ಮಂಗಳವಾರ, ಏಪ್ರಿಲ್ 20, 2021
25 °C

ಭಾರತದಲ್ಲಿನ ಯುವ ವಿಜ್ಞಾನಿಗಳು

ಇ. ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಭಾರತದಲ್ಲಿನ ಯುವ ವಿಜ್ಞಾನಿಗಳನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಭಾರತದಲ್ಲಿನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (ಎನ್‌ಎಎಸ್‌ಐ) ಹಾಗೂ ಅಂತರರಾಷ್ಟ್ರೀಯ ಪ್ರಕಾಶನ ಸಂಸ್ಥೆ ಎಲ್ಸೆವೀರ್ ಸಂಸ್ಥೆಯು ಎನ್‌ಎಎಸ್‌ಐ-ಸ್ಕೋಪಸ್ ಎಂಬ ಪ್ರಶಸ್ತಿಯನ್ನು ಕಳೆದ ಐದು ವರ್ಷಗಳಿಂದ ನೀಡುತ್ತಾ ಬಂದಿದೆ. ಈ ಬಾರಿ ವಿವಿಧ ಕ್ಷೇತ್ರಗಳ ಎಂಟು ಯುವ ವಿಜ್ಞಾನಿಗಳಿಗೆ ಈ ಗೌರವ ಸಂದಿದೆ.ಪರಿಸರ ವಿಜ್ಞಾನ: ಸಾಗ್ನಿಕ್ ಡೇ

ದೆಹಲಿಯಲ್ಲಿ ನೆಲೆಸಿರುವ ಸಾಗ್ನಿಕ್ ಡೇ ಅವರಿಗೆ ಎದೆಯಲ್ಲೇನೋ ಸಣ್ಣ ನೋವು. ಏನೆಂದು ಹೇಳಲಾಗದಷ್ಟು ಯಾತನೆ. ಐಐಟಿ ದೆಹಲಿಯಲ್ಲಿ ಸಂಶೋಧನೆ ನಡೆಸುತ್ತಿರುವ ಸಾಗ್ನಿಕ್ ಇದರ ಹಿಂದೆ ಬಿದ್ದರು.
ಅದು ಬಹುಷಃ ಹೂವಿನ ಪರಾಗ ಇರಬಹುದು, ನಿರ್ಮಾಣ ಹಂತದಲ್ಲಿರುವ ಕಟ್ಟದ ಧೂಳೂ ಆಗಬಹುದು ಅಥವಾ ನಗರದ ವಾಹನದಟ್ಟಣೆಯ ಹೊಗೆಯ ಕಣವೂ ಆಗಿರಬಹುದು ಆದರೆ ಉಸಿರಾಟಕ್ಕೆ ಮಾತ್ರ ಅದು ತೊಂದರೆ ನೀಡುತ್ತಿತ್ತು.ನಾಸಾ ಅವರ ಉಪಗ್ರಹಗಳಾದ ಟೆರ‌್ರಾ, ಆಕ್ವಾ ಹಾಗೂ ಕಾಲಿಪ್ಸೊ ಎಂಬ ಉಪಗ್ರಹಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ವಾತಾವರಣದಲ್ಲಿರುವ ಇಂಥ ಕಣಗಳ ಮೇಲೆ ಹದ್ದಿನ ಕಣ್ಣು ನೆಟ್ಟಿವೆ. ಅವುಗಳ ಮಾಹಿತಿಗಳನ್ನು ಕರಾರುವಕ್ಕಾಗಿ ರವಾನಿಸುತ್ತವೆ. ಈ ಮಾಹಿತಿಗಳನ್ನು ಡಾ. ಸಾಗ್ನಿಕ್ ಡೇ ಅಭ್ಯಾಸ ನಡೆಸುತ್ತಿದ್ದಾರೆ.

 

ಇವರ ಈ ಅಧ್ಯಯನದ ಪ್ರಕಾರ ಇತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತದ ವಾತಾವರಣದಲ್ಲಿ 3-5 ಪಟ್ಟು ಏರೊಸಾಲ್ ಅಥವಾ ವಾಯುಕಲಿಲ ಪದಾರ್ಥಗಳು ಇವೆ ಎಂಬ ಆಘಾತಕಾರಿ ವಿಷಯವನ್ನು ಪತ್ತೆ ಹಚ್ಚಿದರು. ಇದಕ್ಕೆ ಬಹು ಮುಖ್ಯ ಕಾರಣ ಕೊಳಕು ಕಾರ್ಖಾನೆಗಳು ಹಾಗೂ ಹದಗೆಟ್ಟ ಮಿತಿಮೀರಿದ ವಾಹನದಟ್ಟಣೆ.ಸಾಗ್ನಿಕ್ ಅವರ ಅಧ್ಯಯನದ ಪ್ರಕಾರ ಇಂತಹ ವಾಯುಕಲಿಲಗಳ ಹೆಚ್ಚಳದಿಂದ ಕೆಲವೆಡೆ ಸೂರ್ಯನ ಕಿರಣಗಳು ಭೂಮಿ ತಲುಪುವುದೇ ಇಲ್ಲವಂತೆ. ಇದರಿಂದ ಮಳೆಯಲ್ಲಿ ಏರುಪೇರು ಆಗಬಹುದು ಎಂದು ಅಂದಾಜಿಸಿದ್ದಾರೆ.ಮಳೆ ಮೋಡಗಳನ್ನು ಹಾಳು ಮಾಡುವಷ್ಟು ಸಾಮರ್ಥ್ಯ ಈ ವಾಯುಕಲಿಲಗಳಿಗೆ ಇವೆ ಎಂದು ಇವರು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಮಳೆಯೇ ಮಾಯವಾಗಿರುವ ಈ ಕಾಲದಲ್ಲಿ ಸಾಗ್ನಿಕ್ ಡೇ ಅವರ ಅಧ್ಯಯನ ಬಹಳಷ್ಟು ಸಹಕಾರಿಯಾಗಲಿದೆ.ಕೃಷಿ: ಸತೀಶ್ ಭದ್ರಾವತಿ ಶಿವಚಂದ್ರ

ಪ್ರತಿಯೊಬ್ಬರೂ ಮನುಷ್ಯರಿಗೆ ಔಷಧಿ ಕಂಡುಹಿಡಿಯುವಲ್ಲಿ ಆಸಕ್ತರಾಗಿದ್ದಾರೆ. ಯಾರಿಗೂ ಪ್ರಾಣಿಗಳು ಬೇಕಾಗಿಲ್ಲ. 2010-11ರಲ್ಲಿ ಭಾರತ ಒಟ್ಟು 3,40,500 ಕೋಟಿ ರೂಪಾಯಿ ಮೊತ್ತದ ಆಹಾರ ಧಾನ್ಯಗಳನ್ನು ಉತ್ಪಾದಿಸಿದೆ. ಇದರಲ್ಲಿ ಶೇ 5ಕ್ಕಿಂತಲೂ ಅಧಿಕ ಶ್ರಮ ಪ್ರಾಣಿಗಳದ್ದು.


 

