ಭಾನುವಾರ, ಮೇ 9, 2021
25 °C

ಭೀಮಾ ನದಿಯ ಬೋಟ್‌ಗಳಿಗೆ ಲಂಗರು!

ಗಣೇಶ ಚಂದನಶಿವ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೀಮಾ ನದಿಯ ಬೋಟ್‌ಗಳಿಗೆ ಲಂಗರು!

ವಿಜಾಪುರ: ಭೀಮಾ ನದಿಯಲ್ಲಿಯ ಬೋಟ್‌ಗಳಿಗೆ ಈಗ ಲಂಗರು ಹಾಕಲಾಗಿದೆ!

ಅರೆ! ಇದೇನಿದು ಭೀಮಾ ನದಿಯಲ್ಲಿಯೂ ಬೋಟ್‌ಗಳಿವೆಯೇ? ಕಡಲು ತೀರದಂತೆ ಇಲ್ಲಿಯೂ ಮೀನುಗಾರಿಕೆ ನಡೆಯುತ್ತದೆಯೇ? ಎಂದು ಹುಬ್ಬೇರಿಸಬೇಡಿ. ಇವು ಮೀನುಗಾರಿಕೆಯ ಬೋಟ್‌ಗಳಲ್ಲ. ಬದಲಿಗೆ ಅನಧಿಕೃತವಾಗಿ ಭೀಮಾ ನದಿಯಲ್ಲಿ ಮರಳು ತೆಗೆಯುವ ಯಾಂತ್ರೀಕೃತ ಬೋಟ್‌ಗಳು.ಮಹಾರಾಷ್ಟ್ರದಲ್ಲಿ ಮಳೆ ಸುರಿದಿದ್ದರಿಂದ ಹಾಗೂ ಉಜನಿ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಭೀಮಾ ನದಿ ತುಂಬಿ ಹರಿಯುತ್ತಿದೆ. ಭೀಮಾ ನದಿಯಲ್ಲಿ ಈ ಸಂದರ್ಭದಲ್ಲಿ ಮರಳು (ಉಸುಕು) ತೆಗೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಈ ಬೋಟ್‌ಗಳನ್ನು ದಡಕ್ಕೆ ತಂದು ಲಂಗರು ಹಾಕಿ ನಿಲ್ಲಿಸಲಾಗಿದೆ.ಭೀಮಾ ತೀರದ ಸಿಂದಗಿ ಹಾಗೂ ಇಂಡಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಈ ಬೋಟ್‌ಗಳು ಕಾಣಸಿಗುತ್ತಿವೆ. ಭೀಮೆಯೂ ಸೇರಿದಂತೆ ನದಿಗಳಲ್ಲಿ ಯಾಂತ್ರೀಕೃತ ಬೋಟ್ ಬಳಸಿ ಮರಳು ತೆಗೆಯುವುದನ್ನು ನಿಷೇಧಿಸಲಾಗಿದೆ.

 

