ಶನಿವಾರ, ಮಾರ್ಚ್ 25, 2023
30 °C

ಭಾರತಕ್ಕೆ ಐತಿಹಾಸಿಕ ಟೆಸ್ಟ್ ವಿಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ಐತಿಹಾಸಿಕ ಟೆಸ್ಟ್ ವಿಜಯ

ಡರ್ಬನ್: ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಅಲಂಕರಿಸಿರುವ ನಂ. 1 ಸ್ಥಾನವನ್ನು ಪ್ರಶ್ನಿಸಿದ್ದವರಿಗೆ ಮಹೇಂದ್ರ ಸಿಂಗ್ ದೋನಿ ಬಳಗ ಅದೇ ಧಾಟಿಯಲ್ಲಿ ಉತ್ತರ ನೀಡಿದೆ.ಡರ್ಬನ್‌ನ ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 87 ರನ್‌ಗಳಿಂದ ಮಣಿಸಿದ ಭಾರತ ತನ್ನ ಅಭಿಮಾನಿಗಳಿಗೆ ಹೊಸ ವರ್ಷದ ಉಡುಗೊರೆ ನೀಡಿತು. ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಲಭಿಸಿದ ಅತಿ ಮಧುರ ಗೆಲುವುಗಳಲ್ಲಿ ಇದೂ ಒಂದು.ಜಯಕ್ಕಾಗಿ 303 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಗ್ರೇಮ್ ಸ್ಮಿತ್ ಬಳಗವನ್ನು ಎರಡನೇ ಇನಿಂಗ್ಸ್‌ನಲ್ಲಿ 215 ರನ್‌ಗಳಿಗೆ ಕಟ್ಟಿಹಾಕಿದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-1 ರಲ್ಲಿ ಸಮಬಲ ಸಾಧಿಸಿತು. ಸರಣಿಯ ನಿರ್ಣಾಯಕ ಟೆಸ್ಟ್ ಜನವರಿ 2 ರಿಂದ ಕೇಪ್‌ಟೌನ್‌ನಲ್ಲಿ ನಡೆಯಲಿದೆ.ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲು ಎದುರಾದಾಗ ಭಾರತದ ‘ಅಗ್ರಪಟ್ಟ’ವನ್ನು ಪ್ರಶ್ನಿಸಿದ್ದವರು ಹಲವರು. ‘ದಕ್ಷಿಣ ಆಫ್ರಿಕಾದಲ್ಲಿರುವ ಬೌನ್ಸಿ ಪಿಚ್‌ಗಳಲ್ಲಿ ಭಾರತ ತನ್ನ ಪರಾಕ್ರಮ ಮೆರೆಯಲಿ’ ಎಂದು ಟೀಕಾಕಾರರು ವ್ಯಂಗ್ಯವಾಡಿದ್ದರು.ಇವರಿಗೆ ತಕ್ಕ ಉತ್ತರ ನೀಡಿದ ಸಂತೃಪ್ತಿ ಮಹೇಂದ್ರ ಸಿಂಗ್ ದೋನಿ ಅವರ ಮುಖದಲ್ಲಿ ಬುಧವಾರ ಎದ್ದುಕಂಡಿತು. ಕಳೆದ ಒಂದು ದಶಕದ ಅವಧಿಯಲ್ಲಿ ಭಾರತ ವೇಗದ ಬೌಲಿಂಗ್‌ಗೆ ಹೆಸರುವಾಸಿಯಾದ ಹೆಡಿಂಗ್ಲೆ, ಜಮೈಕಾ, ನಾಟಿಂಗ್‌ಹ್ಯಾಂ, ಜೋಹಾನ್ಸ್‌ಬರ್ಗ್ ಮತ್ತು ಪರ್ತ್‌ನಲ್ಲಿ ಗೆಲುವು ಸಾಧಿಸಿದೆ. ಇದೀಗ ಆ ಪಟ್ಟಿಗೆ ಡರ್ಬನ್ ಕೂಡಾ ಸೇರಿದೆ.