ಬುಧವಾರ, ಜೂನ್ 23, 2021
30 °C

ಬೇತು: ತಪ್ಪದ ನೀರಿನ ಬವಣೆ

ಸಿ.ಎಸ್. ಸುರೇಶ್ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಸಮೀಪದ ಬೇತು ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಹಲವು ಯೋಜನೆಗಳಿದ್ದರೂ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.ಒಂದೂವರೆ ತಿಂಗಳಿನಿಂದ ಒಂದೆರಡು ದಿನಗಳಷ್ಟೇ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗಿದೆ. ಪಂಪ್‌ ದುರಸ್ತಿ, ಪೈಪ್‌ಲೈನ್‌ ದುರಸ್ತಿ ಮುಂತಾದ ಹತ್ತಾರು ನೆಪಗಳಿಂದ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಈಚೆಗೆ ಮೋಟಾರ್‌ನ ಪೆನಾಲ್‌ ಬೋರ್ಡ್‌ ಹಾಳಾಗಿದ್ದು ಹೊಸ ಬೋರ್ಡ್‌ ಅಳವಡಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೂ, ನೀರು ಪೂರೈಕೆಯಾಗುವ ಭರವಸೆ ಗ್ರಾಮಸ್ಥರಿಗಿಲ್ಲ.ಹಲವು ವರ್ಷಗಳ ಹಿಂದೆ ಇಲ್ಲಿನ ಎತ್ತುಕಡು ಹೊಳೆಯಿಂದ ಬೇತು ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸ್ವಜಲಧಾರಾ ಯೋಜನೆ­ಯಡಿ ಬೃಹತ್‌ ನೀರಿನ ಟ್ಯಾಂಕ್ ನಿರ್ಮಿಸಲಾಗಿತ್ತು. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿಯೂ ಒಂದು ಟ್ಯಾಂಕ್‌ ನಿರ್ಮಿಸಲಾಗಿತ್ತು. ಎರಡು ಟ್ಯಾಂಕ್‌ಗಳಿಗೆ ನೀರು ತುಂಬಲು ಎತ್ತುಕಡು ಹೊಳೆಯ ಬದಿಯಲ್ಲಿ ಜಾಕ್‌ವೆಲ್‌ ನಿರ್ಮಿಸಲಾಗಿತ್ತು. ನೀರು ಪೂರೈಕೆ ವ್ಯವಸ್ಥೆಗಳಲ್ಲಿ ಸಮಸ್ಯೆ ಕಾಡುತ್ತಿದ್ದು ಗ್ರಾಮಕ್ಕೆ ನೀರು ಪೂರೈಕೆಯಾಗಿದ್ದೇ ಕಡಿಮೆ.ಬೇತು ಗ್ರಾಮದ ಕುಡಿಯುವ ನೀರಿನ ವ್ಯವಸ್ಥೆಗಾಗಿ ಇದೀಗ ಜಿಲ್ಲಾ ಪಂಚಾಯಿತಿ ವತಿಯಿಂದ 10 ಲಕ್ಷ ರೂಪಾಯಿ ವಿಶೇಷ ಅನುದಾನ ಬಿಡುಗಡೆಯಾಗಿದೆ. ಇನ್ನೆರಡು ಯೋಜನೆಗಳು ಅಜ್ಜಿಮುಟ್ಟ ಹಾಗೂ ಕಲ್ಲುಮೊಟ್ಟೆಗಳಲ್ಲಿ ಸಿದ್ದವಾಗುತ್ತಿದೆ. ಬೇತು ಗ್ರಾಮದ ನದಿತಟದಲ್ಲಿ ಹಳೆಯ ಜಾಕ್‌ವೆಲ್‌ ಹಾಗೆಯೇ ಬಿಟ್ಟು ಮುಖ್ಯರಸ್ತೆಯ ಬಳಿ ನೂತನ ಜಾಕ್‌ವೆಲ್‌ ಕಾಮಗಾರಿ ಕೈಗೊಳ್ಳಲಾಗಿದೆ. ನದಿಮಟ್ಟ­ದಿಂದ 30 ಅಡಿ ಎತ್ತರದಲ್ಲಿ ನಿರ್ಮಾಣ­ಗೊಳ್ಳುತ್ತಿದೆ. ಇಲ್ಲಿಂದ ಹೊಸ ಪೈಪ್‌ಲೈನ್‌ ಅಳವಡಿಸಿ ಟ್ಯಾಂಕಿಗೆ ನೀರು ಪೂರೈಕೆ ಮಾಡಲು ಯೋಜನೆ ಹಮ್ಮಿಕೊಳ್ಳ­ಲಾಗಿದೆ. ಸದ್ಯ ಇರುವ ವ್ಯವಸ್ಥೆ ಅಸಮರ್ಪಕವಾಗಿದ್ದು, ಮಳೆಗಾಲದಲ್ಲಿ ತೊಂದರೆ ಆಗು­ತ್ತಿರುವುದರಿಂದ ನೂತನ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.ನೂತನವಾಗಿ ನಿರ್ಮಿಸಲಾಗುತ್ತಿರುವ ಜಾಕ್‌ವೆಲ್‌ ಕಾಮಗಾರಿಯ ಸ್ಥಳ ಖಾಸಗಿಯವರಿಗೆ ಸೇರಿದ್ದು, ಪ್ರಸ್ತುತ ಇರುವ ಯೋಜನೆ ಕೈಬಿಟ್ಟು ಮತ್ತೊಂದು ವ್ಯವಸ್ಥೆ ಕೈಗೊಳ್ಳುತ್ತಿರುವ ಬಗ್ಗೆ ಗ್ರಾಮದ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಗ್ರಾಮಕ್ಕೆ ನೀರು ಪೂರೈಕೆಗಾಗಿ ಗ್ರಾಮ ಪಂಚಾಯಿತಿ ಹೊಸ ಯೋಜನೆ ರೂಪಿಸುತ್ತಿದ್ದು, ಅಭಿವೃದ್ದಿ ಕಾರ್ಯಕ್ಕೆ ಅಡ್ಡಿಪಡಿಸುವುದು ಸಲ್ಲದು’ ಎಂಬುದು ಗ್ರಾಮಸ್ಥ ಚೋಕೀರ ಸಜಿತ್‌ ಅಭಿಪ್ರಾಯ.‘ಗ್ರಾಮ ಪಂಚಾಯಿತಿ ನೀರು ಪೂರೈಕೆಗೆ ವ್ಯವಸ್ಥಿತ ಯೋಜನೆ ಕೈಗೊಳ್ಳುತ್ತಿದೆ. ಜಾಕ್‌ವೆಲ್‌ಗೆ ಹೊಸ ಪಂಪ್‌ ಅಳವಡಿಸಿ ವಿದ್ಯುತ್‌ ಕಲ್ಪಿಸಿ ನೀರು ಪೂರೈಕೆ ಮಾಡಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಪ್ಪನೆರವಂಡ ಕಿರಣ್‌ ಕಾರ್ಯಪ್ಪ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.