ಶನಿವಾರ, ಜನವರಿ 25, 2020
28 °C

ಭಕ್ತಿಯ ಪರಾಕಾಷ್ಠೆಗೆ ನಲುಗಿದೆ ಹುಲಿ ಸಂಕುಲ

ರಾಜೇಶ್ ಶ್ರೀವನ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಪ್ರತಿಷ್ಠಿತ ಹುಲಿ ತಾಣ ಬಂಡೀಪುರದ ಹೆಡಿಯಾಲ ವಲಯದ ಬೇಲದಕುಪ್ಪೆ ಹುಲಿ ತಾಣದಲ್ಲಿ ಇದೇ 30ರಂದು 108 ಶಿವಲಿಂಗಗಳ ಪ್ರತಿಷ್ಠಾಪನಾ ಮಹೋತ್ಸವ, ಮಹದೇಶ್ವರ ಸ್ವಾಮಿ ದೇವಾಲಯದ ಶಿಲಾನ್ಯಾಸ ಹಾಗೂ ಧಾರ್ಮಿಕ ಸಭೆ ನಡೆಯಲಿದ್ದು, ಇದಕ್ಕೆ ಪರಿಸರ ತಜ್ಞರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.ಬೇಲದಕುಪ್ಪೆ ಮಹದೇಶ್ವರ ದೇಗುಲ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿದ್ದು, ಹುಲಿ ಯೋಜನೆ ವ್ಯಾಪ್ತಿಯಲ್ಲಿದೆ. ಬಂಡೀಪುರ ದೇಶದ್ಲ್ಲಲೇ ಅತ್ಯುತ್ಕೃಷ್ಟ ಹುಲಿ ಸಾಂದ್ರತೆಯ ತಾಣವಾಗಿದ್ದು, ಮಹದೇಶ್ವರನ ಭಕ್ತರ ಭಕ್ತಿ ಪರಾಕಾಷ್ಠೆ ಹುಲಿ ಸಂರಕ್ಷಣೆ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಸಿದೆ.ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದು, ನೂರಾರು ವಾಹನಗಳು ಹುಲಿ ಯೋಜನೆ ತಾಣದೊಳಗೆ ನುಗ್ಗಲಿವೆ. ಧ್ವನಿವರ್ಧಕಗಳು ಅರಣ್ಯದ ನೀರವ ಮೌನವನ್ನು ಕದಡಲಿವೆ. ಕಾರ್ಯಕ್ರಮದಲ್ಲಿ ಹಲವು ಮಠಾಧೀಶರು ಭಾಗವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವತಃ 108 ಶಿವಲಿಂಗಗಳ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಚಿವ ಎಸ್.ಎ.ರಾಮದಾಸ್  ದೇಗುಲದ ಶಿಲಾನ್ಯಾಸ ನೆರವೇರಿಸುವರು.ಅಲ್ಲದೇ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಸೇರಿದಂತೆ ಗಣ್ಯ ವ್ಯಕ್ತಿಗಳಾದ ಎಚ್.ಡಿ.ಕುಮಾರಸ್ವಾಮಿ, ಸ್ಥಳೀಯ ಶಾಸಕ ಚಿಕ್ಕಣ್ಣ, ಸಿದ್ದರಾಮಯ್ಯ, ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ಗಣ್ಯ ಆಹ್ವಾನಿತರ ಹೆಸರುಗಳು ಆಹ್ವಾನಪತ್ರಿಕೆಯಲ್ಲಿವೆ.ಕಳೆದ ನವೆಂಬರ್ ಕೊನೆ ವಾರದಲ್ಲಿ ಕಾರ್ತಿಕ ಉತ್ಸವ ಅಂಗವಾಗಿ ಬೇಲದಕುಪ್ಪೆ ದೇಗುಲಕ್ಕೆ ಲಕ್ಷ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲೊಂದು ತಾತ್ಕಾಲಿಕ ಪಟ್ಟಣವೇ ರೂಪುಗೊಂಡಂತಾಗಿತ್ತು!

 

ಕಾಡಿನೊಳಗೆ ವಾಹನಗಳು ಸಾಗುವ ಸಲುವಾಗಿ ಹಲವಾರು ಮರಗಳನ್ನು ಉರುಳಿಸಲಾಗಿತ್ತು. ಅಲ್ಲದೆ ಎರಡು ಜನರೇಟರ್‌ಗಳು ಸದ್ದು ಮಾಡುತ್ತ ಕಾಡಿನ ಶಾಂತಿ ಕದಡಿದ್ದುವು. ಭಕ್ತರ ಖುಷಿಗಾಗಿ ಹರಿಕಥೆ ಹಾಗೂ ಭಜನೆಗಳು ನಡೆದವು.ಬಂಡೀಪುರದೊಳಗಿರುವ ಹಲವಾರು ದೇಗುಲಗಳು ಸ್ಥಳೀಯ ರಾಜಕಾರಣಿಗಳ ಬೆಂಬಲದಿಂದ ಭಕ್ತಿ ಹೆಸರಲ್ಲಿ ವಾಣಿಜ್ಯ ಕೇಂದ್ರಗಳಾಗಿ ಬದಲಾಗುತ್ತಿವೆ. ಜಾತ್ರೆ ಸಂದರ್ಭ ವ್ಯಾಪಾರಿಗಳು ತಾತ್ಕಾಲಿಕ ಮಳಿಗೆ, ಹೊಟೇಲ್‌ಗಳನ್ನು ನಡೆಸುತ್ತಾರೆ.

