ಮಂಗಳವಾರ, ಮೇ 17, 2022
27 °C

ಭರವಸೆ ಮಹಾಪೂರ: ಅನುಷ್ಠಾನ ಅರ್ಧಚಂದ್ರ

ಪ್ರಜಾವಾಣಿ ವಾರ್ತೆ ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮತ್ತೊಂದು ರಾಜ್ಯ ಬಜೆಟ್ ಬರುತ್ತಿದೆ.ಫೆ. 24ರಂದು ಪ್ರಸಕ್ತ ಸಾಲಿನ ಬಜೆಟ್‌ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಲಿದ್ದಾರೆ. ಸಹಜವಾಗಿಯೇ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಈ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಆದರೆ, ಕಳೆದ ಬಜೆಟ್‌ನ ಆಶ್ವಾಸನೆಗಳಲ್ಲಿ ಶೇ. 10ರಷ್ಟೂ ಈಡೇರದಿರುವುದು ಜನರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.ಕಳೆದ ವರ್ಷದ ಬಜೆಟ್‌ನಲ್ಲಿ ಜಿಲ್ಲೆಗೆ ಸಿಂಹಪಾಲು ಸಿಕ್ಕಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ವ ಆಸಕ್ತಿಯಿಂದ ಜಿಲ್ಲೆ ಮತ್ತು ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡು ಹಲವು ಯೋಜನೆ, ಅನುದಾನ ಒದಗಿಸುವ ಬಗ್ಗೆ ಬಜೆಟ್‌ನಲ್ಲಿ ಭರವಸೆ ನೀಡಿದ್ದರು. ಜಿಲ್ಲೆಯ ಜನ ಜಿಲ್ಲೆಗೆ ಸಿಕ್ಕ ವಿಶೇಷ ಕೊಡುಗೆಗಳನ್ನು ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಸೇರಿದಂತೆ ಸಂಸದರೂ ಪ್ರತಿ ಕಾರ್ಯಕ್ರಮಗಳಲ್ಲೂ ಬಜೆಟ್‌ನಲ್ಲಿ ಜಿಲ್ಲೆಗೆ ನೀಡಿದ ವಿಶೇಷ ಕೊಡುಗೆಗಳ ಬಗ್ಗೆ ಭಾಷಣ ಮಾಡುತ್ತಲೇ ಇದ್ದರು. ಆದರೆ, ಈ ಯಾವ ಕೊಡುಗೆಗಳೂ ಮತ್ತೊಂದು ಬಜೆಟ್ ಬಂದರೂ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿಲ್ಲ.2010ರ ಮಾರ್ಚ್ 5ರಂದು ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ  ` 10 ಕೋಟಿ, ಹೊಸನಗರದ ಚಕ್ರಾದಲ್ಲಿ ಅರಣ್ಯ ಮತ್ತು ವನ್ಯಜೀವಿ ಅಧ್ಯಯನ ಕೇಂದ್ರಕ್ಕೆ ` 5 ಕೋಟಿ, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ (ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆ ವ್ಯಾಪ್ತಿ ಸೇರಿ)ಕ್ಕೆ ` 20 ಕೋಟಿ, ನೆಹರು ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ` 1 ಕೋಟಿ, ಶಿವಮೊಗ್ಗ ಮೆಡಿಕಲ್ ಕಾಲೇಜು ಅಭಿವೃದ್ಧಿಗೆ ` 20 ಕೋಟಿ,  ಪಶು ವೈದ್ಯಕೀಯ ಕಾಲೇಜು ಅಭಿವೃದ್ಧಿಗೆ ` 10 ಕೋಟಿ ಅನುದಾನ ಮೀಸಲಿಡಲಾಗಿತ್ತು.ಅಲ್ಲದೇ, ಮಲೆನಾಡು ಸೇರಿದಂತೆ ಶಿವಮೊಗ್ಗ ಜಿಲ್ಲೆಗೆ ಅನುಕೂಲವಾಗುವ ದೃಷ್ಟಿಯಿಂದ ಅಡಿಕೆ ಸುಲಿಯುವ ಯಂತ್ರ ಖರೀದಿಗೆ ಶೇ. 50ರಷ್ಟು ಸಬ್ಸಿಡಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ` 53 ಕೋಟಿ ಅನುದಾನ.