ಭಾನುವಾರ, ಜುಲೈ 25, 2021
21 °C

ಭ್ರಮೆ ಬಿಡಿ, ಕನ್ನಡ ಬಳಸಿ: ತಾಯಂದಿರಿಗೆ ಜಯಾ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಮೆ ಬಿಡಿ, ಕನ್ನಡ ಬಳಸಿ: ತಾಯಂದಿರಿಗೆ ಜಯಾ ಕಿವಿಮಾತು

ಶಿವಮೊಗ್ಗ: ಕನ್ನಡ ಬಳಕೆ ಮಾಡದ ತಾಯಂದಿರಿಗೆ ಚುರುಕು, ಮಹಿಳೆಯರ ಸ್ಥಾನಮಾನದ ಬಗ್ಗೆ ಕಾಳಜಿ, ತವರಿನ ಬಗ್ಗೆ ಮೋಹ, ಪ್ರತಿಭಾ ಪಲಾಯನದ ವಿರುದ್ಧ ಗುಡುಗು...ಇವು ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಜಿ.ವಿ. ಜಯಾ ರಾಜಶೇಖರ್ ಅವರ ಅಧ್ಯಕ್ಷೀಯ ಭಾಷಣದಲ್ಲಿ ವ್ಯಕ್ತಪಡಿಸಿದ ಕಾಳಜಿಗಳು.    ಶನಿವಾರ ಕುವೆಂಪು ರಂಗಮಂದಿರದ ಪ್ರೊ.ಬಿ. ಕೃಷ್ಣಪ್ಪ ವೇದಿಕೆಯಲ್ಲಿ ಆರು ಪುಟದ ಸಿದ್ಧಬರಹವನ್ನು ಓದಿದ ಅವರು, ‘ಭ್ರಮೆ ಬಿಡಿ, ಕನ್ನಡ ಭಾಷೆ ಬಳಸಿ’ ಎಂದು ಕನ್ನಡದ ತಾಯಂದಿರಿಗೆ ನೇರವಾಗಿ ಹೇಳಿದರು.

ಕನ್ನಡ ಬಳಸಿದರೆ ಸಣ್ಣರಾಗುತ್ತೇವೆಂಬ ಭ್ರಮೆಯಿಂದ ಹೊರಬನ್ನಿ. ಇಂದು ಕನ್ನಡ ಭಾಷೆಯೇ ಕಣ್ಮರೆಯಾಗುವ ಪರಿಸ್ಥಿತಿ ಬಂದಿದೆ. ಭಾಷೆ ಸಾಯುವುದೆಂದರೆ ನೆಲದ ಸಂಸ್ಕೃತಿ ಸತ್ತಂತೆ. ಮೊಟ್ಟಮೊದಲು ತಾಯಂದಿರು ಎಚ್ಚೆತ್ತುಕೊಳ್ಳಬೇಕು ಎಂದರು.ಇಂದು ಸರ್ವವ್ಯಾಪಿಯಾಗಿರುವ ಇಂಗ್ಲಿಷ್ ಭಾಷೆಯನ್ನು ವ್ಯವಹಾರ ಭಾಷೆಯನ್ನಾಗಿರಿಸಿಕೊಂಡು ಮಾತೃಭಾಷಾ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ಕಲಿಕಾ ವಿಧಾನವನ್ನು ಸರ್ಕಾರ ಕಡ್ಡಾಯ ಮಾಡಬೇಕು ಎಂದು ಸಲಹೆ ಮಾಡಿದರು.ಇಂದು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರು ಕನ್ನಡ ಮಾಧ್ಯಮದಲ್ಲಿ ಕಲಿತವರು. ಸಾಧನೆಗೆ ಕನ್ನಡ ಮಾಧ್ಯಮ ಅಡ್ಡಿಯಲ್ಲ. ಎಲ್ಲದಕ್ಕೂ ಇಚ್ಛಾಶಕ್ತಿ ಬೇಕು ಎಂದು ಯುವಕರಿಗೆ ಸಲಹೆ ಮಾಡಿದರು.ಯುವಶಕ್ತಿಯ ಪ್ರತಿಭಾ ಪಲಾಯನದಿಂದ ಕನ್ನಡದ ತಂದೆ-ತಾಯಿಗಳು ವೃದ್ಧಾಶ್ರಮ ಸೇರುವಂತಾಗಿದೆ. ತಾವು ಗಳಿಸಿದ ಜ್ಞಾನದ ಸದುಪಯೋಗ ನಮ್ಮ ದೇಶಕ್ಕೆ ಆಗಲಿ ಎಂಬ ಉದಾತ್ತಭಾವದಿಂದ ಮಾತೃಭೂಮಿಗೆ ಹಿಂತಿರುಗಬೇಕು ಎಂದು ಯುವಜನರಿಗೆ ಕರೆ ನೀಡಿದರು.