ಸೋಮವಾರ, ಸೆಪ್ಟೆಂಬರ್ 28, 2020
21 °C

ಭೂ ವಂಚನೆ ತಡೆಗೆ ನೂತನ ನೋಂದಣಿ ನಿಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂ ವಂಚನೆ ತಡೆಗೆ ನೂತನ ನೋಂದಣಿ ನಿಯಮ

ವಿಜಾಪುರ: ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಲೀಕರ ಗಮನಕ್ಕೆ ತರದೇ ನಿವೇಶನ, ಜಮೀನುಗಳನ್ನು ನೋಂದಾಯಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೋಂದಣಿ ಪದ್ಧತಿಯ ಆಸ್ತಿ ದಾಖಲೆಗಳಲ್ಲಿ ಮಾಲೀಕರ ಭಾವಚಿತ್ರ ಅವಳವಡಿಸುವ ನೂತನ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸೂಚಿಸಿದರು.ಸೋಮವಾರ ಇಲ್ಲಿ ಜರುಗಿದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.ನಿವೇಶನ ಹಾಗೂ ಜಮೀನುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಕಚೇರಿಯಲ್ಲಿ ನಕಲಿ ವ್ಯಕ್ತಿಗಳ ಹೆಸರಿಗೆ ಆಸ್ತಿ ನೊಂದಾವಣೆಯಾಗುತ್ತಿವೆ.ಈ ಕಾರ್ಯದಲ್ಲಿ ಅನಧಿಕೃತ ವ್ಯಕ್ತಿಗಳ ಜೊತೆಗೆ ನೋಂದಣಿ ಕಚೇರಿ ಮತ್ತು ತಹಶೀಲ್ದಾರ ಕಚೇರಿಗಳಲ್ಲಿ ಕೆಲವರು ಸಹಕರಿಸುತ್ತಿದ್ದಾರೆ. ಯಾರದೋ ಆಸ್ತಿ, ಇನ್ನಾರದೋ ಹೆಸರಿಗೆ ನೋಂದಣಿ ಮಾಡಲಾಗುತ್ತದೆ. ಇದರಲ್ಲಿ ನನ್ನ ತಂಗಿಯ ಗಂಡನ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಪರಭಾರೆ ಮಾಡಲಾಗಿದೆ. ಇದು ಮಾಲೀಕರ ಗಮನಕ್ಕೆ ಬಂದಿಲ್ಲ.ಇಂತಹ ಹಲವು ಪ್ರಕರಣಗಳು ಜಿಲ್ಲೆಯಾದ್ಯಂತ ವಿಶೇಷವಾಗಿ ವಿಜಾಪುರ, ಇಂಡಿ, ಸಿಂದಗಿ ಭಾಗದಲ್ಲಿ ನಡೆಯುತ್ತಿವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಭೂ ವಂಚನೆಯನ್ನು ಗಂಭೀರವಾಗಿ ಪರಿಗಣಿಸಿ ಕನಿಷ್ಠ ಪಹಣಿ (ಉತಾರೆ) ಯಲ್ಲಿ ಭೂ ಮಾಲೀಕರ ಭಾವಚಿತ್ರವಿರುವ ಪದ್ಧತಿಯನ್ನಾದರೂ ಜಾರಿಗೆ ತನ್ನಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.ಪುನರ್ ಸಮೀಕ್ಷೆಯ ಮೂಲಕ ನಿವೇಶನ ಮತ್ತು ಜಮೀನಿನ ಮಾಲೀಕರನ್ನು ಗುರುತಿಸಿ ಬಯೊಮೆಟ್ರಿಕ್ ಪದ್ಧತಿಯಲ್ಲಿ ಮಾಲೀಕರ ಭಾವಚಿತ್ರ ಹಾಗೂ ಜೈವಿಕ ವಿವರಗಳನ್ನು ಅವರ ಖಾತೆಯ ಪಹಣಿಯಲ್ಲಿ ಗಣಕೀಕರಣಗೊಳಿಸುವ ಹೊಸ ಪದ್ಧತಿಯನ್ನು ಸರ್ಕಾರ ಪ್ರಾಯೋಗಿಕವಾಗಿ ಬೆಳಗಾವಿ ಜಿಲ್ಲೆಯಲ್ಲಿ ಪೈಲಟ್ ಯೋಜನೆಯಾಗಿ ಅನುಷ್ಠಾನಗೊಳಿಸಿದೆ.