ಬುಧವಾರ, ಜುಲೈ 15, 2020
21 °C

ಬ್ಯಾಟಿಂಗ್‌ಗೆ ಬಲ ನೀಡಿದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಟಿಂಗ್‌ಗೆ ಬಲ ನೀಡಿದವರು

ಕೊಲಂಬೊ: ದೊಡ್ಡ ಮೊತ್ತ ಪೇರಿಸುವ ಬಲ ಬೇಕು; ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟುವ ಛಲವೂ ಇರಬೇಕು. ಆಗಲೇ ಗೆಲುವಿನ ನಿರೀಕ್ಷೆ ಸಾಧ್ಯ. ಈ ಮಾತನ್ನು ನ್ಯೂಜಿಲೆಂಡ್ ತಂಡವನ್ನು ಎದೆಯಲ್ಲಿ ಬರೆದಿಟ್ಟುಕೊಂಡಿದ್ದಾರೆ.ಮಂಗಳವಾರ ಇಲ್ಲಿನ ಆರ್.ಪ್ರೇಮದಾಸಾ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ಎದುರಾಗಲಿರುವುದು ಆತಿಥೇಯ ಶ್ರೀಲಂಕಾ. ಆದ್ದರಿಂದ ಬೌಲರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದುವುದು ಕಷ್ಟ. ಕಿವೀಸ್ ಈ ಪಂದ್ಯವನ್ನು ತನ್ನ ಬ್ಯಾಟಿಂಗ್ ಬಲದಿಂದಲೇ ಜಯಿಸಬೇಕು.ಮೊದಲು ಬ್ಯಾಟ್ ಮಾಡಿದರೆ ಮುನ್ನೂರಕ್ಕೂ ಅಧಿಕ ಮೊತ್ತ ಪೇರಿಸಿಡಬೇಕು. ಗೆಲುವಿನ ಕಡೆಗೆ ನಡೆಯುವ ಪರಿಸ್ಥಿತಿಯಲ್ಲಿ ಮುನ್ನೂರಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕುವುದಕ್ಕೆ ವಿಕೆಟ್ ಕಾಯ್ದುಕೊಂಡು ಹೋರಾಡಬೇಕು. ಇಲ್ಲದಿದ್ದರೆ, ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿನ ಫಲಿತಾಂಶ ಇಲ್ಲಿಯೂ ಮರುಕಳಿಸುವ ಅಪಾಯ. ಆದ್ದರಿಂದಲೇ ನ್ಯೂಜಿಲೆಂಡ್ ತನ್ನ ಪ್ರಮುಖ ಬ್ಯಾಟ್ಸ್‌ಮನ್‌ಗಳ ಮೇಲೆ ನಿರೀಕ್ಷೆಯ ಭಾರವನ್ನು ಹಾಕಿದೆ.ರಾಸ್ ಟೇಲರ್, ಬ್ರೆಂಡನ್ ಮೆಕ್ಲಮ್, ಮಾರ್ಟಿನ್ ಗುಪ್ಟಿಲ್ ಹಾಗೂ ಜೆಸ್ಸಿ ರೈಡರ್ ಹೇಗೆ ಇನಿಂಗ್ಸ್ ಕಟ್ಟುತ್ತಾರೆ ಎನ್ನುವುದೇ ನಿರ್ಣಾಯಕ ಅಂಶವಾಗಲಿದೆ. ಚೆಂಡು ತೀರ ಕೆಳಮಟ್ಟದಲ್ಲಿ ನುಗ್ಗುವಂಥ ಮಂದಗತಿಯ ಪಿಚ್ ಇಲ್ಲಿನದು. ಆದ್ದರಿಂದ ರಕ್ಷಣಾತ್ಮಕವಾಗಿ ಆಡುತ್ತಲೇ ಸ್ಕೋರ್‌ಬೋರ್ಡ್‌ನಲ್ಲಿ ರನ್ ಗತಿಯು ಹೆಚ್ಚುವಂತೆ ಮಾಡುವುದು ಅಗತ್ಯ. ಈ ಅಂಶವನ್ನು ಟೇಲರ್ ಅರಿತಿದ್ದಾರೆ.