ಬುಧವಾರ, ಮೇ 19, 2021
27 °C

ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ: ಪೇಜಾವರ ಶ್ರೀ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಕೃಷ್ಣ ಮಠದಲ್ಲಿ ಸಾರ್ವಜನಿಕ ಸಹ ಪಂಕ್ತಿ ಭೋಜನ ಇದ್ದರೂ, ಸಸ್ಯಾಹಾರ- ಮಾಂಸಾಹಾರದ ಆಧಾರದ ಮೇಲೆ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಮಾಂಸಾಹಾರಿಗಳ ಜೊತೆ ಕುಳಿತು ಊಟ ಮಾಡಿದರೆ ಮಹಾನರಕ ಎಂದು ಬಸವಣ್ಣನವರೇ ಹೇಳಿದ್ದಾರೆ' ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.ಸಾರ್ವಜನಿಕ ಪಂಕ್ತಿಯಲ್ಲಿ ಕುಳಿತು ಬ್ರಾಹ್ಮಣರೂ ಊಟ ಮಾಡುತ್ತಿದ್ದಾರೆ. ಆದರೆ, ಸಸ್ಯಾಹಾರಿಗಳಾದ ಕೆಲವು ಬ್ರಾಹ್ಮಣರೂ ಸಾರ್ವಜನಿಕ ಪಂಕ್ತಿಯಲ್ಲಿ ಕುಳಿತು ಊಟ ಮಾಡಲು ಇಚ್ಛಿಸದ ಕಾರಣ ಅವರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಈ ವ್ಯವಸ್ಥೆ ಧರ್ಮಸ್ಥಳ ಸೇರಿದಂತೆ ಎಲ್ಲೆಡೆ ಇದೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕನಕ ಗೋಪುರ ಕನಕದಾಸರ ಕಾಲದಲ್ಲಿ ನಿರ್ಮಾಣ ಆಗಿದ್ದಲ್ಲ. ಅಲ್ಲಿ ಗೋಪುರ ಇತ್ತಷ್ಟೇ, ಆ ನಂತರ ಹಳೆ ಗೋಪುರವನ್ನು ಕೆಡವಿ ಹೊಸ ಗೋಪುರ ನಿರ್ಮಾಣ ಮಾಡಲಾಯಿತು ಎಂದರು.`ಕೃಷ್ಣ ಮಠಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರಿಗೆ ಪ್ರಶ್ನೆ ಕೇಳಿದ ಯಾವುದೋ ವಾರಪತ್ರಿಕೆಯ ವರದಿಗಾರರೊಬ್ಬರು ಅನವಶ್ಯಕವಾಗಿ ವಿವಾದ ಎಬ್ಬಿಸಲು ಪ್ರಯತ್ನಿಸಿದ್ದರು. ಆದರೆ, ಆ ನಂತರ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಅವರು ಕೃಷ್ಣ ಮಠವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಚಿಂತನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕಾಗಿ ನಾನು ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ಕೆಲವರಲ್ಲಿ ತಪ್ಪು ಕಲ್ಪನೆ ಇರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ' ಎಂದರು.ಸುಬ್ರಹ್ಮಣ್ಯ ಕೊಲ್ಲೂರು ದೇವಸ್ಥಾನಗಳ ಹಾಗೆ ಸರ್ಕಾರದ ನಿಯಂತ್ರಣದಲ್ಲಿದ್ದ ಕೃಷ್ಣ ಮಠವನ್ನು ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂಬ ವಾದ ತಪ್ಪು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಯೊಬ್ಬ ಮಠದವರಿಂದ ಐವತ್ತು ಸಾವಿರ ರೂಪಾಯಿ ಲಂಚ ಕೇಳಿದ್ದ. ಲಂಚ ಕೊಡಲು ನಿರಾಕರಿಸಿದ ಕಾರಣ ಆತ ನೋಟಿಫೈ ಆಗಿದ್ದ ದೇವಸ್ಥಾನಗಳ ಪಟ್ಟಿಯಲ್ಲಿ ಕೃಷ್ಣ ಮಠವನ್ನು ಸೇರಿಸಿದ್ದ ಎಂದು ಅವರು ವಿವರಣೆ ನೀಡಿದರು.ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಿನೋಟಿಫೈ ಮಾಡುವ ಚಿಂತನೆ ಇತ್ತಾದರೂ ಒತ್ತಡಗಳಿಂದ ಅದು ಸಾಧ್ಯವಾಗಿರಲಿಲ್ಲ. ಯಡಿಯೂರಪ್ಪ ಅವರ ಕಾಲದಲ್ಲಿ ಡಿನೋಟಿಫೈ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಸುಪ್ರೀಂ ಕೋರ್ಟ್ ಆದೇಶದಂತೆ ಶ್ರೀಕೃಷ್ಣ ಮಠ, ದೇವಸ್ಥಾನವೂ ಆಗಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ. ಸರ್ಕಾರಿ ನೌಕರರಾಗಿ ಅಷ್ಟ ಮಠಾಧೀಶರು ಕೆಲಸ ಮಾಡಲು ಇಚ್ಛಿಸುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.