ಶನಿವಾರ, ಜೂಲೈ 11, 2020
28 °C

ಬೇಕಾಬಿಟ್ಟಿ ಹೇಳಿಕೆ ಸರಿಯಲ್ಲ- ಸಚಿವರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕದ್ದ ಕಳ್ಳನೇ ಪೊಲೀಸರನ್ನು ದೂರಿದಂತೆ’ ಎಂದು ಹೇಳುವುದರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಕ್ರಮವನ್ನು ಮಂತ್ರಿಮಂಡಲದ ಕೆಲ ಸದಸ್ಯರು ಟೀಕಿಸಿದ್ದಾರೆ.

‘ರಾಜ್ಯಪಾಲರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದೇವೆ. ಆದರೆ, ಅವರು ಬುಧವಾರದ ಸಂಪುಟ ಸಭೆಯ ತೀರ್ಮಾನದ ಬಗ್ಗೆ ಹಗುರ ಮತ್ತು ಲೇವಡಿ ಮಾಡುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ’ ಎಂದು ಸಚಿವರಾದ ಗೋವಿಂದ ಕಾರಜೋಳ, ಡಾ.ವಿ.ಎಸ್.ಆಚಾರ್ಯ, ಸುರೇಶ್‌ಕುಮಾರ್, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯಪಾಲರು ಈ ರೀತಿ ತಮ್ಮದೇ ಸರ್ಕಾರದ ವಿರುದ್ಧ ಇಲ್ಲಸಲ್ಲದೆ ಹೇಳಿಕೆ ನೀಡುವುದು ಎಷ್ಟರಮಟ್ಟಿಗೆ ಸರಿ? ಗೌರವಾನ್ವಿತ ಹುದ್ದೆಯಲ್ಲಿದ್ದುಕೊಂಡು ಬೇಕಾಬಿಟ್ಟಿ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಇಡೀ ಸರ್ಕಾರ ರಾಜ್ಯಪಾಲರ ಬಗ್ಗೆ ಗೌರವ ಇಟ್ಟುಕೊಂಡಿದೆ. ಇದರ ನಡವೆಯೂ ಈ ರೀತಿ ಆಗುತ್ತಿರುವುದು ದುರದೃಷ್ಟಕರ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಭೂಹಗರಣಗಳಿಗೆ ಸಂಬಂಧಿಸಿದಂತೆ ತಾವು ಕೇಳಿದ್ದ ದಾಖಲೆಗಳನ್ನು ಸರ್ಕಾರ ನೀಡಿಲ್ಲ ಎಂದು ರಾಜ್ಯಪಾಲರು ಸುಳ್ಳು ಹೇಳಿದ್ದಾರೆ. ಅವರು ಕೇಳಿರುವ 93 ದಾಖಲೆಗಳ ಪೈಕಿ 80 ದಾಖಲೆಗಳನ್ನು ಈಗಾಗಲೇ ನೀಡಲಾಗಿದೆ. ಹೀಗಾಗಿ ದಾಖಲೆಗಳನ್ನೇ ನೀಡಿಲ್ಲ ಎಂದು ಹೇಳುವುದು ಸರಿಯಲ್ಲ. ಒಬ್ಬ ರಾಜ್ಯಪಾಲರಿಂದ ಈ ರೀತಿಯ ಹೇಳಿಕೆ ಸಮಂಜಸವೂ ಅಲ್ಲ. ಉಳಿದ 13 ದಾಖಲೆಗಳನ್ನು ಸದ್ಯದಲ್ಲೇ ಸಲ್ಲಿಸಲಾಗುವುದು’ ಎಂದರು.

