ಸೋಮವಾರ, ಮೇ 17, 2021
28 °C
ಅಭಿವೃದ್ಧಿಗೆ ಪಕ್ಷಭೇದ ಮರೆತು ಕೈಜೋಡಿಸಿ: ಸಚಿವ ಜಾರಕಿಹೊಳಿ

`ಬೆಳಗಾವಿ ನಗರಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ಮುಂದಿನ 20 ವರ್ಷಗಳ ದೂರದೃಷ್ಟಿಯನ್ನು ಒಳಗೊಂಡಂತಹ `ಸಮಗ್ರ ಯೋಜನೆ'ಯನ್ನು ಅನುಷ್ಠಾನ ಗೊಳಿಸುವ ಮೂಲಕ ಬೆಳಗಾವಿಯನ್ನು ಸುಂದರ ನಗರವನ್ನಾಗಿ ರೂಪಿಸಲು ಸಮಸ್ತ ನಾಗರಿಕರು ಹಾಗೂ ಅಧಿಕಾರಿ ಗಳು ಕೈಜೋಡಿಸಬೇಕು' ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮನವಿ ಮಾಡಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯಲ್ಲಿ `ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿ' ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ನಾಗರಿಕರು ಹಾಗೂ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ನೀಡಿದ ಸಲಹೆಗಳಾದ ಕುಡಿಯುವ ನೀರು, ಒಳಚರಂಡಿ, ರಸ್ತೆಗಳ ಅಭಿವೃದ್ಧಿ, ಸಾರ್ವಜನಿಕರಿಗೆ ನಿವೇಶನ ಹಂಚಿಕೆ, ಸಂಚಾರದ ಸಮಸ್ಯೆ ನಿವಾರಣೆ, ವರ್ತುಲ ರಸ್ತೆ ನಿರ್ಮಾಣ ಸೇರಿದಂತೆ ನಗರದ ಸಮಗ್ರ ಅಭಿವೃದ್ಧಿಗಾಗಿ `ಮಾಸ್ಟರ್ ಪ್ಲ್ಯಾನ್' ರೂಪಿಸಬೇಕು. ಬೆಳಗಾವಿಯಲ್ಲಿ `ಟೌನ್‌ಶಿಪ್' ಮಾಡಲು ಪಕ್ಷಭೇದ ಮರೆತು ಒಂದಾಗಿ ಕೆಲಸ ಮಾಡಬೇಕು' ಎಂದು ಹೇಳಿದರು.`ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವಲ್ಲಿ ಕರ್ನಾಟಕ ಹಿಂದೆ ಬಿದ್ದಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳ ಸರ್ಕಾರಗಳು ಈ ನಿಟ್ಟಿನಲ್ಲಿ ವಿಫಲ ಗೊಂಡಿವೆ' ಎಂದು ವಿಷಾದಿಸಿದ ಜಾರಕಿಹೊಳಿ, `ಅಧಿಕಾರಿಗಳು ಹೊಸ ಚಿಂತನೆಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಿ, ಉತ್ತಮ ಯೋಜನೆ ಗಳನ್ನು ರೂಪಿಸಬೇಕು. ಆಗ ಬೆಳಗಾವಿ ಯನ್ನು ಸುಂದರ ನಗರವನ್ನಾಗಿಸಲು ಸಾಧ್ಯ' ಎಂದು ಅಭಿಪ್ರಾಯಪಟ್ಟರು.`ಹಿಡಕಲ್ ಜಲಾಶಯದಿಂದ ಪಂಪ್ ಮಾಡಿ ತರುವ ನೀರನ್ನು ಮಾಳಮಾರುತಿ ಬಳಿಯ ತುರ್ಕಮಟ್ಟಿಯ ಸರ್ಕಾರಿ ಭೂಮಿಯಲ್ಲಿ 217 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧೀಕರಣ ಘಟಕ ನಿರ್ಮಿಸುವ ಕುರಿತು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದು ಅನುಷ್ಠಾನ ಗೊಂಡರೆ, ನಗರದ 58 ವಾರ್ಡ್‌ಗಳಿಗೆ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಸಲು ಸಾಧ್ಯವಿದೆ. ಬೆಳಗಾವಿ ನಗರದ ಶಾಸಕರು ಹಾಗೂ ಸಂಸದರ ನಿಯೋಗವನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದೆಹಲಿಗೆ ಶೀಘ್ರದಲ್ಲೇ ಕರೆದುಕೊಂಡು ಹೋಗಲಾಗುವುದು' ಎಂದು ಸಚಿವರು ತಿಳಿಸಿದರು.