ಪ್ರಾಥಮಿಕ ಶಾಲೆಗಳಲ್ಲಿ ನೀತಿಪಾಠಗಳ ತರಗತಿ ಇರುವಂತೆ ನೋಡಿಕೊಳ್ಳಬೇಕು. ಅಲ್ಲದೇ, ಹಳಗನ್ನಡ ಕಾವ್ಯಗಳ ಆರಿಸಿದ ಭಾಗಗಳನ್ನು ಪಠ್ಯಪುಸ್ತಕಗಳಲ್ಲಿ ಕಡ್ಡಾಯವಾಗಿ ಸೇರಿಸಬೇಕು ಎಂದು ಸಲಹೆ ಮಾಡಿದರು.ಹೆಣ್ಣುಮಕ್ಕಳ ವಿಚಾರದಲ್ಲಿ ಸಮಾಜದ ದೃಷ್ಟಿಕೋನದ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಅವರು, ಹೆಣ್ಣುಮಕ್ಕಳಿಗೆ ಸಮಾನವಾಗಿ ಸಿಗಬೇಕಾದ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. 12ನೇ ಶತಮಾನದಲ್ಲಿ ಬಸವಣ್ಣನ ಅನುಭವ ಮಂಟಪದಲ್ಲಿದ್ದ ಸ್ತ್ರೀ-ಪುರುಷ ಸಮಾನತೆ ನಮಗಿಂದು ಮಾದರಿಯಾಗಬೇಕು. ಹೆಣ್ಣುಮಕ್ಕಳ ರಕ್ಷಣೆಗೆ ಕಾನೂನು ಇದ್ದರೂ ಅದರ ದುರುಪಯೋಗವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ವ್ಯಂಗ್ಯ ಬೇಡ

ಮಹಿಳೆಯರು ರಚಿಸುವ ಸಾಹಿತ್ಯವನ್ನು ಓದದೆ, ವಿಮರ್ಶಿಸದೆ, ವ್ಯಂಗ್ಯವಾಡುವ ಪ್ರವೃತ್ತಿ ಸಾಹಿತ್ಯ ವಲಯದಲ್ಲಿದೆ. ಇಂದು ಸಾಮಾಜಿಕ, ವೈಜ್ಞಾನಿಕ, ಶೈಕ್ಷಣಿಕ, ಆಧ್ಯಾತ್ಮಿಕ ಮುಂತಾಗಿ ಹಲವು ಪ್ರಕಾರಗಳಲ್ಲಿ ಮಹಿಳೆಯರು ಸಾಹಿತ್ಯ ರಚನೆ ಮಾಡಿದ್ದಾರೆ. ಎಲ್ಲಾ ವಿಷಯಗಳಲ್ಲೂ ಪೂರಕ ಸಾಹಿತ್ಯ ರಚಿಸಿರುವುದನ್ನು ಗಮನಿಸಬೇಕು ಎಂದು ವಿಮರ್ಶಕರನ್ನು ಸೂಚ್ಯವಾಗಿ ಚುಚ್ಚಿದರು.‘ಕೆಳದಿ ಉತ್ಸವ ಮಾಡಿ’

 ವಿಜಯನಗರ ಸಾಮ್ರಾಜ್ಯದ ಎರಡು ಕೂಸುಗಳು ಕೆಳದಿ ಸಂಸ್ಥಾನ ಮತ್ತು ಮೈಸೂರು ಸಂಸ್ಥಾನ. ಹೈದರ್‌ಅಲಿ ಕಾಲದಲ್ಲಿ ಕೆಳದಿ ಮೂಲೆಗುಂಪಾಯಿತು. ಮೈಸೂರು ಬ್ರಿಟಿಷ್ ಆಡಳಿತದಲ್ಲಿ ತಲೆಎತ್ತಿತು. ಇಂದು ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ ವಿಜೃಂಭಣೆಯಿಂದ ನಡೆಯತ್ತಿದೆ. ಆದರೆ, ಕೆಳದಿ ಇದರಿಂದ ವಂಚಿತವಾಗಿದೆ. ಸರ್ಕಾರ, ಕೆಳದಿ ಉತ್ಸವವನ್ನು ವೈಭವದಿಂದ ನಡೆಸಬೇಕಿದೆ ಎಂದು ಸಲಹೆ ಮಾಡಿದರು.