ಭಾನುವಾರ, ಜೂನ್ 20, 2021
25 °C

ಬೆಳ್ತಂಗಡಿ: ಅಪಾರ ಶಸ್ತ್ರ ಬಿಟ್ಟು ನಕ್ಸಲರು ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ತಂಗಡಿ: ಅಪಾರ ಶಸ್ತ್ರ ಬಿಟ್ಟು ನಕ್ಸಲರು ಪರಾರಿ

ಬೆಳ್ತಂಗಡಿ:  ತಾಲ್ಲೂಕಿನ ಮಲವಂತಿಗೆ ಗ್ರಾಮದ ಉರ್ದ್ಯಾರು ಜಲಪಾತದ ಬಳಿ ಶನಿವಾರ ನಕ್ಸಲರು ಬಿಟ್ಟು ಹೋದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಭಾನುವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶನಿವಾರ ನಡೆದ ಗುಂಡಿನ ಚಕಮಕಿ ಹಾಗೂ ದಾಳಿಯ ವೇಳೆ ನಕ್ಸಲರು ಶಸ್ತ್ರಾಸ್ತ್ರಗಳನ್ನು ಬಿಟ್ಟು ಪರಾರಿಯಾಗಿದ್ದರು. 30ಕ್ಕೂ ಹೆಚ್ಚು ಗ್ರೆನೇಡ್‌ಗಳು, ಎಸ್‌ಎಲ್‌ಆರ್ ಬಂದೂಕಿನ 140 ಸುತ್ತು ಗುಂಡುಗಳು,  303 ಬಂದೂಕಿನ 106 ಸುತ್ತು ಗುಂಡುಗಳು, 9 ಎಂ.ಎಂ.ನ 7 ಸುತ್ತು ಗುಂಡುಗಳು, ಅಮೆರಿಕ ನಿರ್ಮಿತ ಸ್ವಯಂಚಾಲಿತ ಪಿಸ್ತೂಲು, ಒಂದು ಬಂದೂಕು, ಕರ ಪತ್ರಗಳು, ಬಟ್ಟೆಗಳು ಹಾಗೂ ಸ್ಫೋಟಕಗಳ ತಯಾರಿಕೆಗೆ ಬಳಸುವ ಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಇದೇ ಮೊದಲ ಬಾರಿ ನಕ್ಸಲರಿಂದ ಇಷ್ಟೊಂದು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ನಕ್ಸಲರ ತಂಡದಲ್ಲಿ 25ಕ್ಕೂ ಹೆಚ್ಚು ಜನರಿದ್ದರು ಎಂದು ತಿಳಿದುಬಂದಿದೆ. ಇವರಲ್ಲಿ ಹೊರ ರಾಜ್ಯದವರೂ ಇದ್ದಾರೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯ ಕರಪತ್ರಗಳು ದೊರಕಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಟೆಂಟ್ ಹಾಕುವ ಪರಿಕರಗಳು, ಲ್ಯಾಪ್‌ಟಾಪ್ ಚೀಲ ಹಾಗೂ ಆಹಾರ ಸಾಮಗ್ರಿಗಳನ್ನು ಕೂಡ ವಶ ಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ಪಡೆ ಜಂಟಿ ಕಾರ್ಯಾಚರಣೆ ನಡೆಸಿದ್ದು ಅರಣ್ಯದಲ್ಲಿ ಪೊಲೀಸರ ಇರುವಿಕೆಯನ್ನು ಗುರುತಿಸಿದ ನಕ್ಸಲೀಯರು ಶನಿವಾರ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.

ಭಾನುವಾರ ಬೆಳಿಗ್ಗೆಯಿಂದಲೇ ಐ.ಜಿ.ಪಿ ಪ್ರತಾಪ ರೆಡ್ಡಿ, ನಕ್ಸಲ್ ನಿಗ್ರಹ ಪಡೆಯ ಐ.ಜಿ ಅಲೋಕ್‌ಕುಮಾರ್, ಎಸ್.ಪಿ. ವಾಸುದೇವ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ನೇತೃತ್ವದಲ್ಲಿ 300ಕ್ಕೂ ಅಧಿಕ ಪೊಲೀಸರು ಕಾರ್ಯಾ ಚರಣೆಯಲ್ಲಿ ಭಾಗಿಯಾಗಿದ್ದರು. ಶ್ವಾನದಳ ಹಾಗೂ ಸ್ಫೋಟಕ ನಿಷ್ಕ್ರಿಯ ದಳದವರನ್ನೂ ಕರೆಸಲಾಗಿದೆ. ವಶಪಡಿಸಿಕೊಂಡ ಎಲ್ಲಾ ಪರಿಕರಗಳನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇಡಲಾಗಿದೆ.

ದಟ್ಟ ಅರಣ್ಯದೊಳಗೆ 10 ಡೇರೆಗಳನ್ನು ಹಾಕಿದ್ದಾಗಿ ತಿಳಿದುಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇಲ್ಲಿ ನಕ್ಸಲರ ಸಮಾವೇಶ ಅಥವಾ ತರಬೇತಿ ನಡೆಯುತ್ತಿತ್ತು ಎಂಬ ಅನುಮಾನ ಪೊಲೀಸರಿಂದ ವ್ಯಕ್ತವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.