ಆದರೆ, ಭೀಮಾ ನದಿಯಲ್ಲಿ ಬೇಸಿಗೆಯಲ್ಲಿ ಜೆಸಿಬಿಯಂತಹ ಬೃಹತ್ ಯಂತ್ರಗಳಿಂದ ಹಾಗೂ ನದಿಯಲ್ಲಿ ನೀರು ಹರಿವು ಇರುವಾಗ ಬೋಟ್‌ಗಳಿಂದ ಅನಧಿಕೃತವಾಗಿ ಮರಳು ತೆಗೆಯುವುದು ಸರ್ವೆಸಾಮಾನ್ಯ ಎಂಬಂತಾಗಿದೆ.`ಭೀಮಾ ತೀರದಲ್ಲಿ ಹೀಗೆ ಅನಧಿಕೃತವಾಗಿ ಮರಳು ತೆಗೆಯುವ ದೊಡ್ಡ ಮಾಫಿಯಾ ಇದೆ. ಪಕ್ಕದಲ್ಲಿಯೇ ಮಹಾರಾಷ್ಟ್ರದ ಸೊಲ್ಲಾಪುರ ನಗರ ಇರುವುದರಿಂದ ಹಾಗೂ ವಿಜಾಪುರ-ಗುಲ್ಬರ್ಗ  ಜಿಲ್ಲೆಗಳ ಪಟ್ಟಣಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಭೀಮಾ ನದಿಯ ಮರಳನ್ನೇ ಅವಲಂಬಿಸಿರುವುದರಿಂದ ಅನಧಿಕೃತ ಮರಳು ಗಣಿಗಾರಿಕೆ ಹೆಚ್ಚಿದೆ. ಇಲ್ಲಿ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ~ ಎಂದು ಭೀಮಾ ತೀರದ ಜನತೆ ಹೇಳುತ್ತಾರೆ.ನದಿಯಲ್ಲಿ ಬೋಟ್ ಬಳಸಿದರೆ ಅದರಿಂದ ಇಂಧನ ಸೋರಿ ಜಲಚರ ಪ್ರಾಣಿಗಳಿಗೆ ಅಪಾಯವಾಗುತ್ತದೆ. ನೀರಿನ ಹರಿವು ಕಡಿಮೆ ಇರುವಾಗ ಬೋಟ್ ಬಳಕೆಯಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ ಎಂಬ ಆ ಭಾಗದ ರೈತರ ಆತಂಕಕ್ಕೆ ಶಾಶ್ವತ ಪರಿಹಾರ ದೊರೆತಿಲ್ಲ.ಉಮರಾಣಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಈ ವಿಷಯವೇ ಪ್ರಮುಖ ಚರ್ಚಾ ವಸ್ತುವಾಗಿತ್ತು. `ಭೀಮಾ ನದಿಯಲ್ಲಿ ಈಗ ಮರಳು ತೆಗೆಯಲು ಯಾರಿಗೂ ಟೆಂಡರ್ ನೀಡಿಲ್ಲ. ಆದರೂ ಅಕ್ರಮವಾಗಿ ಮರಳು ಸಾಗಿಸುವುದು ನಿಂತಿಲ್ಲ. ಮರಳು ವಾಹನಗಳ ಹಾವಳಿಯಿಂದ ರಸ್ತೆಗಳೆಲ್ಲ ಹಾಳಾಗಿವೆ. ಇನ್ನು 15 ದಿನಗಳಲ್ಲಿ ಇದನ್ನು ತಡೆಯದಿದ್ದರೆ ಬೀದಿಗಿಳಿದು ಹೋರಾಡುತ್ತೇವೆ~ ಎಂದು ಸಾರ್ವಜನಿಕರು ಸಭೆಯಲ್ಲಿದ್ದ ಶಾಸಕ ವಿಠ್ಠಲ ಕಟಕಧೋಂಡ ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.`ಇಂಡಿ ತಾಲ್ಲೂಕಿನ ದೇವಣಗಾಂವ, ಶಂಭೇವಾಡ, ಕಡ್ಲೇವಾಡದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವಂತೆ ನಾವು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಶಾಸಕ ರಮೇಶ ಭೂಸನೂರ ನಮ್ಮ ಹೋರಾಟ ಬೆಂಬಲಿಸಿ ಹೋಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ಅಲ್ಲಿಯ ಜನ ದೂರುತ್ತಿದ್ದಾರೆ.