ಮಂಗಳವಾರ, ಮೇ 24, 2022
23 °C

ಭಜ್ಜಿ ರಟ್ಟೆಗಳು ಸೋತವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ಕ್ರಿಕೆಟ್ ತಂಡದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಆಫ್‌ಸ್ಪಿನ್ನರ್ ಭಜ್ಜಿ ಎನ್ನುವುದು ನಿಸ್ಸಂಶಯ.ಆದರೆ ಲಭಿಸಿದ್ದ  ಯಶಸ್ಸಿನ ಕಿರೀಟದ ಭಾರವನ್ನು ಸಹಿಸಿಕೊಂಡು ಅದನ್ನು ಉಳಿಸಿಕೊಳ್ಳುವಲ್ಲಿ ಅವರು ಎಡವಿದರು. ಇಂಗ್ಲೆಂಡ್ ಪ್ರವಾಸದಲ್ಲಿ ಅವರು ತೋರಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ
`ದೂಸ್ರಾ~ ಪರಿಣಿತ ಹರಭಜನ್ ಸಿಂಗ್ ರಟ್ಟೆ ಕಸುವು ಮತ್ತು ಬೆರಳುಗಳ ಕೌಶಲ್ಯ ಮುಗಿದು ಹೋಯಿತಾ?

ಅ. 14ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಅವರನ್ನು ಕೈಬಿಟ್ಟಿರುವ ಬೆನ್ನ ಹಿಂದೆಯೇ ಇಂತಹ ಹಲವು ಪ್ರಶ್ನೆಗಳು ಹುಟ್ಟಿವೆ.ಅವರನ್ನು ತಂಡದಿಂದ ಕೈಬಿಟ್ಟಿದ್ದು ಸರಿಯಾದ ನಿರ್ಧಾರವೇ ಎನ್ನುವುದನ್ನು ಅವರ ಇತ್ತೀಚಿಗಿನ ಸಾಧನೆಯ ಅಂಕಿ ಅಂಶಗಳು ಸಮರ್ಥಿಸುತ್ತವೆ.ಇಂಗ್ಲೆಂಡ್‌ನಲ್ಲಿ ಈಚೆಗೆ ಸಾಲು ಸಾಲು ಸೋಲು ಕಂಡ ಭಾರತಕ್ಕೆ ಭಜ್ಜಿಯ ಕಳಪೆ ಪ್ರದರ್ಶನವೂ ಸವಾಲಾಗಿತ್ತು. ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಭಜ್ಜಿ ಪಡೆದದ್ದು ಕೇವಲ ಎರಡು ವಿಕೆಟ್ ಮಾತ್ರ.ಅದೂ 143.50 ಸರಾಸರಿಯಲ್ಲಿ.ಇದರಿಂದಾಗಿ ಅವರು ಇದಕ್ಕೂ ಮುನ್ನ ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಗಳಲ್ಲಿ ಪಡೆದಿದ್ದ 26 ವಿಕೆಟ್‌ಗಳ ಸಾಧನೆ ಮಸುಕಾಗಿ ಹೋಯಿತು.ಇಂಗ್ಲೆಂಡ್‌ನಲ್ಲಿ ಮೂರನೇ ಟೆಸ್ಟ್‌ನಿಂದ ಹೊರಗುಳಿಯಬೇಕಾಯಿತು.ಆದರೆ, ಭಾರತ ಕ್ರಿಕೆಟ್ ತಂಡದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಆಫ್‌ಸ್ಪಿನ್ನರ್ ಭಜ್ಜಿ ಎನ್ನುವುದು ನಿಸ್ಸಂಶಯ. ಆದರೂ ಯಶಸ್ಸಿನ ಕಿರೀಟದ ಭಾರವನ್ನುಸಹಿಸಿಕೊಂಡು ಅದನ್ನು ಉಳಿಸಿಕೊಳ್ಳುವಲ್ಲಿ ಅವರು ಎವಿದರು.ಜೆಂಟಲ್‌ಮೆನ್‌ಗಳ ಆಟ ಕ್ರಿಕೆಟ್‌ನ ವಿವಾದಾಸ್ಪದ ವ್ಯಕ್ತಿಗಳಲ್ಲಿ ಭಜ್ಜಿಗೂ ಪ್ರಮುಖ ಸ್ಥಾನವಿದೆ. ಆಟದ ಅಂಗಳದಲ್ಲಿ ಮತ್ತು ಮೈದಾನದ ಹೊರಗೆ ವಿವಾದಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಓಡಾಡಿದವರು.ಆಸ್ಟ್ರೇಲಿಯ ತಂಡದ ವಿರುದ್ಧದ ಸರಣಿಯಲ್ಲಿ ಜನಾಂಗೀಯ ನಿಂದನೆ ವಿವಾದವನ್ನು ಎದುರಿಸಿದವರು. ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ (ಐಪಿಎಲ್) ಎಸ್. ಶ್ರೀಶಾಂತ್ ಕಪಾಳಕ್ಕೆ ಹೊಡೆದು ಸುದ್ದಿ ಮಾಡಿದವರು. ಅಷ್ಟಕ್ಕೆ ಸಾಲದೆಂಬಂತೆ ಕಾರು ಓಡಿಸುವಾಗ ನಿಯಮ ಉಲ್ಲಂಘಿಸಿ ದಂಡನೆಗೊಳಗಾಗಿದ್ದು ಆಯಿತು.

