ಗುರುವಾರ , ಮಾರ್ಚ್ 4, 2021
26 °C

ಬೇಲಾಂ ಗುಹೆಗಳ ಶಿಲಾ ಕಾವ್ಯ

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಬೇಲಾಂ ಗುಹೆಗಳ ಶಿಲಾ ಕಾವ್ಯ

ಆಂಧ್ರಪ್ರದೇಶದ ಬೇಲಂ ಗುಹೆಗಳು ಪ್ರಕೃತಿ ಕುಂಚದಲ್ಲಿ ಲಕ್ಷಾಂತರ ವರ್ಷಗಳ ಕುಸುರಿಯಲ್ಲಿ ರೂಪುಗೊಂಡ ಅದ್ಭುತ ಕಲಾಕೃತಿಗಳು. ಬಣ್ಣದ ಬೆಳಕಿನಲ್ಲಿ ಗುಹೆಗಳನ್ನು ನೋಡುವುದೇ ಒಂದು ಅನನ್ಯ ಅನುಭವ.ಬೆಟ್ಟ-ಗುಡ್ಡಗಳಿಲ್ಲ. ಹಸಿರಂತೂ ಮೊದಲೇ ಇಲ್ಲ. ಸುತ್ತಲೂ ಕಣ್ಣು ಹಾಯಿಸಿದರೆ ಒಣ ನೆಲ ಹೊರತುಪಡಿಸಿದರೆ ಬೇರೇನೂ ಕಾಣದು. ಬಿರುಬಿಸಿಲ ಮಧ್ಯೆ `ಬೇಲಂ ಕೇವ್ಸ್~ ಬಸ್ ನಿಲ್ದಾಣದಲ್ಲಿ ಇಳಿದಾಗ `ಇದೇ ಆ ಜಾಗ ಹೌದಾ?~ ಎಂಬ ಅನುಮಾನ.ಮಹಾದ್ವಾರ ದಾಟಿ ಒಳ ಹೊಕ್ಕು, ಸರಿಸುಮಾರು ಒಂದು ಕಿಲೋ ಮೀಟರ್ ರಸ್ತೆ ಕ್ರಮಿಸಿದರೂ ಸಂಶಯ ನಿವಾರಣೆಯಾಗಲಿಲ್ಲ. ಪ್ರವೇಶ ಶುಲ್ಕ ಪಡೆದ ಸಿಬ್ಬಂದಿಯು, ಒಬ್ಬ ಗೈಡ್‌ನನ್ನು ನಮ್ಮಂದಿಗೆ ಕಳಿಸಿದರು. ಎಲ್ಲೆಡೆ ಕಾಣುವ ಬರಡು ನೆಲದ ಮಧ್ಯೆ ದಿಢೀರ್ ಬಾವಿಯೊಂದು ಕಂಡಿತು. “ಹೀಗೆ ಬನ್ನಿ...” ಎಂದು ಗೈಡ್ ಹೇಳಿದಾಗಲೇ ಗುಹೆ ಇಲ್ಲೇ ಇದೆ ಎಂಬುದು ಗೊತ್ತಾಯಿತು!ಇದು ಭಾರತದ ಎರಡನೇ ಅತಿ ಉದ್ದದ ಗುಹೆ (ಪ್ರಥಮ ಸ್ಥಾನದಲ್ಲಿರುವುದು ಮೇಘಾಲಯದಲ್ಲಿದ್ದು, ಅದರ ಉದ್ದ 21 ಕಿಲೋಮೀಟರ್). ಆಂಧ್ರದ ಕರ್ನೂಲು ಜಿಲ್ಲೆಯ ಕೋಲಿಮಿಗುಂಡ್ಲ ಎಂಬ ಹಳ್ಳಿಗೆ ಮೂರು ಕಿಲೋಮೀಟರ್ ದೂರದಲ್ಲಿ ವಿಶಾಲ ಗುಹೆಗಳು ರೂಪುಗೊಂಡಿವೆ.ಲಕ್ಷಾಂತರ ವರ್ಷಗಳ ಕಾಲ ಅಂತರ್ಗತವಾಗಿ ಹರಿದ ಚಿತ್ರಾವತಿ ನದಿಯು ಈ ಗುಹೆಗಳ ಸೃಷ್ಟಿಗೆ ಕಾರಣವಾಗಿದೆ. ಕ್ರಿ.ಪೂ. 4500ರ ಅವಧಿಯ ಪಾತ್ರೆ, ಇತರ ಅವಶೇಷಗಳು ಇಲ್ಲಿ ಸಿಕ್ಕಿವೆ. ಸಾವಿರಾರು ವರ್ಷಗಳ ಹಿಂದೆ ಜೈನ- ಬುದ್ಧ ಸಾಧಕರು ಈ ಗುಹೆಗಳಲ್ಲಿ ನೆಲೆಸಿದ್ದರು ಎಂಬುದಕ್ಕೆ ಆಧಾರಗಳು ದೊರಕಿವೆ.ಗುಹೆಗಳ ಬಗ್ಗೆ ಸುತ್ತಲಿನ ಹಳ್ಳಿಗರಿಗೆ ಗೊತ್ತಿತ್ತಾದರೂ ರಾಬರ್ಟ್ ಬ್ರೂಸ್ ಫೂಟ್ ಎಂಬಾತ 1884ರಲ್ಲಿ ಇದರ ವೈಶಿಷ್ಟ್ಯಗಳ ಬಗ್ಗೆ ದಾಖಲಿಸಿದ್ದ. ಅದಾದ ಬಳಿಕ ಸುಮಾರು ಒಂದು ಶತಮಾನ ಗುಹೆಗಳು ಅನಾಥವಾಗಿ ಉಳಿದವು. 1982ರ ಸುಮಾರಿಗೆ ಇಲ್ಲಿಗೆ ಬಂದ ಹರ್ಬರ್ಟ್ ಡೇನಿಯಲ್ ಗೇಬರ್ ನೇತೃತ್ವದ ತಂಡವು ಗುಹೆಗಳ ಒಳಹೊಕ್ಕು, ಅದರ  ಆಳ- ವಿಸ್ತಾರವನ್ನು ದಾಖಲಿಸಿತು.

