯಾ ವರ್ಷವೇ ಪ್ರಕಟಗೊಳ್ಳುತ್ತವೆ. ಆದರೆ, ಈ ಶಿಸ್ತು ರಾಜ್ಯ ಪ್ರಶಸ್ತಿಗಳ ನಿಟ್ಟಿನಲ್ಲಿ ಅಸಾಧ್ಯವಾಗಿದೆ.2010ರ ಸಾಲಿನ ರಾಜ್ಯ ಪ್ರಶಸ್ತಿಗಳಿಗಾಗಿ ಸಿನಿಮಾ ನೋಡುವ ಪ್ರಕ್ರಿಯೆ ನಡೆಯುತ್ತಿದ್ದರೆ, 2011ರ ಸಾಲಿನ ರಾಷ್ಟ್ರ ಪ್ರಶಸ್ತಿಗಳು ಆಗಲೇ ಪ್ರಕಟಗೊಂಡಿವೆ. ಈ ಆಮೆಗತಿ ಪ್ರಶಸ್ತಿಗಳ ಬಗೆಗಿನ ಉತ್ಸಾಹವನ್ನು ಕ್ಷೀಣಿಸುವುದರ ಜೊತೆಗೆ, ಇಡೀ ಪ್ರಕ್ರಿಯೆಯನ್ನೇ ಯಾಂತ್ರಿಕವಾಗಿಸಿಬಿಡುತ್ತದೆ.ರಾಜ್ಯ ಸರ್ಕಾರದ ಪ್ರಶಸ್ತಿ ಆಯ್ಕೆ ಸಮಿತಿ ಹಾಗೂ ಸಹಾಯಧನ ಆಯ್ಕೆ ಸಮಿತಿಗಳು ಪ್ರತಿ ವರ್ಷವೂ ಟೀಕೆಗಳಿಗೆ ಗುರಿಯಾಗುತ್ತಿರುತ್ತವೆ. ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ವಿವಿಧ ರೀತಿಯ ಪ್ರಭಾವಗಳು ಕೆಲಸ ಮಾಡಿದರೆ, ಸಹಾಯಧನದ ಸಂದರ್ಭದಲ್ಲಿ `ಹಣ~ವೇ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಲಂಚ ಕೊಟ್ಟವರು ಯಾರೂ ಬಹಿರಂಗವಾಗಿ ಈವರೆಗೆ ಹೇಳಿಕೊಂಡಿರಲಿಲ್ಲ; ಲಂಚ ಪಡೆದವರು ಸಿಕ್ಕಿಬಿದ್ದಿರಲಿಲ್ಲ!ಈಗ ಸಮಿತಿ ಬಯಲಿಗೆ ಬಿದ್ದಿದೆ. ಆದರೂ ಮೀಸೆ ಮಣ್ಣಾಗಿಲ್ಲ ಎನ್ನುತ್ತಿದೆ. ಒಳ್ಳೆಯ ಸಿನಿಮಾ ಯಾರಿಗೂ ಬೇಕಾಗಿಲ್ಲ ಎನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿದೆ.ಪ್ರಶಸ್ತಿ, ಸಹಾಯಧನ, ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿ - ಮುಂತಾದೆಡೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ `ಸಿಕ್ಕಷ್ಟು ಲಾಭ~ ಮಾಡಿಕೊಳ್ಳುವ ಲಾಭಕೋರರೇ ಎಲ್ಲೆಡೆ ಇರುವಂತಿದೆ. ಕನ್ನಡ ಚಿತ್ರರಂಗದಲ್ಲೆಗ ಬೆಲ್ಲಕ್ಕೆ ಎಲ್ಲೆಡೆ ನಂಟರು. ಆರೋಗ್ಯಕ್ಕೆ ಹಿತವಾದ ಬೇವನ್ನು ಯಾರೂ ಒಲ್ಲರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.