ಸೋಮವಾರ, ಏಪ್ರಿಲ್ 12, 2021
24 °C

ಭೈರವೇಶ್ವರನಿಗೆ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ಮಹಾಶಿವರಾತ್ರಿ ಅಂಗವಾಗಿ ಕುಮಟಾದ ಪ್ರಸಿದ್ಧ ಯಾತ್ರಾ ಸ್ಥಳವಾದ ಯಾಣದ ಭೈರವೇಶ್ವರ ದೇವಾಲಯಲ್ಲಿ ಸಾವಿರಾರು ಭಕ್ತರು ಭಕ್ತಿಯಿಂದ ಪೂಜೆ ಸಲ್ಲಿಸಿದರು.ಬುಧವಾರ ಬೆಳಗಿನ ಜಾವದಿಂದಲೇ ಯಾಣ ಸುತ್ತಲಿನ ಸುಮಾರು 16 ಹಳ್ಳಿಗಳ ಭಕ್ತರು ಸೈಕಲ್ ಹಾಗೂ ವಾಹನಗಳಲ್ಲಿ ಯಾಣಕ್ಕೆ ತೆರಳಿ ಭೈರವೇಶ್ವರನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.ಹಿಂದೆ ಯಾಣಕ್ಕೆ ಸರಿಯಾದ ರಸ್ತೆ ಇಲ್ಲದ ಸಮಯದಲ್ಲಿ ಮಹಾಶಿವರಾತ್ರಿಯಂದು ಬೆಳಗಿನ ಜಾವಕ್ಕೆಲ್ಲ ಎದ್ದು ಭಕ್ತಾದಿಗಳು ಕಾಲ್ನಡಿಗೆ ಮೂಲಕ ಯಾಣಕ್ಕೆ ತೆರಳಿ ಭೈರವೇಶ್ವರನ ಪೂಜೆ ಸಲ್ಲಿಸುತ್ತಿದ್ದರು. ಅಳಕೋಡ ಪಂಚಾಯಿತಿ ವ್ಯಾಪ್ತಿಗೆ ಬರುವ ಸುಮಾರು 16 ಗ್ರಾಮಗಳ ಜನರಿಗೆ ಯಾಣದ ಭೈರವೇಶ್ವರ ಆರಾಧ್ಯ ದೈವವಾಗಿದ್ದಾನೆ.ಶಿವನನ್ನು ಬೆನ್ನಟ್ಟಿ ಬಂದ ಭಸ್ಮಾಸುರನನ್ನು ಸಂಹರಿಸಲು ಮಹಾ ವಿಷ್ಣು ಮೋಹಿನಿಯ ರೂಪ ತಾಳಿ ನೃತ್ಯಗೈದು ಭಸ್ಮಾಸುರ ಉರಿದು ಹೋಗುವಂತೆ ಮಾಡಿದ ಕುರುಹಾಗಿ ಯಾಣದ ಮಣ್ಣೆಲ್ಲ ಈಗಲೂ ಸುಟ್ಟ ಮಣ್ಣಿನಂತೆ ಕಡುಗಪ್ಪಾಗಿದೆ ಎಂದು ಸಾಂತೂರಿನ ಎಸ್.ಎಂ. ಭಟ್ಟ ತಿಳಿಸುತ್ತಾರೆ. ಶಿವನ ಪ್ರತೀಕವಾಗಿ ಬೃಹತ್ ಭೈರವೇಶ್ವರ ಶಿಖರವಿದ್ದರೆ, ಭಸ್ಮಾಸುರನನ್ನು ಸಂಹರಿಸಿದ ಮಹಾವಿಷ್ಣು ಮೋಹಿನಿ ರೂಪ ತಳೆದ ಸಂಕೇತವಾಗಿ ಆಕಾಶಕ್ಕೆ ಚಾಚಿಕೊಂಡಿರುವಂತಿರುವ ಮೋಹಿನಿ ಶೀಖರವಿದೆ. ಯಾಣಕ್ಕೆ ಹೋದ ಭಕ್ತಾದಿಗಳಿಂದ ದೇವಾಲಯ ಆವಾರದಲ್ಲಿ ಮೈಲಿಗೆಯಾದರೆ ಶಿಖರಗಳಿಗೆ ಕಟ್ಟಿದ ಹೆಜ್ಜೆನು ಹುಳಗಳು ಕಚ್ಚುತ್ತವೆ ಎಂಬುದು ಪ್ರತೀತಿ.ಬಸ್ ಸೌಕರ್ಯ: ಮಹಾಶಿವರಾತ್ರಿ ಅಂಗವಾಗಿ ಯಾಣ ಹಾಗೂ ಗೋಕರ್ಣಕ್ಕೆ ಬೆಳಗಿನ ಜಾವ ಆರರಿಂದಲೇ ಕುಮಟಾ ಬಸ್ ನಿಲ್ದಾಣದಿಂದ ಪ್ರತಿ ಅರ್ಧ ಗಂಟೆಗೊಂದ ಬಸ್ ವ್ಯವಸ್ಥೆ ಏರ್ಪಡಿಸಲಾಗಿದೆ. ಜಾತ್ರೆಯ ಉದ್ದೇಶಕ್ಕಾಗಿಯೇ ಹೆಚ್ಚುವರಿಯಾಗಿ 20 ವಿಶೇಷ ಬಸ್‌ಗಳನ್ನು ಬಿಡಲಾಗಿದೆ. ವಿಶೇಷ ಬಸ್‌ಗಳಿಗೆ ಶೇ. 10 ರಷ್ಟು  ಶುಲ್ಕ ಹೆಚ್ಚಿಸಲಾಗಿದೆ. ಶಿರಸಿ, ಅಂಕೋಲಾ, ಹೊನ್ನಾವರ, ಭಟ್ಕಳದಿಂದಲೂ ಯಾಣಕ್ಕೆ ಬಸ್ ಬಿಡಲಾಗಿದೆ ಎಂದು ಕುಮಟಾ ಡಿಪೋ ಮ್ಯಾನೇಜರ್ ಪ್ರಕಾಶ ನಾಯ್ಕ ತಿಳಿಸಿದ್ದಾರೆ.ವಿವಿಧೆಡೆ ಶಿವಪೂಜೆ : ಶಿವರಾತ್ರಿ ಅಂಗವಾಗಿ ಕುಮಟಾದ ಕುಂಭೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವನ ಆತ್ಮಲಿಂಗದ ಒಂದು ಭಾಗ ಇರುವ ಧಾರೇಶ್ವರದ ಧಾರಾನಾಥ ದೇವಾಲಯದಲ್ಲಿ ಶಿವನ ದರ್ಶನಕ್ಕೆ ಭಕ್ತಾದಿಗಳ ದೊಡ್ಡ ಸಾಲೇ ಏರ್ಪಟ್ಟಿತ್ತು. ಕತಗಾಲದ ಶಂಭುಲಿಂಗೇಶ್ವರ ದೇವಾಲಯ, ಶಿರಗುಂಜಿ ಈಶ್ವರ ದೇವಾಲಯ, ಕಲ್ಲಬ್ಬೆ ಈಶ್ವರ ದೇವಾಲಯಗಳಲ್ಲಿ ಭಕ್ತರು ಶಿವರಾತ್ರಿ ಪೂಜೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.