ಶುಕ್ರವಾರ, ಜೂನ್ 18, 2021
22 °C

ಬ್ಯಾರಿಗೆ ಸ್ವರ್ಣ, ಕೂರ್ಮಾವತಾರಕ್ಕೆ ರಜತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾರಿಗೆ ಸ್ವರ್ಣ, ಕೂರ್ಮಾವತಾರಕ್ಕೆ ರಜತ

ನವದೆಹಲಿ (ಪಿಐಬಿ/ಪಿಟಿಐ): ಮರಾಠಿಯ `ದೆವುಳ್~ ಮತ್ತು ಬ್ಯಾರಿ ಭಾಷೆಯ `ಬ್ಯಾರಿ~ ಚಿತ್ರಗಳು 2011ನೇ ಸಾಲಿನ ಪ್ರತಿಷ್ಠಿತ `ಸ್ವರ್ಣ ಕಮಲ ಪ್ರಶಸ್ತಿ~ಯನ್ನು ಹಂಚಿಕೊಂಡಿದ್ದು, ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನ್ನಡದ `ಕೂರ್ಮಾವತಾರ~, ಮಲಯಾಳಂನ `ಇಂಡಿಯನ್ ರೂಪಿ~ ಸೇರಿದಂತೆ ಎಂಟು ಪ್ರಾದೇಶಿಕ ಚಿತ್ರಗಳು `ರಜತ ಕಮಲ~ ಪ್ರಶಸ್ತಿಗೆ ಆಯ್ಕೆಯಾಗಿವೆ. ಹಿಂದಿಯ `ಡರ್ಟಿ ಪಿಕ್ಚರ್~ ಚಿತ್ರದ ಅಭಿನಯಕ್ಕಾಗಿ ವಿದ್ಯಾ ಬಾಲನ್ ಉತ್ತಮ ನಟಿ ಮತ್ತು `ದೆವೂಲ್~ ಮರಾಠಿ ಚಿತ್ರದ ಅಭಿನಯಕ್ಕಾಗಿ ಗಿರೀಶ್ ಕುಲಕರ್ಣಿ ಉತ್ತಮ ನಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ಅವರು ಬುಧವಾರ ಇಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ 2011ನೇ ಸಾಲಿನ 59ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದರು. ಇದಕ್ಕೆ ಮುನ್ನ ಮರಾಠಿಯ ನಟಿ ರೋಹಿಣಿ ಹಟ್ಟಂಗಡಿ, ರಮೇಶ್ ಶರ್ಮ ಮತ್ತು ವಿಜಯಾ ಮುಳೆ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಪಟ್ಟಿಯನ್ನು ಸಚಿವರಿಗೆ ಹಸ್ತಾಂತರಿಸಿದರು. ಉಮೇಶ ಕುಲಕರ್ಣಿ ನಿರ್ದೇಶನದ `ದೆವುಳ್~ ಮತ್ತು ಸುವೀರಾಮ್ ನಿರ್ದೇಶನದ `ಬ್ಯಾರಿ~ ಚಿತ್ರಗಳು ಸ್ವರ್ಣ ಕಮಲ ಮತ್ತು 2.50 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸಮನಾಗಿ ಹಂಚಿಕೊಳ್ಳಲಿವೆ. ಅದರಂತೆ ರಜತ ಕಮಲ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಬಹುತೇಕ ಪ್ರಾದೇಶಿಕ ಭಾಷೆಯ ಚಿತ್ರಗಳೇ ಪ್ರಶಸ್ತಿಯಲ್ಲಿ ಸಿಂಹಪಾಲು ಗಳಿಸಿದ್ದು, ಬೆಂಗಾಲಿ, ಡೋಗ್ರಿ, ಮಣಿಪುರಿ, ಪಂಜಾಬಿ ಚಿತ್ರಗಳು ರಜತ ಕಮಲ ಪ್ರಶಸ್ತಿಗೆ ಆಯ್ಕೆಯಾಗಿವೆ. ಬ್ಯಾರಿ ಮತ್ತು ಮಲಯಾಳಂ ಭಾಷೆಯ `ಆದಿಮಧ್ಯಂತಮ್~ ತೀರ್ಪುಗಾರರ ಗಮನ ಸೆಳೆದಿವೆ.

