ಗುರುವಾರ , ಜೂನ್ 24, 2021
27 °C

ಭಾಷಣ, ಚರ್ಚೆಗಿಂತ ಕಲಾಪಕ್ಕೆ ಅಡ್ಡಿಯೇ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾತಿನ ಮಂಟಪ ಎಂದೇ  ಖ್ಯಾತಿ ಪಡೆದಿರುವ ಸಂಸತ್‌ನಲ್ಲಿ ಚರ್ಚೆ ನಡೆಸಲು ಸದಸ್ಯರಿಗೆ ಹಲವು ರೀತಿಯ ಅವಕಾಶಗಳಿವೆ. ಆದರೆ, 15 ನೇ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ಹೊರತುಪಡಿಸಿ ವಿವಿಧ ನಿಯಮಗಳ ಅಡಿಯಲ್ಲಿ ಚರ್ಚೆ ನಡೆಸಲು ಸದಸ್ಯರು ಆಸಕ್ತಿ ತೋರಿದ್ದು ತೀರ ಕಡಿಮೆ.



ಬೆಂಗಳೂರಿನ ರಿಜೋರ್ಸ್‌ ಸಂಶೋ­ಧನಾ ಪ್ರತಿಷ್ಠಾನ (ಆರ್‌ಆರ್‌ಎಫ್‌) 15ನೇ ಲೋಕಸಭೆ ಅವಧಿಯಲ್ಲಿ ವಿವಿಧ ನಿಯಮಗಳ ಅಡಿಯಲ್ಲಿ ನಡೆದ ಚರ್ಚೆಗಳ ಕುರಿತು ನಡೆಸಿದ ವಿಸ್ತೃತವಾದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.



ಸದನದ ಕಲಾಪ ಸಲಹಾ ಸಮಿತಿ­ಯಲ್ಲಿ ಚರ್ಚೆಗೆ ಒಪ್ಪಿಗೆ ಪಡೆಯುವುದು ಸಹ ಕಷ್ಟಸಾಧ್ಯ­ವಾ­ಗುವುದರಿಂದ ಸದಸ್ಯರು ತಮಗೆ ದೊರೆಯುವ ವಿವಿಧ ನಿಯಮಗಳ ಅಡಿ ದೊರೆಯುವ ಈ ಅವಕಾಶಗಳನ್ನು ವಿರಳವಾಗಿ ಬಳಸಿಕೊ­ಳ್ಳುತ್ತಾರೆ. ಜತೆಗೆ ಅತ್ಯುತ್ತಮವಾದ ಭಾಷಣ ಸಹ ಮಾಧ್ಯಮ­ಗಳಲ್ಲಿ ಪ್ರಕಟವಾಗುವುದು ಕಡಿಮೆ. ಇದಕ್ಕಿಂತ ಸದನದ ಕಲಾಪವನ್ನು ಅಡ್ಡಿಪಡಿಸಿ ಪ್ರಚಾರ ಪಡೆಯುವುದು ಹೆಚ್ಚು ಸುಲಭ. ಮಾಧ್ಯಮಗಳು ಇದೇ ರೀತಿಯ ಘಟನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಸದಸ್ಯರು ಸಹ ‘ಹೀರೊ’ಗಳಾಗಿ ಮಿಂಚಲು ಹೆಚ್ಚು ಆಸಕ್ತಿ ವಹಿಸುತ್ತಾರೆ ಎಂದು ವಿಶ್ಲೇಷಿಸಲಾಗಿದೆ.



