ಶುಕ್ರವಾರ, ಜೂನ್ 18, 2021
22 °C
ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಅಭಿಮತ

ಭ್ರಷ್ಟಾಚಾರಕ್ಕಿಂತ ಕೋಮುವಾದವೇ ಅಪಾಯಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಗುಜರಾತ್‌ ಮುಖ್ಯ­ಮಂತ್ರಿ ನರೇಂದ್ರಮೋದಿಗೆ ದೇಶದ ಮೇಲೆ ನಿಜವಾದ ವ್ಯಾಮೋಹ ಇಲ್ಲ. ವ್ಯಾಮೋಹ ಇದ್ದವರಾ­ದರೆ ದೇಶದ ಪ್ರತಿ ಪ್ರಜೆಯನ್ನೂ ಪ್ರೀತಿಸುತ್ತಾರೆ. ದೇಶಪ್ರೇಮವನ್ನು ಮೋದಿ ಅಧಿಕಾರ ಹಿಡಿಯಲು ಚುನಾ­ವಣಾ ಬತ್ತಳಿಕೆ ಮಾಡಿಕೊಂಡಿದ್ದಾರೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಅಭಿಪ್ರಾಯಪಟ್ಟರು.ತುಮಕೂರು ವಿ.ವಿ ಕನ್ನಡ ಅಧ್ಯ­ಯನ ಕೇಂದ್ರ ಗುರುವಾರ ಆಯೋಜಿ­ಸಿದ್ದ ಸಾಹಿತ್ಯ, ಭಾಷೆ, ಸಂಸ್ಕೃತಿ ಹಾಗೂ ರಾಜಕೀಯ ಕುರಿತ ಸಂವಾದದಲ್ಲಿ ಮಾತನಾಡಿದರು.ದೇಶ ಆಳಬೇಕಾದರೆ ಒಬ್ಬ ವ್ಯಾಪಾರಿಗಿಂತ ಒಬ್ಬ ಗುಣವಂತ ಮುಖ್ಯ. ಕೊಲೆಗಾರ, ನಿರಂಕುಶವಾದಿ ಅಲ್ಲ. ಕಡಿಮೆ ಅವಧಿ ಪ್ರಧಾನಿ­ಯಾಗಿದ್ದರೂ ಎಚ್‌.ಡಿ.ದೇವೇಗೌಡರು ಪ್ರಾಮಾಣಿಕರಾಗಿದ್ದರು, ಉತ್ತಮ ಆಡಳಿತ ನೀಡಿದ್ದರು. ನರೇಂದ್ರಮೋದಿ­ಗಿಂತ ದೇವೇಗೌಡರು ದೇಶದ ಪ್ರಧಾನಿಗೆ ಉತ್ತಮ ನಾಯಕ ಎಂದು ಸಾಹಿತಿ ಪ್ರೊ.ಮರಿದೇವರ ಪ್ರಶ್ನೆಗೆ ಪ್ರತಿಕ್ರಿಯಿಸಿ­ದರು.ನರೇಂದ್ರಮೋದಿಗಿಂತಲೂ ಜಾತ್ಯ­ತೀತ­ವಾದಿ ಅಡ್ವಾಣಿ ಆಯ್ಕೆ ಒಳ್ಳೆ­ಯದು. ಆದರೆ ಅಡ್ವಾಣಿ ಮತ್ತು ನರೇಂದ್ರ­ಮೋದಿ ಇಬ್ಬರಿಗೂ ನಾನು ಮತ ಹಾಕುವುದಿಲ್ಲ. ಎಎಪಿ ಪಕ್ಷದ ಒರಟು ಗಾಂಧಿವಾದ ಈಗ ಬೇಕಾಗಿದೆ ಎಂದು ಕಾರ್ಯಕ್ರಮದ ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.ಮುಖ್ಯಮಂತ್ರಿ ಮಾಧ್ಯಮ ಸಲಹೆ­ಗಾರ ದಿನೇಶ್‌ ಅಮಿನ್ ಮಟ್ಟು ಪ್ರಶ್ನೆಗೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರಕ್ಕಿಂತ ಕೋಮು­ವಾದವೇ ಹೆಚ್ಚು ಅಪಾಯ­ಕಾರಿ. ಎರಡನ್ನೂ ವಿರೋಧಿಸಬೇಕು. ಆದರೆ ಕೋಮುವಾದಿಗಳು ದೇಶಕ್ಕೆ ಹೆಚ್ಚು ಅಪಾಯಕಾರಿ. ಭ್ರಷ್ಟಚಾರವನ್ನು ನಿಯಂತ್ರಿಸಬಹುದು. ಆದರೆ ಕೋಮು­ವಾದ ವಿನಾ ಕಾರಣ ಜನರನ್ನು ಕೊಲ್ಲು­ತ್ತದೆ. ಗರ್ಭಿಣಿ ಮಹಿಳೆಯ ಹೊಟ್ಟೆ ಸೀಳಿದ ಜನರನ್ನು ಹೇಗೆ ಸ್ವೀಕರಿಸುವುದು ಎಂದು ಕೇಳಿದರು.ಬಾವುಟ ಸುಡುವವರು ದೇಶ­ದ್ರೋಹಿ­ಗಳಾಗಿ ಕಂಡರೆ ಸಂಪಾದನೆ­ಯನ್ನು ಸ್ವಿಸ್‌ ಬ್ಯಾಂಕ್‌ನಲ್ಲಿ ಇಡುವ­ವರು ದೇಶದ್ರೋಹಿಗಳಲ್ಲವೆ? ಎಂದು ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ನಿತ್ಯಾನಂದ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದರು.ಕೋಮುವಾದಿಗಳಿಂದ ಪ್ರತಿ ಊರಲ್ಲೂ ಭಯದ ವಾತಾವರಣ­ವಿದೆ. ಶಾಲೆಗೆ ಹೋದ ಮಕ್ಕಳು ವಾಪಸ್‌ ಬರುವವರೆಗೂ ಭಯದಲ್ಲೇ ಇರಬೇಕಿದೆ. ಇಲ್ಲಿರುವ ಮುಸ್ಲಿಮರನ್ನು ಎಲ್ಲಿಗೆ ಕಳುಹಿಸಲು ಸಾಧ್ಯ. ಅವರು ಇಲ್ಲಿಯೇ ಇರಬೇಕು. ಮುಸಲ್ಮಾನ­ರೊಂದಿಗೆ ಒಡನಾಟ ಕಡಿಮೆಯಾಗು­ತ್ತಿದೆ. ಅವರಿಗೂ ದೇಶದ ಕುರಿತು ಅನಿಸಿಕೆ, ಒಳ ನೋಟಗಳಿವೆ. ಅವ­ರೊಂ­ದಿಗೆ  ನಮ್ಮ ಒಡನಾಟ ಬೆಳೆಸಿಕೊಳ್ಳ­ಬೇಕು. ಆದರೆ ಇದು ಆಗುತ್ತಿಲ್ಲ ಎಂದು ನೊಂದು ನುಡಿದರು. ಪರೀಕ್ಷಾಂಗ ಕುಲ ಸಚಿವ ಪ್ರೊ.ಎನ್‌.ಬಿ.ನಡುವಿನಮನಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.