ಗಿರೀಶ್ ಕುಲಕರ್ಣಿ

ನಿರ್ಮಾಪಕ ಬಸಂತಕುಮಾರ್ ಪಾಟೀಲ ಅವರು ನಿರ್ಮಿಸಿರುವ `ಕೂರ್ಮಾವತಾರ~ ರಜತ ಕಮಲ ಮತ್ತು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಪಡೆಯಲಿದೆ.  ವಿಕಾಸ್ ಬೆಹ್ಲ್ ಮತ್ತು ನಿತೇಶ್ ತಿವಾರಿ ನಿರ್ದೇಶನದ `ಚಿಲ್ಲರ್ ಪಾರ್ಟಿ~ ಹಿಂದಿ ಚಿತ್ರ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, 1.50 ಲಕ್ಷ ರೂಪಾಯಿ ಮತ್ತು ರಜತ ಕಮಲ ಪ್ರಶಸ್ತಿಗೆ ಪಾತ್ರವಾಗಿದೆ.  ಕಥಾ ಚಿತ್ರ ವಿಭಾಗದಲ್ಲಿ ದಿ ಡರ್ಟಿ ಪಿಕ್ಚರ್ (ಹಿಂದಿ), ಬಾಲಗಂಧರ್ವ (ಮರಾಠಿ), ಅನ್ಹೆ ಘೋರೆ ದಾ ದಾನ್ (ಪಂಜಾಬಿ), ದೆವೂಲ್ ಮತ್ತು ರಂಜಾನಾ ಅಮಿ ಅರ್‌ಅಶ್ಬೋ ನಾ (ಬೆಂಗಾಲಿ) ಚಿತ್ರಗಳು ತಲಾ ಮೂರು ಪ್ರಶಸ್ತಿ ಪಡೆದಿವೆ.

ವಿದ್ಯಾ ಬಾಲನ್
ಅದರಂತೆ ಚಿಲ್ಲರ್ ಪಾರ್ಟಿ, ಅಳಗರ್‌ಸಾಮಿಯಿನ್ ಕುದುರೈ ಮತ್ತು ಅರಣ್ಯಕಾಂಡಂ (ತಮಿಳು), ಫಿಜಿಗೀ ಮಣಿ (ಮಣಿಪುರಿ), ಜಿಂದಗಿ ನ ಮಿಲೇಗಿ ದೋಬಾರಾ ಮತ್ತು ಅಭಿಷೇಕ್ ಬಚ್ಚನ್ ಅಭಿನಯದ ಗೇಮ್ (ಹಿಂದಿ) ತಲಾ ಆರು ಪ್ರಶಸ್ತಿಗೆ ಪಾತ್ರವಾಗಿವೆ. ಅಳಗರ್‌ಸಾಮಿಯನ್ ಕುದುರೈ ಉತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಪಡೆದಿದ್ದು, ಚೊಚ್ಚಲ ನಿರ್ದೇಶನ ಪ್ರಶಸ್ತಿಯನ್ನು (ಇಂದಿರಾ ಗಾಂಧಿ ಪ್ರಶಸ್ತಿ) ಅರಣ್ಯಕಾಂಡಂ ಚಿತ್ರಕ್ಕಾಗಿ ಕುಮಾರರಾಜಾ ತ್ಯಾಗರಾಜನ್ ಪಡೆದಿದ್ದಾರೆ. `ಆರ್.ಡಿ. ಬರ್ಮನ್ ದಿ ಮ್ಯಾನ್, ದಿ ಮ್ಯೂಸಿಕ್~ ಇಂಗ್ಲಿಷ್ ಪುಸ್ತಕಕ್ಕೆ `ಸಿನಿಮಾಕ್ಕೆ ಸಂಬಂಧಿಸಿದ ಉತ್ತಮ ಪುಸ್ತಕ~ ಪ್ರಶಸ್ತಿ ಲಭಿಸಿದೆ. 