ಸಮ್ಮೇಳನವನ್ನು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಉದ್ಘಾಟಿಸಿದರು.ನಿಕಟಪೂರ್ವ ಅಧ್ಯಕ್ಷ ನಾ. ಡಿಸೋಜ ಸಮ್ಮೇಳನಾಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಿದರು. ಸಂಸದ ಬಿ.ವೈ. ರಾಘವೇಂದ್ರ, ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ದತ್ತಿನಿಧಿ ಸ್ವೀಕರಿಸಿದರು. ‘ಶಿವಮೊಗ್ಗ ದರ್ಶನ’ ಸ್ಮರಣ ಸಂಚಿಕೆಯನ್ನು ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಬಿಡುಗಡೆ ಮಾಡಿದರು.ಸಭಾಪತಿ ಡಿ.ಎಚ್. ಶಂಕರಮೂರ್ತಿ ಉಪಸ್ಥಿತರಿದ್ದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕರೂ ಆದ ಕೆ.ಎಸ್. ಈಶ್ವರಪ್ಪ ಗೈರುಹಾಜರು ಎದ್ದು ಕಾಣುತ್ತಿತ್ತು.ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಪ್ರಾಸ್ತಾವಿಕ ಭಾಷಣ ಮಾಡಿದರು. ಜಯಶ್ರೀ ಶ್ರೀಧರ್ ಮತ್ತು ತಂಡ ನಾಡಗೀತೆ ಹಾಡಿದರು. ಎಸ್.ಬಿ. ಶಿವಲಿಂಗಪ್ಪ ರೈತಗೀತೆ ಹಾಡಿದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್. ಶಿವಮೂರ್ತಿ, ಭಾಗ್ಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ಸಾಹಿತ್ಯ ಓದದೇ, ಕೀಳರಿಮೆಯಿಂದ ನೋಡಬೇಡಿ’

ಶಿವಮೊಗ್ಗ: ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣದಲ್ಲಿ ಪ್ರಸ್ತುತ ವ್ಯವಸ್ಥೆಯ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತುವ ಅಂಶಗಳು ಇರುತ್ತವೆ. ಕೆಲವೊಮ್ಮೆ ಅಧ್ಯಕ್ಷರಾದವರು ತೀರಾ ಕಟುವಾಗಿ ವ್ಯವಸ್ಥೆಯನ್ನು ಖಂಡಿಸಿ ವಿವಾದಕ್ಕೆ ಒಳಗಾಗುವುದೂ ಉಂಟು. ಆದರೆ, 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಜಯಾರಾಜಶೇಖರ ಅವರ ಭಾಷಣ ಅಂತಹ ಯಾವುದೇ ಸನ್ನಿವೇಶ ಸೃಷ್ಟಿಸಲಿಲ್ಲ.