ಸೋಮವಾರ, ಮಾರ್ಚ್ 8, 2021
20 °C

ಭದ್ರತೆ ಕಾಣದ ವೀರಭದ್ರನ ನೆಲೆವೀಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರತೆ ಕಾಣದ ವೀರಭದ್ರನ ನೆಲೆವೀಡು

ಚಾಮರಾಜನಗರ: ಸುಂದರ ಪರಿಸರದ ನಡುವೆ ಕಂಗೊಳಿಸುವ ವೀರಭದ್ರೇಶ್ವರ ದೇಗುಲದ ಗೋಪುರ ಕೈಬೀಸಿ ಕರೆಯುತ್ತದೆ. ಆದರೆ, ಸನಿಹಕ್ಕೆ ಹೋದರೆ ಭಯಪಡುವುದೇ ಹೆಚ್ಚು. ಪ್ರಾಂಗಣದ ಸುತ್ತಲೂ ಹಬ್ಬಿನಿಂತಿರುವ ಪೊದೆಗಳು. ಮಂಟಪಗಳಲ್ಲಿ ಮಸಿಯಿಂದ ಬರೆದಿರುವ ಬರಹಗಳು. ಅಲ್ಲಲ್ಲಿ ಉದುರಿ ಬಿದ್ದ ಗೋಡೆಗಳ ಅವಶೇಷ. ಕುಸಿದು ಬೀಳಲು ಕ್ಷಣಗಣನೆ ಎಣಿಸುತ್ತಿರುವ ರಾಜಗೋಪುರ.-ಇದು ಐತಿಹಾಸಿಕ ಹಾಗೂ ಧಾರ್ಮಿಕ ಮನ್ನಣೆ ಪಡೆದ ತಾಲ್ಲೂಕಿನ ಚೆನ್ನಪ್ಪನಪುರ ಗ್ರಾಮದ ವೀರಭದ್ರೇಶ್ವರ ದೇವಾಲಯದ ಚಿತ್ರಣ. ಜಿಲ್ಲಾ ಕೇಂದ್ರದಿಂದ 8 ಕಿ.ಮೀ. ಅಂತರದಲ್ಲಿರುವ ಅಮಚವಾಡಿಯಿಂದ ಎಡಭಾಗದಲ್ಲಿರುವ ಈ ಊರಿನ ದೈವ ವೀರಭದ್ರೇಶ್ವರನಿಗೆ ಭದ್ರತೆಯೇ ಇಲ್ಲ. ದೇಗುಲದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಪೂರ್ವಕ್ಕೆ ಮುಖ ಮಾಡಿ ನಿಂತಿರುವ ಗೋಪುರದ ಮೇಲ್ಭಾಗದಲ್ಲಿರುವ ಕಳಶದ ಭಾಗ ಶಿಥಿಲಗೊಂಡಿದೆ.ವಿಜಯನಗರದ ಗೋಪುರ ಹೋಲುವ ದ್ರಾವಿಡ ಶೈಲಿಯ ಗೋಪುರಗಳ ಸುತ್ತಲೂ ಗಿಡಗಳು ಬೆಳೆಯುತ್ತಿವೆ. ಒಳಭಾಗದ ಪ್ರಾಂಗಣದಲ್ಲಿ ಪಶ್ಚಿಮಕ್ಕೆ ಮುಖ ಮಾಡಿ ನಿಂತಿರುವ ನಂದಿ ಆಕರ್ಷಕವಾಗಿದೆ. ಅಲ್ಲಿನ ಕಲ್ಲುಕಂಬಗಳ ನಡುವೆ ದೇಗುಲದ ಗರ್ಭಗುಡಿ ಮೇಲೆ ಇತಿಹಾಸ ಬಿಂಬಿಸುವ ಕನ್ನಡದ ಶಾಸನಗಳು ಮೈಸೂರು ಅರಸರ ಕಾಲದಲ್ಲಿ ದೊರೆತ ನೆರವನ್ನು ಸಾರುತ್ತವೆ. ಆದರೆ, ದೇವಾಲಯದ ನಿರ್ವಹಣೆಗೆ ನಿರ್ಲಕ್ಷ್ಯವಹಿಸಲಾಗಿದೆ. ಹೀಗಾಗಿ,  ಭಕ್ತರು ಹಾಗೂ ಪ್ರವಾಸಿಗರು ಪರಿತಪಿಸುವಂತಾಗಿದೆ.ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಈ ದೇಗುಲ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿದೆ. ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶವಿದೆ. ಸುತ್ತಲೂ ಚಿಕ್ಕಹೊಳೆ ಪರಿಸರ ಇದಕ್ಕೆ ಆಕರ್ಷಣೆ ತಂದುಕೊಟ್ಟಿದೆ. ಇದರಿಂದ ಗ್ರಾಮದ ಜನರಿಗೂ ಆದಾಯದ ಮೂಲವಾಗುವಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸುತ್ತಾರೆ ಭಾಗ್ಯಮ್ಮ.ಕಿಡಿಗೇಡಿಗಳು ಮಸಿಯಿಂದ ಮಂಟಪದ ಅಂದ ಕೆಡಿಸಿದ್ದಾರೆ. ದೇಗುಲ ಜೀರ್ಣೋದ್ಧಾರ ಕಾಣದೆ ಅಕ್ರಮ ಚಟುವಟಿಕೆಗಳಿಗೆ ಆಶ್ರಯ ತಾಣವಾಗುತ್ತಿದೆ. ಚಾಮರಾಜ ಹಾಗೂ ಕೃಷ್ಣರಾಜ ಒಡೆಯರ ನೆರವಿನೊಂದಿಗೆ ಸ್ಥಾಪನೆಗೊಂಡ ದೇಗುಲ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಆದರೆ, ಇಂದಿಗೂ ಸೂಕ್ತ ನಿರ್ವಹಣೆಗೆ ಒತ್ತು ನೀಡಲು ಇಲಾಖೆ ಹಿಂದೇಟು ಹಾಕಿದೆ ಎಂಬುದು ಗ್ರಾಮಸ್ಥ ರವಿಕುಮಾರ್ ಅವರ ದೂರು.`ಜಿಲ್ಲೆಯ ಐತಿಹಾಸಿಕ ಮಹತ್ವ ಪಡೆದ ಇಂತಹ ಸ್ಥಳಗಳನ್ನು ಶಾಲಾ ಮಕ್ಕಳು ಹಾಗೂ ಪ್ರವಾಸಿಗರಿಗೆ ಪರಿಚಯಿಸುವ ಕೆಲಸವಾಗಬೇಕು. ದೇಗುಲಕ್ಕೆ ಹೋಗಲು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಕೂಡಲೇ, ಅಭಿವೃದ್ಧಿಗೆ ಒತ್ತು ನೀಡಬೇಕು. ರಾಜಗೋಪುರದ ಕಳಶ ಬೀಳುವ ಮುನ್ನವೇ ಎಚ್ಚೆತ್ತುಕೊಂಡು ಸಂರಕ್ಷಣೆ ಮಾಡಬೇಕು~ ಎಂಬುದು ಶಿಕ್ಷಕರಾದ ಸುರೇಶ್ ಮುಡಿಗುಂಡ, ಕ್ರಿಸ್ಟೋಪರ್ ಹಾಗೂ ಮಲ್ಲೇಶ್ ಅವರ ಒತ್ತಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.