ಗುರುವಾರ , ಏಪ್ರಿಲ್ 22, 2021
30 °C

ಬೆಳ್ಳುಳ್ಳಿ ಮಹತ್ವ...

ಎಚ್‌ಎಸ್‌ಆರ್ Updated:

ಅಕ್ಷರ ಗಾತ್ರ : | |

ಬೆ ಳ್ಳುಳ್ಳಿ ವಾಸನೆ ಕಂಡು ಮೈಲು ದೂರ ಹಾರುವವರಿದ್ದಾರೆ. ಕೊಂಚ ನಿಧಾನಿಸಿ ಬೆಳ್ಳುಳ್ಳಿ ವಾಸನೆಗೆ ಮೂಗು ಒಡ್ಡಿ. ಅದರ ಎಸಳುಗಳನ್ನು ಸೇವಿಸುವ ಹವ್ಯಾಸವನ್ನು ನಿಧಾನವಾಗಿ ರೂಢಿಸಿಕೊಂಡು ನೋಡಿ.ಆರ್ಥ್ರೈಟಿಸ್ ಅಥವಾ ಕೀಲುನೋವು ಅಥವಾ ಸಂಧಿವಾತ ಎಂದು ಕರೆಸಿಕೊಳ್ಳುವ ಯಮಯಾತನೆ ನೀಡುವ ಕಾಯಿಲೆ ಬರದಂತೆ ಅದು ತಡೆಯುತ್ತದೆ.

 ಮೂಳೆಗಳ ನಡುವಿನ ಮೃದ್ವಸ್ಥಿಗಳನ್ನು ಸವೆಸುವ ಈ ಕಾಯಿಲೆ ಕೈಗಳು, ಪಾದ, ಬೆನ್ನು ಮೂಳೆ, ಸೊಂಟ, ಮಂಡಿಗಳಲ್ಲಿ ಕಾಣಿಸಿಕೊಳ್ಳುತ್ತದೆ.ಈ ಕಾಯಿಲೆ ಬರದಂತೆ ತಡೆಯಲು ಮತ್ತು ಬಂದವರು ಅದನ್ನು ನಿಯಂತ್ರಿಸಿಕೊಳ್ಳಲು ಬೆಳ್ಳುಳ್ಳಿಯ ಔಷಧೀಯ ಗುಣ ನೆರವಾಗುತ್ತದೆ ಎಂದು ಲಂಡನ್‌ನ ಕಿಂಗ್ಸ್ ಕಾಲೇಜು ಮತ್ತು ಈಸ್ಟ್ ಆಂಗ್ಲಿಯನ್ ವಿಶ್ವವಿದ್ಯಾಲಯದ ಸಂಶೋಧಕರು ಗುರುತಿಸಿದ್ದಾರೆ.ಆರ್ಥ್ರೈಟಿಸ್ ಕಾಯಿಲೆಗೆ ಇದುವರೆಗೂ ನೋವನ್ನು ಮಾತ್ರ ನೀಗಿಸಿ ಕಾಯಿಲೆಯನ್ನು ಹಾಗೇ ಉಳಿಸುವ ಚಿಕಿತ್ಸೆಗಳಿದ್ದವು. ತೀರಾ ಶ್ರೀಮಂತರು ಕೀಲು ಬದಲಾವಣೆ ಮಾಡಿಸಿಕೊಂಡರೆ ಉಳಿದವರು ನೋವು ನಿವಾರಕಗಳನ್ನು ಬಳಸಿ ಬದುಕಬೇಕಿತ್ತು.ಇದೀಗ ಲಂಡನ್‌ನ ಈಸ್ಟ್‌ಆಂಗ್ಲಿಯನ್ ವಿಶ್ವವಿದ್ಯಾಲಯ ಇದಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಿದೆ. ಸಲ್ಫರ್ (ಗಂಧಕ) ಕೊರತೆಯಿಂದ ಬರುವ ಈ ಕೀಲು ಸವೆತದ ರೋಗಕ್ಕೆ ಸಲ್ಫರ್ ಸಂಯುಕ್ತ ವಸ್ತುಗಳನ್ನು ಅಪಾರ ಪ್ರಮಾಣದಲ್ಲಿ ಹೊಂದಿರುವ ತರಕಾರಿಗಳನ್ನು ತಿನ್ನಬೇಕು ಎಂದು ಸಂಶೋಧಕರು ಹೇಳಿದ್ದಾರೆ. ಅದರಲ್ಲಿ ಬೆಳ್ಳುಳ್ಳಿಯೂ ಸೇರಿದೆ. ಬ್ರಾಕಲಿ ಹೆಸರಿನ ದುಬಾರಿ ಹೂಕೋಸು ಜಾತಿಯ ತರಕಾರಿ ಕೂಡ ಅಪಾರ ಪ್ರಮಾಣದಲ್ಲಿ ಸಲ್ಫರ್ ಅಂಶವನ್ನು ಹೊಂದಿದೆ ಎನ್ನಲಾಗಿದೆ. ಬೆಳ್ಳುಳ್ಳಿ ಸೇವಿಸುವುದರಿಂದ ಅದರ ಸಲ್ಫರ್ ಅಂಶ ರಕ್ತಕ್ಕೆ ರವಾನೆಯಾಗಿ ಕೀಲು ಸವೆತ ನಿಯಂತ್ರಣಕ್ಕೆ ಬರುತ್ತದೆ ಎನ್ನಲಾಗಿದೆ.

