ಬುಧವಾರ, ಜೂನ್ 23, 2021
30 °C

ಭವಿಷ್ಯದ ನಾಯಕ ಕೊಹ್ಲಿ!

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಭವಿಷ್ಯದ ನಾಯಕ ಕೊಹ್ಲಿ!

ವಿರಾಟ್ ಕೊಹ್ಲಿ!

ಭಾರತೀಯ ಕ್ರಿಕೆಟ್ ರಂಗದಲ್ಲಿ ಸದ್ಯ ಮಿಂಚಿನ ಸಂಚಾರ ಉಂಟು ಮಾಡುವಂತಹ ಹೆಸರದು. ಈ ಮಧ್ಯಮ ಕ್ರಮಾಂಕದ ಆಟಗಾರನ ಬ್ಯಾಟಿಂಗ್ ಆಸ್ವಾದಿಸುವುದೆಂದರೆ ಶೇಕ್ಸ್‌ಪಿಯರ್‌ನ ಸುಖಾಂತ್ಯದ ಪ್ರಣಯ ನಾಟಕವನ್ನು ನೋಡಿದಂತೆ. ಆಟ ಸವಿದಷ್ಟೂ ದಾಹ ಹೆಚ್ಚಿಸುವಂತಹ ತಾಕತ್ತು ಅವರ ಬ್ಯಾಟಿಂಗ್ ಜಾಣ್ಮೆಯಲ್ಲಿದೆ.

 

ಕಳೆದ ವಾರ ಪಾಕಿಸ್ತಾನದ ಎದುರು ಈ ಆಟಗಾರ ಸಿಡಿಸಿದ ಶತಕವಾದರೂ (183 ರನ್) ಎಂತಹದ್ದು? ಇನ್ನು 17 ರನ್ ಬಂದಿದ್ದರೆ ಸಚಿನ್ ತೆಂಡೂಲ್ಕರ್ ಅವರ ದ್ವಿಶತಕವೂ ಮಂಕು ಕವಿಸಿಕೊಳ್ಳುತ್ತಿತ್ತು.ವಿಶ್ವಾಸದಿಂದ ಮುನ್ನುಗ್ಗಿ ಆಡುವ ಛಾತಿಯೇ ಕೊಹ್ಲಿ ಅವರನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಿದೆ. ಸಚಿನ್ ಕರಾಚಿಯಲ್ಲಿ ಅಂತರರಾಷ್ಟ್ರೀಯ    ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಒಂದು ವರ್ಷ ಹಾಗೂ ಹತ್ತು ದಿನಗಳ ಹಸುಳೆಯಾಗಿದ್ದ ವಿರಾಟ್, ತಮ್ಮ  ಕ್ರಿಕೆಟ್ ಮಹಾಗುರುವಿನ ಮುಂದೆ ಬ್ಯಾಟಿಂಗ್ `ವಿರಾಟ್~ರೂಪ ತೋರುವುದನ್ನು ಕಂಡಾಗ ಮನಸ್ಸು ಮುದಗೊಳ್ಳುತ್ತದೆ. ಬೌಲರ್ ಯಾರೆಂಬುದರ ವಿಷಯವಾಗಿ ತಲೆ ಕೆಡಿಸಿಕೊಳ್ಳದೆ ಚೆಂಡು ಇರುವುದೇ ದಂಡಿಸುವುದಕ್ಕಾಗಿ ಎಂಬ ಮನೋಭಾವದಲ್ಲಿ ಬ್ಯಾಟ್ ಬೀಸುವ ಆಟಗಾರ ಅವರು.ಮಲೇಷ್ಯಾದಲ್ಲಿ 2008ರಲ್ಲಿ ನಡೆದ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ದೇಶಕ್ಕೆ ಟ್ರೋಫಿ ತಂದುಕೊಟ್ಟಿದ್ದ ಕೊಹ್ಲಿ, ಮೊದಮೊದಲು ಹುಂಬತನಕ್ಕೆ ಹೆಸರಾಗಿದ್ದವರು. ಕ್ವಾಲಾಲಂಪುರದಿಂದ ವಿಶ್ವಕಪ್ ಟ್ರೋಫಿ  ಹಿಡಿದುಕೊಂಡು ಬಂದ ಬಳಿಕ ನೆಟ್ಸ್‌ಗಿಂತ ಹೆಚ್ಚಾಗಿ ಪಾರ್ಟಿಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಈ ಆಟಗಾರ, ಎಲ್ಲಿ ರ‌್ಯಾಂಪ್ ಮೇಲಿನ ಕತ್ತಲು, ಬೆಳಕಿನಲ್ಲೇ ಕಳೆದುಹೋಗುತ್ತಾರೇನೋ ಎಂಬ ಭೀತಿಯನ್ನೂ ಮೂಡಿಸಿದ್ದರು.