`ಸಾರ್ವಜನಿಕರಿಗೆ ಅನುಕೂಲ ವಾಗುವ ಹಾಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ ಎಲ್ಲ ಸರ್ಕಾರಿ ಕಚೇರಿಯನ್ನು ಒಂದೇ ಸೂರಿನ ಅಡಿಯಲ್ಲಿ ತರಲು ಯೋಜನೆ ರೂಪಿಸಲಾಗುವುದು. ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ತೆಗೆದು ಹಾಕಲಾಗಿದ್ದ ಬಸ್ ತಂಗುದಾಣಗಳನ್ನು ಪುನಃ ನಿರ್ಮಿಸಲಾಗುವುದು' ಎಂದು ಸಚಿವರು ತಿಳಿಸಿದರು.ನಗರದ ಸುತ್ತಮುತ್ತ ಕೈಗಾರಿಕಾ ವಸಾಹತುಗಳನ್ನು ನಿರ್ಮಿಸಿ ಬೃಹತ್ ಕೈಗಾರಿಕೆಗಳನ್ನು ನಗರದತ್ತ ಸೆಳೆಯಲು ಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ಅವಶ್ಯಕ ವಿದ್ಯುತ್ ಕೇಂದ್ರಗಳನ್ನು ನಿರ್ಮಿಸಲಾಗುವುದು' ಎಂದರು.ಬೆಳಗಾವಿ ನಗರದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾಗಿರುವ ಯೋಜನೆಗಳ ಕುರಿತು ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎನ್. ಜಯರಾಮ್, `ವಾಹನ ದಟ್ಟಣೆ ಇರುವ ಸಂಕಮ್ ಹೋಟೆಲ್‌ನಿಂದ ಪೀರನವಾಡಿ ವರೆಗೆ; ರೂಪಾಲಿ ಸಿನಿಮಾ ಮಂದಿರ ದಿಂದ ಆರ್‌ಟಿಓ ವೃತ್ತದವರೆಗೆ, ಕೆಎಲ್‌ಇ ಆಸ್ಪತ್ರೆಯಿಂದ ಚನ್ನಮ್ಮ ವೃತ್ತದವರೆಗೆ ಮೇಲು ರಸ್ತೆ ನಿರ್ಮಿಸಬೇಕಾಗಿದೆ. ಸುಮಾರು 42 ಕಿ.ಮೀ. ವರ್ತುಲ ರಸ್ತೆಯನ್ನು ನಿರ್ಮಿಸಬೇಕಾಗಿದೆ' ಎಂದು ತಿಳಿಸಿದರು.`ರೂ. 30 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ಕುಡಿಯುವ ನೀರಿನ ಪೈಪ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಶುದ್ಧೀಕರಣ ಘಟಕ ಸ್ಥಾಪಿಸುವ 300 ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿದೆ. ನಗರದಲ್ಲಿ 51 ಘೋಷಿತ ಕೊಳಚೆ ಪ್ರದೇಶಗಳಲ್ಲಿ 12 ಸಾವಿರ ಕುಟುಂಬ ಗಳು ನೆಲೆಸುತ್ತಿದೆ. ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಬೇಕಾಗಿದೆ' ಎಂದು ತಿಳಿಸಿದರು.ಸಂಸದ ಸುರೇಶ ಅಂಗಡಿ, ಶಾಸಕರಾದ ಫಿರೋಜ್ ಸೇಠ್, ಸಂಜಯ ಪಾಟೀಲ, ಸಂಭಾಜಿ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಚೋಳನ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಸಂದೀಪ ಪಾಟೀಲ ಸಭೆಯಲ್ಲಿ ಹಾಜರಿದ್ದರು. ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿ ಗಳು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.