ಮಂಗಳವಾರ, ಮೇ 18, 2021
30 °C
ಭಾರತಕ್ಕೆ ಇರಾಕ್ ವಿದೇಶಾಂಗ ಸಚಿವ ಹೊಶಿಯಾರ್ ಜೆಬಾರಿ ಭರವಸೆ

ಬೇಕೆನಿಸಿದಷ್ಟು ಕಚ್ಚಾ ತೈಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗ್ದಾದ್ (ಪಿಟಿಐ): ಭಾರತದ ಆರ್ಥಿಕ ವ್ಯವಸ್ಥೆಗೆ ಅಗತ್ಯವಾದ ಎಷ್ಟೇ ಪ್ರಮಾಣದ ಕಚ್ಚಾ ತೈಲವನ್ನು ಬೇಕಾದರೂ ತಾನು ಒದಗಿಸಲು ಸಿದ್ಧ ಎಂದು ಇರಾಕ್ ಭರವಸೆ ನೀಡಿದೆ.`ಭಾರತಕ್ಕೆ ನೆರವಾಗುವುದು ನಮ್ಮ ಬಯಕೆ. ಆ ದೇಶದ ಆರ್ಥಿಕ ವ್ಯವಸ್ಥೆ ಬೆಳವಣಿಗೆಗೆ ಬೇಕಾದ ಕಚ್ಚಾ ತೈಲವನ್ನು ಎಷ್ಟು ಪ್ರಮಾಣದಲ್ಲಿ ಬೇಕಾದರೂ ನೀಡಲು ಇರಾಕ್ ಸಿದ್ಧವಿದೆ' ಎಂದು ವಿದೇಶಾಂಗ ಸಚಿವ ಹೊಶಿಯಾರ್ ಜೆಬಾರಿ ಅವರು ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.ತೀವ್ರ ಸ್ವರೂಪದಲ್ಲಿ ಬೆಳವಣಿಗೆ ಕಾಣುತ್ತಿರುವ ಭಾರತಕ್ಕೆ ಅಧಿಕ ಪ್ರಮಾಣದ ಕಚ್ಚಾ ತೈಲ ಬೇಕಾಗಿದೆ. ಹೀಗಾಗಿ ಆ ದೇಶಕ್ಕೆ ಬೇಕೆನಿಸಿದಷ್ಟು ಕಚ್ಚಾ ತೈಲ ಒದಗಿಸಲು ಇರಾಕ್ ಸಿದ್ಧವಿದೆ ಎಂದು ಅವರು ಹೇಳಿದರು. ತೈಲ ಉತ್ಪಾದನೆಯಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ದೇಶವಾದ ಇರಾಕ್, ಭಾರತಕ್ಕೆ ತೈಲ ಪೂರೈಸುವ ಎರಡನೇ ಅತಿ ದೊಡ್ಡ ದೇಶವಾಗಿದೆ.ಪ್ರಸ್ತುತ 31.5 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಪ್ರತಿ ನಿತ್ಯ ಉತ್ಪಾದಿಸುತ್ತಿದೆ. 2020ರ ಹೊತ್ತಿಗೆ ಈ ಪ್ರಮಾಣವನ್ನು ದುಪ್ಪಟ್ಟುಗೊಳಿಸಲು ಯೋಜಿಸಿದೆ. ಮುಂದಿನ ದಶಕದಲ್ಲಿ ಇರಾಕ್ ಈ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಿದೆ ಎಂದು ಜೆಬಾರಿ ವಿಶ್ವಾಸ ವ್ಯಕ್ತಪಡಿಸಿದರು.ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅವರು ಈಚೆಗೆ ಇರಾಕ್‌ಗೆ ನೀಡಿದ ಎರಡು ದಿನಗಳ ಭೇಟಿಯು, ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ವೃದ್ಧಿಸಲಿವೆ ಎಂದು ಹೇಳಿದ ಜೆಬಾರಿ, `ವಾಣಿಜ್ಯ, ಬಂಡವಾಳ ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರ ನೀಡಲು ಈ ಭೇಟಿ ನೆರವಾಗಲಿದೆ' ಎಂದರು.ಮೊಯಿಲಿ ಭೇಟಿ: ಭಾರತ ಹಾಗೂ ಇರಾಕ್ ಮಧ್ಯೆ ಆರ್ಥಿಕ ಸಹಕಾರ ಇನ್ನಷ್ಟು ಉತ್ತಮಗೊಳಿಸಲು ಜಂಟಿ ಸಚಿವಾಲಯದ ಆಯೋಗ ಪುನಶ್ಚೇತನಗೊಳಿಸುವುದು ಅಗತ್ಯವಾಗಿದೆ ಎಂದು ಹೇಳಿದ ಹೊಶಿಯಾರ್ ಜೆಬಾರಿ, `ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಅವರು ಜುಲೈ 8ರಂದು ಇರಾಕ್‌ಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಕುರಿತು ಸಭೆ ನಡೆಸುವ ಸಾಧ್ಯತೆಯಿದೆ' ಎಂದು ತಿಳಿಸಿದರು.ತೈಲದಿಂದ ಸಂಪದ್ಭರಿತವಾದ ದಕ್ಷಿಣ ಇರಾಕ್‌ನಲ್ಲಿ ಭಾರತದ ಕಂಪೆನಿಗಳು ಬಂಡವಾಳ ಹೂಡುವಂತೆ ಆಹ್ವಾನ ನೀಡಿದ ಅವರು, `ಇಲ್ಲಿಗೆ ಬರುವ ಅಲ್ಲಿನ ಕಂಪೆನಿಗಳಿಗೆ ಎಲ್ಲ ಬಗೆಯ ನೆರವನ್ನೂ ನಾವು ನೀಡಲಿದ್ದೇವೆ' ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.