ಗುರುವಾರ , ಏಪ್ರಿಲ್ 15, 2021
31 °C

ಭಾವಕ್ಕೆ ರಾಗದ ಪೋಷಾಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿರಮಿರ ಮಿಂಚುವ ವಸ್ತ್ರ ತೊಟ್ಟಿದ್ದ ಬಾಂಬೆ ಜಯಶ್ರೀ ಬಹಳ ಹುಮ್ಮಸ್ಸಿನಿಂದ ವೇದಿಕೆ ಏರಿದರು.`ನಾವು ಸಂಗೀತವನ್ನು ಹೇಗೆ ನಮ್ಮ ಬದುಕಿನೊಂದಿಗೆ ಬೆಸೆಯುತ್ತೇವೆಯೋ ಹಾಗೆಯೇ ಸಂಗೀತವೂ ನಮ್ಮಂದಿಗೆ ಕಾರ್ಯನಿರ್ವಹಿಸುತ್ತದೆ..~ ಎಂಬ ಮಾತನ್ನು ಇತ್ತೀಚೆಗಷ್ಟೇ ಈ ಗಾಯಕಿ ಸಂದರ್ಶನದಲ್ಲಿ ಹೇಳಿಕೊಂಡದ್ದನ್ನು ಹೇಗೆ ಕಾರ್ಯರೂಪಕ್ಕೆ ತರುತ್ತಾರೆ ಎಂಬ ಸಹಜ ಕುತೂಹಲ ಆ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಎಲ್ಲ ಕೇಳುಗರಲ್ಲೂ ಇತ್ತು.ಇವರೆಲ್ಲರ ನಿರೀಕ್ಷೆಯನ್ನು ಕೊಂಚವೂ ಹುಸಿ ಮಾಡದೆ ಅಕ್ಷರಶಃ ಪಾಲಿಸಿದರು ಈ ಅಪೂರ್ವ ಕಲಾವಿದೆ. ಒಬ್ಬ ಕಲಾವಿದೆ ಸಂಗೀತದ ಒಂದು ಅಥವಾ ಪ್ರಕಾರಗಳಲ್ಲಿ ಪರಿಣತಿ ಸಾಧಿಸುವುದು ಹೊಸ ವಿಷಯವಲ್ಲ. ಆದರೆ ಬಾಂಬೆ ಜಯಶ್ರೀ ಸಂಗೀತದ ಎಲ್ಲ ಪ್ರಕಾರಗಳನ್ನೂ ಅಷ್ಟೇ ಪ್ರಬುದ್ಧತೆಯಿಂದ ನಿಭಾಯಿಸಿದ್ದು ಎಲ್ಲರಿಗೂ ಅಚ್ಚರಿ ಹುಟ್ಟಿಸಿತ್ತು. ಸಂಗೀತದಲ್ಲಿ ಅವರ ಸಾಧನೆಯ ಶ್ರಮ ಪ್ರತಿ ಐಟಂಗಳಲ್ಲೂ ಅನಾವರಣಗೊಂಡಿತ್ತು.`ನಟ ಭೈರವಿ~ ರಾಗದಲ್ಲಿ ಕರ್ನಾಟಕ ಸಂಗೀತದ `ಶ್ರೀವಲ್ಲಿ ದೇವಾ ಸೇನಾಪತೆ; ಶ್ರೀ ಸುಬ್ರಹ್ಮಣ್ಯ ನಮೋಸ್ತುತೆ..~ ಅಚ್ಚುಕಟ್ಟಾಗಿ ಮೂಡಿಬಂದರೆ ಅದಾದ ತಕ್ಷಣ ಹಿಂದೂಸ್ತಾನಿ ಸಂಗೀತದ `ಅಡಾಣ ರಾಗ~ದ ಜನಪ್ರಿಯ ಬಂದೀಶ್ `ಜನಕ್ ಜನಕ್ ಪಾಯಲ್ ಬಾಜೆ..~ ಸಂಕ್ಷಿಪ್ತ ಆಲಾಪದೊಂದಿಗೆ ಹಾಡಿದ್ದು ಹಿತಮಿತವಾಗಿತ್ತು.ಶಾಸ್ತ್ರೀಯ ಸಂಗೀತದ ಏಕತಾನತೆಯನ್ನು ಮರೆಸಿದ್ದು ತಮಿಳು ಗೀತೆ. ಅದಾಗಿ ಹಿಂದಿ ಚಿತ್ರಗೀತೆ. ಎಲ್ಲವೂ ಐದೈದು ನಿಮಿಷಗಳಲ್ಲಿ ಮುಗಿದು, ಕೇಳುಗರಿಗೆ ಮುಂದಿನ ಐಟಂ ಏನಿರಬಹುದು ಎಂಬ ಕುತೂಹಲ ಸೃಷ್ಟಿಸಿದ್ದು ಸಣ್ಣ ಸವಾಲು ಆಗಿರಲಿಲ್ಲ. (ಇಡೀ ಕಾರ್ಯಕ್ರಮವನ್ನು ತೊಂಬತ್ತು ನಿಮಿಷಗಳಲ್ಲಿ ಮುಗಿಸುವುದು ದೊಡ್ಡ ಸವಾಲು ಎಂದು ಅವರು ಸಂದರ್ಶನದಲ್ಲಿ ಹೇಳಿದ್ದರು.)