ಇದೇ ಮಾದರಿಯಲ್ಲಿ ವಿಜಾಪುರ ಜಿಲ್ಲೆಗೂ ಪೈಲಟ್ ಯೋಜನೆ ವಿಸ್ತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಅಲ್ಲಿಯವರೆಗೂ  ಭೂ ವಂಚನೆಯ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಿಮಿನಲ್ ಮೂಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಳಸದ ತಿಳಿಸಿದರು.ಕಾಲಮಿತಿಯೊಳಗೆ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸದೇ ಹಳೆಯ ಕೆಲಸಗಳಿಗೆ ಹೆಚ್ಚುವರಿ ಅನುದಾನ ಬೇಡಿಕೆ ಸಲ್ಲಿಸುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ  ಕಾರ್ಯವೈಖರಿಗೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂದಿರಾ ಆವಾಸ್ ಯೋಜನೆಯಡಿ 2011-12ನೇ ಸಾಲಿನಲ್ಲಿ 4981 ಮನೆಗಳು ಮಂಜೂರಾಗಿದ್ದು, 250 ಮನೆಗಳು ಪೂರ್ಣಗೊಂಡಿವೆ. 1629 ಮನೆಗಳು ವಿವಿಧ ಹಂತದಲ್ಲಿವೆ. 3102 ಮನೆಗಳು ಇನ್ನೂ ಆರಂಭಿಸಿಲ್ಲ. 2011-12ನೇ ಸಾಲಿನಲ್ಲಿ 8616 ಮನೆಗಳು ಮಂಜೂರಾಗಿವೆ. ಈವರೆಗೆ 53 ಮನೆಗಳು ಪೂರ್ಣಗೊಂಡಿವೆ. 1235 ಮನೆಗಳು ನಿರ್ಮಾಣದ ವಿವಿಧ ಹಂತದಲ್ಲಿವೆ. 8242 ಮನೆಗಳನ್ನು ಇನ್ನೂ ಆರಂಭಿಸಿರುವುದಿಲ್ಲ. 2012-13ನೇ ಸಾಲಿನಲ್ಲಿ 4975ಮನೆಗಳ ನಿರ್ಮಾಣದ ಗುರಿ ಇದೆ. 425 ಮನೆ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗಿದೆ. ಈ ಮನೆ ಕಟ್ಟಡ ಇನ್ನೂ ಆರಂಭಿಸಿರುವುದಿಲ್ಲ. ನೀರಿನ ಕೊರತೆಯೇ ಕಾಮಗಾರಿ ಆರಂಭಿಸದೇ ಇರಲು ಕಾರಣ ಎಂದು ಉಸ್ತುವಾರಿ ಅಧಿಕಾರಿ ನಿಂಗಪ್ಪ ಸಭೆಗೆ ವಿವರಿಸಿದರು. ಇದರಿಂದ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿ ಮನೆ ಕಟ್ಟಲು ನೀರಿಲ್ಲ ಎಂದು ನೆಪ ಹೇಳುವುದು ಸರಿಯಲ್ಲ. ಬಡವರಿಗಾಗಿ ನಿರ್ಮಾಣ ಮಾಡುವ ಮನೆ, ಯಾವುದೇ ಕಾರಣಕ್ಕೂ ಲ್ಯಾಪ್ಸ್ ಆಗಬಾರದು. ಗಂಭೀರವಾಗಿ ಪರಿಗಣಿಸಿ ಮನೆ ನಿರ್ಮಾಣ ಮಾಡಿ ಎಂದು ಸೂಚಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ  ಸಾವಿತ್ರಿ ಅಂಗಡಿ, ಜಾಗೃತ ಸಮಿತಿ ಸದಸ್ಯರಾದ ಶಿವಾನಂದ ಅವಟಿ, ಶಿವಾನಂದ ಕಲ್ಲೂರ, ರುದ್ರಗೌಡ, ಎಂ.ಎಲ್. ಕಿರಣರಾಜ್, ಶಾರದಾ ಬಸವರಾಜ ಹಿರೇಮಠ,ಜಿ.ಪಂ. ಸಿಇಒ ಗುತ್ತಿ ಜಂಬುನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.