ಮನುಷ್ಯರ ಔಷಧಿಗಳ ಅಭಿವೃದ್ಧಿಗೆ 1,600 ಕೋಟಿ ರೂಪಾಯಿ ಮೀಸಲಿಡುವ ಇಲ್ಲಿ ಪ್ರಾಣಿಗಳ ಆರೋಗ್ಯಕ್ಕೆ ಕೇವಲ 180 ಕೋಟಿ ರೂಪಾಯಿ ಮಾತ್ರ. ಬಹಳಷ್ಟು ಪ್ರದೇಶಗಳಲ್ಲಿ ಪ್ರಾಣಿಗಳು ಅಸ್ವಸ್ಥಗೊಂಡರೆ ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗದೆ ಎಷ್ಟೋ ಮಂದಿ ಅವುಗಳನ್ನು ಸಾಯಲು ಬಿಡುತ್ತಾರೆ.ಈ ನಿಟ್ಟಿನಲ್ಲಿ ಸತೀಶ್ ಭದ್ರಾವತಿ ಶಿವಚಂದ್ರ ಅವರು ಶೀಘ್ರ ಹಾಗೂ ಸರಳ ವಿಧಾನದಲ್ಲಿ ಪ್ರಾಣಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವತ್ತ ಅಧ್ಯಯನ ನಡೆಸಿದ್ದಾರೆ. ಮುಕ್ತೇಶ್ವರ, ನೈನಿತಾಲ್‌ನಲ್ಲಿರುವ ಭಾರತೀಯ ಪ್ರಾಣಶಾಸ್ತ್ರ ಸಂಶೋಧನಾ ಕೇಂದ್ರದಲ್ಲಿ ಅಧ್ಯಯನ ಮುಂದುವರಿಸಿದ್ದಾರೆ.ಪ್ರಾಣಿಗಳಿಗೆ ಬಹುವಾಗಿ ಕಾಡುವ ಕಾಲು ಬಾಯಿ ರೋಗಕ್ಕೆ ಪ್ರಾಣಿಯ ರಕ್ತದ ಮಾದರಿ ಸಂಗ್ರಹಿಸಿ ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸುವುದು ಸಾಮಾನ್ಯ. ವರದಿಗಾಗಿ ಬಹಳ ದಿನಗಳ ಕಾಲ ಕಾಯುವುದು ಅನಿವಾರ್ಯ.ಗರ್ಭಧರಿಸಿದರೇ ಎಂದು ಒಂದು ಕ್ಷಣದಲ್ಲಿ ತಿಳಿಯಲು ಹೇಗೆ ಪ್ರೆಗ್ನೆನ್ಸಿ ಕಿಟ್‌ಗಳು ಇವೆಯೋ ಅದೇ ಮಾದರಿಯಲ್ಲಿ ಪ್ರಾಣಿಗಳಿಗೆ ಬರಬಹುದಾದ ಕಾಲು-ಬಾಯಿ ರೋಗ, ಬ್ರುಸೆಲೊಸಿಸ್, ಬ್ಯಾಕ್ಟೀರಿಯಾದಿಂದ ಬರಬಹುದಾದ ಬ್ಲಾಕ್ ಕ್ವಾರ್ಟರ್ ಹಾಗೂ ಇನ್ನಿತರ ರೋಗಗಳಿಗೆ ಸರಳ ಕಿಟ್‌ಗಳನ್ನು ಅಭಿವೃದ್ಧಿಪಡಿಸುವತ್ತ ಇವರ ಅಧ್ಯಯನ ಮುಂದುವರಿದಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಈ ಕಿಟ್‌ಗಳು ಪಶು ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ಮಾಡುವುದು ಸತೀಶ್ ಅವರ ಗುರಿ.ಜೀವ ವಿಜ್ಞಾನ: ಸಂಜೀವ್ ಸೇನಾಪತಿ

ಚೆನ್ನೈನ ಐಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಸಂಜೀವ್ ಏಡ್ಸ್‌ಗೆ ಕಾರಣವಾಗಿರುವ ಎಚ್‌ಐವಿ ವೈರಾಣುವನ್ನು ಬಗ್ಗುಬಡಿಯುವತ್ತ ಅಧ್ಯಯನ ಮುಂದುವರಿಸಿದ್ದಾರೆ.
ಎಚ್‌ಐವಿ1 ಎಂಬ ಪ್ರೊಟೀನ್ ಅಂಶವು ದೇಹದ ರೋಗ ನಿರೋಧಕ ಶಕ್ತಿಯ ಉತ್ಪತ್ತಿಗೆ ಧಕ್ಕೆಯನ್ನುಂಟು ಮಾಡುತ್ತದೆ. ಇಂಥ ಪ್ರೊಟ್ರೀನ್ ವಿರುದ್ಧ ಹೋರಾಡಬಲ್ಲ ಪ್ರತಿಸ್ಪರ್ಧಿಯ ಹುಡುಕಾಟದಲ್ಲಿ ಸಂಜೀವ್ ಸೇನಾಪತಿ ನಿರತರಾಗಿದ್ದಾರೆ.ಅದು ಹೇಗೆ ಅಂತೀರಾ? ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತ ಕಾರು ರೇಸ್ ಅಥವಾ ಇನ್ಯಾವುದೇ ವಿಡಿಯೋ ಗೇಮ್ ಆಡುವ ರೀತಿಯಲ್ಲೇ ಎಚ್‌ಐವಿ1 ವೈರಾಣುವಿನ ಡಿಜಿಟಲ್ ರೂಪ ತಯಾರಿಸಿದ್ದಾರೆ. ಈ ಎಚ್‌ಐವಿ1ರ ರಾಸಾಯನಿಕ ರಚನೆಯನ್ನು ಒಡೆದು ಹಾಕುವ ಶಕ್ತಿ ಬೇರೆ ಯಾವ ರಾಸಾಯನಕ್ಕಿದೆ ಎನ್ನುವುದನ್ನು ಪತ್ತೆ ಮಾಡುವುದು ಇವರ ಕಾಯಕ.ಹೀಗಾಗಿ ನಿತ್ಯ ಕಂಪ್ಯೂಟರ್ ಮುಂದೆ ಕೂರುವ ಸಂಜೀವ್, ಇಂಥ ಅಣುವನ್ನು ನಿತ್ಯ ರಚಿಸಿ ಅದನ್ನು ಎಚ್‌ಐವಿ1ರ ವಿರುದ್ಧ ಹೋರಾಡಲು ಬಿಡುತ್ತಾರೆ. ಪ್ರತಿ ಕಂಪ್ಯೂಟರ್ ಗೇಮ್‌ಗಳಂತೆ ಇಲ್ಲೂ ಶತ್ರುವನ್ನು ಹೊಡೆದು ಹಾಕಲು ಒಂದು `ಕೀ~ ಅವಶ್ಯಕತೆ ಇರುತ್ತದೆ.ಹೀಗೆ ಸೂಪರ್ ಕಂಪ್ಯೂಟರ್ ಬಳಸಿ ಅದರಲ್ಲಿ ಇಂಥದ್ದೊಂದು ದೈತ್ಯ ಎಚ್‌ಐವಿ1 ಪ್ರೊಟೀನ್ ರಚನೆ ಮುರಿಯುವ ಸಾಮರ್ಥ್ಯ ಇರುವ ವಸ್ತುವನ್ನು ತಯಾರಿಸಿ ಅದರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಸಂಜೀವ್ ಸೇನಾಪತಿ ಆರು ತಿಂಗಳೋ ಅಥವಾ ವರ್ಷದೊಳಗೆ ಸರಿಯಾದ ರಚನೆ ಸಿದ್ಧಪಡಿಸುವ ಗುರಿ ಹೊಂದಿದ್ದಾರೆ.ರಸಾಯನ ಶಾಸ್ತ್ರ: ಪಾರ್ಥಸಾರಥಿ ಮುಖರ್ಜಿ