ಮೂಲತಃ ಸಂಗೀತದ ವಿದ್ಯಾರ್ಥಿಯಾದ ಜಯಾ ರಾಜಶೇಖರ ಅವರು ಸರಸ್ವತಿಯನ್ನು ಸ್ಮರಿಸುವ ಗಮಕ ಸ್ವರೂಪದ ಗಾಯನದ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು. ತಾವು ಅಜ್ಜಿಯಾದ ನಂತರ ಮೈಸೂರಿನ ಮಾನಸ  ಗಂಗೋತ್ರಿಯಲ್ಲಿ ಎಂಎ ಪದವಿ ಪಡೆದ ಸಂಗತಿಯನ್ನು ಉಲ್ಲೇಖಿಸಿದರು.ಈ ಹಿಂದೆ ಅಮೆರಿಕಾದ ಹ್ಯೂಸ್ಟನ್ ನಗರದಲ್ಲಿ ಅಕ್ಕ ಸಂಸ್ಥೆ ಏರ್ಪಡಿಸಿದ್ದ ಶತಮಾನ ವಿಶ್ವ ಕನ್ನಡ ಸಮ್ಮೇಳನದಲ್ಲಿ ತಾವು ಭಾಗವಹಿಸಿದ್ದನ್ನು ಪ್ರಸ್ತಾಪಿಸಿ, ಅಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಆದರೆ, ಇಂತಹ ಸಮ್ಮೇಳನಕ್ಕೆ ಇಲ್ಲಿ ಕಡಿಮೆ ಜನ ಯಾಕೆ ಎಂದು ಅವರು ಪ್ರಶ್ನಿಸಿದರು.ತವರು ಮನೆ ಉಡುಗೊರೆ ಹೆಣ್ಣು ಮಕ್ಕಳಿಗೆ ಶ್ರೇಷ್ಠ ಮತ್ತು ಅದು ನಮ್ಮ ಆತ್ಮಾಭಿಮಾನವನ್ನು ಹೆಚ್ಚಿಸುವಂತಹದ್ದು ಎಂಬ ಸಂಗತಿಯನ್ನು ಪುರಾಣದ ಕತೆಗಳ ಮೂಲಕ ಉಲ್ಲೇಖಿಸಿ ಈ ಕಾರಣಕ್ಕೆ ಶಿವಮೊಗ್ಗದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ದೊರಕಿರುವುದು ಸಹಜ ಸಂತೋಷಕ್ಕೆ ಕಾರಣವಾಗಿದೆ ಎಂದರು.ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಗೋಷ್ಠಿ ಮಾಡಿ ಮಹಿಳೆಯರ ಸಮಸ್ಯೆಗಳನ್ನು ಮಹಿಳೆಯರೇ ಕೇಳಿಸಿಕೊಂಡರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಮಹಿಳಾ ಸಾಹಿತ್ಯ ಓದದೇ ಅದನ್ನು ಕೀಳರಿಮೆಯಿಂದ ನೋಡುವ ಪ್ರವೃತ್ತಿ ಕೊನೆಯಾಗಬೇಕು ಎಂದು ಹೇಳಿದರು.ಮಾತೃಭಾಷೆಯೇ ಮಾಧ್ಯಮವಾಗಬೇಕು, ಹಳೆಗನ್ನಡಕ್ಕೆ ಹೆಚ್ಚಿನ ಮಹತ್ವ,  ಮಹಿಳೆಯರಿಗೆ ಎಲ್ಲಾ ರಂಗದಲ್ಲೂ ಸಮಾನತೆ ಎಂಬ ವಿಷಯ ಸೇರಿದಂತೆ ಹಲವು ವಿಷಯ ಪ್ರಸ್ತಾಪಿಸಿದರೂ ಭ್ರಷ್ಟಾಚಾರದ ಕುರಿತು ಒಂದೇ ಮಾತನ್ನೂ ಆಡದೆ ಇರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು

ಶಿವಮೊಗ್ಗ: ಕುವೆಂಪು ರಂಗಮಂದಿರ: ಸಾಂಸ್ಕೃತಿಕ ಕಾರ್ಯಕ್ರಮ: ಚುಂಚಾದ್ರಿ ಮಹಿಳಾ ವೇದಿಕೆ. ಬೆಳಿಗ್ಗೆ 9.30ಕ್ಕೆ.

