ಶುಕ್ರವಾರ, ಮೇ 14, 2021
21 °C

ಭೂಕಂಪ ನಿರ್ವಹಣೆ ವ್ಯವಸ್ಥೆ ದುರ್ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಐಎಎನ್‌ಎಸ್): ದೇಶದಲ್ಲಿ ಭೂಕಂಪದ ಅಪಾಯ ಹೆಚ್ಚುತ್ತಿದ್ದರೂ ಅಂತಹ ತುರ್ತು ಸ್ಥಿತಿಯನ್ನು ಸಮರ್ಪಕವಾಗಿ ಎದುರಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.`ದೇಶದ ಶೇಕಡಾ 60ರಷ್ಟು ಭಾಗವು ಭೂಕಂಪ ವಲಯದಲ್ಲಿ ಬರುತ್ತದೆ~ ಎಂದು ಭೂಕಂಪ ವಿಜ್ಞಾನ ಇಲಾಖೆಯ ನಿರ್ದೇಶಕ ಬಿ.ಆರ್.ವೈದ್ಯ ತಿಳಿಸಿದ್ದಾರೆ. ಹಿಮಾಲಯ ಪರ್ವತದ ಗಡಿಯಲ್ಲಿ ಎರಡು ಭೂಪದರಗಳ ಮಧ್ಯೆ ಉಂಟಾದ ಘರ್ಷಣೆಯಿಂದ ಕಳೆದ ಭಾನುವಾರ ದೇಶದ ಈಶಾನ್ಯ ಮತ್ತು ಪೂರ್ವ ಭಾಗದಲ್ಲಿ ಭೂಕಂಪ ಸಂಭವಿಸಿತ್ತು.`ಭಾರತದ ಭೂಪದರ ಚಲನೆಯು ಸಾಮಾನ್ಯವಾಗಿ ವಾಯವ್ಯ ಮತ್ತು ಉತ್ತರ ದಿಕ್ಕಿನತ್ತ ಇದೆ. ಆದರೆ ಕಳೆದ ನೂರು ವರ್ಷಗಳಲ್ಲಿ ಭೂಮಿಯ ಚಿಪ್ಪಿನ ರಚನೆಯಲ್ಲಿ ವ್ಯತ್ಯಾಸ ಉಂಟಾಗಿರುವುದರಿಂದ ಚಲನೆಯ ದಿಕ್ಕು ಪಶ್ಚಿಮದತ್ತ ಸಾಗಿ ಭೂಕಂಪದ ಸಾಧ್ಯತೆಗಳು ಹೆಚ್ಚಾಗಿವೆ~ ಎಂದು ಹೈದರಾಬಾದ್‌ನ ರಾಷ್ಟ್ರೀಯ ಭೂಭೌತ ವಿಜ್ಞಾನ ಸಂಶೋಧನಾ ಸಂಸ್ಥೆಯ ಆರ್.ಕೆ.ಛಡ್ಡಾ ತಿಳಿಸಿದ್ದಾರೆ.`2000ನೇ ಇಸವಿಯಿಂದ ಭೂಕಂಪ ಜಾಸ್ತಿಯಾಗಿದ್ದು, 2004ರಲ್ಲಿ ಸುಮಾತ್ರಾದಲ್ಲಿ ಸಂಭವಿಸಿದ 9.3 ತೀವ್ರತೆಯ ಭೂಕಂಪವು ಭೂಮಿಯ ದುರ್ಬಲ ವಲಯಗಳ ಮೇಲೆ ಭಾರಿ ಪ್ರಮಾಣದ ಒತ್ತಡವನ್ನು ಉಂಟು ಮಾಡಿದೆ~ ಎಂದು ಅವರು ಮಾಹಿತಿ ನೀಡಿದ್ದಾರೆ.`ಭಾನುವಾರದ ಭೂಕಂಪದ ನಂತರ ಭಾರತದ ಭೂಪದರವು ಸುಮಾರು 1- 2 ಮಿ.ಮೀನಷ್ಟು ಚಲಿಸಿದೆ. ದೇಶದ ಬಹುತೇಕ ಭಾಗಗಳು ಈಗ ಭೂಕಂಪದ ಅಪಾಯವನ್ನು ಎದುರಿಸುತ್ತಿದ್ದರೂ ನಾವು ಅದನ್ನು ಎದುರಿಸಲು ತಕ್ಕ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ~ ಎಂದು ಹೇಳಿದ್ದಾರೆ.`ಭಾನುವಾರದ ಭೂಕಂಪವಲ್ಲದೆ ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಒಟ್ಟು ಐದು ಬಾರಿ ಭೂಕಂಪವಾಗಿದೆ. ಭೂಪದರಗಳ ಚಲನೆಯಿಂದ ಭೂಕಂಪಗಳು ಉಂಟಾಗುತ್ತಿದ್ದರೂ ತಪ್ಪು ಯೋಜನೆಗಳಿಂದಾಗಿ ಅಪಾರ ಹಾನಿ ಉಂಟಾಗುತ್ತಿದೆ.ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಉಪನಿಯಮಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ನಿರ್ಮಿಸಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ~ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಗೌಹರ್ ಮಹಮೂದ್ ತಿಳಿಸಿದ್ದಾರೆ.1995ರ ವರೆಗೆ ದೆಹಲಿಯು ಸಾಮಾನ್ಯ ಭೂಕಂಪ ವಲಯದಲ್ಲಿತ್ತು. ನಂತರ ಹೆಚ್ಚು ಅಪಾಯಕಾರಿ ವಲಯಕ್ಕೆ ಸೇರ್ಪಡೆಯಾಗಿದೆ. ಪದೇಪದೇ ಭೂಕಂಪ ಆಗುತ್ತಿರುವುದರಿಂದ ಭೂಕಂಪ ನಿರೋಧಕ ಕಟ್ಟಡ ನಿರ್ಮಾಣವನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಣಾ ಪ್ರಾಧಿಕಾರ ಮನವಿ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.