ಪ್ರಭಾವಿ ಬೌಲಿಂಗ್‌ನ ಪ್ರದರ್ಶನ ನೀಡಿದ ಜಹೀರ್ ಖಾನ್ (57ಕ್ಕೆ 3), ಎಸ್. ಶ್ರೀಶಾಂತ್ (45ಕ್ಕೆ 3) ಮತ್ತು ಹರಭಜನ್ ಸಿಂಗ್ (70ಕ್ಕೆ 2) ಅವರು ಗ್ರೇಮ್ ಸ್ಮಿತ್ ಬಳಗದ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದರು. ಎರಡನೇ ಇನಿಂಗ್ಸ್‌ನಲ್ಲಿ 96 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ವಿವಿಎಸ್ ಲಕ್ಷ್ಮಣ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.ಕೊನೆಯ ವಿಕೆಟ್ ರೂಪದಲ್ಲಿ ದಕ್ಷಿಣ ಆಫ್ರಿಕಾದ ಲೊನ್‌ವಾಬೊ ತ್ಸೊತ್ಸೊಬೆ ಔಟಾಗುತ್ತಿದ್ದಂತೆಯೇ ಭಾರತದ ಆಟಗಾರರ ಸಂಭ್ರಮದ ಕಟ್ಟೆಯೊಡೆಯಿತು. ಅಂಗಳದಲ್ಲಿ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದರು. ಡ್ರೆಸ್ಸಿಂಗ್ ಕೋಣೆಯಲ್ಲಿದ್ದ ಕೋಚ್ ಗ್ಯಾರಿ ಕರ್ಸ್ಟನ್ ಹಾಗೂ ಸಹಾಯಕ ಸಿಬ್ಬಂದಿ ಎದ್ದು ನಿಂತು ಚಪ್ಪಾಳೆ ತಟ್ಟಿದರು. ನಾಲ್ಕನೇ ದಿನದಾಟದ ಭೋಜನ ವಿರಾಮದ ಬಳಿಕದ ಒಂದು ಗಂಟೆಯಲ್ಲಿ ಭಾರತ ಗೆಲುವಿನ ವ್ಯವಹಾರ ಪೂರ್ಣಗೊಳಿಸಿತು.ಶಿಸ್ತಿನ ಬೌಲಿಂಗ್: ದಕ್ಷಿಣ ಆಫ್ರಿಕಾ 3 ವಿಕೆಟ್‌ಗೆ 111 ರನ್‌ಗಳಿಂದ ನಾಲ್ಕನೇ ದಿನದಾಟ ಆರಂಭಿಸಿತು. ಈ ಹಂತದಲ್ಲಿ ಉಭಯ ತಂಡಗಳಿಗೂ ಗೆಲುವು ಪಡೆಯುವ ಸಮಾನ ಅವಕಾಶವಿತ್ತು. ಆದರೆ ಭಾರತದ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದರು.12 ರನ್‌ಗಳಿಂದ ಆಟ ಆರಂಭಿಸಿದ ಜಾಕ್ ಕಾಲಿಸ್ ಭಾರತದ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆಯಿತ್ತು. ಆದರೆ ವೇಗಿ ಎಸ್. ಶ್ರೀಶಾಂತ್ ಅವರು ಸುಂದರ ಎಸೆತದ ಮೂಲಕ ಕಾಲಿಸ್‌ಗೆ (17) ಪೆವಿಲಿಯನ್ ಹಾದಿ ತೋರಿಸಿದರು. ‘ಶ್ರೀ’ ಅವರ ಬೌನ್ಸರ್‌ನ್ನು ತಪ್ಪಿಸುವ ಪ್ರಯತ್ನದಲ್ಲಿ ಚೆಂಡು ಕಾಲಿಸ್ ಗ್ಲೌಸ್‌ಗೆ ಸವರಿಕೊಂಡು ವೀರೇಂದ್ರ ಸೆಹ್ವಾಗ್ ಕೈಸೇರಿತು. ಭಾರತ ಗೆಲುವಿನ ಹಾದಿಯಲ್ಲಿ ದೊಡ್ಡ ಹೆಜ್ಜೆ ಮುಂದಿಟ್ಟಿತು.