ಜಜ್ಜಿ ಹಾಕಿ...

ಒಗ್ಗರಣೆಗೆ ಅಥವಾ ಯಾವುದೇ ಬೆಳ್ಳುಳ್ಳಿ ಬಳಸಿ ಮಾಡುವ ಅಡುಗೆಗೆ ಉಂಡೆ ಬೆಳ್ಳುಳ್ಳಿ ಹಾಕುವ ಬದಲು ಅದನ್ನು ಜಜ್ಜಿ ಹಾಕಿ ಎಂದು ಅರ್ಜೆಂಟೀನಾ ಮತ್ತು ಅಮೆರಿಕದ ವಿಜ್ಞಾನಿಗಳು ಹೇಳುತ್ತಾರೆ.ಬೆಳ್ಳುಳ್ಳಿಯನ್ನು ಜಜ್ಜಿ ಹಾಕುವುದರಿಂದ ಅದರಲ್ಲಿ ಇರುವ ಔಷಧೀಯ ಗುಣಗಳು ಪೂರ್ಣ ಪ್ರಮಾಣದಲ್ಲಿ ದೊರಕುತ್ತದೆ. ಅಲ್ಲದೇ ಬೆಳ್ಳುಳ್ಳಿಯನ್ನು ಬಿಸಿ ಮಾಡಿದಾಗ ಅದರಲ್ಲಿರುವ ರಾಸಾಯನಿಕ ಕಣಗಳು ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಅದರಿಂದ  ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ. ಆಗ ಬೆಳ್ಳುಳ್ಳಿಯಲ್ಲಿ ಇರುವ ಹೈಡ್ರೋಜನ್ ಸಲ್ಫೈಡ್ ರಾಸಾಯನಿಕ ಅಂಶ ಪೂರ್ಣ ಪ್ರಮಾಣದಲ್ಲಿ ದೇಹಕ್ಕೆ ದೊರಕುತ್ತದೆ.ಹಾಗೆಯೇ ಒಣ ಬೆಳ್ಳುಳ್ಳಿಗಿಂತ ತಾಜಾ ಬೆಳ್ಳುಳ್ಳಿ ಉಪಯೋಗಿಸಬೇಕು ಎಂಬುದು ಕೂಡ ವಿಜ್ಞಾನಿಗಳ ಕಿವಿ ಮಾತು.

ಹೃದಯ ಸ್ತಂಭನ ತಡೆಗೆ

ಬೆಳ್ಳುಳ್ಳಿಯಲ್ಲಿ ಇರುವ ಹೈಡ್ರೋಜನ್ ಸಲ್ಫೈಡ್ ಅಂಶ ರಕ್ತ ನಾಳಗಳ ಬಿಗಿತವನ್ನು ಸಡಿಲಿಸಿ ರಕ್ತದ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ.

 ರಕ್ತ ನಾಳಗಳಲ್ಲಿ ರಕ್ತ ಸಂಚಾರ ಸುಗಮವಾಗಿ ಹೃದಯದಲ್ಲಿ ಆಕ್ಸಿಜನ್ ಕೊರತೆ ಕಡಿಮೆಯಾಗುತ್ತದೆ. ಜೊತೆಗೆ ರಕ್ತ ಶುದ್ಧೀಕರಣದಲ್ಲೂ ಬೆಳ್ಳುಳ್ಳಿ ಎತ್ತಿದ ಕೈ.

ಮಧುಮೇಹಿಗಳು ಬೆಳ್ಳುಳ್ಳಿ ಎಣ್ಣೆಯನ್ನು ಅಡುಗೆಗೆ ಬಳಸಬೇಕು ಎಂಬುದು ವಿಜ್ಞಾನಿಗಳ ಸಲಹೆ. ಸಿಗದಿದ್ದರೆ ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಸೇವಿಸಬೇಕಷ್ಟೇ. ರಕ್ತ ಶುದ್ಧೀಕರಿಸುವ ಅದು ಹೃದಯಾಘಾತ ಆಗದಂತೆ ತಡೆಯುತ್ತದೆ. ಮಧುಮೇಹದಿಂದ ಬಳಲುವವರಲ್ಲಿ ಹೃದಯದ ಸ್ನಾಯುವಿನ ಜೀವಕೋಶ ದುರ್ಬಲವಾಗಿರುತ್ತದೆ. ಅದರಿಂದ ರಕ್ತ ಸಂಚಾರಕ್ಕೆ ತೊಂದರೆಯಾಗುತ್ತದೆ. ಬೆಳ್ಳುಳ್ಳಿ ಸೇವನೆಯಿಂದ ರಕ್ತದ ಸುಗಮ ಸಂಚಾರಕ್ಕೆ ಅವಕಾಶವಾಗುವುದರಿಂದ ಹೃದಯ ಸ್ತಂಭನದ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.