ಮಂಗಳವಾರ, ಮೇ 11, 2021
20 °C
ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ಸಮರ್ಥನೆ

ಬೇಹುಗಾರಿಕೆಯಿಂದ ಉಗ್ರರ ಸಂಚು ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯು (ಎನ್‌ಎಸ್‌ಎ) ತನ್ನ ಅಂತರ್ಜಾಲ ಬೇಹುಗಾರಿಕಾ ಚಟುವಟಿಕೆಗಳ ನೆರವಿನಿಂದ ಭಾರತ ಸೇರಿದಂತೆ ಸುಮಾರು 20 ರಾಷ್ಟ್ರಗಳಲ್ಲಿ 50ಕ್ಕೂ ಹೆಚ್ಚು ಭಯೋತ್ಪಾದನಾ ಸಂಚುಗಳನ್ನು ವಿಫಲಗೊಳಿಸಲಾಗಿದೆ ಎನ್ನುವ ಮೂಲಕ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದೆ.ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದ ಸ್ಫೋಟ ಸಂಚು ಕೂಡ ಇದರಲ್ಲಿ ಸೇರಿದೆ ಎಂದು ಎನ್‌ಎಸ್‌ಎ ಮುಖ್ಯಸ್ಥ ಜನರಲ್ ಕೀಥ್ ಅಲೆಕ್ಸಾಂಡರ್ ಅವರು ಸದನದ ಬೇಹುಗಾರಿಕಾ ಸಮಿತಿ ಮುಂದೆ ನೀಡಿದ ಪ್ರಮಾಣೀಕೃತ ಹೇಳಿಕೆಯಲ್ಲಿ ಈ ಅಂಶವನ್ನು ಬಹಿರಂಗಪಡಿಸಿದ್ದಾರೆ.ಆದರೆ, ಈ ಮಾಹಿತಿಗಳು ರಹಸ್ಯ ಮಾಹಿತಿಗಳಾಗಿರುವುದರಿಂದ ದಾಳಿಗೆ ಗುರಿಯಾಗಬೇಕಿದ್ದ ರಾಷ್ಟ್ರಗಳು ಹಾಗೂ ಭಯೋತ್ಪಾದನಾ ಸಂಚುಗಳನ್ನು ಪೂರ್ತಿಯಾಗಿ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.ಭಾರತದ ಮೇಲಿನ ದಾಳಿ ಸಂಚಿನ ಬಗ್ಗೆಯೂ ಕೀಥ್ ಅವರು ಸದನದ ಮುಂದೆ ಯಾವ ವಿವರಗಳನ್ನೂ ಹೇಳಲಿಲ್ಲ. `ಆದರೆ, ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದು ದೆಹಲಿಯಲ್ಲಿ ನಡೆದ 2010ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಂದರ್ಭದಲ್ಲಿ' ಎಂದು ವಿಶ್ವಾಸಾರ್ಹ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.`ವಿಫಲಗೊಳಿಸಲಾದ ಈ ಸಂಚುಗಳನ್ನು ವಿವರವಾಗಿ ಬಹಿರಂಗಗೊಳಿಸುವುದು ಸೂಕ್ತವಲ್ಲ. ಹೀಗೆ ಮಾಡಿದ್ದೇ ಆದರೆ, ಅದು ಭವಿಷ್ಯದಲ್ಲಿ ಉಗ್ರರ ಸಂಚುಗಳನ್ನು ವಿಫಲಗೊಳಿಸುವುದಕ್ಕೆ ನಮಗೆ ತೊಡಕಾಗಿ ಪರಿಣಮಿಸುವ ಸಾಧ್ಯತೆ ಇದೆ. ಅಲ್ಲದೇ, ನಮಗೆ ಹೇಗೆ ಸುಳಿವುಗಳು ಸಿಗುತ್ತವೆ ಎಂಬುದು ದಾಳಿಕೋರರಿಗೆ ಗೊತ್ತಾಗುವ ಅಪಾಯವೂ ಇದೆ' ಎಂದು ಅಭಿಪ್ರಾಯಪಟ್ಟರು.`ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳ ಸುರಕ್ಷತೆಯ ದೃಷ್ಟಿಯಿಂದ ಎನ್‌ಎಸ್‌ಎ ಅಂತರ್ಜಾಲ ಬೇಹುಗಾರಿಕೆ ಅತ್ಯಂತ ಮಹತ್ವದ್ದು. ಆದರೆ ನಮ್ಮ ಸಿಬ್ಬಂದಿ ಇದನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುತ್ತಾರೆ. ಸಿಬ್ಬಂದಿಗೆ ಅತ್ಯುತ್ತಮ ತರಬೇತಿ ನೀಡಲಾಗಿರುತ್ತದೆ. ಹೀಗಾಗಿ, ರಾಷ್ಟ್ರದ ಜನತೆಯ ಖಾಸಗಿತನ ಹಾಗೂ ಸ್ವಾತಂತ್ರ್ಯಕ್ಕೆ ಯಾವ ರೀತಿಯಲ್ಲೂ ಧಕ್ಕೆ ಆಗುವುದಿಲ್ಲ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.