 

ಟ್ರ್ಯಾಕ್ಟರ್‌ಗಳೂ ಸೇರಿದಂತೆ ಕೃಷಿ ಉಪಕರಣಗಳ ಪ್ರದರ್ಶನ, ಜಾನುವಾರುಗಳ ಮಾರಾಟವೂ ನಡೆಯುತ್ತಿದೆ. ಬೆರಳೆಣಿಕೆಯಷ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ ಏನೂ ಮಾಡಲಾಗದೆ ಅಸಹಾಯಕರಾಗಿದ್ದಾರೆ ಎಂಬ ದೂರು ವನ್ಯಜೀವಿ ತಜ್ಞರದ್ದು.ವನ್ಯಜೀವಿ ಸಂರಕ್ಷಣಾ ಕಾಯಿದೆ (1972) ಪ್ರಕಾರ ಹುಲಿ ಯೋಜನೆ ಪ್ರದೇಶದ ಅತಿಕ್ರಮಣ, ಧ್ವನಿ ವರ್ಧಕ ಬಳಕೆ, ಕುಡಿತ, ಕುಣಿತ, ಧೂಮಪಾನವನ್ನು ನಿಷೇಧಿಸಲಾಗಿದೆ. ಆದರೆ ಜಾತ್ರೆ ಸಂದರ್ಭದಲ್ಲಿ ಇವೆಲ್ಲವೂ ಸಾಮಾನ್ಯವಾಗಿದೆ.  `80ರ ದಶಕದಲ್ಲಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಬಂಡೀಪುರಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇತ್ತು. ಅದಕ್ಕಾಗಿ ಬಂಡೀಪುರ ಡಿಸಿಎಫ್ ಕಚೇರಿ ಪಕ್ಕ ಮರಗಳನ್ನು ಕಡಿದು ಹೆಲಿಪ್ಯಾಡ್ ನಿರ್ಮಾಣ ಮಾಡಲು ಜಿಲ್ಲಾಡಳಿತ  ಸಿದ್ಧತೆ ನಡೆಸಿತ್ತು.

 

ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಉಲ್ಲಂಘಿಸಿ ರಾಷ್ಟ್ರೀಯ ಉದ್ಯಾನದಲ್ಲಿ ಹೆಲಿಪ್ಯಾಡ್ ನಿರ್ಮಿಸುವುದನ್ನು ಆಗಿನ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ದೇಶ್‌ಮುಖ್ ವಿರೋಧಿಸಿದ್ದರು. ಆದರೆ ಜಿಲ್ಲಾಡಳಿತ ಅವರ ವಿರೋಧವನ್ನು ನಿರ್ಲಕ್ಷಿಸಿದಾಗ ಸ್ವತಃ ದೇಶ್‌ಮುಖ್ ಇಂದಿರಾಗಾಂಧಿ ಅವರಿಗೆ ಪತ್ರ ಬರೆದು ಕಾನೂನು ವ್ಯಾಪ್ತಿಯ ಕುರಿತು ಮಾಹಿತಿ ನೀಡಿದರು.ವನ್ಯಜೀವಿ ಬಗ್ಗೆ ಅಪಾರ ಕಾಳಜಿ ಇದ್ದ ಇಂದಿರಾಗಾಂಧಿ ತಕ್ಷಣ ಹೆಲಿಪ್ಯಾಡ್ ನಿರ್ಮಾಣ ಕೈ ಬಿಡಲು ಸೂಚಿಸಿದ್ದರು. ಆದರೆ ಈಗ ಇಂದಿರಾಗಾಂಧಿಯಂಥ ಸೂಕ್ಷ್ಮಮತಿ ರಾಜಕಾರಣಿಗಳಾಗಲಿ, ಮಠಾಧೀಶರಾಗಲಿ ಇಲ್ಲ, ದೇಶ್‌ಮುಖ್‌ರಂಥ ನಿಷ್ಠ, ದಕ್ಷ ಅರಣ್ಯ ಅಧಿಕಾರಿಗಳೂ ಇಲ್ಲ.

 

ಹೀಗಾಗಿ ವನ್ಯಜೀವಿಗಳು ಆತಂಕ ಎದುರಿಸುವಂತಾಗಿದೆ ಎನ್ನುತ್ತಾರೆ ಬೆಂಗಳೂರಿನ `ಗ್ರೋಯಿಂಗ್ ವೈಲ್ಡ್~ ಸಂಸ್ಥೆಯ ಸಂಯೋಜಕ ಅಶ್ವಿನ್ ಎನ್. ಗುರುಶ್ರೀಕರ್.

ಪ್ರತಿಕ್ರಿಯಿಸಿ (+)