ಇದರಿಂದ ಲೋಕಸಭೆಯಲ್ಲಿ ಚರ್ಚೆಯ ಗುಣ­ಮಟ್ಟ ಕುಸಿಯುತ್ತಿದೆ. ಗೊತ್ತುವಳಿಗೂ ಸಹ ಸದಸ್ಯ­ರಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. 15ನೇ ಲೋಕಸಭೆಯಲ್ಲಿ  2012ರ ನ. 22ರಂದು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಯಾವುದೇ ರೀತಿ ಬೆಂಬಲ ದೊರೆಯಲಿಲ್ಲ. ತೃಣಮೂಲ ಕಾಂಗ್ರೆಸ್‌ ಪಕ್ಷದ ಸುದೀಪ್‌ ಬಂದೊೋಪಾಧ್ಯಾಯ ಅವರು ಮಂಡಿಸಿದ್ದ ಗೊತ್ತುವಳಿಗೆ ವಿರೋಧ ಪಕ್ಷಗಳ 50 ಸದಸ್ಯರು ಸಹ ಬೆಂಬಲ ನೀಡಲಿಲ್ಲ.



ಅವಿಶ್ವಾಸ ಗೊತ್ತು­ವಳಿ ಮಂಡನೆಯಾಗುವ ಮಾತಿರಲಿ, ಮಂಡನೆಗೆ ಅಗತ್ಯವಾದ ಕನಿಷ್ಠ ಬೆಂಬಲವನ್ನೂ ಪಡೆದುಕೊಳ್ಳುವಲ್ಲಿ ತೃಣಮೂಲ ವಿಫಲವಾಯಿತು. ಇದ­ರಿಂದ ಈ ಗೊತ್ತುವಳಿ ಚರ್ಚೆಗೆ ಬರಲೇ ಇಲ್ಲ.  ಚಿಲ್ಲರೆ ವ್ಯಾಪಾರ ಕ್ಷೇತ್ರ­ದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ವಿರೋ­ಧಿಸಿ ಸುದೀಪ್‌ ಅವರು ಗೊತ್ತು­ವಳಿ ಮಂಡಿ­ಸಿದ್ದರು. ಪಶ್ಚಿಮ ಬಂಗಾಳದ ರಾಜಕೀಯವೇ ಪ್ರಮುಖವಾಗಿದ್ದು ಸಹ ಇದಕ್ಕೆ ಕಾರಣವಾಗಿತ್ತೇ ಹೊರತು ಸರ್ಕಾರವನ್ನು ಉರುಳಿಸುವ ಉದ್ದೇಶ ಇದರ ಹಿಂದೆ ಇರಲಿಲ್ಲ. ಆದರೆ,  ಹಿಂದಿನ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಇಡೀ ದೇಶದ ಗಮನಸೆಳೆದಿತ್ತು.



ಈ ಪರಿಸ್ಥಿತಿಯನ್ನು ಬದಲಾಯಿಸುವ ಬಗ್ಗೆ ರಾಜಕೀಯ ಪಕ್ಷಗಳ ಸಂಸದೀಯ ಘಟಕಗಳು ವಿಶ್ಲೇಷಣೆ ನಡೆಸಬೇಕಾಗಿದೆ.  ರಾಜಕೀಯ ಪಕ್ಷಗಳ ನಾಯಕರು ನಿರ್ದಿಷ್ಟ ವಿಷಯಗಳನ್ನು ಗುರುತಿಸಿ ಚರ್ಚೆಯ ಬಗ್ಗೆ ಗಂಭೀರ ಚಿಂತನೆ ನಡೆಸಿ ಯೋಜನೆ ರೂಪಿಸಿದರೆ ಲೋಕಸಭೆಯ ಕಾರ್ಯ­ಕಲಾಪಗಳು ಹೆಚ್ಚು ಪರಿಣಾಮ­ಕಾರಿಯಾಗಿ ನಡೆ­ಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ.



ಅಲ್ಪಾವಧಿ ಚರ್ಚೆ(ನಿಯಮ 193): ಕಳೆದ 5 ವರ್ಷಗಳಲ್ಲಿ ಈ ನಿಯಮದಡಿ ಸದಸ್ಯರು 60 ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಪ್ರಮುಖವಾಗಿ ನೈಸರ್ಗಿಕ ವಿಕೋಪಗಳು, ಶ್ರೀಲಂಕಾ­ದಲ್ಲಿ ತಮಿಳರ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿ, ಏಕ­ರೂಪ ಶಿಕ್ಷಣ ಪದ್ಧತಿ, ಕೇಂದ್ರ–­ರಾಜ್ಯ ಸಂಬಂಧ­ಗಳು, ಆಂತರಿಕ ಭದ್ರತೆ ವಿಷಯಗಳು ಚರ್ಚೆಯಾಗಿವೆ.