ಗೋಷ್ಠಿ 5. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿಗಳ ಅವಲೋಕನ. ವೈದೇಹಿ ಅವರ ‘ಕ್ರೌಂಚ ಪಕ್ಷಿಗಳು’: ಪ್ರೊ.ದಾಕ್ಷಾಯಣಿ. ಡಾ.ರಹಮತ್ ತರೀಕೆರೆ ಅವರ ‘ಕತ್ತಿ ಅಂಚಿನದಾರಿ’: ಡಾ.ರಾಜೇಂದ್ರ ಚೆನ್ನಿ. ಶ್ರೀನಿವಾಸ ವೈದ್ಯ ಅವರ ‘ಹಳ್ಳ ಬಂತು ಹಳ್ಳ’: ಡಾ.ಎಚ್.ಟಿ. ಕೃಷ್ಣಮೂರ್ತಿ. ಬೆಳಿಗ್ಗೆ 10ಕ್ಕೆ.ಗೋಷ್ಠಿ 6. ಜಿಲ್ಲೆಯ ಅಭಿವೃದ್ಧಿ, ಯೋಜನೆ -ಯೋಚನೆ. ಯೋಜನೆಯ ವಿವಿಧ ಮುಖಗಳು: ಜಿಲ್ಲಾಧಿಕಾರಿ ವಿ. ಪೊನ್ನುರಾಜ್. ಅಭಿವೃದ್ಧಿ-ಜಿ.ಪಂ. ಕೊಡುಗೆ: ಎ.ಬಿ. ಹೇಮಚಂದ್ರ. ಅರಣ್ಯ ಉಳಿವು-ಬದ್ಧತೆ: ಡಾ.ಸಂಜಯ್ ಬಿಜ್ಜೂರು. ಕೃಷಿ ಅನ್ನದಾತನಿಗಿರುವ ಸೌಲಭ್ಯ: ಡಾ.ಜಿ. ಶರಶ್ಚಂದ್ರ ರಾನಡೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ: ಡಾ.ಕೆ.ಎ. ಅಶೋಕ್ ಪೈ. ಪ್ರತಿಕ್ರಿಯೆ: ಕೆ.ಜಿ. ಕುಮಾರ ಸ್ವಾಮಿ, ಎಚ್.ಎಸ್. ಮಂಜಪ್ಪ, ಎಂ.ಜೆ. ಅಪ್ಪಾಜಿಗೌಡ, ಎಚ್.ಎಂ. ಚಂದ್ರಶೇಖರಪ್ಪ, ಕೆ.ವಿ. ವಸಂತಕುಮಾರ್. ಅಧ್ಯಕ್ಷತೆ: ಶಾಸಕ ಕಿಮ್ಮನೆ ರತ್ನಾಕರ. ಬೆಳಿಗ್ಗೆ 11ಕ್ಕೆ.ಗೋಷ್ಠಿ 7. ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ. ಸಂವಾದಕರು: ಪ್ರೊ.ಕೆ. ಓಂಕಾರಪ್ಪ, ಕಂನಾಡಿಗ ನಾರಾಯಣ, ಪ್ರೊ. ಕಿರಣ್ ದೇಸಾಯಿ. ಮಧ್ಯಾಹ್ನ 1ಕ್ಕೆ. ಸಾಂಸ್ಕೃತಿಕ ಕಾರ್ಯಕ್ರಮ. ಗಾಯನ: ಶಿವಪ್ರಸಾದ್ ಅವರಿಂದ. ಅಧ್ಯಕ್ಷತೆ: ಸಮ್ಮೇಳನಾಧ್ಯಕ್ಷೆ ಜಯಾ ರಾಜಶೇಖರ್. ಮಧ್ಯಾಹ್ನ 2.30ಕ್ಕೆ.ಗೋಷ್ಠಿ 8. ಸಂಕೀರ್ಣ ಗೋಷ್ಠಿ. ಜಿಲ್ಲೆಯ ರಂಗಭೂಮಿ: ಕಾಂತೇಶ್ ಕದರಮಂಡಲಗಿ. ಶಾಸನಗಳು: ಡಾ.ಕೆ. ಪ್ರಭಾಕರರಾವ್. ಜಿಲ್ಲೆಯ ಜಾನಪದ ಕೊಡುಗೆ: ಡಾ.ಸಣ್ಣ ಹನುಮಂತಪ್ಪ. ಐತಿಹಾಸಿಕ ಸಾಹಿತ್ಯ ಮೌಲ್ಯ: ಬಿ.ಎಸ್. ರಾಮಭಟ್ಟ. ಅಧ್ಯಕ್ಷತೆ: ಗಾಯಕ ಶಿವಮೊಗ್ಗ ಸುಬ್ಬಣ್ಣ.