ಬಾಂಬೆ ಜಯಶ್ರೀ ಅವರ ಪರಿಕಲ್ಪನೆ, ಕಛೇರಿ ವಿಶಿಷ್ಟವಾಗಲು ಇನ್ನೊಂದು ಕಾರಣ ಅವರು ಬಳಸಿಕೊಂಡ ವಾದ್ಯಗಳು. ವೇದಿಕೆಯ ಒಂದು ಕಡೆಯಿಂದ ಶುರು ಮಾಡಿದರೆ ಕ್ರಮವಾಗಿ ಪಿಯಾನೊ, ಹಾರ್ಮೋನಿಯಂ, ಮೃದಂಗ, ತಬಲಾ, ಗೆಜ್ಜೆ, ತಾಳ, ಪಿಟೀಲು, ಕೊಳಲು.. ವಾದಕರು ಕುಳಿತಿದ್ದು ಕೂಡ ಈ ವಿಶಿಷ್ಟ ಕಛೇರಿಗೆ ಪೂರಕವಾಗಿತ್ತು.ಎಲ್ಲ ಕಲಾವಿದರು ನುರಿತವರೇ ಆಗಿದ್ದರಿಂದ ಸಂಗೀತ ಕಛೇರಿ ಹೆಚ್ಚು ಕಳೆಕಟ್ಟಲು ಕಾರಣವಾಯಿತು. ದಕ್ಷಿಣಾದಿಯ `ಶುದ್ಧ ದನ್ಯಾಸಿ~ ರಾಗದ ವಾದ್ಯ ಸಂಗೀತದ ತುಣುಕು ನಿಜವಾಗಿಯೂ ಖುಷಿಕೊಟ್ಟಿತು.ಜಯಶ್ರೀ ಅವರ ಶಿಷ್ಯರೊಂದಿಗೆ ಹಾಡಿದ `ಹಿಂದೋಳ~ ರಾಗದ ತ್ಯಾಗರಾಜರ ಸುಪ್ರಸಿದ್ಧ ಕೃತಿ `ಸಾಮಜ ವರಗಮನ~ ಚಿಟ್ಟೆಸ್ವರದೊಂದಿಗೆ ಹಾಡಿದಾಗ ಶ್ರೋತೃಗಳು ಅದನ್ನು ಇನ್ನೊಮ್ಮೆ ಕೇಳಲೂ ತಯಾರಿದ್ದಂತೆ ಅನಿಸಿತು. ಮಾಧುರ್ಯಭರಿತ ಸ್ವರಪುಂಜಗಳು ಕೋರಸ್‌ನಲ್ಲಿ ಮೂಡಿಬಂದಾಗ ಕೇಳುಗರು ಕೂಡ ದನಿಗೂಡಿಸಿದರು.ಎಲ್ಲರ ನಿರೀಕ್ಷೆಯಂತೆ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಅವರ ಸರದಿ. `ಹೇ ವಿಠಲೇ, ಭಕ್ತಜನವತ್ಸಲೇ..~ ಎಂಬ ಭಜನ್ ಅನ್ನು ಹೃದಯತುಂಬಿ ಹಾಡಿದರು ಪಲ್ಲವಿ. ತಬಲಾ ಮೃದಂಗ ಜೋಡಿ ಅವರ ಗಾಯನವನ್ನು ಮತ್ತಷ್ಟು ರಂಜಿಸಿತು.ಜಯಶ್ರೀ ಅವರ ಗಾಯನ ಭಾವ ತನ್ಮಯತೆಯ ಪರಾಕಾಷ್ಠೆಗೇರಿತ್ತು. ಅವರು ಆಯ್ದುಕೊಂಡ ರಾಗ ದಕ್ಷಿಣಾದಿಯ ಸಾರಮತಿ. `ಮೋಕ್ಷಮು ಗಲದಾ..~ ತ್ಯಾಗರಾಜರ ಕೀರ್ತನೆಯನ್ನು ಆರ್ದ್ರ ಹೃದಯದಿಂದ ಹಾಡಿದಾಗ ಬಹುಶಃ ತ್ಯಾಗರಾಜರು ಬಂದು ನಿಂತುಬಿಟ್ಟರೇನೋ ಎನಿಸುತ್ತಿತ್ತು.