ನಿಲುವಳಿ ಸೂಚನೆ: ಗಂಭೀರ ಪರಿಣಾಮ ಬೀರುವ ಸಾರ್ವಜನಿಕ ಮಹತ್ವದ ವಿಷ­ಯ­ಗಳನ್ನು ನಿಲುವಳಿ ಸೂಚನೆ ಮೂಲಕ ಮಂಡಿಸಿ ಸದನದ ಗಮನಸೆಳೆಯಲು ಸದಸ್ಯರಿಗೆ ಅವಕಾಶವಿದೆ.



ಅಸ್ಸಾಂನಲ್ಲಿ ನುಸುಳುವಿಕೆ ಮತ್ತು ವಿದೇಶಿ ಬ್ಯಾಂಕ್‌­ಗಳಲ್ಲಿ ಕಪ್ಪು ಹಣ ಕುರಿತು ಎಲ್‌.ಕೆ. ಅಡ್ವಾಣಿ ಅವರು ನಿಲುವಳಿ ಸೂಚನೆ ಮಂಡಿಸಿ­ದ್ದರು. ಸಿಪಿಐಎಂನ ಬಸುದೇವ್‌ ಆಚಾರ್ಯ ಸಹ ಕಪ್ಪು ಹಣದ ಬಗ್ಗೆ ನಿಲುವಳಿ ಸೂಚನೆ ಮಂಡಿ­ಸಿದ್ದರು. ಬಿಜೆಪಿಯ ಯೋಗಿ ಆದಿತ್ಯನಾಥ್‌ ಅವರಿಗೆ ಅಸ್ಸಾಂ­ನಲ್ಲಿ ನುಸುಳುವಿಕೆ ಕುರಿತು ಚರ್ಚಿ­ಸಲು ಅವಕಾಶ ದೊರೆಯಿತು. ಆದರೆ, ತಮ್ಮ ಪರವಾಗಿ ಎಲ್‌.ಕೆ. ಅಡ್ವಾಣಿ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಅವರು ಸದನವನ್ನು ಕೋರಿದ್ದರು.



ಗಮನ ಸೆಳೆಯುವ ಸೂಚನೆ(ನಿಯಮ 197): ಈ ನಿಯಮದಡಿ ತಮಿಳುನಾಡಿ­ನಲ್ಲಿನ ತೆಂಗು ಬೆಳೆಗಾರರ ಪರಿಸ್ಥಿತಿ ಮತ್ತು ಅಂಡಮಾನ್‌ ನಿಕೋ­ಬಾರ್‌ ದ್ವೀಪ­ಗಳಲ್ಲಿ ಮಲೇಷ್ಯಾದ ಬಹು­ರಾಷ್ಟ್ರೀಯ ಕಂಪೆನಿ ಹೋಟೆಲ್‌ ಸ್ಥಾಪನೆ ಸೇರಿ­ದಂತೆ ಹಲವು ವಿಷಯಗಳ ಬಗ್ಗೆ 15ನೇ ಲೋಕಸಭೆಯಲ್ಲಿ ಚರ್ಚೆ ನಡೆಸಲಾಗಿದೆ.



ಈ ಬಾರಿಯ ಲೋಕಸಭೆಯಲ್ಲಿ 16,350 ಗಮನ ಸೆಳೆಯುವ ಸೂಚನೆ ಮಂಡಿಸಲು ಸಾಧ್ಯವಿತ್ತು. ಆದರೆ, ಸದಸ್ಯರು ಕೇವಲ ಶೇಕಡ 0.226ರಷ್ಟು ಮಾತ್ರ ಬಳಸಿಕೊಂಡಿದ್ದಾರೆ. ಈ ನಿಯ­ಮವನ್ನು ಬಳಸಿಕೊಂಡು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಸದನದ ಗಮನಕ್ಕೆ ತಾರದಿರುವುದು ಆಶ್ಚರ್ಯಕರವಾಗಿದೆ.