ಕಾನೂನು ಸಚಿವ ಸುರೇಶ್‌ಕುಮಾರ್ ಮಾತನಾಡಿ, ‘ರಾಜ್ಯಪಾಲರು ಒಂದು ಕಡೆ ಎಲ್ಲ ಪುರಾವೆಗಳು ಇವೆ ಎನ್ನುತ್ತಾರೆ. ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲು ಮಾಡಲು ಅನುಮತಿ ನೀಡುವುದಾಗಿಯೂ ಹೇಳುತ್ತಾರೆ. ಇನ್ನೊಂದು ಕಡೆ ದಾಖಲೆಗಳನ್ನೇ ಸರ್ಕಾರ ಕೊಟ್ಟಿಲ್ಲ ಎನ್ನುತ್ತಾರೆ. ಇದು ಹೇಗೆ ಸಾಧ್ಯ? ದಾಖಲೆಗಳೇ ಇಲ್ಲದೆ ಇಷ್ಟೆಲ್ಲ ಕಸರತ್ತು ನಡೆಸುತ್ತಿರುವುದು ಹೇಗೆ? ಇವೆಲ್ಲವನ್ನೂ ನೋಡುತ್ತಿದ್ದರೆ ರಾಜ್ಯಪಾಲರು ಸರ್ಕಾರದ ಬಗ್ಗೆ ಪೂರ್ವಗ್ರಹ ಪೀಡಿತರಾಗಿರುವುದು ಸ್ಪಷ್ಟವಾಗಿದೆ’ ಎಂದು ಹೇಳಿದರು.

‘ಡಿ.31ರಂದು ಮುಖ್ಯಮಂತ್ರಿ ಭೇಟಿ ಮಾಡಿದ್ದ ಸಂದರ್ಭದಲ್ಲಿ ಕ್ರಮ ಅನಿವಾರ್ಯ ಎಂದು ರಾಜ್ಯಪಾಲರೇ ಹೇಳಿದ್ದಾರೆ. ಆ ನಂತರ ಜ.3ರಂದು ದಾಖಲೆಗಳು ಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ದಾಖಲೆಗಳೇ ಇಲ್ಲದೆ ಕ್ರಮ ಅನಿವಾರ್ಯ ಎಂದು ಏಕೆ ಹೇಳಿದರು? ಇವರ ಉದ್ದೇಶ ಏನು?’ ಎಂದು ಅವರು ಪ್ರಶ್ನಿಸಿದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ‘ರಾಜ್ಯಪಾಲರು ರಾಜ್ಯಕ್ಕೆ ಬಂದಂದಿನಿಂದಲೂ ಇದೇ ರೀತಿ ಮಾಡುತ್ತಿದ್ದಾರೆ. ವಕೀಲರು ದೂರು ಕೊಟ್ಟ ತಕ್ಷಣ ಅದನ್ನು ಸರ್ಕಾರಕ್ಕೆ ಕಳುಹಿಸಿ ವಿವರಣೆ ಕೇಳಬಹುದಿತ್ತು. ಅದು ಬಿಟ್ಟು ಮುಖ್ಯಮಂತ್ರಿ ವಿರುದ್ಧವೇ ದೂರು ದಾಖಲಿಸಲು ಅನುಮತಿ ನೀಡುವುದಾಗಿ ಹೇಳಿರುವುದು ಸರಿಯಲ್ಲ. ಈ ಮೂಲಕ ಅವರು ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು, ‘ಸಿ.ಎಂ ವಿರುದ್ಧ ಯಾವ ತನಿಖೆಯನ್ನೂ ಮಾಡದೆ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟರಮಟ್ಟಿಗೆ ಸರಿ? ದೊಡ್ಡ ಹುದ್ದೆಯಲ್ಲಿದ್ದವರು ಒಮ್ಮೆ ಹಗುರವಾಗಿ ಮಾತನಾಡಿ, ಅದನ್ನು ಸರಿಪಡಿಸಿಕೊಳ್ಳಲು ಆಗುವುದಿಲ್ಲ’ ಎಂದರು.

ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ‘ಸತ್ಯಕ್ಕೆ ದೂರವಾದುದನ್ನು ಹೇಳಿ ಆ ಸ್ಥಾನದ ಗೌರವ ಕಡಿಮೆ ಮಾಡುವುದು ಬೇಡ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.