ಗುರುವಾರ , ಜನವರಿ 30, 2020
20 °C

ಭೀಮ ನಡಿಗೆ ಬುದ್ಧನೆಡೆಗೆ ಜಾಗೃತಿ ಜಾಥಾ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ (ಸಂಯೋಜಕ) ಹಮ್ಮಿಕೊಂಡಿದ್ದ ಭೀಮ ನಡಿಗೆ ಬುದ್ಧನೆಡೆಗೆ ಜನಜಾಗೃತಿ ಬೈಕ್ ರ್‌ಯಾಲಿಯು ತಾಲ್ಲೂಕಿನ ಶಿವಪುರ ಗ್ರಾಮದ ಮಣಿಯಮ್ಮ ದೇವಸ್ಥಾನದ ಆವರಣದಿಂದ ಆರಂಭಗೊಂಡಿತು.ದಲಿತ ಮಹಾಸಭಾದ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಮಾತನಾಡಿ, ‘ಪ್ರಸ್ತುತ ಸಮಾಜದಲ್ಲಿ ಶೋಷಣೆ, ಭ್ರಷ್ಟಾಚಾರ, ಮೂಢನಂಬಿಕೆ, ಅಸ್ಪೃಶ್ಯತೆ ತಾಂಡವವಾಡುತ್ತಿವೆ. ಇವುಗಳ ನಿರ್ಮೂಲನೆಗೆ ಪ್ರತಿ ಗ್ರಾಮದಲ್ಲೂ ಭೀಮ ನಡಿಗೆ ಬುದ್ಧನೆಡೆಗೆ ಜಾಗೃತಿ ಜಾಥಾ ನಡೆಸಬೇಕಿದೆ’ ಎಂದು ಆಶಿಸಿದರು.ಕಲುಷಿತಗೊಂಡಿರುವ ಸಮಾಜಕ್ಕೆ ಬುದ್ಧನ ಸಂದೇಶದ ಅಗತ್ಯವಿದೆ. ಎಲ್ಲ ಶೋಷಿತ ವರ್ಗಗಳಿಗೆ ಅಂಬೇಡ್ಕರ್‌ ಬೆಳಕು ಕೊಟ್ಟರು. ಮೀಸಲಾತಿ ವಿಷಯ ಬಂದಾಗ ಎಲ್ಲ ವರ್ಗದ ಜನರು ಮುಂದೆ ಬರುತ್ತಾರೆ. ಅಂಬೇಡ್ಕರ್ ಅವರ ಭಾವನಾತ್ಮಕ ಸಂಬಂಧದ ವಿಷಯ ಬಂದಾಗ ಹಿಂಜರಿಯುತ್ತಾರೆ ಎಂದು ವಿಷಾದಿಸಿದರು.ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ. ಕೃಷ್ಣಮೂರ್ತಿ ಮಾತನಾಡಿ, ದೇಶದಲ್ಲಿರುವ ಎಲ್ಲ ದಲಿತರು ಬೌದ್ಧ ಧರ್ಮಕ್ಕೆ ಸೇರಿದವರು. ಪಂಚಶೀಲ ಜಾಥಾವನ್ನು ಪ್ರತಿ ಗ್ರಾಮಗಳಲ್ಲೂ ನಡೆಸಬೇಕು. ಎಲ್ಲರೂ ಬುದ್ಧನ ಮಾರ್ಗದಲ್ಲಿ ಸಾಗಬೇಕು. ಆಗ ಮಾತ್ರ ಸಮಾಜದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದು ಎಂದು ಹೇಳಿದರು.ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಮಾತನಾಡಿ, ಭೀಮ ನಡಿಗೆ ಬುದ್ಧನೆಡೆಗೆ ಸಂದೇಶವನ್ನು  ಅಂಬೇಡ್ಕರ್ ಬದುಕಿರುವಾಗಲೇ ಸಾರಿದ್ದಾರೆ. ದೇಶದ 30 ಕೋಟಿ ದಲಿತರಲ್ಲಿ ಕೇವಲ 1 ಕೋಟಿ ಜನರು ಮಾತ್ರ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ ಎಂದು ಹೇಳಿದರು.ದಲಿತ ಸಂಘರ್ಷ ಸಮಿತಿಯ (ಸಂಯೋಜಕ) ಜಿಲ್ಲಾ ಸಂಯೋಜಕ ಕೆ.ಎಂ. ನಾಗರಾಜು ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ  ಎಸ್. ನಂಜುಂಡಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ಮಹದೇವಮ್ಮ, ಮಾಜಿ ಅಧ್ಯಕ್ಷ ರಾಜು, ಸಿ.ಕೆ. ಮಂಜುನಾಥ್, ಆಲೂರು ನಾಗೇಂದ್ರ, ದೊಡ್ಡಿಂದುವಾಡಿ ಸಿದ್ದರಾಜು, ಎಂ.ಸಿ. ಮಹದೇವಪ್ಪ, ಪರ್ವತ್‌ರಾಜ್, ಕೃಷ್ಣ, ವೆಂಕಟೇಶ್, ವೀರಣ್ಣ ಹಾಜರಿದ್ದರು.

ಪ್ರತಿಕ್ರಿಯಿಸಿ (+)