ಗುರುವಾರ , ಮೇ 13, 2021
16 °C

ಭೂಮಿ ಎನ್ನುವ ಮಾರುಕಟ್ಟೆ ಸರಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿವೃದ್ಧಿ ಯೋಜನೆಗಳಿಗೆ ಕೃಷಿ ಅಥವಾ ಇನ್ಯಾವುದೇ ಭೂಮಿ ಸ್ವಾಧೀನಪಡಿಸಿಕೊಳ್ಳುವ ಮತ್ತು ಭೂಮಿ-ನೆಲೆಗಳನ್ನು ಕಳೆದುಕೊಂಡವರ ಪುನರ್‌ವಸತಿ ಮತ್ತು ಪುನರ್‌ನೆಲೆಯ ವಿಚಾರಗಳಿಗೆ ಅನ್ವಯಿಸುವ ಕರಡು ಮಸೂದೆ ನಮ್ಮ ಮುಂದಿದೆ.ಈಗಾಗಲೇ ಅಸಂಖ್ಯಾತ ತಿದ್ದುಪಡಿಗಳಿಗೆ ಒಳಗಾಗಿ, ಸದ್ಯ ಅನುಷ್ಠಾನದಲ್ಲಿರುವ 1894ರ ಭೂಸ್ವಾಧೀನ ಕಾಯ್ದೆಯ ಜಾಗದಲ್ಲಿ ಈ ಹೊಸ ಕಾಯ್ದೆ ಅನುಷ್ಠಾನಗೊಳ್ಳಲಿದೆ.ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಅವರು ಮಂಡಿಸಿದ್ದ `ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ನೆಲೆ ಮಸೂದೆ 2011 ಎನ್ನುವ ಈ ಕರಡು ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಈಗಾಗಲೇ ಅನುಮೋದಿಸಿದ್ದು ಲೋಕಸಭೆಯ ಮುಂದೆ ಬಂದಿದೆ.ಇಂಗ್ಲಿಷ್‌ನಲ್ಲಿರುವ ಈ ಕರಡು ಮಸೂದೆಯನ್ನು ಅಂತರ್ಜಾಲದಲ್ಲಿ ಪ್ರಕಟಿಸಿ 2011ರ ಆಗಸ್ಟ್ 31ರ ಒಳಗಾಗಿ ಸಾರ್ವಜನಿಕರ ಸಲಹೆ, ಆಕ್ಷೇಪಗಳನ್ನು ಆಹ್ವಾನಿಸಲಾಗಿತ್ತು. ಆದರೆ ಈ ಕರಡು ಮಸೂದೆ ಭೂ ಸ್ವಾಧೀನದಿಂದ ಬಾಧಿತರಾಗುವ `ಶ್ರೀ ಸಾಮಾನ್ಯ~ರನ್ನು ತಲುಪಲೇ ಇಲ್ಲ.ಸಮುದಾಯಗಳ ಕಾಳಜಿಗಳನ್ನು ನಿರ್ಲಕ್ಷಿಸುವ ಇದು  ಖಾಸಗಿ ಭೂ ಸ್ವಾಧೀನವನ್ನು ಕಾನೂನುಬದ್ಧಗೊಳಿಸುತ್ತದೆ; ಭೂಮಿ ಎಂಬುದು ಮಾರುಕಟ್ಟೆ ಸರಕಾಗಬೇಕೆಂಬ ಆಶಯ ಇಲ್ಲಿದ್ದು, ಭೂ ಸ್ವಾಧೀನ, ಮಾರಾಟ ಮತ್ತು ಕೊಂಡುಕೊಳ್ಳುವ ಪ್ರಕ್ರಿಯೆಗಳು ಸುಗಮವಾಗಿ ನಡೆಯಲು ದಾರಿ ಮಾಡಿಕೊಡುತ್ತದೆ ಎನ್ನುವುದು ರೈತರು ಮತ್ತು ಸಾಮಾಜಿಕ ಸೇವಾ ಸಂಘಟನೆಗಳ ಆರೋಪ.