 

ಚೊಚ್ಚಲ ಸಂಭ್ರಮ

ಮಂಗಳೂರಿನ ಟಿ.ಎಚ್.ಅಲ್ತಾಫ್ ಹುಸೇನ್ `ಬ್ಯಾರಿ~ ಚಿತ್ರದ ನಿರ್ಮಾಪಕರು. ಹೋಟೆಲ್ ಉದ್ಯಮಿಯಾಗಿರುವ ಅವರಿಗಿದು ಮೊದಲ ಸಿನಿಮಾ ಅನುಭವ. ಇದು ಬ್ಯಾರಿ ಭಾಷೆಯಲ್ಲಿನ ಮೊದಲ ಚಿತ್ರವೂ ಹೌದು. ಚೊಚ್ಚಲ ಚಿತ್ರಕ್ಕೆ ಸ್ವರ್ಣ ಕಮಲ ಪಡೆದ ಖುಷಿ ಅವರದು. ಆದರೆ, ಪ್ರಶಸ್ತಿ ಪ್ರಕಟವಾದ ಸಂದರ್ಭದಲ್ಲೇ ಅವರ ಮನೆಯಲ್ಲೊಂದು ಸಾವು ಸಂಭವಿಸಿರುವುದು ಅಲ್ತಾಫ್‌ರ ಸಂಭ್ರಮವನ್ನು ಕಡಿಮೆ ಮಾಡಿದೆ.

 

ಸಮಕಾಲೀನ ಸಿನಿಮಾ

`ಪ್ರತಿವರ್ಷದಂತೆ ಈ ವರ್ಷವೂ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರಗಳಿಗೆ ಹೀಗೆ ನಿರಂತರವಾಗಿ ರಾಷ್ಟ್ರಪ್ರಶಸ್ತಿಗಳು ಸಿಗುತ್ತಿರುವುದು ಸಂತೋಷ. ಈ ಬಾರಿ ನಾನು ಸಮಕಾಲೀನ ವಸ್ತುವಿನ ಸಿನಿಮಾ ಮಾಡಿದ್ದೆ. ಪ್ರಶಸ್ತಿಯ ಕುರಿತು ನಿರೀಕ್ಷೆ ಇಟ್ಟುಕೊಳ್ಳುವುದನ್ನು ಈಗ ಬಿಟ್ಟಿದ್ದೇನೆ. ಸಿಕ್ಕರೆ ಸಂತೋಷ. ಸಿಗದಿದ್ದರೆ ಸುಮ್ಮನಿರುವುದು, ಅಷ್ಟೆ. ಈಗ ಇನ್ನೊಂದು ಸ್ಕ್ರಿಪ್ಟ್ ರೂಪಿಸುವ ಕೆಲಸದಲ್ಲಿ ತಲ್ಲೆನನಾಗಿದ್ದೇನೆ.~

 -ಗಿರೀಶ ಕಾಸರವಳ್ಳಿ

ಸಂತೋಷ - ಬೇಸರ


`ಕೂರ್ಮಾವತಾರ~ ಚಿತ್ರಕ್ಕೆ ದೊರೆತ ಪ್ರಶಸ್ತಿ ನಿರ್ಮಾಪಕನಾಗಿ ನನಗೆ ಐದನೇ ಪ್ರಶಸ್ತಿ. ಸಹಜವಾಗಿಯೇ ಸಂತೋಷವಾಗಿದೆ. ಆದರೆ, ನನ್ನ ಸಂತೋಷವನ್ನು ಯಾರೊಂದಿಗೆ ಹಂಚಿಕೊಳ್ಳಲಿ? ಕನ್ನಡ ಸಿನಿಮಾಗಳಿಗೆ ಬೇರೆ ಯಾವ ಪ್ರಶಸ್ತಿಯೂ ದೊರಕದೆ, ನಮ್ಮ ಚಿತ್ರಕ್ಕೆ ಮಾತ್ರ ಪ್ರಶಸ್ತಿ ದೊರೆತಿರುವುದು ಒಂದು ರೀತಿಯ ಬೇಸರಕ್ಕೆ ಕಾರಣವಾಗಿದೆ.~

 - ಬಸಂತಕುಮಾರ್ ಪಾಟೀಲ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.