ಶನಿವಾರ, ಮೇ 15, 2021
22 °C

`ಭಾಷೆ ಮತ್ತು ಸಂಸ್ಕೃತಿ ಚೌಕಟ್ಟಿಗೆ ಸೀಮಿತವಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತನೂರು ರಾಜಮ್ಮ ಮಂಟಪ (ಶಿಡ್ಲಘಟ್ಟ): `ಕನ್ನಡ ಮತ್ತು ಕನ್ನಡತನದ ವ್ಯಾಪ್ತಿ ತುಂಬ ವಿಶಾಲವಾಗಿದೆ. ಯಾವುದೇ ಭಾಷೆ ಅಥವಾ ಸಂಸ್ಕೃತಿಯನ್ನು ಸೀಮಿತ ಚೌಕಟ್ಟಿನಲ್ಲಿ ಕಟ್ಟಿಡಲು ಸಾಧ್ಯವಿಲ್ಲ. ಭಾಷೆ ಮತ್ತು ಸಂಸ್ಕೃತಿ ವ್ಯಾಪ್ತಿ ಮೀರಿ ವಿಸ್ತಾರವಾದಷ್ಟು ಇನ್ನಷ್ಟು ಪ್ರಭಾವಶಾಲಿಯಾಗುತ್ತದೆ' ಎಂದು ಸಮ್ಮೇಳನಾಧ್ಯಕ್ಷೆ ಗುಡಿಬಂಡೆ ಪೂರ್ಣಿಮಾ ಅಭಿಪ್ರಾಯಪಟ್ಟರು.ಸಾಹಿತ್ಯ ಸಮ್ಮೇಳನದ ಪ್ರಮುಖ ಗೋಷ್ಠಿಗಳಲ್ಲಿ ಒಂದಾದ ಸಮ್ಮೇಳನಾಧ್ಯಕ್ಷೆಯೊಂದಿಗೆ ಸಂವಾದದಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ಮುಕ್ತವಾಗಿ ವ್ಯಕ್ತಪಡಿಸಿದ ಅವರು, ಸಾಮಾಜಿಕ ನೆಲೆಯನ್ನು ಗಟ್ಟಿಗೊಳಿಸುವಲ್ಲಿ ಮತ್ತು ಉತ್ತಮ ವಿಚಾರ-ಚಿಂತನೆಗಳು ಹರಿಯುವಲ್ಲಿ ಭಾಷೆ, ಸಂಸ್ಕೃತಿ ಗಾಢವಾದ ಪ್ರಭಾವ ಬೀರತ್ತದೆ. ಈ ಕಾರಣಕ್ಕಾಗಿ ಅವುಗಳನ್ನು ಒಂದೇ ಚೌಕಟ್ಟಿನಲ್ಲಿ ಕೂಡಿಡುವುದು ಕಷ್ಟ ಎಂದರು.ಕನ್ನಡಾಭಿಮಾನ ನವೆಂಬರ್, ಡಿಸೆಂಬರ್ ತಿಂಗಳಿಗೆ ಅಥವಾ ಉತ್ಸವ ಆಚರಣೆಗೆ ಮಾತ್ರ ಸೀಮಿತವಾಗಬಾರದು. ವರ್ಷದ 365 ದಿನವೂ ಕನ್ನಡಿಗನೆಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ವಾತಾವರಣ ಮೂಡಿಸಬೇಕು. ಪರ ಭಾಷೆ ಕಲಿಯುವ ಜೊತೆ ನಮ್ಮ ಭಾಷೆ ಅವರಿಗೆ ಕಲಿಸಬೇಕು. ಆಗ ಸಹಜವಾಗಿ ಸೌಹಾರ್ದ ಸೇತುವಾಗುತ್ತದೆ ಎಂದರು.ನಾಡಧ್ವಜ ಹಾರಿಸುವುದು, ತಾಯಿ ಭುವನೇಶ್ವರಿ ದೇವಿ ಪೂಜಿಸುವುದು ಮಾತ್ರ ಅಭಿಮಾನ ವ್ಯಕ್ತಪಡಿಸುವ ಪರಿಭಾಷೆಯೆಂದು ಭಾವಿಸಿದ್ದಾರೆ. ಆದರೆ ಇವುಗಳಲ್ಲದೇ ಪ್ರತಿಯೊಂದು ಕಾರ್ಯದಲ್ಲೂ ಕನ್ನಡ ಬಳಸುವ, ಕನ್ನಡದಲ್ಲಿ ಮಾತನಾಡುವ, ಪತ್ರಿಕೆ-ಪುಸ್ತಕ ಓದುವ, ಸಿನಿಮಾ ನೋಡುವ, ಗೀತೆಗಳನ್ನು ಕೇಳುವ ಮೂಲಕ ಅಭಿಮಾನ ವ್ಯಕ್ತಪಡಿಸಬಹುದು ಎಂದು ಹೇಳಿದರು.ಸಂವಾದದಲ್ಲಿ ಸಾಹಿತಿಗಳು ಮತ್ತು ವಿಚಾರವಂತರು ಚಿಂತನೆಗೆ ಆಸ್ಪದ ಕೊಡುವಂತಹ ಹಲವು ಪ್ರಶ್ನೆಗಳನ್ನು ಕೇಳಿದರು. `ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗಳು ಜನಸಾಮಾನ್ಯರಿಗೆ ತಲುಪಬೇಕಲ್ಲವೆ? ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಜ್ಞರನ್ನು ಕರೆದು ಗೋಷ್ಠಿಗಳನ್ನು ನಡೆಸುವುದು ಒಳ್ಳೆಯದಲ್ಲವೇ' ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಕೇಳಿದರೆ,  `ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎನ್ನುತ್ತ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ. ಇದಕ್ಕೆ ಪರಿಹಾರವೇನು' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಸಿ.ಬಿ.ಹನುಮಂತಪ್ಪ ಪ್ರಶ್ನಿಸಿದರು.`ಭಾಷಣದಲ್ಲಿ ಮಾತ್ರ ಕನ್ನಡವಿದೆ. ಆದರೆ ಅನುಷ್ಠಾನದಲ್ಲಿ ಕನ್ನಡ ಸೊರಗಿದೆ. ಇದಕ್ಕೆ ಕಾರಣಗಳೇನು? ಪರಿಹಾರ ಇಲ್ಲವೇ' ಎಂದು ಉಪನ್ಯಾಸಕ ಎನ್.ಚಂದ್ರಶೇಖರ್ ಕೇಳಿದರೆ, `ಕನ್ನಡನಾಡು-ನುಡಿ ಕಟ್ಟುವಂತೆ ಪ್ರತಿಯೊಬ್ಬರು ಸಲಹೆ ನೀಡುತ್ತಾರೆ. ಆದರೆ ಹೇಗೆ ತೊಡಗಿಸಿಕೊಳ್ಳಬಹುದೆಂದು ಹೇಳುವುದಿಲ್ಲ. ಕನ್ನಡ ಕಟ್ಟಾಳುಗಳಾಗಿ ಹೇಗೆ ನಾಡು ಕಟ್ಟಬಹುದು' ಎಂದು ಶಿಕ್ಷಕಿ ಕೆ.ಸುಮಾ ಕೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.