ಈ ಕರಡು ಮಸೂದೆಯಲ್ಲಿ ಖಾಸಗಿ ಕಂಪೆನಿಗಳಿಗೆ ಭೂ ಸ್ವಾಧೀನಕ್ಕೆ ಅನ್ವಯಿಸುವಂಥ ಅಂಶಗಳೇನಿವೆ? 1. ಖಾಸಗಿ ಕಂಪೆನಿಗಳು 100 ಎಕರೆಯವರೆಗೆ ಮುಕ್ತವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಬಹುದು. ನೂರು ಎಕರೆಯ ಮೇಲ್ಪಟ್ಟಾಗ ಮಾತ್ರ ಪುನರ್ವಸತಿ-ಪುನರ್‌ನೆಲೆಯ ಕಟ್ಟುಕಟ್ಟಳೆಗಳನ್ನು ಪೂರೈಸಬೇಕು ಎಂದು ಕರಡು ಮಸೂದೆ ಹೇಳುತ್ತದೆ.ಇದಕ್ಕಿರುವ ಟೀಕೆಗಳೆಂದರೆ, ಇಲ್ಲಿ ಕಂಪೆನಿಗಳು ತಾವು ಸ್ವಾಧೀನಪಡಿಸಿಕೊಳ್ಳಲು ಇಚ್ಛಿಸುವ ಭೂಮಿಯನ್ನು ನೂರು ಎಕರೆಗಿಂತ ಕಡಿಮೆಯ ಅನೇಕ ಕ್ಷೇತ್ರಗಳಾಗಿ ವಿಭಜಿಸಿ ವಿವಿಧ ಹಂತಗಳಲ್ಲಿ ಸಾವಿರಾರು ಎಕರೆ ಭೂಮಿಯನ್ನು ಕಾನೂನು ಬದ್ಧವಾಗಿ ಸ್ವಾಧೀನಪಡಿಸಿಕೊಳ್ಳಲು ಕರಡು ಮಸೂದೆ ಅನುವು ಮಾಡಿಕೊಡುತ್ತದೆ.

 

ಇನ್ನು, ನೂರು ಎಕರೆಗಿಂತ ಕಡಿಮೆ ವಿಸ್ತೀರ್ಣದಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳಿಗಂತೂ ಯಾವ ಅಡತಡೆಯೂ ಇಲ್ಲ. ಪರಿಹಾರ, ಪುನರ್ವಸತಿ ಹಾಗಿರಲಿ, ಪರಿಸರ ಮತ್ತು ಸಮುದಾಯಗಳ ಮೇಲಾಗುವ ಪರಿಣಾಮವನ್ನು ಪೂರ್ವಭಾವಿಯಾಗಿ ಅಂದಾಜಿಸುವುದಕ್ಕೆ ಸಂಬಂಧಿಸಿದ ಕಟ್ಟುಕಟ್ಟಳೆಗಳು ಕೂಡ ಅನ್ವಯವಾಗುವುದಿಲ್ಲ. ಈಗಾಗಲೇ ಇಂಥ ಕೈಗಾರಿಕೆಗಳು ಯಾರ ಮರ್ಜಿಗೂ ಒಳಪಡದೆ ಪರಿಸರ ಮಾಲಿನ್ಯಗೊಳಿಸುತ್ತಾ ಜನಜೀವನ ಅಸ್ತವ್ಯಸ್ತಗೊಳಿಸುತ್ತಿರುವ ನೂರಾರು ಉದಾಹರಣೆಗಳು ನಮ್ಮ ಮುಂದಿವೆ.  2. ಸರ್ಕಾರ ತನ್ನ ಸ್ವಂತ ಬಳಕೆಗಾಗಿ ಅಥವಾ `ಸಾರ್ವಜನಿಕ ಉದ್ದೆೀಶ~ಕ್ಕಾಗಿ ಖಾಸಗಿ ಕಂಪೆನಿಗಳಿಗೆ ನೀಡಲು ಎಷ್ಟಾದರೂ ಭೂಮಿ ಸ್ವಾಧೀನಪಡಿಸಿಕೊಳ್ಳಬಹುದು.