ಬಾಂಬ್ ನಿಷ್ಕ್ರಿಯೆಗೊಳಿಸಲು ಒಂದು ನಾಯಿ, ಬಾಂಬ್ ನಿಷ್ಕ್ರಿಯೆ ತಂಡ, ಒಂದು ದೊಡ್ಡ ಯಂತ್ರ ಜತೆಗೆ ಒಂದಿಷ್ಟು ಜನರ ಪ್ರಾಣವನ್ನು ಪಣಕ್ಕಿಡಬೇಕು. ಆದರೆ ಐಐಎಸ್‌ಸಿ ಬೆಂಗಳೂರಿನಲ್ಲಿ ಸಂಶೋಧನೆ ನಡೆಸುತ್ತಿರುವ ಪಾರ್ಥಸಾರಥಿ ಅವರು ಬಾಂಬ್ ನಿಷ್ಕ್ರಿಯೆಗೆ ಸರಳ ಹಾಗೂ ಕಡಿಮೆ ಖರ್ಚಿನ ಉಪಕರಣವನ್ನು ಕಂಡು ಹಿಡಿಯುವ ಹಾದಿಯಲ್ಲಿದ್ದಾರೆ.
ಸಾಮಾನ್ಯವಾಗಿ ಸಿಡಿಯುವ ಸಿಡಿಮದ್ದುಗಳಲ್ಲಿ ಟಿಎನ್‌ಟಿ (ಡೈನಮೈಟ್) ಇದ್ದೇ ಇರುತ್ತದೆ.  ಹೀಗೆ ಸಿಡಿಯುವ ಬಾಂಬ್‌ಗಳಲ್ಲಿ ಎಲೆಕ್ಟ್ರಾನ್‌ಗಳ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಹೀಗಾಗಿ ಅಧಿಕ ಎಲೆಕ್ಟ್ರಾನ್ ಇರುವ ಅಣುಪುಂಜದ ಬೋನನ್ನು ಮುಖರ್ಜಿ ಸಿದ್ಧಪಡಿಸಿದ್ದಾರೆ.

 

ಇದನ್ನು ಪಲ್ಲಾಡಿಯಂ ಹಾಗೂ ಪ್ಲಾಟಿನಂ ಬಳಸಿ ಅಭಿವೃದ್ಧಿಪಡಿಸಲಾಗಿದೆ. ಈ ಲೋಹಗಳಲ್ಲಿ ಹೆಚ್ಚು ಎಲೆಕ್ಟ್ರಾನ್‌ಗಳು ಇರುವುದರಿಂದ ಡೈನಮೈಟ್ ಹವೆಯಲ್ಲಿರುವ ಕಣವನ್ನು ಇದು ಹೀರಲಿದೆ ಎನ್ನುವುದು ಪಾರ್ಥಸಾರಥಿ ಅವರ ವಾದ.ನೆಲದಡಿಯಲ್ಲಿ ಅಥವಾ ನೀರಿನಲ್ಲಿ ಹುದುಗಿಸಿಟ್ಟ ಬಾಂಬ್ ಅನ್ನು ಪತ್ತೆ ಮಾಡುವಲ್ಲಿ ಪಾರ್ಥಸಾರಥಿ ಅವರ ಪ್ರಯೋಗ ಯಶಸ್ವಿಯಾಗಿದೆ. ಜತೆಗೆ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಜನರು ಪಾದರಸದ ಹಾಗೂ ಆರ್ಸೆನಿಕ್ ಅಂಶ ಇರುವ ನೀರನ್ನು ಕುಡಿಯುತ್ತಿದ್ದಾರೆ.

 

ಹೀಗಾಗಿ ಪ್ರತಿ ವರ್ಷ ಅಲ್ಲಿನ ಜನತೆ ರೋಗಕ್ಕೆ ತುತ್ತಾಗುತ್ತಿದ್ದಾರೆ.ಇವರ ಈ ಸಂಶೋಧನೆಯ ಪರಿಣಾಮ ನೀರಿನಲ್ಲಿರುವ ಇಂಥ ಹಾನಿಕಾರಕ ವಸ್ತುವನ್ನು ಪತ್ತೆ ಮಾಡಲು ಸರಳ ಹಾಗೂ ಕಡಿಮೆ ಖರ್ಚಿನ ಸಾಧನವೊಂದು ದೊರೆತಂತಾಗುತ್ತದೆ.ವೈದ್ಯಕೀಯ: ರಿತೇಶ್ ಅಗರವಾಲ್