ಮಧ್ಯಾಹ್ನ 3ಕ್ಕೆ.ಗೋಷ್ಠಿ 9. ಸ್ತ್ರೀಸಂಕಥನ. ಕನ್ನಡ ಕಾವ್ಯಕ್ಕೆ ಜಿಲ್ಲೆಯ ಕವಯತ್ರಿಯರ ಕೊಡುಗೆ: ಡಾ.ಶುಭಾ ಮರವಂತೆ. ನಾಟಕ, ಕಾದಂಬರಿ ಪ್ರಕಾರಕ್ಕೆ ಜಿಲ್ಲೆಯ ಲೇಖಕಿಯರ ಕೊಡುಗೆ: ಎಸ್.ಕೆ. ವಾಣಿ. ಕನ್ನಡ ಕಥೆ, ಪ್ರಬಂಧಕ್ಕೆ ಜಿಲ್ಲೆಯ ಲೇಖಕಿಯರ ಕೊಡುಗೆ: ಡಾ.ಸಬಿತಾ ಬನ್ನಾಡಿ. ಜಿ.ವಿ. ರೇಣುಕಾ ಅವರ ‘ಸಂಚಿ’ ಕೇಳು ಪುಸ್ತಕ ಬಿಡುಗಡೆ. ಅಧ್ಯಕ್ಷತೆ: ವಿಜಯಶ್ರೀ. ಸಂಜೆ 4ಕ್ಕೆ. ಸಾಧಕರಿಗೆ ಸನ್ಮಾನ. ಸಂಜೆ 5ಕ್ಕೆ.ಸಮಾನಾಂತರ ವೇದಿಕೆ, ಚಂದನ ಸಭಾಂಗಣ, ಎಟಿಎನ್‌ಸಿ ಕಾಲೇಜು.

ಮಕ್ಕಳ ಮತ್ತು ಯುವ ಕವಿಗೋಷ್ಠಿ. ಬೆಳಿಗ್ಗೆ 10.30ಕ್ಕೆ. ಮಕ್ಕಳೊಂದಿಗೆ ನಾ.ಡಿಸೋಜಾ ಮತ್ತು ಜಯಾ ರಾಜಶೇಖರ್. ಕೆ.ಸಿ. ಸೌಮ್ಯಾ, ಕಲೀಂವುಲ್ಲಾ. ಮಧ್ಯಾಹ್ನ 12ಕ್ಕೆ.

ಹನಿಗವನ ಗೋಷ್ಠಿ. ಉದ್ಘಾಟನೆ: ಶಿವರುದ್ರಯ್ಯಸ್ವಾಮಿ. ಅಧ್ಯಕ್ಷತೆ:ಅಬ್ಬಾಸ್ ಅಬ್ಬಲಗೆರೆ. ಮಧ್ಯಾಹ್ನ 2.30ಕ್ಕೆ.ಸಮಾರೋಪ. ಭಾಷಣ: ಸಾಹಿತಿ ಕುಂ. ವೀರಭದ್ರಪ್ಪ. ಅಭಿನಂದನೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಅತಿಥಿಗಳು: ಸಂಸದ ಬಿ.ವೈ. ರಾಘವೇಂದ್ರ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ, ಎಪಿ ಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್. ಸಮ್ಮೇಳನಾಧ್ಯಕ್ಷರ ನುಡಿ: ಜಯಾ ರಾಜಶೇಖರ್. ಅಧ್ಯಕ್ಷತೆ: ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ. ಸಂಜೆ 6.30ಕ್ಕೆ.ಸಾಂಸ್ಕೃತಿಕ ಕಾರ್ಯಕ್ರಮ. ನೃತ್ಯ ರೂಪಕ: ಎಚ್.ವಿ. ಶಿವಾನಂದ ಶೇಟ್ ನೇತೃತ್ವದ ಗೀತ ಭಂಡಾರ ಸಂಘ.‘ನಿತ್ಯುಳ್ಳ ಜ್ಯೋತಿ’ ರಂಗರೂಪಕ. ರಾತ್ರಿ 8ಕ್ಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.