ಇಲ್ಲಿ ಸಾರ್ವಜನಿಕ ಉದ್ದೇಶ ಎನ್ನುವುದು ಮಿಲಿಟರಿ, ರಾಷ್ಟ್ರೀಯ ಭದ್ರತೆ, ಹೆದ್ದಾರಿ, ಕೈಗಾರಿಕೆ, ಬಡವರಿಗೆ ವಸತಿ, ಶಿಕ್ಷಣ-ಆರೋಗ್ಯ ಸಂಸ್ಥೆಗಳು, ಪ್ರಕೃತಿ ವಿಕೋಪದಿಂದುಂಟಾದ ಅಗತ್ಯಗಳ ಪೂರೈಕೆ ಇತ್ಯಾದಿಗಳಾಗಿರುತ್ತವೆ ಎಂದು ಮಸೂದೆ ಹೇಳುತ್ತದೆ. ಕಂಪೆನಿಗಳಿಗೆ ನೇರ ಸ್ವಾಧೀನಕ್ಕೆ 100 ಎಕರೆಯನ್ನು ಮಿತಿಗೊಳಿಸಿದ ಸರ್ಕಾರ ತಾನು ಮಾತ್ರ ಎಷ್ಟಾದರೂ ಭೂಮಿ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಇಲ್ಲಿ ಹೇಳುತ್ತದೆ. ಮಾತ್ರವಲ್ಲ, ಕೈಗಾರಿಕೆಗಳ ಸ್ಥಾಪನೆಯನ್ನೂ `ಸಾರ್ವಜನಿಕ ಉದ್ದೇಶ~ ಎಂದೇ ಪರಿಗಣಿಸುತ್ತದೆ. ಅಂದರೆ, ಕಂಪೆನಿಗಳಿಗೆ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಎಷ್ಟು ಭೂಮಿಯನ್ನಾದರೂ ಹಸ್ತಾಂತರ ಮಾಡಬಹುದು.ಖಾಸಗಿ ಕಂಪೆನಿಗಳಿಗೆ ಭೂ ಸ್ವಾಧೀನವನ್ನು ಒಂದು ಕಡೆ ಮಿತಿಗೊಳಿಸುತ್ತಲೇ ಮತ್ತೊಂದು ಕಡೆ ವ್ಯಾಪಕವಾದ ಭೂಮಿಯನ್ನು ಕಬಳಿಸಲು ಇರುವ ಅಡೆತಡೆಗಳನ್ನು ಕಾನೂನು ಬದ್ಧವಾಗಿ ತೆರವುಗೊಳಿಸುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ, ಈಗಾಗಲೇ ಕರ್ನಾಟಕ ಸರ್ಕಾರ `ಲ್ಯಾಂಡ್ ಬ್ಯಾಂಕ್~ಗಳನ್ನು ಸ್ಥಾಪಿಸಿ ಒಂದು ಲಕ್ಷಕ್ಕೂ ಹೆಚ್ಚು ಎಕರೆ ಜಮೀನನ್ನು ರೈತರಿಂದ ಖರೀದಿಸಿ ಇಟ್ಟಿದೆ.ನವೆಂಬರ್ 2009ರ ವಿಶ್ವ ಹೂಡಿಕೆದಾರರ ಸಮಾವೇಶದಲ್ಲಿ 3,93,000 ಕೋಟಿ ರೂಪಾಯಿಗಳ ಹೂಡಿಕೆಯ 389 ಒಪ್ಪಂದಗಳಿಗೆ (ಎಂಒಯು) 40 ಖಾಸಗಿ ಕಂಪೆನಿಗಳು ಮತ್ತು ಕೆಲ ಸಾರ್ವಜನಿಕ ವಲಯದ ಸಂಸ್ಥೆಗಳು ಸಹಿ ಹಾಕಿವೆ. ಲ್ಯಾಂಡ್ ಬ್ಯಾಂಕಿನಲ್ಲಿರುವ ಭೂಮಿಯನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವ ಕೆಲಸ ಈಗ ಭರದಿಂದ ನಡೆಯುತ್ತಿದ್ದು ಈ ವಿಚಾರದಲ್ಲಿ ಏಳಬಹುದಾದ ಯಾವುದೇ ತಕರಾರುಗಳಿಗೆ  ಈ ಕರಡು ಮಸೂದೆ ಕಾನೂನಿನ ರಕ್ಷಣೆ ಒದಗಿಸುತ್ತದೆ.3. ಕಂಪೆನಿಗಳು ನೂರು ಎಕರೆಗೂ ಮೇಲ್ಪಟ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳುವಾಗ ಶೇ 80ರಷ್ಟು ಭೂ ಹಿಡುವಳಿದಾರರ ಸಮ್ಮತಿ ಇರಬೇಕು. ಸರ್ಕಾರದ ವಿಚಾರದಲ್ಲಿ ಇದು ಅನ್ವಯವಾಗುವುದಿಲ್ಲ ಎಂದು ಮಸೂದೆ ಹೇಳುತ್ತದೆ.ಈ ಕಟ್ಟಳೆ ಸರ್ಕಾರ ಮಾಡಿಕೊಳ್ಳುವ ಭೂ ಸ್ವಾಧೀನಕ್ಕೆ ಅನ್ವಯಿಸದಿರುವಾಗ ಮತ್ತು ಸರ್ಕಾರ ತಾನು ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಕಂಪೆನಿಗಳಿಗೆ `ಸಾರ್ವಜನಿಕ ಉದ್ದೆೀಶ~ಗಳಿಗೆ ಬಳಸಲು ವರ್ಗಾಯಿಸಬಹುದೆಂಬ ಅವಕಾಶ ಇರುವಾಗ ಈ ಶೇ `80 ಸಮ್ಮತಿ~ ಎನ್ನುವುದು ಪ್ರಹಸನದಂತೆ ಕಾಣುತ್ತಿದೆ.4. ಕಂಪೆನಿಗಳು ಬಹುಬೆಳೆಯ, ನೀರಾವರಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಮಸೂದೆ ಹೇಳುತ್ತದೆ. ಇದು ಹೆಚ್ಚಿನ ಗೊಂದಲಕ್ಕೆ ಎಡೆಗೊಡುತ್ತದೆ. ಏಕೆಂದರೆ ನಮ್ಮಲ್ಲಿ ಮಳೆಯಾಶ್ರಿತ ಬೇಸಾಯ ನೂರಕ್ಕೆ ನೂರು ಭಾಗ ಬಹು ಬೆಳೆಯ ಬೇಸಾಯವೇ.

 

ಒಂದೇ ಭೂಮಿಯಲ್ಲಿ ಮುಂಗಾರು, ಹಿಂಗಾರು ಬೆಳೆಗಳನ್ನು ತೆಗೆಯುವುದು; ಮುಖ್ಯ ಬೆಳೆಯ ಜೊತೆ ಮಿಶ್ರ ಬೆಳೆ, ಸಾಲು ಬೆಳೆ, ಅಂಚಿನ ಬೆಳೆ, ರಿಲೇ ಬೆಳೆ ಹೀಗೆ ಹತ್ತಾರು ಥರದ ಬೆಳೆಗಳನ್ನು ಹಾಕುವ ಪದ್ಧತಿ ಜೀವಂತವಾಗಿದೆ. ಮಳೆಯಾಶ್ರಿತ ಏಕ ಬೆಳೆ ಜಮೀನು ನಮ್ಮಲ್ಲಿಲ್ಲ ಅನ್ನುವುದು ಸುಸ್ಪಷ್ಟ.