 

ಇದಕ್ಕೆಲ್ಲ ಕಾರಣ ಭಜ್ಜಿಯ ಮೂಗಿನ ಮೇಲೆ ಇರುತ್ತಿದ್ದ ಸಿಟ್ಟು. ಆದರೆ, ಈ ಮುಂಗೋಪಿ ಹುಡುಗನ ಇನ್ನೊಂದು ಮುಖವೂ ಇದೆ. ಆತ ಒಬ್ಬ ಒಳ್ಳೆಯ ಆಫ್‌ಸ್ಪಿನ್ನರ್ ಆಗಿ ಭಾರತ ತಂಡಕ್ಕೆ ಹಲವು ಅಮೂಲ್ಯ ಕೊಡುಗೆ ಕೊಟ್ಟಿದ್ದರು. 1998ರ ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಪದಾರ್ಪಣೆ ಮಾಡಿದ ಅವರು 2004ರ ಡಿಸೆಂಬರ್‌ವರೆಗೆ ತಾವಾಡಿದ 93 ಪಂದ್ಯಗಳಲ್ಲಿ 117 ವಿಕೆಟ್‌ಗಳನ್ನು ಕಿತ್ತರು. ಆದರೆ 2005ರಿಂದ ಇಲ್ಲಿಯವರೆಗೆ ಅವರು 136 ಪಂದ್ಯಗಳಿಂದ ಪಡೆದಿರುವುದು 142 ವಿಕೆಟ್‌ಗಳನ್ನು ಮಾತ್ರ.ಈ ಅಂಕಿಸಂಖ್ಯೆಯಿಂದ ಅವರ ಏಕದಿನ ಬೌಲಿಂಗ್ ಸಾಧನೆಯ ಕುಸಿತವನ್ನೂ ಅಳೆಯಬಹುದು. ಯಾವುದೇ ಬೌಲರ್‌ನಿಂದ ನಿರಂತರ ಉತ್ತಮ ಸಾಧನೆಯನ್ನು ನಿರೀಕ್ಷಿಸುವುದು     ಸಾಧ್ಯವಿಲ್ಲವಾದರೂ, ಪರಿಪಕ್ವತೆಯನ್ನು   ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ.

ಟ್ವೆಂಟಿ-20, ಏಕದಿನ ಮತ್ತು ಟೆಸ್ಟ್ ಮಾದರಿಗಳೆಲ್ಲವನ್ನೂ ರೂಢಿಸಿಕೊಂಡು ಬೌಲಿಂಗ್ ಮಾಡಿದ ಭಜ್ಜಿ ತೋಳುಗಳು ಸೋತಿರಬಹುದು. ಅದರೆ, ವಿಶ್ವಕಪ್ ವಿಜೇತ ತಂಡವಾಗಿ ಮೆರೆಯುತ್ತಿದ್ದ ಭಾರತ ತಂಡಕ್ಕೆ ಇಂಗ್ಲೆಂಡ್ ಆರದ ಗಾಯ ನೀಡಿದೆ.ಆ ಗಾಯದ ಮೇಲೆ ಉಪ್ಪು ಸವರುವ ಉದ್ದೇಶದಿಂದಲೇ ಹೈದರಾಬಾದಿಗೆ ಕುಕ್ ಪಡೆ ಬಂದಿಳಿದಿದೆ. ಇಂತಹ ಸಂದರ್ಭದಲ್ಲಿಯೂ ಭಜ್ಜಿಯನ್ನು ಬಗಲಿಗೆ ಇಟ್ಟುಕೊಂಡು ಹೋರಾಡುವ ಧೈರ್ಯ ಯಾವ ನಾಯಕನಿಗೂ ಇರುವುದಿಲ್ಲ.ಅವರ ಸ್ಥಾನಕ್ಕೆ ಬಂದಿರುವ ಆರ್. ಅಶ್ವಿನ್ ಮೇಲೆ ಅಪಾರ ನಿರೀಕ್ಷೆಯ ಭಾರವಿದೆ. ಅಶ್ವಿನ್ ಮಿಂಚಿಬಿಟ್ಟರೆ ಭಜ್ಜಿ ಮತ್ತೆ ತಂಡದೊಳಗೆ ಬರಲು ಸಾಕಷ್ಟು ಪರಿಶ್ರಮ ಪಡಬೇಕು. ಇಲ್ಲದಿದ್ದರೆ ಕ್ರಿಕೆಟ್ ಆಟಕ್ಕೆ ಬೈಬೈ ಹೇಳಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.