ನಿಯಮ 184ರ ಅಡಿಯಲ್ಲಿ: ಈ ನಿಯ­ಮದ ಅಡಿ ಗೊತ್ತುವಳಿ ಮಂಡಿಸುವ ಸದಸ್ಯರಿಗೆ ಸಮಗ್ರವಾಗಿ ವಿಷಯ ಮಂಡಿ­ಸಲು ಅವಕಾಶವಿದೆ. ಚರ್ಚೆಯ ಅಂತ್ಯ­ದಲ್ಲೂ ಈ ಸದಸ್ಯರಿಗೆ ಮಾತನಾಡಲು ಅವಕಾಶ ದೊರೆಯುತ್ತದೆ.  ಸಂಸತ್ತಿನ ಆರಂಭದ ಅಧಿವೇಶನಗಳಲ್ಲಿ ಈ ನಿಯಮ ಪ್ರಾಮುಖ್ಯತೆ ಪಡೆದಿತ್ತು. ವಿರೋಧ ಪಕ್ಷಗಳು ಈ ನಿಯಮದ ಮೂಲಕ ವಿಷಯಗಳನ್ನು ಮಂಡಿಸು­ತ್ತಿದ್ದರಿಂದ ಕಲಾಪಕ್ಕೆ ಅಡ್ಡಿಪಡಿಸುವ ಪ್ರಸಂಗ ಉದ್ಭವಿಸು­ತ್ತಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ನಿಯಮದ ಅಡಿ ಗೊತ್ತುವಳಿ ಮಂಡಿಸುವುದು ಕಡಿಮೆ­ಯಾಗುತ್ತಿದೆ. ಈ  ಲೋಕಸಭೆ­ಯಲ್ಲಿ ಒಂದು ಬಾರಿ ಮಾತ್ರ  ಈ ನಿಯಮದ ಅಡಿ ಚರ್ಚಿಸ­ಲಾಗಿದೆ.



191 ಮತ್ತು 342 ಅಡಿಯಲ್ಲಿ ­: ಈ ನಿಯಮದ ಅಡಿಯಲ್ಲಿ ಸರ್ಕಾರದ ನೀತಿ ಅಥವಾ ಇತರೆ ವಿಷ­ಯಗಳ ಬಗ್ಗೆ ಪ್ರಸ್ತಾಪಿಸಬಹುದು. 15ನೇ ಲೋಕಸಭೆಯಲ್ಲಿ ಆರು ವಿಷಯ­ಗಳು ಈ ನಿಯಮದ ಅಡಿ ಚರ್ಚಿಸಲಾಗಿದೆ.



ಅಶಿಸ್ತು ಮತ್ತು ಪುಂಡಾಟಿಕೆಯ ಕಾರಣಕ್ಕೆ ಸದನದಿಂದ ಸದಸ್ಯರ ಅಮಾ­ನತು, ಬೆಲೆ ಏರಿಕೆ, ಕಲಾಪಕ್ಕೆ ಸಂಬಂಧಿ­ಸಿದಂತೆ 331 ಜಿ ನಿಯಮ ಅಮಾನತು, ಜಂಟಿ ಸದನ ಸಮಿತಿ ನೇಮಕ,  ಆರ್ಥಿಕತೆ ಮೇಲೆ ಪರಿಣಾಮ ಬೀರಿದ ಹಣದುಬ್ಬರ ಮತ್ತು ಜನಸಾಮಾನ್ಯರ ಮೇಲೆ ಬೀರಿರುವ ಪ್ರತಿಕೂಲ ಪರಿಣಾಮ, ದೇಶದಲ್ಲಿ ಜನಸಂಖ್ಯೆ ಸ್ಥಿರತೆ ಕುರಿತ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.