`ಉಮರಾಣಿ, ಟಾಕಳಿ, ಮರಗೂರ, ಧೂಳಖೇಡ,  ಹಲಸಂಗಿ, ಬರಗುಡಿ, ಪಡನೂರ, ಅಣಚಿ, ಖೇಡಗಿ, ರೋಡಗಿ, ಭೂಯ್ಯಾರ, ತದ್ದೇವಾಡ, ಶಿರಗೂರ ಖಾಲ್ಸಾ, ಹಿಂಗಣಿ, ಅಗರಖೇಡ ಸೇರಿದಂತೆ ಭೀಮಾ ನದಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಾಮಾನ್ಯ~ ಎಂದು ಸಾರ್ವಜನಿಕರು ಹೇಳುತ್ತಾರೆ.`ಅಕ್ರಮ ಮರಳು ಗಣಿಗಾರಿಕೆ ತಡೆಯಲು ಪೊಲೀಸ್ ಇಲಾಖೆಯೊಂದಿಗೆ ನಾವು ಸಾಕಷ್ಟು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಮೂರು ಮೊಕದ್ದಮೆ ದಾಖಲಿಸಿದ್ದು, 6.30 ಲಕ್ಷ ದಂಡ ವಸೂಲಿ ಮಾಡಿದ್ದೇವೆ. ಪ್ರವಾಹ ಕಡಿಮೆಯಾದ ನಂತರ ಕಾರ್ಯಾಚರಣೆ ಮುಂದುವರೆಸುತ್ತೇವೆ~ ಎಂಬುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನಂಜುಂಡಸ್ವಾಮಿ ವಿವರಣೆ.`ಜಿಲ್ಲೆಯ ಭೀಮಾ ನದಿಯ ಮರಳಿನಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ ಸರಾಸರಿ 2.50 ಕೋಟಿ ರೂಪಾಯಿ ರಾಜಸ್ವ ಬರುತ್ತಿದೆ. ಮರಳು ತೆಗೆಯಲು ಈಗ ಯಾವುದೇ ಟೆಂಡರ್ ಆಗಿಲ್ಲ. 2011ರ ಹೊಸ ಮರಳು ನೀತಿಯಿಂದಾಗಿ ನೀರು ಇರುವ ಪ್ರದೇಶದಲ್ಲಿ ಮರಳು ತೆಗೆಯಲಿಕ್ಕೆ ಟೆಂಡರ್ ನೀಡಲು ಅವಕಾಶ ಇಲ್ಲ.ಜೆಸಿಬಿ ಮತ್ತು ಯಾಂತ್ರೀಕೃತ ಬೋಟ್ ಬಳಸಿ ಮರಳು ತೆಗೆಯುವಂತಿಲ್ಲ. ಇಂಡಿ ಮತ್ತು ಸಿಂದಗಿ ತಾಲ್ಲೂಕಿನಲ್ಲಿ 13 ಬ್ಲಾಕ್ ಹೊರತು ಪಡಿಸಿದರೆ ಉಳಿದೆಡೆ ಸರಣಿ ಬ್ಯಾರೇಜ್‌ಗಳಿರುವುದರಿಂದ ವರ್ಷದ 365 ದಿನವೂ ನೀರು ಇರುತ್ತದೆ. ಅಲ್ಲಿ ಟೆಂಡರ್ ನೀಡಲು ಅವಕಾಶ ಇಲ್ಲ~ ಎನ್ನುತ್ತಾರೆ ಅವರು.

 

`ಭೀಮಾ ನದಿ ತೀರದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದವರನ್ನು ಮಟ್ಟ ಹಾಕಿದ್ದೇವೆ. ದಾಳಿಯ ಕಾಲಕ್ಕೆ ಸಿಕ್ಕ ಬೋಟ್‌ಗಳನ್ನು ಒಡೆದು ಹಾಕಿದ್ದೇವೆ. ಟ್ರ್ಯಾಕ್ಟರ್, ಜೆಸಿಬಿ ಮತ್ತಿತರ ಯಂತ್ರಗಳನ್ನು ಜಪ್ತಿ ಮಾಡಿದ್ದು, ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ~ ಎಂದು ಎಸ್ಪಿ ಡಾ.ಡಿ.ಸಿ. ರಾಜಪ್ಪ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.