ಏಕಬೆಳೆ ಪದ್ಧತಿ ಇರುವುದು ನೀರಾವರಿಯಲ್ಲಿ ಮಾತ್ರ. ಕರಡು ಮಸೂದೆಯ ಪ್ರಕಾರ ನೀರಾವರಿ ಜಮೀನಿಗೆ ಬಹುಬೆಳೆ ಅನ್ನುವುದು ಅನ್ವಯಿಸುವುದಿಲ್ಲ. ಹೀಗಾಗಿ ಇದರ ಒಟ್ಟು ಅರ್ಥ, `ಕೃಷಿ ಭೂಮಿಯನ್ನು ಸಾಧೀನಪಡಿಸಿಕೊಳ್ಳುವ ಹಾಗಿಲ್ಲ~. ಹಾಗಾದರೆ `ಬಹುಬೆಳೆಯ, ನೀರಾವರಿ..~ ಇತ್ಯಾದಿ ಹೇಳುವ ಬದಲು `ಕೃಷಿ ಭೂಮಿ~ ಎಂದು ಏಕೆ ನೇರವಾಗಿ ಹೇಳಿಲ್ಲ ಎಂಬುದು ಗೊಂದಲಕ್ಕೆ ಎಳೆಯುವ ವಿಚಾರ. ಅಷ್ಟಕ್ಕೂ ಸರ್ಕಾರ ಮಾಡಿಕೊಳ್ಳುವ ಭೂ ಸ್ವಾಧೀನಕ್ಕೆ ಇದು ಅನ್ವಯಿಸದಿರುವುದರಿಂದ ಇದು ಮತ್ತೊಂದು ಪ್ರಹಸನ. `ಸರ್ಕಾರ ಮತ್ತು ಖಾಸಗಿ ಕಂಪೆನಿಗಳು ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ~ ಎಂದು ಹೇಳಿದ್ದರೆ ಸಾಕಿತ್ತಲ್ಲವೇ?~5. ಕಂಪೆನಿಗಳು ಭೂ ಸ್ವಾಧೀನದ ಯಾವುದೇ ಹಂತದಲ್ಲಿ ಸರ್ಕಾರದ ಮಧ್ಯಪ್ರವೇಶವನ್ನು ಕೋರಬಹುದು. ಇದು ಕಂಪೆನಿಗಳ ದಾರಿಗೆ ಹೂ ಹಾಸುವ ವಿಚಾರವೇ. ಸರ್ಕಾರವೇ ಭೂಮಿ ಸ್ವಾಧೀನಪಡಿಸಿಕೊಂಡು ಖಾಸಗಿಯವರಿಗೆ ಕೊಡುವ ಅವಕಾಶ ಇರುವಾಗ ಇನ್ನು ಮಧ್ಯಪ್ರವೇಶದ ಮಾತು ಎಷ್ಟರದ್ದು!ಒಟ್ಟಾರೆ, ಇದು ವಿಪರೀತ ತಕರಾರು ಸೃಷ್ಟಿಸಿರುವ ವಿಷಯ- `ಸಾರ್ವಜನಿಕ ಉದ್ದೇಶ~ ಅನ್ನುವುದರ ವ್ಯಾಖ್ಯೆ.  ಕೈಗಾರಿಕೆಗಳನ್ನೂ `ಸಾರ್ವಜನಿಕ ಉದ್ದೇಶ~ದ ಅಡಿ ತಂದಿರುವುದು ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ `ವ್ಯಕ್ತಿಗಳು~ ಕೈಗೊಳ್ಳುವ ಬೇರೆ ಯಾವುದೇ ಯೋಜನೆಗಳು~ ಎಂದು ವ್ಯಾಖ್ಯಾನಿಸುವುದರ ಉದ್ದೇಶ ಸ್ಪಷ್ಟವಾಗಿಯೇ ಇದೆ. ಇಲ್ಲಿ `ವ್ಯಕ್ತಿಗಳು~ ಅನ್ನುವುದು ಖಾಸಗಿ ಎಂದಾಗುವುದರಿಂದ ಖಾಸಗಿ ಲಾಭವೂ `ಸಾರ್ವಜನಿಕ ಉದ್ದೇಶ~ವೆಂದೇ ಪರಿಗಣಿತವಾಗುತ್ತದೆ.