‘ಇಲ್ಲಿನ ನಡೆದ ಲೀಗ್ ಹಾಗೂ ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಟೆಲಿವಿಷನ್‌ನಲ್ಲಿ ನೋಡಿದ್ದೇನೆ. ಚೆಂಡು ಸುಲಭವಾಗಿ ಬ್ಯಾಟ್‌ಗೆ ಬರುವುದಿಲ್ಲ. ಆದ್ದರಿಂದ ಆಡುವುದು ಕಷ್ಟವಾಗುವುದು ಸ್ಪಷ್ಟ. ಆದರೂ ಈ ಪರಿಸ್ಥಿತಿಗೆ ಹೊಂದಿಕೊಂಡು ಆಡುವುದು ನಮಗೂ ಗೊತ್ತು. ನೆಟ್ಸ್‌ನಲ್ಲಿಯೂ ನಾವು ಇಂಥ ಮಂದಗತಿಯ ಪಿಚ್‌ನಲ್ಲಿ ಹೇಗೆ ಆಡಬೇಕೆಂದು ತಾಲೀಮು ಮಾಡಿದ್ದೇವೆ’ ಎಂದು ಟೇಲರ್ ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.ಈ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ ಈವರೆಗೆ ಆಡಿದ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಶ್ರೇಯವನ್ನು ಟೇಲರ್ ಪಡೆದಿದ್ದಾರೆ. ಏಳು ಪಂದ್ಯಗಳ ಐದು ಇನಿಂಗ್ಸ್‌ಗಳಲ್ಲಿ ಅವರು 72.00ರ ಸರಾಸರಿಯಲ್ಲಿ 288 ರನ್‌ಗಳನ್ನು ತಂಡಕ್ಕೆ ಕೊಡುಗೆ ನೀಡಿದ್ದಾರೆ. ಈ ಮೊತ್ತದಲ್ಲಿ ಒಂದು ಶತಕ ಹಾಗೂ ಒಂದು ಅರ್ಧ ಶತಕವೂ ಇದೆ.‘ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡು ಹೋಗುವ ವಿಶ್ವಾಸವಿದೆ. ಪರಿಸ್ಥಿತಿಗೆ ಹೊಂದಿಕೊಳ್ಳುವುದು ಹೆಚ್ಚು ಕಷ್ಟವೇನು ಅಲ್ಲ. ಮುಂಬೈ ಹಾಗೂ ಇಲ್ಲಿನ ವಾತಾವರಣ ಒಂದೇ ಆಗಿದೆ.ಬಾಂಗ್ಲಾದೇಶದಲ್ಲಿಯೂ ಪರಿಸ್ಥಿತಿ ಬೇರೆಯೇನು ಆಗಿರಲಿಲ್ಲ’ ಎಂದು ಅವರು ‘ಲಂಕಾ ತಂಡದ ಸ್ಪಿನ್ ಬೌಲರ್‌ಗಳನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದೇ ನಿರ್ಣಾಯಕವಾಗಲಿದೆ. ಅನುಭವಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಹೆಚ್ಚು ಅಪಾಯಕಾರಿ. ಈ ಸ್ಪಿನ್ ಬೌಲರ್ ಬಗ್ಗೆ ನನಗೆ ಗೌರವವಿದೆ’ ಎಂದರು.ಕಿವೀಸ್ ಪರವಾಗಿ ಈ ವಿಶ್ವಕಪ್‌ನಲ್ಲಿ ಒಟ್ಟಾರೆ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ರಾಸ್ ನಂತರದ ಸ್ಥಾನದಲ್ಲಿ ಬ್ರೆಂಡನ್ ಮೆಕ್ಲಮ್ (243), ಮಾರ್ಟಿನ್ ಗುಪ್ಟಿಲ್ (223) ಹಾಗೂ ಜೆಸ್ಸಿ ರೈಡರ್ (165) ಅವರಿದ್ದಾರೆ. ಆದರೆ ಇವರೆಲ್ಲ ವೇಗದ ಬೌಲರ್‌ಗಳ ಎದುರು ಅಬ್ಬರಿಸಬಲ್ಲರು. ಸ್ಪಿನ್ ದಾಳಿಗೆ ತಕ್ಕ ಉತ್ತರ ನೀಡುವಂಥ ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.