 

ಈ ಕೆಲಸಕ್ಕೆ ನೆರವಾದವರು ಸ್ಥಳೀಯರಾದ ಬಿ.ಚಲಪತಿರೆಡ್ಡಿ, ರಾಮಸ್ವಾಮಿ ರೆಡ್ಡಿ, ಬೋಯು ಮದ್ದುಲೇಟಿ, ಕೆ.ಪದ್ಮನಾಭಯ್ಯ ಇತರರು. 1988ರಲ್ಲಿ ಆಂಧ್ರಪ್ರದೇಶ ಸರ್ಕಾರವು ಬೇಲಂ ಗುಹೆಗಳನ್ನು `ಸಂರಕ್ಷಿತ ಸ್ಮಾರಕ~ ಎಂದು ಘೋಷಿಸಿ, ಅಭಿವೃದ್ಧಿಗೆ ಮುಂದಾಯಿತು. 2003ರಲ್ಲಿ ಪ್ರವಾಸಿಗರಿಗೆ ಮುಕ್ತವಾಯಿತು.ಸುಮಾರು ಮೂರು ಕಿ..ಮೀ ಉದ್ದ ಇರುವ ಬೇಲಂ ಗುಹೆ ಪ್ರಾಕೃತಿಕ ವಿಸ್ಮಯಗಳಲ್ಲೊಂದು. ಸುಣ್ಣದ ಕಲ್ಲಿನಿಂದ ರಚನೆಗೊಂಡ ಗವಿಗಳು ಪ್ರಮುಖವಾಗಿ ನಾಲ್ಕು ಕವಲುಗಳಾಗಿ ವಿಂಗಡಣೆಯಾಗಿದೆ. ಈ ಪೈಕಿ ಒಟ್ಟು ಒಂದೂವರೆ ಕಿಲೋಮೀಟರ್‌ನಷ್ಟು ಉದ್ದವಿರುವ ಮೂರು ಕವಲುಗಳಿಗೆ ಪ್ರವಾಸಿಗರು ಭೇಟಿ ನೀಡಲು ಅವಕಾಶವಿದೆ. ಮತ್ತೊಂದು ಕವಲು (ಒಂದೂವರೆ ಕಿಲೋಮೀಟರ್) ಇನ್ನೂ ವೀಕ್ಷಣೆಗೆ ಮುಕ್ತವಾಗಿಲ್ಲ.ಗುಹೆಯನ್ನು ಧ್ಯಾನಮಂಟಪ, ಸಾವಿರ ಹೆಡೆಗಳ ಮಂಟಪ, ಆಲದಮರದ ಸಭಾಂಗಣ, ಮಾಯಾ ಮಂದಿರ, ಪಾತಾಳಗಂಗೆ ಎಂಬಿತ್ಯಾದಿ ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅದರಲ್ಲೂ ನೆಲಮಟ್ಟದಿಂದ 300 ಮೀಟರ್ ಆಳದಲ್ಲಿರುವ `ಪಾತಾಳಗಂಗೆ~ಗೆ ಹೋಗಲು ಮತ್ತೂ ಕೆಳಗೆ ಇಳಿಯಬೇಕು.ಒಂದೆಡೆಯಿಂದ ಇನ್ನೊಂದು ಭಾಗಕ್ಕೆ ಸಾಗಲು ಅಚ್ಚುಕಟ್ಟಾದ ಮೆಟ್ಟಿಲು ಮಾಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ದೀಪಗಳು ಮಂದ ಬೆಳಕು ಸೂಸುತ್ತ, ಗುಹೆಗಳ ಗಾಂಭೀರ್ಯ ಹೆಚ್ಚಿಸಿವೆ. ಮೂರು ಕಡೆಗೆ ನೈಸರ್ಗಿಕವಾದ ಬೃಹತ್ ರಂಧ್ರಗಳಿದ್ದರೂ ಗುಹೆಯೊಳಗೆ ಗಾಳಿಯ ಕೊರತೆ ಇದೆ; ಇದನ್ನು ಸರಿದೂಗಿಸಲು ಒಂಬತ್ತು ಕಡೆ ಮೇಲ್ಭಾಗದಲ್ಲಿ ರಂಧ್ರ ಕೊರೆದು ಸತತ ಗಾಳಿ ರವಾನಿಸುವ ವ್ಯವಸ್ಥೆ ಮಾಡಲಾಗಿದೆ. ಆಕಸ್ಮಾತ್ ವಿದ್ಯುತ್ ಕೈಕೊಟ್ಟರೆ, ಹತ್ತು ಸೆಕೆಂಡ್‌ಗಳೊಳಗೆ ಜನರೇಟರ್ ಸ್ವಯಂಚಾಲಿತವಾಗಿ ಆರಂಭವಾಗುತ್ತದೆ.ಆಂಧ್ರ ಪ್ರವಾಸೋದ್ಯಮ ಇಲಾಖೆಯ ಸುಪರ್ದಿಯಲ್ಲಿರುವ ಬೇಲಂ ಗುಹೆಗೆ ಪ್ರವಾಸಿಗರು ಸದಾ ಕಾಲಕ್ಕೂ ಲಗ್ಗೆ ಇಡುತ್ತಾರೆ. ರಜಾಕಾಲದಲ್ಲಿ ನಿತ್ಯ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಸಾವಿರ ದಾಟುತ್ತದೆ. ಎಂಟು ಮಾರ್ಗದರ್ಶಕರು ಸೇರಿದಂತೆ ಇಲಾಖೆಯ 16 ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುತ್ತಮುತ್ತ ಯಾವುದೇ ವಸತಿಗೃಹ ಅಥವಾ ಲಾಡ್ಜ್‌ಗಳು ಇಲ್ಲದ ಕಾರಣ, ಡಾರ್ಮಿಟರಿಯೊಂದನ್ನು ನಿರ್ಮಿಸಿ ಪ್ರವಾಸಿಗರಿಗೆ ತಂಗಲು ಅನುಕೂಲ ಕಲ್ಪಿಸಲಾಗಿದೆ. ರುಚಿಕಟ್ಟಾದ ಊಟೋಪಚಾರಕ್ಕೆ ಹೋಟೆಲ್ ಕೂಡ ಇದೆ.ಬಗೆಬಗೆಯ ಬಣ್ಣದ ಬೆಳಕಲ್ಲಿ ಬೇಲಂ ಗುಹೆ ನೋಡುವುದೇ ಕಣ್ಣಿಗೆ ಹಬ್ಬ. ನೆಲಮಟ್ಟದಿಂದ ಸುಮಾರು 50 ಅಡಿ ಮೀಟರ್ ಕೆಳಗಿರುವ ಗುಹೆಗಳಲ್ಲಿ ಸಾಗುತ್ತಿದ್ದರೆ, ಎಂಥವರಿಗೂ ಅರೆಕ್ಷಣ ಭಯವಾದೀತು. ಇಲ್ಲಿನ ಒಂದೊಂದು ಭಾಗವೂ ವಿಭಿನ್ನ. ಒಂದೆಡೆ ವಿಶಾಲ ಜಾಗ; ಇನ್ನೊಂದೆಡೆ ತುಸು ದಪ್ಪ ಇರುವವರು ಮುಂದೆ ಸಾಗಲು ಕೂಡ ಅಸಾಧ್ಯ ಎನಿಸುವಷ್ಟು ಇಕ್ಕಟ್ಟಿನ ದಾರಿ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.