ಶನಿವಾರ, ಮೇ 15, 2021
29 °C

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗೋದಾಮು ಭರ್ತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ಇಲ್ಲಿನ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಿ ಏಳು ವರ್ಷ ಕಳೆದರೂ, ಈಗಲೂ ಒಂದಿಲ್ಲೊಂದು ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಸಕ್ಕರೆ ಚೀಲಗಳಿಂದ ತುಂಬಿರಬೇಕಿದ್ದ ಕಾರ್ಖಾನೆಯ ಗೋದಾಮು ಸಿಮೆಂಟ್ ಚೀಲಗಳಿಂದ ಭರ್ತಿಯಾಗುವ ಮೂಲಕ ಸಕ್ಕರೆ ಕಾರ್ಖಾನೆ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.ಕರಾವಳಿಯಲ್ಲಿ ಮರಳುಗಾರಿಕೆಗೆ ಕಡಿವಾಣ ಬಿದ್ದ ಕಾರಣ ಸಿಮೆಂಟ್ ಬೇಡಿಕೆ ಕುಸಿದ  ಕಾರಣ ಸಿಮೆಂಟ್ ಚೀಲಗಳನ್ನು ದಾಸ್ತಾನು ಮಾಡಲು ಸಕ್ಕರೆ ಕಾರ್ಖಾನೆಯ ಗೋದಾಮನ್ನು ಸ್ಥಳೀಯ ಸಿಮೆಂಟ್ ವರ್ತಕರು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಬಳ್ಳಾರಿಯ ಹೊಸಪೇಟೆಯಿಂದ ಎ.ಸಿ.ಸಿ ಸಿಮೆಂಟ್ ತುಂಬಿದ ಹಲವಾರು ಲಾರಿಗಳು ಕಳೆದ 10ದಿನಗಳಿಂದ ಸಕ್ಕರೆ ಕಾರ್ಖಾನೆಗೆ ಬರುತ್ತಿದ್ದು, ಕಾರ್ಖಾನೆಯ ಒಂದು ಗೋದಾಮಿನಲ್ಲಿ ಸಿಮೆಂಟ್ ದಾಸ್ತಾನು ಇಡಲಾಗುತ್ತಿದೆ. ನಿತ್ಯ ಸಿಮೆಂಟ್ ತುಂಬಿದ 10ರಿಂದ 15 ಲಾರಿಗಳು ಇಲ್ಲಿಗೆ ಆಗಮಿಸುತ್ತಿವೆ. ಕಾರ್ಖಾನೆಯ ಆಡಳಿತ ಮಂಡಳಿ ಅನುಪಯುಕ್ತವಾದ ಗೋದಾಮಿನಲ್ಲಿ ತಾತ್ಕಾಲಿಕವಾಗಿ ಸಿಮೆಂಟ್ ದಾಸ್ತಾನಿಡಲು ಇಡಲು  20 ಸಾವಿರ ರೂಪಾಯಿ ಪಡೆದು ಅನುಮತಿ ನೀಡಿದೆ ಎನ್ನಲಾಗಿದೆ. ಗೋದಾಮು ಖಾಲಿ ಇರುವ ಕಾರಣ ಅದರಿಂದ ಆದಾಯ ಗಳಿಸಲು ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿರಬಹುದು ಎಂದು ಕಾರ್ಮಿಕರು ಹೇಳುತ್ತಿದ್ದಾರೆ.