 

ದೆಹಲಿಯ ಗಲ್ಲಿಗಳಲ್ಲಿ ದಾಂದಲೆ ಎಬ್ಬಿಸುತ್ತಾ ಓಡಾಡುತ್ತಿದ್ದ ಈ ಹುಡುಗ, ಮರದಲ್ಲೇ ಹಣ್ಣಾಗಿ ಉದುರುವ ಮಾವಿನಂತೆ ಈಗ ಮಾಗಿದ್ದಾರೆ.ಬ್ಯಾಟಿಂಗ್ ಧಾಡಸಿತನ ಮತ್ತು ಮಾಗಿದ ವ್ಯಕ್ತಿತ್ವದ ಪರಿಣಾಮ  ವಿರಾಟ್, ಒಬ್ಬ ಬಲು ವಿಶಿಷ್ಟ ಮಧ್ಯಮ ಕ್ರಮಾಂಕದ ಆಟಗಾರರಾಗಿ    ರೂಪುಗೊಂಡಿದ್ದಾರೆ.

 

ಎಂತಹ ಒತ್ತಡವನ್ನೂ ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿರುವ ಈ ಬ್ಯಾಟ್ಸ್‌ಮನ್, ಅದೇ ಕಾರಣದಿಂದ ಅತ್ಯಲ್ಪ ಸಮಯದಲ್ಲೇ ತಂಡದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದಾರೆ. ಅಂಗಳದ ಮಧ್ಯೆ ವಿರಾಟ್ ಬ್ಯಾಟ್ ಹಿಡಿದು ನಿಂತಿದ್ದಾರೆ ಎಂದರೆ ಭಾರತ ತಂಡ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ಮೂಡುವಂತೆ ಮಾಡಿದ್ದಾರೆ ಅವರು.ಬಾಂಗ್ಲಾದೇಶದ ಮೀರ್‌ಪುರದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಆಡಿದ ರೀತಿ ಬಲು ರೋಮಾಂಚನಕಾರಿ ಆಗಿತ್ತು. ಮೈತುಂಬಾ ಒತ್ತಡವಿದ್ದರೂ ಪ್ರಕೃತಿದತ್ತವಾಗಿ ಒಲಿದ ಸಹಜ ಆಟವಾಡಿದ ಕೊಹ್ಲಿ, ಗೆಲ್ಲುವ ಹುಮ್ಮಸ್ಸಿನೊಂದಿಗೆ ಬ್ಯಾಟ್ ಬೀಸಿದರು.

 