ಭಾರತದಲ್ಲಿ 48 ದಶಲಕ್ಷ ಮಂದಿ ಅಸ್ತಮಾದಿಂದ ಬಳಲುತ್ತಿದ್ದಾರೆ. ಅವರಲ್ಲಿ 14 ಲಕ್ಷ ಮಂದಿ ಇದು ಯಾತನಾಮಯ ನೋವು ಎಂದಿದ್ದಾರೆ. ಶಿಲೀಂಧ್ರಗಳು ಶ್ವಾಸಕೋಶದ ಒಳಭಾಗದ ಪದರಕ್ಕೆ ಹಾನಿ ಮಾಡುವುದರಿಂದ ಇದು ಸಂಭವಿಸುತ್ತದೆ.
ಇದು ಒಮ್ಮೆ ಹಾನಿಯಾದಲ್ಲಿ ಮತ್ತೆಂದೂ ದುರಸ್ತಿ ಮಾಡಲಾಗದು. ಇದನ್ನು ವೈದ್ಯರು ಎಬಿಪಿಎ ಎಂದು ಕರೆಯುತ್ತಾರೆ. ಪಶ್ಚಿಮದ ರಾಷ್ಟ್ರಗಳಲ್ಲಿ ಕೇವಲ ಶೇ 3-4ರಷ್ಟಿರುವ ಅಸ್ತಮಾ ಭಾರತದಲ್ಲೇಕೆ ಹೀಗೆ ಎಂದು ಚಂಡೀಗಡದ ವೈದ್ಯಕೀಯ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ವೈದ್ಯ ಡಾ. ರಿತೇಶ್ ಅಗರವಾಲ್ ಅವರು ತಮ್ಮ ಅಧ್ಯಯನ ಆರಂಭಿಸಿದರು.ಎಬಿಪಿಎಯಿಂದ ಬಳಲುವ ರೋಗಿಗಳನ್ನು ರಕ್ಷಿಸುವ ಸಲುವಾಗಿ ಅವರ ಚರ್ಮದ ಮಾದರಿ ಪಡೆಯುವ ಬದಲಾಗಿ ರಿತೇಶ್ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ, ಅಸ್ತಮಾ ಬರಲು ಕಾರಣ, ಜೀನ್‌ಗಳ ಪರೀಕ್ಷೆ, ಅವುಗಳಲ್ಲಿ ಯಾವ ಬದಲಾವಣೆಯಿಂದ ಅಸ್ತಮಾ ಬಂದಿರಬಹುದು ಎಂಬುದನ್ನು ರಿತೇಶ್ ಅಭ್ಯಾಸ ನಡೆಸುತ್ತಿದ್ದಾರೆ.

 

ಇವರ ಅಧ್ಯಯನದಿಂದ ಈಗ ಯಾವ ಎಬಿಪಿಎ ರೋಗದಿಂದ ತೀವ್ರವಾಗಿ ಬಳಲುತ್ತಾರೆ, ಯಾರಿಗೆ ಕಡಿಮೆ ಪ್ರಮಾಣದಲ್ಲಿ ಇದು ಕಾಡಲಿದೆ ಎಂಬುದನ್ನು ನಿಖರವಾಗಿ ಹೇಳಬಲ್ಲರು. ಕೇವಲ ಇಷ್ಟೇ ಅಲ್ಲದೆ, ಇದನ್ನು ಮನೆಯಲ್ಲೇ ಸುಲಭವಾಗಿ ಪರೀಕ್ಷಿಸಿಕೊಳ್ಳುವಂತೆ ಸಾಧನವೊಂದನ್ನು ರಿತೇಶ್ ಅಭಿವೃದ್ಧಿಪಡಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.