ಗುರುವಾರ , ಮೇ 13, 2021
35 °C

ಬೈಕ್ ಸಂಚಾರಿಗಳ ಸಮ್ಮುಖದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರು ಮಂದಿ ಸ್ನೇಹಿತರು. 25ರಿಂದ 30ರ ವಯೋಮಾನದ ಇವರೆಲ್ಲರೂ ದೇಶ ವಿದೇಶಗಳ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗ ಮಾಡಿದವರು. ಎಂಜಿನಿಯರಿಂಗ್, ಏರೋನಾಟಿಕಲ್ ಇತ್ಯಾದಿ ಕ್ಷೇತ್ರಗಳಲ್ಲಿ ಪದವಿ ಹೊಂದಿದವರು. ಚಿಕ್ಕ ವಯಸ್ಸಿನಲ್ಲೇ ಇವರಲ್ಲಿ ಕೆಲವರು ಸ್ವಂತ ಉದ್ದಿಮೆ ಆರಂಭಿಸಿದವರು.ಇದರೊಂದಿಗೆ ಇವರ ಬತ್ತಳಿಕೆಯಲ್ಲಿರುವ ಮತ್ತೊಂದು ಅನುಭವವೆಂದರೆ ಇವರೆಲ್ಲರೂ ಈಗಾಗಲೇ 2-6 ಲಕ್ಷ ಕಿಲೋ ಮೀಟರ್‌ನಷ್ಟು ಬೈಕ್ ಓಡಿಸಿರುವುದು. ಆದರೂ ಇವರಲ್ಲಿ ಉತ್ಸಾಹ ಕುಂದಿಲ್ಲ. ಮತ್ತೆ ಬೈಕ್ ಹತ್ತಿ ದೇಶ ಸುತ್ತುವ ಸಂಕಲ್ಪ ಮಾಡಿದರು. ಇವರ ಈ ಸಾಹಸಕ್ಕೆ ಈ ಬಾರಿ ಜತೆಯಾದವವರು ಕ್ಯಾಸ್ಟ್ರಾಲ್ ಪವರ್ 1.ಸಂದೀಪ್ ಗೋಸ್ವಾಮಿ, ಸುಂದೀಪ್ ಗುಜ್ಜಾರ್, ಸುನಿಲ್ ಗುಪ್ತಾ, ಹಿಮಾಂಶು ಗುಪ್ತಾ, ಅಭಿಷೇಕ್ ಭಟ್ ಹಾಗೂ ಶಿವಾಂಶು ಸಿಂಗ್ ಎಂಬ ಈ ಆರು ಸವಾರರು ಜತೆಗೂಡಿ ಎಕ್ಸ್‌ಬಿಎಚ್‌ಪಿ ಎಂಬ ತಂಡ ಕಟ್ಟಿಕೊಂಡರು.ಜತೆಗೆ ಬೈಕ್ ಕುರಿತು, ಅದರ ನಿರ್ವಹಣೆ ಹಾಗೂ ಸುರಕ್ಷಿತೆ ಕುರಿತು ತಮ್ಮ ಅನಿಸಿಕೆ ಹಾಗೂ ಅನುಭವಗಳನ್ನು ತಮ್ಮದೇ ನಿಯತಕಾಲಿಕೆ ಮೂಲಕ ಹಂಚಿಕೊಳ್ಳುವ ತುಡಿತ ಇವರದ್ದು. ಇಷ್ಟು ಸಾಲದೆಂಬಂತೆ ಇದೀಗ ತಮ್ಮಂತೆ ದೇಶದಾದ್ಯಂತ ತಂಡ ಕಟ್ಟಿಕೊಂಡಿರುವ ಬೈಕ್ ಸವಾರರನ್ನು ಭೇಟಿಯಾಗಿ ಅವರೊಂದಿಗೆ ಬೈಕ್ ಸವಾರಿ, ನಿರ್ವಹಣೆ ಹಾಗೂ ಸಾಹಸದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವುದು ಉದ್ದೇಶ.