ಶುಕ್ರವಾರ, ಮೇ 14, 2021
31 °C
ಯುವಜನತೆ ಮೂಲಕ ಸಮಾಜದಲ್ಲಿ ಸುಧಾರಣೆ ಸಾಧ್ಯ: ಹೆಗ್ಡೆ

`ಭ್ರಷ್ಟಾಚಾರದಿಂದ ಆರ್ಥಿಕ ಸ್ಥಿತಿ ಗಂಭೀರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ:`ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಯಾವೊಬ್ಬ ರಾಜಕಾರಣಿ, ಆಡಳಿತ ನಡೆಸುವವರಿಗೆ ಇಚ್ಛೆಯಿಲ್ಲ. ಇದೇ ರೀತಿ ಭ್ರಷ್ಟಾಚಾರ ಮುಂದುವರಿದರೆ ದೇಶ ಆರ್ಥಿಕ ಸ್ಥಿತಿ ಏನಾಗಬಹುದು ಎಂಬುದನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.ಪಾವನಾ ಪರಿಸರ ಪ್ರತಿಷ್ಠಾನ ಇಲ್ಲಿನ ಟಿಎಂಎಸ್ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧಾರವಾಡ ಸಮಾಜ ಸಮುದಾಯ ಪರಿವರ್ತನದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರಿಗೆ `ಪಾವನಾ ಪ್ರಶಸ್ತಿ' ನೀಡಿ ಅವರು ಮಾತನಾಡಿದರು.`1952ನೇ ಇಸವಿಯಲ್ಲಿ ನಡೆದ ಹಗರಣದ ಮೊತ್ತ ರೂ 52ಲಕ್ಷ, 1986ರಲ್ಲಿ ನಡೆದ ಹಗರಣದಿಂದ ಸರ್ಕಾರಕ್ಕೆ ರೂ 64 ಕೋಟಿ ನಷ್ಟ, 2010ರಲ್ಲಿ ನಡೆದ ಕಾಮನ್‌ವೆಲ್ತ್ ಹಗರಣದ ಮೊತ್ತ ರೂ 70 ಸಾವಿರ ಕೋಟಿ, ಹೀಗೆ ಹಗರಣಗಳ ಮೊತ್ತ ದೊಡ್ಡದಾಗುತ್ತಲೇ ಇದೆ. ನೂರಾರು ಹಗರಣಗಳು ನಡೆಯುತ್ತವೆ. ಆದರೆ ಒಂದೆರಡು ಬಯಲಿಗೆ ಬಂದು ಉಳಿದವು ಮುಚ್ಚಿ ಹೋಗುತ್ತವೆ. ಹಗರಣಗಳಲ್ಲಿ ಭಾಗಿಯಾದ ಎಷ್ಟು ಜನರಿಗೆ ಶಿಕ್ಷೆಯಾಗಿದೆ. ಲಂಚ ಕೊಡುವವರು ತಮ್ಮ ಲಾಭಕ್ಕಾಗಿ ಕೊಡುತ್ತಾರೆ. ಜನರಲ್ಲಿ ಸಾಮಾಜಿಕ ಕಾಳಜಿಗಿಂತ ಸ್ವಾರ್ಥ ಹೆಚ್ಚಾಗಿದೆ' ಎಂದರು.`ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಪೂರ್ವ ಭ್ರಷ್ಟರು, ಅಪರಾಧ ಹಿನ್ನೆಲೆಯವರಿಗೆ ಸೀಟು ಕೊಡುವುದಿಲ್ಲ ಎನ್ನುತ್ತವೆ. ಆದರೆ ವಾಸ್ತವಿಕತೆ ಭಿನ್ನವಾಗಿರುತ್ತದೆ. ಇಂದಿನ ರಾಜಕಾರಣದಲ್ಲಿ ಮುತ್ಸದ್ದಿಗಳಿಲ್ಲ, ಅವಕಾಶವಾದಿಗಳಿದ್ದಾರೆ. ಆದರೆ ಸಮಾಜ ಭ್ರಷ್ಟರನ್ನು ಕಡೆಗಣಿಸುತ್ತಿಲ್ಲ. ಯಾವುದೋ ಸಂದರ್ಭದಲ್ಲಿ ಸಹಾಯಕ್ಕೆ ಬೇಕಾಗಬಹುದೆಂಬ ಸ್ವಾರ್ಥದಲ್ಲಿ ಎಲ್ಲರೂ ಮೌನವಾಗುತ್ತಾರೆ. ಇವೆಲ್ಲದರ ನಡುವೆ ಯುವ ಜನತೆಯಲ್ಲಿರುವ ಭ್ರಷ್ಟಾಚಾರದ ವಿರುದ್ಧದ ರೋಷ ಸಮಾಧಾನ ಕೊಟ್ಟಿದೆ. 600ಕ್ಕೂ ಹೆಚ್ಚು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದೇನೆ. ಯುವ ಜನತೆ ಮೂಲಕ ಸಮಾಜದಲ್ಲಿ ಬದಲಾವಣೆ ಬಂದರೆ ದೇಶ ಸುಧಾರಣೆಯಾಗಬಹುದು' ಎಂದು ಅಭಿಪ್ರಾಯಪಟ್ಟರು.`ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ನೆಲ-ಜಲದ ಅಸ್ತಿತ್ವಕ್ಕೆ ಕೊಡಲಿಯೇಟು ನೀಡಿರುವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕಾನೂನು ಶಿಕ್ಷೆಯಾಗಬೇಕು. ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು, ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಭಾಗಿಯಾಗಿರುವ ಅಕ್ರಮಗಳ ನಿಷ್ಪಕ್ಷಪಾತ ತನಿಖೆಯಾಗಬೇಕು' ಎಂದು ಸನ್ಮಾ ಸ್ವೀಕರಿಸಿದ ಎಸ್.ಆರ್.ಹಿರೇಮಠ ನೇರ ಮಾತಿನಲ್ಲಿ ಹೇಳಿದರು.`ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನ್ನು ಉರುಳಿಸುವ ಮೂಲಕ ಜನಸಾಮಾನ್ಯರು ಭ್ರಷ್ಟಾಚಾರ ನಡೆಸಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಭ್ರಷ್ಟಾಚಾರದ ಕಾರಣದಿಂದ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಿಗಳನ್ನು ದೂರವಿಡಬೇಕು. ಭ್ರಷ್ಟಾಚಾರದಲ್ಲಿ ತೊಡಗಿಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಅವರ ವಿರುದ್ಧ ತನಿಖೆ ನಡೆಸಿ ಶಿಕ್ಷೆ ನೀಡುವಂತಾಗಬೇಕು' ಎಂದು ಹೇಳಿದರು.`ಭ್ರಷ್ಟಾಚಾರದ ವಿರುದ್ಧ ಸಮಾನ ಮನಸ್ಕರು ಒಂದಾಗಿ ಚರ್ಚೆಯ ಜೊತೆಗೆ ಸಾಮೂಹಿಕ ಶಕ್ತಿ ನಿರ್ಮಾಣವಾಗಬೇಕು. ಜಗತ್ತನ್ನು ಬದಲಿಸಲು ಮೊದಲು ನಮ್ಮನ್ನು ನಾವು ಬದಲಿಸಿಕೊಳ್ಳಬೇಕು. ಪ್ರಾಮಾಣಿಕತೆಯ ಜೊತೆಗೆ ಧೈರ್ಯಗಾರಿಕೆಯಿಂದ ದಿಟ್ಟ ಹೆಜ್ಜೆ ಇಡಬೇಕು' ಎಂದು ಹಿರೇಮಠ ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಮಾತನಾಡಿ, `ಎಲ್ಲ ಜನಪರ ಚಳವಳಿಗಳು ಇತ್ತೀಚಿನ ವರ್ಷಗಳಲ್ಲಿ ನೆಲಕಚ್ಚಿದ್ದು, ಹೋರಾಟದ ಕಿಡಿ ಮತ್ತೆ ಹೊತ್ತಿಕೊಳ್ಳಬೇಕಾಗಿದೆ' ಎಂದರು.ಹಿರಿಯ ನಾಗರಿಕ ಕಾಶಿನಾಥ ಮೂಡಿ, ಪರಿಸರ ಬರಹಗಾರ ಶಿವಾನಂದ ಕಳವೆ, ಆರ್.ಎಸ್.ಹೆಗಡೆ ಬೆಳ್ಳೆಕೇರಿ, ವಾಸಂತಿ ಹೆಗಡೆ ಅವರಿಗೆ ಗೌರವ ಸಮರ್ಪಿಸಲಾಯಿತು. ಶ್ರೀಧರ ಭದ್ರನ್ ಕಾರ್ಯಕ್ರಮ ನಿರೂಪಿಸಿದರು. ಪಾವನಾ ಟ್ರಸ್ಟ್ ವಕ್ತಾರ ಶ್ರೀಪಾದ ಹೆಗಡೆ ಬಕ್ಕೆಮನೆ ವಂದಿಸಿದರು. ಬಕ್ಕೆಮನೆ ಉಮಾಪತಿ ಹೆಗಡೆ, ಶ್ರೀಕಾಂತ ಹೆಗಡೆ ಸಹಕರಿಸಿದರು.ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿರುವ ಸಂತೋಷ ಹೆಗ್ಡೆ ಹಾಗೂ ಎಸ್.ಆರ್.ಹಿರೇಮಠ ಭಾಷಣ ಕೇಳಲು ಸಾಕಷ್ಟು ಜನ ಸೇರಿದ್ದರು. ವೇದಿಕೆ ಬಹುಹೊತ್ತನ್ನು ಈ ಇಬ್ಬರು ಪ್ರಮುಖರಿಗೆ ಮೀಸಲಿಡಲಾಗಿತ್ತು. ಇಬ್ಬರ ಮಾತನ್ನು ಅತ್ಯಂತ ಕುತೂಹಲದಿಂದ ಕೇಳಿದ ಸಭಿಕರು ಚಪ್ಪಾಳೆ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.