 

ಅದಾಗಿ ಎಂ.ಡಿ. ಪಲ್ಲವಿ ಅವರು ಸುಶ್ರಾವ್ಯವಾಗಿ ಹಾಡಿದ್ದು.. ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ `ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬದುಕು..~ ಹಲವು ಭಾವಗಳ ರಸಪೂರ್ಣ ಗುಚ್ಛ. ಭಾವಕ್ಕೆ ರಾಗದ ಪೋಷಾಕು..! ಈ ಭಾವಗೀತೆಯನ್ನು ಮತ್ತೆ ಮತ್ತೆ ಕೇಳಬೇಕೆನಿಸಿತು.ಜೀವನ ಎಂಬುದು ಬರೀ ಸುಖದಿಂದ ಕೂಡಿರಬಾರದು. ದುಃಖ, ವೇದನೆ, ನೋವುಗಳ ಅನುಭವವೂ ಇದ್ದರೆ ಅದನ್ನು ಬೇವು ಬೆಲ್ಲದಂತೆ ಸವಿಯಬಹುದು ಎಂಬುದನ್ನು ಉತ್ತರಾದಿ ಸಂಗೀತದ `ಯಮನ್ ಕಲ್ಯಾಣ್~ ರಾಗದ ಗಜಲ್ ಸಾರಿ ಹೇಳಿತು. ಜಯಶ್ರೀ ಅವರು ಭಾವಪೂರ್ಣವಾಗಿ ಅನುಭವಿಸಿ ಹಾಡಿದರು. ಸಂಗೀತ ಕಛೇರಿಯುದ್ದಕ್ಕೂ ಅಮೂರ್ತ ರಾಗಗಳು ಮೂರ್ತಗೊಳ್ಳುತ್ತಿದ್ದವು. ಅಲ್ಲಿ ಶೃಂಗಾರ, ವೀರ, ಕರುಣಾ, ಭಕ್ತಿ ರಸಗಳು ಪುಟಿದೇಳುತ್ತಿದ್ದು ಕೇಳುಗರಿಗೆ ಆಹ್ಲಾದದ ಸಿಂಚನ ನೀಡಿತ್ತು. ಕೊನೆಯಲ್ಲಿ ವಾದಿರಾಜರ `ಒಂದು ಬಾರಿ ಸ್ಮರಣೆ ಸಾಲದೆ..~ ಎಲ್ಲ ಕಲಾವಿದರು ಒಟ್ಟಿಗೆ ಹಾಡಿ ಮುಗಿಸಿದಾಗ `ಈ ಹಾಡನ್ನು ಇನ್ನೊಂದು ಬಾರಿ ಹಾಡಬಾರದೆ..~ ಎಂದು ಕೇಳುಗರು ಕೇಳುವಂತಹ ವಾತಾವರಣ ನಿರ್ಮಾಣವಾದದ್ದು ಸುಳ್ಳಲ್ಲ.ಶಾಸ್ತ್ರೀಯ ಸಂಗೀತದ `ಎಲ್ಲ ಪ್ರಕಾರಗಳಲ್ಲಿ ಒಂದಾಗಿ~, ಎಲ್ಲದರಲ್ಲೂ ಅಪೂರ್ವ ಪಾಂಡಿತ್ಯ ಹೊಂದಿರುವುದನ್ನು ಗಾಯಕಿ ಬಾಂಬೆ ಜಯಶ್ರೀ ಅವರು ಸಾಬೀತುಪಡಿಸಿದರು.ಜೆ.ಪಿ.ನಗರದ ಎಂಎಲ್‌ಆರ್ ಕನ್‌ವೆನ್‌ಷನ್ ಹಾಲ್‌ನಲ್ಲಿ ಕರ್ನಾಟಕ ಸಂಗೀತ, ಹಿಂದೂಸ್ತಾನಿ, ಗಜಲ್, ಫ್ಯೂಷನ್, ಹಿಂದಿ, ತಮಿಳು ಕನ್ನಡ ಚಿತ್ರಗೀತೆ, ಸುಗಮ ಸಂಗೀತ ಎಲ್ಲವೂ ಒಂದೇ ವೇದಿಕೆಯಲ್ಲಿ ಕೇಳುವ ಸುಯೋಗ ಕೇಳುಗರದ್ದಾಗಿತ್ತು. ಬಹುಕಾಲ ನೆನಪಿನಂಗಳದಲ್ಲಿ ಉಳಿಯುವಂತೆಯೂ ಮಾಡಿತು ಈ ಹೊಸ ಪರಿಕಲ್ಪನೆಯ ಸಂಗೀತ ಕಛೇರಿ `ಲಿಸನಿಂಗ್ ಟು ಲೈಫ್- ದಿ ಜರ್ನಿ ಆಫ್ ಎ ರಾಗ..!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.