ಮತ್ತೊಂದೆಡೆ ಎಬಿ ಡಿವಿಲಿಯರ್ಸ್ ಕ್ರೀಸ್ ಬಳಿ ಲಂಗರು ಹಾಕುವ ಪ್ರಯತ್ನದಲ್ಲಿದ್ದರು. 33 ರನ್ ಗಳಿಸಿದ್ದ ಅವರನ್ನು ಹರಭಜನ್ ಸಿಂಗ್ ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡವಿದರು. ಆದರೆ ಅಂಪೈರ್ ನೀಡಿದ್ದ ತೀರ್ಪು ಅನುಮಾನಾಸ್ಪದವಾಗಿತ್ತು. ಏಕೆಂದರೆ ಚೆಂಡು ಸ್ಟಂಪ್ ಮೇಲಿಂದ ಹೊರಹೋಗುವುದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು.ಮಾರ್ಕ್ ಬೌಷರ್ ಮತ್ತು ಡೆಲ್ ಸ್ಟೇನ್ ಅವರನ್ನು ಕಟ್ಟಿಹಾಕುವ ಕೆಲಸವನ್ನು ಜಹೀರ್ ನಿರ್ವಹಿಸಿದರು. ಬೌಷರ್ ವಿರುದ್ಧ ನೀಡಿದ್ದ ಎಲ್‌ಬಿಡಬ್ಲ್ಯು ತೀರ್ಪು ಕೂಡಾ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.ಏಳು ವಿಕೆಟ್‌ಗೆ 181 ರನ್ ಗಳಿಸಿ ಸೋಲಿನ ಭೀತಿಯೊಂದಿಗೆ ಆತಿಥೇಯರು ಭೋಜನ ವಿರಾಮಕ್ಕೆ ತೆರಳಿದರು. ವಿರಾಮದ ಬಳಿಕ ಗೆಲುವಿನ ವ್ಯವಹಾರ ಪೂರ್ಣಗೊಳಿಸಲು ಭಾರತಕ್ಕೆ ಹೆಚ್ಚು ಸಮಯದ ಅಗತ್ಯ ಬರಲಿಲ್ಲ.ಆಯಶ್ವೆಲ್ ಪ್ರಿನ್ಸ್ (ಔಟಾಗದೆ 39) ಅವರು ಪಾಲ್ ಹ್ಯಾರಿಸ್ (7) ಜೊತೆ ಎಂಟನೇ ವಿಕೆಟ್‌ಗೆ 27 ಹಾಗೂ ಮಾರ್ನ್ ಮಾರ್ಕೆಲ್ (20) ಜೊತೆ 9ನೇ ವಿಕೆಟ್‌ಗೆ 33 ರನ್ ಸೇರಿಸಿದರು. ಹ್ಯಾರಿಸ್ ಅವರನ್ನು ಜಹೀರ್ ಕ್ಲೀನ್ ಬೌಲ್ಡ್ ಮಾಡಿದರೆ, ಮಾರ್ಕೆಲ್ ಅವರು ಇಶಾಂತ್ ಎಸೆತದಲ್ಲಿ ದೋನಿಗೆ ಕ್ಯಾಚಿತ್ತರು.ಕೊನೆಯ ಬ್ಯಾಟ್ಸ್‌ಮನ್ ತ್ಸೊತ್ಸೊಬೆ ಅವರು ಚೇತೇಶ್ವರ ಪೂಜಾರ ತೋರಿದ ಚುರುಕಿನ ಫೀಲ್ಡಿಂಗ್‌ನಲ್ಲಿ ರನೌಟ್ ಆದರು. ರನೌಟ್ ತೀರ್ಪನ್ನು ಮೂರನೇ ಅಂಪೈರ್ ನೀಡುವ ಮೊದಲೇ ಭಾರತದ ಆಟಗಾರರು ಗೆಲುವಿನ ಸಂಭ್ರಮದಲ್ಲಿ ಮುಳುಗಿದ್ದರು.ಸ್ಕೋರು ವಿವರ

