ಮಂಗಳವಾರ, ಜನವರಿ 28, 2020
25 °C
ವಸಂತ ವಲ್ಲಭಬಾಯಿ ದೇಗುಲ ಜಮೀನು ಒತ್ತುವರಿ ತಡೆಗೆ ಕ್ರಮ

ಭಾಗ್ಯವಂತಿ ದೇಗುಲ ಪ್ರಕರಣ ಸಿಐಡಿ ತನಿಖೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಗುಲ್ಬರ್ಗ ಜಿಲ್ಲೆಯ ಅಫ್ಜಲಪುರ ತಾಲ್ಲೂಕಿನ ಭಾಗ್ಯವಂತಿ ದೇವಾಲಯದಲ್ಲಿ ಚಿನ್ನ ನಾಪತ್ತೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಎಂ.ವಿ.ವೇದಮೂರ್ತಿ ತಿಳಿಸಿದರು.ನಗರದ ವಿವಿಧ ದೇವಾಲಯಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ದೇವಾಲಯದಲ್ಲಿ ಸುಮಾರು 40 ಕೆ.ಜಿ.ಯಷ್ಟು ಚಿನ್ನವಿದ್ದು ಇದರಲ್ಲಿ 20 ಕೆ.ಜಿ.ಯಷ್ಟು ಚಿನ್ನ ಕಣ್ಮರೆಯಾಗಿದ್ದು ಗಮನಕ್ಕೆ ಬಂದಿತ್ತು. ಈ ಕುರಿತಂತೆ ಉನ್ನತ ಮಟ್ಟದ ತನಿಖೆ ಅಗತ್ಯವಿದ್ದ ಕಾರಣ ಪ್ರಕರಣವನ್ನು ಸಿಒಡಿಗೆ ತನಿಖೆಗೆ ವಹಿಸಲಾಗಿದೆ ಎಂದರು.ಹಾಗೆಯೇ ಬೆಂಗಳೂರಿನ ಉತ್ತರಹಳ್ಳಿ ಸಮೀಪದಲ್ಲಿರುವ ವಸಂತ ವಲ್ಲಭಬಾಯಿ ದೇವಾಲಯಕ್ಕೆ ಸೇರಿದ ಸುಮಾರು ₨500 ಕೋಟಿ  ಮೌಲ್ಯದ ಆಸ್ತಿ ಕಬಳಿಕೆ ಮಾಡಿರುವ ಭಾರಿ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ ಎಂದು ಹೇಳಿದರು.ದೇವಾಲಯಕ್ಕೆ ಸೇರಿದ ಆಸ್ತಿ ವಶಕ್ಕೆ ಪಡೆದು, ಈ ಆಸ್ತಿಯಲ್ಲಿ ದೊಡ್ಡ, ದೊಡ್ಡ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಆಸ್ತಿ ಸಂರಕ್ಷಣೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಯಾವುದೇ ಕಾರಣಕ್ಕೂ ದೇವಾಲಯಕ್ಕೆ ಸೇರಿದ ಆಸ್ತಿಗೆ ಖಾತೆ ಮಾಡಿಕೊಡಬಾರದು. ಈ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ ನೀಡದಂತೆ ವಿವಿಧ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅರ್ಚಕರೊಬ್ಬರು ದೇವಾಲಯಕ್ಕೆ ಸೇರಿದ ಬೆಳ್ಳಿತಟ್ಟೆಯನ್ನು ಕೊಂಡೊಯ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಅರ್ಚಕರಿಂದ ಬೆಳ್ಳಿತಟ್ಟೆಯನ್ನು ಮತ್ತೆ ದೇವಾಲಯಕ್ಕೆ ಕೊಡಿಸ ಲಾಗಿದೆ. ಮೇಲುಕೋಟೆ

ದೇವಾಲಯದಲ್ಲಿ ಕೇಳಿಬಂದ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ ಎಂದರು.ಅವ್ಯಾಹತವಾಗಿ ದೇವಾಲಯಗಳ ಆಸ್ತಿ ಕಬಳಿಕೆ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಆಸ್ತಿ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಸಂಬಂಧ ಮುಜುರಾಯಿ ಇಲಾಖೆಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಹಾಗೂ ಪ್ರತ್ಯೇಕ ಸಚಿವರ ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ಪ್ರತಿಕ್ರಿಯಿಸಿ (+)