ಎಲ್ಲಿಯೂ ಬೇಕಾಬಿಟ್ಟಿಯಾಗಿ ಆಡಲಿಲ್ಲ. ರನ್ ವೇಗವನ್ನೂ ಕುಗ್ಗಿಸಲಿಲ್ಲ. ವಿರಾಟ್ ಆಟವಿಲ್ಲದ ಅಂದಿನ ಭಾರತದ ಇನಿಂಗ್ಸ್ ನೆನಪಿಸಿಕೊಂಡರೆ ಈ ಪ್ರತಿಭಾವಂತನ ಶತಕದ ಮಹತ್ವದ ಅರಿವಾಗುತ್ತದೆ.ಪಶ್ಚಿಮ ದೆಹಲಿ ಕ್ರಿಕೆಟ್ ಅಕಾಡೆಮಿ 1998ರಲ್ಲಿ ಆರಂಭವಾದಾಗ ಮೊದಲ ಬ್ಯಾಚಿನ ವಿದ್ಯಾರ್ಥಿಯಾಗಿ ಸೇರ್ಪಡೆ ಆಗಿದ್ದ ಈ ಹುಡುಗ, ಸದ್ಯ ಬೆಳೆದಿರುವ ಎತ್ತರ ಬೆರಗು ಮೂಡಿಸುತ್ತದೆ. ಬ್ಯಾಟ್ ಹಿಡಿಯಲು ಬಾರದ ದಿನಗಳಿಂದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಬಾರಿಸುವ ಹಂತದವರೆಗೆ ಕೊಹ್ಲಿ ಅವರ ಒಂದೊಂದು ನಡೆಯನ್ನೂ ಬಲು ಎಚ್ಚರಿಕೆಯಿಂದ ಗಮನಿಸಿರುವ ಅವರ ಕೋಚ್ ರಾಜಕುಮಾರ್ ಶರ್ಮಾ, `ಇಂತಹ ಶಿಷ್ಯನನ್ನು ಪಡೆದಿರುವ ನಾನೇ ಧನ್ಯ~ ಎಂದು ವಿನೀತರಾಗಿ ಹೇಳುತ್ತಾರೆ.ಕ್ರಿಕೆಟ್ ಅಭಿಮಾನಿಗಳಿಗೆ 2006ರ    ಆ ಘಟನೆ ನೆನಪು ಇನ್ನೂ ಹಸಿರಾಗಿರಬಹುದು. ನವದೆಹಲಿಯಲ್ಲಿ ಕರ್ನಾಟಕ ತಂಡದ ವಿರುದ್ಧ ವಿರಾಟ್ ರಣಜಿ ಪಂದ್ಯ ಆಡುವ ಸಂದರ್ಭದಲ್ಲಿ ಅವರ ತಂದೆ ಪ್ರೇಮ್ ಕೊನೆಯುಸಿರು ಎಳೆದರು. ಇದರಿಂದ ವಿರಾಟ್ ಬಹಳಷ್ಟು ಘಾಸಿಗೊಳಗಾದರೂ ಬ್ಯಾಟಿಂಗ್ ಪೂರೈಸಿದ ಬಳಿಕವೇ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು.ಈ ಹುಡುಗನ ಕ್ರಿಕೆಟ್ ಸಮರ್ಪಣಾಭಾವಕ್ಕೆ ಈ ಘಟನೆಯೇ ಸಾಕ್ಷಿಯಾಗಿತ್ತು. ಸದ್ಯ ಹುಡುಗಿಯರ ಹೃದಯಬಡಿತ ಹೆಚ್ಚಿಸಿರುವ ತಮ್ಮ ಈ ಪ್ರೀತಿಯ ಮಗನ ಬಗೆಗೆ ಅವರ ತಾಯಿ ಸರೋಜಾಗೆ ಎಲ್ಲಿಲ್ಲದ ಹೆಮ್ಮೆ.`ತನ್ನ ತಂದೆ ಅಗಲಿದ ಬಳಿಕ ಏನಾಯಿತೋ ಗೊತ್ತಿಲ್ಲ. ವಿರಾಟ್ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂತು. ಮೊದಲು ಏನು ಹೇಳಿದರೂ ಕೇಳದಿದ್ದ ಈ ತುಂಟ, ಆಮೇಲೆ ಬುದ್ಧಿ ಹೇಳುವವರಿಗೇ ಮಾದರಿ ಆಗುವಂತೆ ವರ್ತಿಸತೊಡಗಿದ~ ಎಂದು ಸರೋಜಾ ತಮ್ಮ ಮಗನ ಭಾವಾಂತರದ ಸಂದರ್ಭವನ್ನು ನೆನೆಯುತ್ತಾರೆ.ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ (300) ಹಿರಿಮೆಗೆ ಪಾತ್ರರಾದ ಈ ಆಟಗಾರ, ಕಾಮನ್ವೆಲ್ತ್ ಬ್ಯಾಂಕ್ ಏಕದಿನ ಸರಣಿಯಲ್ಲೂ ಹೆಚ್ಚಿನ ರನ್ (373) ಪೇರಿಸಿ ಸೈ ಎನಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಹೋಬರ್ಟ್‌ನಲ್ಲಿ ಗಳಿಸಿದ ಶತಕ ಮತ್ತು ಪಾಕಿಸ್ತಾನದ ಎದುರು ಪೇರಿಸಿದ ಶತಕ ಅವರ ಭವ್ಯ ಆಟಕ್ಕೆ ನಿದರ್ಶನವಾಗಿವೆ. ಟೆಸ್ಟ್‌ನಲ್ಲಿ ಒಂದು ಹಾಗೂ ಏಕದಿನ ಪಂದ್ಯಗಳಲ್ಲಿ 11 ಶತಕಗಳನ್ನು ಅವರು ಸಿಡಿಸಿದ್ದಾರೆ.ಭವಿಷ್ಯದ ನಾಯಕನಾಗುವ ಎಲ್ಲ ಲಕ್ಷಣಗಳನ್ನು ಹೊಂದಿರುವ ವಿರಾಟ್, ಈಗಾಗಲೇ ಮಹೇಂದ್ರ ಸಿಂಗ್ ದೋನಿಗೆ ಉಪನಾಯಕನಾಗುವ ಮೂಲಕ ನೆರವು ನೀಡಲು ಆರಂಭಿಸಿದ್ದಾರೆ. ಕೆ.ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿ, ಕೊಹ್ಲಿ ಅವರಲ್ಲಿಯೇ ಮುಂದಿನ ವಿಶ್ವಕಪ್ ಟೂರ್ನಿಯ ಭಾರತದ ನಾಯಕನನ್ನು ಕಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.