ಗುರುವಾರ , ಮೇ 26, 2022
29 °C
ಫಲಕಾರಿಯಾಗದ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆ ಸಭೆ

ಭೂಸ್ವಾಧೀನ ಕೈಬಿಡಲು ರೈತರ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೆಳಗಾವಿ- ಗೋವಾ ರಾಷ್ಟ್ರೀಯ ಹೆದ್ದಾರಿಗೆ ಹಲಗಾ- ಮಚ್ಛೆ ನಡುವೆ ಬೈಪಾಸ್ ರಸ್ತೆ ನಿರ್ಮಾಣದಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನಿಗದಿಪಡಿಸಲು ಜಿಲ್ಲಾಧಿಕಾರಿಕಾರಿ ಎನ್. ಜಯರಾಮ್ ಮಧ್ಯಸ್ಥಿಕೆಯಲ್ಲಿ ವಡಗಾವಿಯ ಬನಶಂಕರಿ ದೇವಸ್ಥಾನದಲ್ಲಿ ಮಂಗಳವಾರ ನಡೆದ ಸಭೆಯು ಫಲಕಾರಿಯಾಗಿಲ್ಲ.ತಮ್ಮ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಹಲವು ರೈತರು, ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಭೂಸ್ವಾಧೀನ ಪ್ರಕ್ರಿಯೆಯನ್ನು ಈ ಹಂತದಲ್ಲಿ ಕೈಬಿಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.`ರಾಷ್ಟ್ರೀಯ ಹೆದ್ದಾರಿ 4 ಹಾಗೂ 4ಎ ನಡುವೆ ಸಂಪರ್ಕ ಕಲ್ಪಿಸಲು ಬೈಪಾಸ್ ರಸ್ತೆ ನಿರ್ಮಿಸಲು ಬೆಳಗಾವಿ, ವಡಗಾವಿ, ಶಹಾಪುರ, ಅನಗೋಳ, ಖಾಸಬಾಗ, ಮಚ್ಚೆ ಮಾಧವಪುರ, ಮಜಗಾಂವದಲ್ಲಿ ಒಟ್ಟು 124 ಎಕರೆಯನ್ನು ಭೂಸ್ವಾಧೀನ ಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಂದಾಗಿದೆ. ಭೂಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಪರಿಹಾರವನ್ನೂ ನಿಗದಿಕೊಳಿಸಲಾಗಿದೆ. ಅದಕ್ಕೆ ಯಾರೂ ತಕರಾರು ಅರ್ಜಿಯನ್ನು ಸಲ್ಲಿಸಿಲ್ಲ. ಹೀಗಾಗಿ ಈ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ಸಾಧ್ಯವಿಲ್ಲ' ಎಂದು ಜಿಲ್ಲಾಧಿಕಾರಿಗಳು ರೈತರಿಗೆ ತಿಳಿಸಿದರು.`ರೈತರ ಜಮೀನಿಗೆ ಪ್ರದೇಶಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ 11 ಲಕ್ಷದಿಂದ 18 ಲಕ್ಷ ರೂಪಾಯಿವರೆಗೆ ಪರಿಹಾರವನ್ನು ಪ್ರಾಧಿಕಾರವು ನಿಗದಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಯಾರೂ ತರಕಾರು ಅರ್ಜಿ ಸಲ್ಲಿಸಿಲ್ಲ ಎಂದ ಮೇಲೆ ಈ ಬೆಲೆಯನ್ನು ಒಪ್ಪಿಕೊಂಡಂತಾಗಿದೆ. ಈಗ ನನ್ನನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಿರುವುದರಿಂದ ಸ್ವಲ್ಪ ಹೆಚ್ಚಿನ ಪರಿಹಾರದ ಕುರಿತು ಬೇಡಿಕೆ ಇಡಲು ಅವಕಾಶವಿದೆ. ಅರ್ಜಿ ಸಲ್ಲಿಸಿದರೆ, ಪ್ರಾಧಿಕಾರದ ಗಮನಕ್ಕೆ ತರಲಾಗುವುದು' ಎಂದು ಅವರು ತಿಳಿಸಿದರು.ಆದರೆ, ಮುಖಂಡರಾದ ರಮಾಕಾಂತ ಕೊಂಡುಸ್ಕರ್, ಭರತ್ ಜಾಧವ್ ಅವರು ಮಾತನಾಡಿ, `ರೈತರು ಬೈಪಾಸ್ ರಸ್ತೆ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಜಮೀನು ಕೊಡುವುದಿಲ್ಲ. ರಸ್ತೆ ನಿರ್ಮಾಣಕ್ಕೆ ಪರ್ಯಾಯ ಮಾರ್ಗ ನೋಡಿಕೊಳ್ಳಿ' ಎಂದು ಹೇಳಿದರು.`ಹೊಸದಾಗಿ ರಸ್ತೆ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಳ್ಳುವ ಬದಲು ಇದೇ ಮಾರ್ಗದಲ್ಲಿರುವ ಹಳೆ ರಸ್ತೆಯನ್ನು ಅಗಲಗೊಳಿಸಿದರೆ, ಕೇವಲ 40 ಎಕರೆ ಭೂಮಿ ಮಾತ್ರ ಹೋಗುತ್ತದೆ. ಈ ಪ್ರದೇಶದಲ್ಲಿ ಈಗಾಗಲೇ ಯಾವುದೇ ಬೆಳೆಯನ್ನು ಬೆಳೆಯುತ್ತಿಲ್ಲ. ಇದನ್ನು ಸ್ವಾಧೀನ ಪಡಿಸಿಕೊಂಡು ರಸ್ತೆ ನಿರ್ಮಾಣ ಮಾಡಿರಿ' ಎಂದು ರೈತರು ಒತ್ತಾಯಿಸಿದರು.`ಈ ಬಗ್ಗೆ ಪ್ರಾಧಿಕಾರದ ಗಮನಕ್ಕೆ ತರುತ್ತೇನೆ. ಆದರೆ, ಇದಕ್ಕೆ ಪ್ರಾಧಿಕಾರವು ಒಪ್ಪದಿದ್ದರೆ ಭೂಸ್ವಾಧೀನ ಪಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ' ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಇದರಿಂದ ಕೆರಳಿದ ಹಲವು ರೈತರು ಭೂಸ್ವಾಧೀನ ಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಕೂಗುತ್ತ ಸಭೆಯಿಂದ ಹೊರ ಹೋದರು.ಹಲಗಾ, ಮಾಧವಪುರ, ವಡಗಾವಿ, ಶಹಾಪುರ, ಮಜಗಾವ್, ಅನಗೋಳ, ಖಾಸಬಾಗ ಮತ್ತು ಮಚ್ಛೆ ಗ್ರಾಮದ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ಉಪವಿಭಾಗಾಕಾರಿ ಶಶಿಧರ ಬಗಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.