ಈ ಯುವಕರಿಗಾಗಿಯೇ ಗ್ರಾಂಡ್ ಇಂಡಿಯನ್ ರೋಡ್ ಟ್ರಿಪ್ ಆಯೋಜಿಸಿತ್ತು. ಉತ್ತರದ ದೆಹಲಿಯಿಂದ ಆರಂಭವಾದ ಈ ಬೈಕ್ ಪ್ರವಾಸ ಪಶ್ಚಿಮದ ಕಡೆ ತಿರುಗಿ ಗುಜರಾತ್, ಮುಂಬೈ, ಗೋವಾ, ಮಂಗಳೂರು ಮಾರ್ಗವಾಗಿ ಇತ್ತೀಚೆಗೆ ಬೆಂಗಳೂರಿಗೆ ಬಂದಿತ್ತು.ಮಾರ್ಚ್ 11ರಂದು ದೆಹಲಿಯಿಂದ ಹೊರಟಿದ್ದ ತಂಡ ಬೆಂಗಳೂರಿಗೆ ಬರುವ ವೇಳಗೆ ನಾಲ್ಕೂವರೆ ಸಾವಿರ ಕಿಲೋ ಮೀಟರ್ ಕ್ರಮಿಸಿತ್ತು. ಆದರೆ ಅವರ ಮೊಗದಲ್ಲಿ ದಣಿವು ಮಾತ್ರ ಮರೆಯಾಗಿತ್ತು. ದಾರಿಯುದ್ದಕ್ಕೂ ತಮ್ಮಂತೆ ಬೈಕ್‌ಗಳಲ್ಲಿ ಊರೂರು ಸುತ್ತುವ ತಂಡಗಳನ್ನು ಭೇಟಿ ಮಾಡುವುದು, ಅವರೊಂದಿಗೆ ಅನುಭವ ಹಾಗೂ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದು ಈ ತಂಡದ ಹವ್ಯಾಸ.ಒಟ್ಟು 52 ದಿನದ ಈ ಪ್ರವಾಸದಲ್ಲಿ ಒಟ್ಟು ಕ್ರಮಿಸಲಿರುವ ದಾರಿ 16 ಸಾವಿರ ಕಿಲೋ ಮೀಟರ್. ಈ ಪ್ರವಾಸದಲ್ಲಿ ಪಾಲ್ಗೊಂಡಿರುವ ಆರು ಜನರ ಈ ತಂಡ ದಾರಿಯ್ದುಕ್ಕೂ ಪ್ರಮುಖ ಊರುಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಬೈಕ್ ಸವಾರರ ತಂಡದೊಂದಿಗೆ ಕೆಲ ಕಾಲ ಕಳೆದು, ಬೈಕ್ ಹಾಗೂ ಪ್ರವಾಸದ ಕುರಿತು ವಿಷಯ ವಿನಿಮಯ ನಡೆಸಿ ಅವರ ಅನುಭವಗಳನ್ನು ದಾಖಲು ಮಾಡಿಕೊಳ್ಳುತ್ತಾರೆ.ಭೇಟಿ ನೀಡುವ ಪ್ರತಿಯೊಂದು ನಗರದಲ್ಲಿರುವ ಕ್ಯಾಸ್ಟ್ರಾಲ್ ಪವರ್ 1 ಕೇಂದ್ರಕ್ಕೆ ಹೋಗಿ `ಫಿಕ್ಸ್ ಅಂಡ್ ಫ್ಲಿಕ್~ ಕಾರ್ಯಕ್ರಮವನ್ನು ಈ ತಂಡ ಆಯೋಜಿಸಲಿದೆ. ಇದರಲ್ಲಿ ಬೈಕ್ ಸವಾರರೇ ತಮ್ಮ ಬೈಕ್‌ನ ಎಂಜಿನ್, ಓಡಿಸುವಾಗ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು ಇತ್ಯಾದಿ ಪ್ರಮುಖ ವಿಷಯಗಳ ಕುರಿತು ಮಾತನಾಡಲಿದ್ದಾರೆ. ನಂತರ ಅವರ ತಂಡದ ಚಿಹ್ನೆಯನ್ನು ಪಡೆದು ಅದನ್ನು ತಮ್ಮ ಜಾಕೆಟ್ ಮೇಲೆ ಹಾಕಿಕೊಂಡು ಮುಂದಿನ ಊರಿನತ್ತ ಪ್ರಯಾಣ ಬೆಳೆಸುತ್ತಾ ಬಂದಿದ್ದಾರೆ.`ಬೆಂಗಳೂರಿನ ನಾಲ್ಕು ಪ್ರಮುಖ ಬೈಕರ್ ತಂಡಗಳನ್ನು ಭೇಟಿ ಮಾಡಿದೆವು. ಅವರೊಂದಿಗೆ ನಂದಿಬೆಟ್ಟಕ್ಕೆ ಹೋದ ಕ್ಷಣ ಅವಿಸ್ಮರಣೀಯ. ನಾವು ಪ್ರವಾಸ ಆರಂಭಿಸಿದ ದಿನದಿಂದ ಇಲ್ಲಿಯವರೆಗೆ ಬಹಳ ಅಚ್ಚರಿ ಎನಿಸಿದ್ದು ಮುಂಬೈ ಹಾಗೂ ಪುಣೆ ನಡುವೆ ಇರುವ ಲೋನಾವಾಲ ಎಂಬ ಊರಿನಲ್ಲಿ 350 ಬೈಕರ್ಸ್‌ ಸಿಕ್ಕಿದ್ದು.ಈ ಪ್ರವಾಸದಿಂದ ದೇಶದಲ್ಲಿ ನಾವು ಮಾತ್ರವಲ್ಲ, ನಮ್ಮಂತೆ ಹಲವಾರು ಮಂದಿ ಬೈಕ್ ಹಾಗೂ ಪ್ರವಾಸ ಕುರಿತು ಆಸಕ್ತಿ ಹೊಂದಿದ್ದಾರೆ ಎನ್ನುವುದು ತಿಳಿಯಿತು. ಅವರೊಂದಿಗೆ ಮುಕ್ತವಾಗಿ ಹರಟಿದ್ದರಿಂದ ಹಲವಾರು ವಿಷಯಗಳನ್ನು ಕಲಿಯುವ ಅವಕಾಶ ನಮಗೂ ದೊರಕಿತು~ ಎಂದು ಸಂಜಯ್ ಗುಜ್ಜಾರ್ ಹೇಳಿದರು.ಇದೀಗ ಬೆಂಗಳೂರು ಪ್ರವಾಸ ಮುಗಿಸಿರುವ ಈ ತಂಡ ಊಟಿ ಮಾರ್ಗವಾಗಿ ತಮಿಳುನಾಡು, ಕೊಚ್ಚಿ, ಆಂಧ್ರಪ್ರದೇಶ, ಒಡಿಶಾ ದಾಟಿ ಪೂರ್ವದ ಕೋಲ್ಕತ್ತಾ ಮಾರ್ಗವಾಗಿ ದೆಹಲಿ ತಲುಪಲಿದೆ. ದಾರಿಯಲ್ಲಿ ಭೇಟಿ ಮಾಡಿದ ಪ್ರತಿಯೊಬ್ಬ ಬೈಕ್ ಸವಾರನ ಅನುಭವ ಹಾಗೂ ಬೈಕ್ ಕುರಿತು ಅವರು ಹಂಚಿಕೊಂಡ ಸ್ವಾರಸ್ಯಕರ ವಿಷಯಗಳುಳ್ಳ ಪುಸ್ತಕವನ್ನು ಹೊರತರುವ ಯೋಜನೆಯೂ ಇವರದ್ದು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.