 

ಆದ್ದರಿಂದ `ಸಾರ್ವಜನಿಕ ಉದ್ದೇಶ~ದ ಪಟ್ಟಿಯಿಂದ ಇಂಥ ಸಮಸ್ಯಾತ್ಮಕ ಅಂಶಗಳನ್ನು ತೆಗೆದುಹಾಕಿ  ಖಾಸಗಿಯವರಿಗೆ ಸರ್ಕಾರ ತಾನು ಸ್ವಾಧೀನಪಡಿಸಿಕೊಂಡ ಭೂಮಿಯನ್ನು  ಹಸ್ತಾಂತರಿಸುವಂತಿಲ್ಲ ಎಂಬ ನಿಲುವನ್ನು ಸರ್ಕಾರ ತಳೆಯಬೇಕಾಗಿದೆ.ಹಾಗೆಯೇ ಈ ಶೇ 80 ಜನರ ಸಮ್ಮತಿಯ ವಿಚಾರ. ಇದು ಸರ್ಕಾರದ ಭೂ ಸ್ವಾಧೀನಕ್ಕೂ ಅನ್ವಯಿಸಬೇಕು. `ಸಾರ್ವಜನಿಕ ಉದ್ದೇಶ~ ಎಂಬ ಹಣೆಪಟ್ಟಿಯಲ್ಲಿ ಸರ್ಕಾರ ಇಷ್ಟಬಂದ ಹಾಗೆ ಭೂ ಸ್ವಾಧೀನಪಡೆದುಕೊಳ್ಳುವ ಹಾಗಿಲ್ಲ. ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಪ್ರತಿ ಎಕರೆ ಭೂಮಿ ಕೂಡ ಪುನರ್ವಸತಿ- ಪುನರ್ ನೆಲೆಯ ಕಟ್ಟುಪಾಡಿಗೆ ಒಳಪಡಬೇಕು. ಅಂದಾಗ ಮಾತ್ರ, ಭೂಮಿ ಕಳೆದುಕೊಂಡವರಿಗೆ ನ್ಯಾಯ ಒದಗೀತು.ಕಾನೂನಿನ ವಿಚಾರದಲ್ಲಿ ಇಲ್ಲಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿದೆ. ಉದಾಹರಣೆಗೆ, ಪ್ರಸ್ತುತ ಕಾಯಿದೆಯು ಭೂ ಸ್ವಾಧೀನಕ್ಕೆ ಸಂಬಂಧಿಸಿ ಈಗಾಗಲೇ ಅನುಷ್ಠಾನದಲ್ಲಿರುವ ಎಸ್‌ಇಜಡ್, ಭದ್ರತೆ, ರೈಲ್ವೆ, ಇಂ 1996 ಮತ್ತು 2006ರ ಅರಣ್ಯ ಹಕ್ಕು ಕಾಯಿದೆಗಳೇ ಮುಂತಾದ ಇನ್ನೂ 18 ಕಾನೂನುಗಳ ಮೇಲೆ ತನ್ನ ಸರ್ವಶ್ರೇಷ್ಠತೆ ಹೊಂದಿರುತ್ತದೆ ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದೆ.

 

ಆದರೆ ಕರಡು ಮಸೂದೆಯಲ್ಲಿರುವ ಅನೇಕ ಅಂಶಗಳು ಮೇಲಿನ ಕಾನೂನುಗಳಲ್ಲಿ ಅಡಕವಾಗಿರುವ ಅಂಶಗಳೊಂದಿಗೆ ತಾಳೆಯಾಗುವುದಿಲ್ಲ. ಉದಾಹರಣೆಗೆ, ಇಂ ಕಾನೂನಿನಲ್ಲಿ ಗ್ರಾಮಸಭೆಗಳಿಗೆ ತಮ್ಮ ಪ್ರದೇಶದ ಭೂಮಿಯ ಮೇಲೆ ಸಂಪೂರ್ಣ ಮಾಲೀಕತ್ವ ಇದ್ದು ಪ್ರಸ್ತುತ ಕರಡು ಮಸೂದೆ ಇದಕ್ಕೆ ವಿರುದ್ಧವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.