ಭಾರತ: ಮೊದಲ ಇನಿಂಗ್ಸ್ 65.1 ಓವರ್‌ಗಳಲ್ಲಿ 205

ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್

37.2 ಓವರ್‌ಗಳಲ್ಲಿ 131

ಭಾರತ: ಎರಡನೇ ಇನಿಂಗ್ಸ್ 70.5 ಓವರ್‌ಗಳಲ್ಲಿ 228

ದಕ್ಷಿಣ ಆಫ್ರಿಕಾ: ಎರಡನೇ ಇನಿಂಗ್ಸ್

72.3 ಓವರ್‌ಗಳಲ್ಲಿ 215

(ಮಂಗಳವಾರ 27 ಓವರ್‌ಗಳಲ್ಲಿ 3 ವಿಕೆಟ್‌ಗೆ 111)

ಜಾಕ್ ಕಾಲಿಸ್ ಸಿ ಸೆಹ್ವಾಗ್ ಬಿ ಎಸ್. ಶ್ರೀಶಾಂತ್  17

ಎಬಿ ಡಿವಿಲಿಯರ್ಸ್ ಎಲ್‌ಬಿಡಬ್ಲ್ಯು ಬಿ ಹರಭಜನ್ 33

ಆಯಶ್ವೆಲ್ ಪ್ರಿನ್ಸ್ ಔಟಾಗದೆ  39

ಮಾರ್ಕ್ ಬೌಷರ್ ಎಲ್‌ಬಿಡಬ್ಲ್ಯು ಬಿ ಜಹೀರ್  01

ಡೆಲ್ ಸ್ಟೇನ್ ಸಿ ಪೂಜಾರ ಬಿ ಜಹೀರ್ ಖಾನ್  10

ಪಾಲ್ ಹ್ಯಾರಿಸ್ ಬಿ ಜಹೀರ್ ಖಾನ್  07

ಮಾರ್ನ್ ಮಾರ್ಕೆಲ್ ಸಿ ದೋನಿ ಬಿ ಇಶಾಂತ್ ಶರ್ಮ 20

ಲೊನ್‌ವಾಬೊ ತ್ಸೊತ್ಸೊಬೆ ರನೌಟ್  00

ಇತರೆ: (ಲೆಗ್‌ಬೈ-1, ನೋಬಾಲ್-8)  09

ವಿಕೆಟ್ ಪತನ: 1-63 (ಸ್ಮಿತ್; 12.1), 2-82 (ಪೀಟರ್‌ಸನ್; 15.4), 3-82 (ಆಮ್ಲಾ; 16.2), 4-123 (ಕಾಲಿಸ್; 34.2), 5-136 (ಡಿವಿಲಿಯರ್ಸ್; 39.6), 6-143 (ಬೌಷರ್; 42.4), 7-155 (ಸ್ಟೇನ್; 48.5), 8-182 (ಹ್ಯಾರಿಸ್; 60.2), 9-215 (ಮಾರ್ಕೆಲ್; 72.1), 10-215 (ತ್ಸೊತ್ಸೊಬೆ).

ಬೌಲಿಂಗ್: ಜಹೀರ್ ಖಾನ್ 17-3-57-3, ಇಶಾಂತ್ ಶರ್ಮ 11.3-0-36-1, ಎಸ್. ಶ್ರೀಶಾಂತ್ 14-2-45-3, ಹರಭಜನ್ ಸಿಂಗ್ 29-5-70-2, ಸಚಿನ್ ತೆಂಡೂಲ್ಕರ್ 1-0-6-0ಫಲಿತಾಂಶ: ಭಾರತಕ್ಕೆ 87 ರನ್ ಗೆಲುವು; ಮೂರು ಪಂದ್ಯಗಳ ಸರಣಿ 1-1 ರಲ್ಲಿ ಸಮಬಲ

ಪಂದ್ಯಶ್ರೇಷ್ಠ: ವಿವಿಎಸ್ ಲಕ್ಷ್ಮಣ್

ಮೂರನೇ ಹಾಗೂ ಅಂತಿಮ ಟೆಸ್ಟ್: ಜನವರಿ 2 ರಿಂದ 6 (ಕೇಪ್‌ಟೌನ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.