ಮಂಗಳವಾರ, ಜೂಲೈ 7, 2020
28 °C

ಬೇಡನ ಕುಣಿತ ನೋಡಲು ಜನಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಡನ ಕುಣಿತ ನೋಡಲು ಜನಜಾತ್ರೆ

ಶಿರಸಿ: ‘ಒಂದು ಕೈಯಲ್ಲಿ ಖಡ್ಗ ಇನ್ನೊಂದು ಕೈಯಲ್ಲಿ ಗುರಾಣಿ ಹಿಡಿದು ರೌದ್ರಾವತಾರದ ರಕ್ತವರ್ಣ ವೇಷಧಾರಿ ಬೇಡ ರುದ್ರಾಂಬೆ ಹುಡುಕುತ್ತ ಮುನ್ನುಗ್ಗುತ್ತಾನೆ. ಇಬ್ಬರು ಯುವಕರು ಬೇಡನ ಟೊಂಕಕ್ಕೆ ಕಟ್ಟಿದ ಹಗ್ಗ ಜಗ್ಗಿ ಆತನ ಜಿಂಕೆ ನೆಗೆತದ ಓಟಕ್ಕೆ ಲಗಾಮು ಹಾಕಿದರೆ, ಹಲಗೆ ಬಡಿತದ ಸದ್ದಿಗೆ ಬೇಡ ಇನ್ನಷ್ಟು ರೌದ್ರನಾಗಿ ಸುತ್ತ ಓಡುತ್ತಾನೆ. ಜನ ಬೇಡನ ನೋಡಿ ಕೇಕೆ ಹಾಕುತ್ತಾರೆ.’ನಗರದಲ್ಲಿ ವಿಶಿಷ್ಠ ಜಾನಪದ ಕಲೆ ‘ಬೇಡರ ವೇಷ’ದ ಪ್ರದರ್ಶನ ಮಂಗಳವಾರದಿಂದ ಪ್ರಾರಂಭವಾಗಿದೆ. ರಾತ್ರಿ ನಗರದಲ್ಲಿ ಜನರ ಜಾತ್ರೆ. ತಡರಾತ್ರಿ ಸರಿದರೂ ಸಾವಿರಾರು ಜನ ನಗರದ ಮುಖ್ಯ ವೃತ್ತಗಳಲ್ಲಿ ನಿಂತು ಬೇಡನ ಕುಣಿತ ವೀಕ್ಷಣೆ ಮಾಡುತ್ತಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ಈ ಜಾನಪದ ಜಾತ್ರೆಯ ಸಂಭ್ರಮ ಶಿರಸಿಯಲ್ಲಿ ಕಳೆಗಟ್ಟುತ್ತದೆ. ಅಪರೂಪದ ಬೇಡರ ವೇಷದ ಕಥೆ-ಕುಣಿತ ದೇಶದ ಇನ್ಯಾವ ಭಾಗದಲ್ಲೂ ಕಾಣಸಿಗದು. ಹೋಳಿ ಹುಣ್ಣಿಮೆಯ ನಾಲ್ಕು ದಿನಗಳ ಮೊದಲು (ಮಾ.18ರ ತನಕ) ಬೇಡರ ವೇಷದ ನೃತ್ಯ ಪ್ರದರ್ಶನ ಸವಿಯಲು ವಿವಿಧ ಭಾಗಗಳಿಂದ ಜನ ಆಗಮಿಸುತ್ತಾರೆ.ಬೇಡರ ವೇಷದ ಹಿಂದೆ..: ರುದ್ರಾಂಬೆ ಎಂಬ ಮಹಿಳೆಯ ತ್ಯಾಗದ ಪ್ರತೀಕ ಈ ಬೇಡರ ವೇಷ ನೃತ್ಯ. ವಿಜಯ ನಗರದ ಆಳ್ವಿಕೆ ಕೊನೆಗೊಂಡ ಮೇಲೆ ಅಂದಿನ ಕಲ್ಯಾಣಪಟ್ಟಣ ಇಂದಿನ ಶಿರಸಿ ಸೋದೆ ಅರಸರ ಆಡಳಿತಕ್ಕೆ ಬಂತು. ಮುಸ್ಲಿಮರ ಭೀತಿಯಲ್ಲಿದ್ದ ಕಲ್ಯಾಣಪಟ್ಟಣ ದಾಸಪ್ಪ ಶೆಟ್ಟಿ ನೇತೃತ್ವದಲ್ಲಿ ವಿಜಯನಗರ ಸೇನೆಯಲ್ಲಿ ತರಬೇತಿ ಪಡೆದ ವಿಶೇಷ ಇಂದ್ರಿಯ ಶಕ್ತಿ ಹೊಂದಿರುವ ಬೇಡ ಸಮುದಾಯದ ಮಲ್ಲೇಶಿಯನ್ನು ನೇಮಿಸಿತು. ಅಧಿಕಾರದ ಮದದಿಂದ ಮಲ್ಲೇಶಿ ಕ್ರಮೇಣ ಭ್ರಷ್ಟ ದಾರಿ ತುಳಿದ. ಊರಿನ ಹೆಣ್ಣು ಮಕ್ಕಳ ಬದುಕು ಭೀತಿಯಲ್ಲಿ ಮುಳುಗಿತು. ಆಗ ಪ್ರವೇಶವಾಗಿದ್ದು ದಾಸಪ್ಪ ಶೆಟ್ಟಿ ಮಗಳು ರುದ್ರಾಂಬೆ.ಬೇಡನ ದುರ್ಬಲ ಅಂಶ ಪತ್ತೆ ಹಚ್ಚಿದ ರುದ್ರಾಂಬೆ ಆತನಿಗೆ ಪಾಠ ಕಲಿಸಿದಳು. ಹೋಳಿ ಹುಣ್ಣಿಮೆಯ ದಿನ ಆತ ಸಂಪ್ರದಾಯದಂತೆ ಬೇಡರ ವೇಷ ಕಟ್ಟಿ ಕುಣಿಯುತ್ತಿರುವಾಗ ರುದ್ರಾಂಬೆ ಆತನ ಕಣ್ಣಿಗೆ ಆ್ಯಸಿಡ್ ಎರಚಿದಳು. ನೋವಿನಿಂದ ಚೀರುತ್ತಿದ್ದ ಕುರುಡ ಮಲ್ಲೇಶಿಯನ್ನು ಜನ ಹಗ್ಗ ಕಟ್ಟಿ ನಗರದಲ್ಲಿ ಮೆರವಣಿಗೆ ಮಾಡಿದರು. ರುದ್ರಾಂಬೆ ಅವನೊಂದಿಗೆ ಸಹಗಮನ ಮಾಡಿದಳು. ಇದು ಬೇಡರ ವೇಷದ ಹಿಂದಿನ ಜಾನಪದ ಕಥೆ.‘ಆಧುನಿಕ ಸ್ಪರ್ಶ ಬೇಡರ ವೇಷಕ್ಕೂ ತಟ್ಟಿದೆ. ಬೇಡನ ಹೆಜ್ಜೆ ಸಾಂಪ್ರದಾಯಿಕತೆಯಿಂದ ಭಿನ್ನವಾಗಿದೆ. ಬೇಡನ ವೇಷ ಕಟ್ಟುವ ವ್ಯಕ್ತಿಗೆ ವೇಷ ಧರಿಸುವ ದಿನ ದೇವರ ಸ್ಥಾನ ಮಾನ. ಆತ ಪವಿತ್ರವಾಗಿರಬೇಕು. ನಿರಾಹಾರಿಯಾಗಿರಬೇಕು ಎಂಬ ಸಂಪ್ರದಾಯ ಇತ್ತು. ಬೆನ್ನಿಗೆ ಕಟ್ಟಿದ ನವಿಲುಗರಿ ಬೇಡನ ರೌದ್ರ ನರ್ತನಕ್ಕೆ ತತ್ತರಿಸಿ ನೃತ್ಯ ಮುಗಿಸಿ ವಾಪಸ್ಸಾಗುವಾಗ ಖಾಲಿಯಾಗಿರುತ್ತಿತ್ತು.ಇಂದು ಅಂತ ರೌದ್ರ ನರ್ತನ ಅಪರೂಪವಾಗಿದೆ. ಕಟ್ಟಿದ ನವಿಲುಗರಿ ಅಕ್ಕು-ಮುಕ್ಕಾಗುವುದಿಲ್ಲ. ಯಾಕೆಂದರೆ ನೈಜ ನರ್ತನದ ಪ್ರದರ್ಶಿತವಾಗುವದಿಲ್ಲ’ ಎನ್ನುತ್ತಾರೆ ಬೇಡರ ವೇಷ ಕಟ್ಟುತ್ತಿದ್ದ ಸಂತೋಷ ಜೋಗಳೇಕರ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.