- ಇವು ಯಡಿಯೂರಪ್ಪ ಅವರು ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ನೀಡಿದ ಕೊಡುಗೆಗಳು. ಆದರೆ, ಈ ಬಜೆಟ್‌ನ ಯಾವ ಘೋಷಣೆಗಳೂ ಸಂಪೂರ್ಣ ಕಾರ್ಯಗತ ಆಗದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ.ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಹುದ್ದೆಗೆ ಹೆಚ್ಚಿದ ಪೈಪೋಟಿಯಿಂದಾಗಿ ನೇಮಕಾತಿ ಇನ್ನೂ ಕಗ್ಗಂಟಾಗಿದೆ. ಹಾಗಾಗಿ, ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ  ` 10 ಕೋಟಿ  ಅನುದಾನ ಬಿಡುಗಡೆ ಮಾತು ಇನ್ನೂ ದೂರ ಉಳಿದಿದೆ.ಚಕ್ರಾದಲ್ಲಿ ಸ್ಥಾಪಿಸಬೇಕಿದ್ದ ಅರಣ್ಯ ಮತ್ತು ವನ್ಯಜೀವಿ ಅಧ್ಯಯನ ಕೇಂದ್ರ, ಶಿವಮೊಗ್ಗವನ್ನು ಕೇಂದ್ರವನ್ನಾಗಿಟ್ಟುಕೊಂಡು ಸ್ಥಾಪಿಸಬೇಕಿದ್ದ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಒಂದು ವರ್ಷವಾದರೂ ಪ್ರಾಥಮಿಕ ಹಂತದ ಚಾಲನೆಯನ್ನೂ ಪಡೆದಿಲ್ಲ. ಹಾಗೆಯೇ, ನೆಹರು ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ` 1 ಕೋಟಿ ಇದುವರೆಗೂ ಬಿಡುಗಡೆಯಾಗಿಲ್ಲ.ಹಾಗೆಯೇ, ಶಿವಮೊಗ್ಗ ಮೆಡಿಕಲ್ ಕಾಲೇಜು ಅಭಿವೃದ್ಧಿಗೆ ಘೋಷಿಸಿದ್ದ ` 20 ಕೋಟಿ ಅನುದಾನದಲ್ಲಿ ಸರ್ಕಾರ ಇತ್ತೀಚೆಗೆ ಅಷ್ಟೂ ಹಣ ಬಿಡುಗಡೆ ಮಾಡಿದ್ದರೂ ಅದರಲ್ಲಿ ಶೇ. 80ರಷ್ಟು ಹಣವನ್ನು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಸ್ಥಾಪಿಸಲು ನೀಡಲಾಗಿದೆ. ಪಶು ವೈದ್ಯಕೀಯ ಕಾಲೇಜು ಅಭಿವೃದ್ಧಿಗೆ ಘೋಷಿಸಿದ್ದ ` 10 ಕೋಟಿ ಅನುದಾನದಲ್ಲಿ ಅರ್ಧದಷ್ಟು ಹಣ ಮಾತ್ರ ಬಿಡುಗಡೆಯಾಗಿದೆ.ಅಡಿಕೆ ಸುಲಿಯುವ ಯಂತ್ರ ಖರೀದಿಗೆ ಸರ್ಕಾರ ಶೇ. 50ರಷ್ಟು ಸಬ್ಸಿಡಿ ಘೋಷಿಸಿದ್ದರೂ ಇದುವರೆಗೂ ಬಿಡುಗಡೆ ಮಾಡಿದ್ದು, ಕೇವಲ ` 13.5 ಲಕ್ಷ ‘ಇದರಲ್ಲಿ ಇದುವರೆಗೂ ಜಿಲ್ಲೆಯಲ್ಲಿ ಕೇವಲ 13 ಜನ ರೈತರಿಗೆ ಮಾತ್ರ ಸೌಲಭ್ಯ ಸಿಕ್ಕಿದ್ದು, ಯಂತ್ರ ಖರೀದಿಗೆ ನೂರಾರು ಜನ ರೈತರು ಅರ್ಜಿ ಸಲ್ಲಿಸಿ, ಕಾಯುತ್ತಿದ್ದಾರೆ. ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಡಾ.ಎಂ. ವಿಶ್ವನಾಥ.ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ಎಂಎಡಿಬಿ)ಗೆ ಸರ್ಕಾರ ವಾಗ್ದಾನ ಮಾಡಿದಂತೆ ` 53 ಕೋಟಿ ಅನುದಾನ ಬಿಡುಗಡೆಯಾಗಬೇಕಿತ್ತು. ಎಂಎಡಿಬಿ ಅಧ್ಯಕ್ಷ ಪದ್ಮನಾಭ ಭಟ್ ಹೇಳುವಂತೆ, ಇದುವರೆಗೆ ` 13 ಕೋಟಿ ಅನುದಾನ ಬಂದಿದೆ. ಬಾಕಿ ಹಣ ಇನ್ನೆರಡು ದಿವಸದಲ್ಲಿ ಬಿಡುಗಡೆಯಾಗಬಹುದು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.