ಕಾವಲುಗಾರರ ಸಂಬಳಕ್ಕೆ: ಕಾರ್ಖಾನೆ ಸ್ಥಗಿತಗೊಂಡು ಏಳು ವರ್ಷ ಕಳೆದರೂ 5 ಜನ ಕಾವಲುಗಾರರು ಪ್ರತಿನಿತ್ಯ ಹಗಲಿರುಳೆನ್ನದೇ ಕಾವಲು ಕಾಯುತ್ತಿದ್ದಾರೆ. ಅವರಿಗೆ ಸಂಬಳ ನೀಡುವುದಕ್ಕೂ ಕಾರ್ಖಾನೆ ಬಳಿ ಹಣ ಇಲ್ಲದ ಸ್ಥಿತಿ ಇದೆ. ಕಳೆದ ಏಪ್ರಿಲ್‌ನಲ್ಲಿ ಸಂಬಳ ನೀಡಲು ಹಣವಿಲ್ಲದಿದ್ದಾಗ ಕಾರ್ಖಾನೆಯಲ್ಲಿದ್ದ ಹಳೆಯ ಕಾರನ್ನು ಮಾರಿ ಕಾವಲುಗಾರರಿಗೆ ಸಂಬಳ ನೀಡಲಾಗಿತ್ತು. ಇದೀಗ ಮತ್ತೆ ಮೂರು ತಿಂಗಳಿನಿಂದ ಸಂಬಳ ಬಾಕಿ ಇದೆ. ಸಿಮೆಂಟ್ ದಾಸ್ತಾನಿಡಲು ಅವಕಾಶ ಕಲ್ಪಿಸಿದ್ದರಿಂದ ಬಂದ ಹಣವನ್ನು  ಸಂಬಳ ನೀಡಲು ಬಳಸಲಾಗುತ್ತದೆ ಎಂದು ಕಾರ್ಖಾನೆಯ ಮೂಲಗಳು ತಿಳಿಸಿವೆ.ಕಾರ್ಖಾನೆಯಲ್ಲಿ ಉಸ್ತುವಾರಿಯನ್ನು ನೋಡಿಕೊಳ್ಳುವ ಇಬ್ಬರು ಗುಮಾಸ್ತರಿಗೂ ಕಳೆದ ಎರಡು ಮೂರು ತಿಂಗಳಿನಿಂದ ಸಂಬಳವಿಲ್ಲ.ಕಳೆದ ವರ್ಷ ಇಲ್ಲಿ ಸರ್ಕಾರದ ಆದೇಶದ ಮೇರೆಗೆ ಶಿವಮೊಗ್ಗ, ಶಿರಾಳಗೊಪ್ಪ ಮುಂತಾದ ಕಡೆಗಳಿಂದ ಜೋಳದ ಬೀಜವನ್ನು ಶೇಖರಣೆ ಮಾಡಲು ಗೋದಾಮನ್ನು ಬಳಸಿಕೊಳ್ಳಲಾಗಿತ್ತು.  ಕಾರ್ಖಾನೆಯ ಕಾರ್ಮಿಕರು ಸಂಬಳವಿಲ್ಲದೇ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಯೂ ಇದೆ. ಆದರೂ, ಇಲ್ಲಿನ ಕಾರ್ಮಿಕರಿಗೆ ಸಂಬಳ ನೀಡಲು ಸೂಕ್ತ ವ್ಯವಸ್ಥೆ ರೂಪಿಸಲು ಸರ್ಕಾರ ಇನ್ನೂ ಮುಂದಾಗಿಲ್ಲ. ರೈತರು, ಕಾರ್ಮಿಕರು, ಸಹಕಾರಿ ಬ್ಯಾಂಕ್‌ಗಳಿಗೆ ಸುಮಾರು 9 ಕೋಟಿ  ಹಣ ನೀಡಲು ಬಾಕಿ ಇದ್ದರೂ, ಈ ಬಗ್ಗೆ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಪುನಶ್ಚೇತನದ ಭರವಸೆ, ಜಾಗ ಮಾರಾಟ ಮಾಡುವ ಬಗ್ಗೆ ಮಾತುಕತೆ ಮಾಡುತ್ತಾರೆಯೇ ಹೊರತು ಪುನಶ್ಚೇತನದ ಬಗ್ಗೆ ದೃಢ ನಿಶ್ಚಯವನ್ನು ತೆಗೆದುಕೊಳ್ಳುತ್ತಿಲ್ಲ~ ಎನ್ನುವ ಕೊರಗು ಕಾರ್ಮಿಕರದ್ದು.ಕಾರ್ಮಿಕರ ಮತ್ತು ರೈತರ ಬಾಕಿ ಹಣ ಪಾವತಿ ಬಗ್ಗೆಯಾಗಲೀ, ಪುನಶ್ಚೇತನದ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸದ ಬಗ್ಗೆ ಕಾರ್ಖಾನೆ ಷೇರುದಾರ ರೈತರು ಕೂಡಾ ಅಸಮಧಾನ ವ್ಯಕ್ತ ಪಡಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.