ಶನಿವಾರ, ಮೇ 15, 2021
24 °C

ಭ್ರಷ್ಟಾಚಾರ ತಡೆಗೆ ಧರ್ಮ ಮದ್ದು: ಜೋಯಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸ್ವಾತಂತ್ರ್ಯಾ ನಂತರ ವಿದ್ಯಾವಂತರ ಸಂಖ್ಯೆಗೆ ಅನುಗುಣವಾಗಿ ಭ್ರಷ್ಟಾಚಾರವೂ ಹೆಚ್ಚಿರು ವುದು ವಿಪರ್ಯಾಸ ಎಂದು ರಾಜ್ಯಸಭೆ ಸದಸ್ಯ ರಾಮಾಜೋಯಿಸ್ ಅಭಿಪ್ರಾಯಪಟ್ಟರು.ನಗರದ ಶೃಂಗೇರಿ ಶಂಕರ ಮಠದಲ್ಲಿ ಭಾನುವಾರ ಶಂಕರ ಸೇವಾ ಸಮಿತಿ ಮತ್ತು ನ್ಯಾಯಮೂರ್ತಿ ರಾಮಾಜೋಯಿಸ್ ಅಭಿನಂದನ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆ ಬದಲಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.ದೇಶದಲ್ಲಿ ಲಂಚ ಮತ್ತು ಭ್ರಷ್ಟಾಚಾರ ತುತ್ತತುದಿ ತಲುಪಿದೆ. ಅವಿದ್ಯಾವಂತರಿಗೆ ಲಂಚ ತೆಗೆದು ಕೊಳ್ಳಲು ಅವಕಾಶವೇ ಇಲ್ಲ. ವಿದ್ಯಾವಂತರು ಮಾತ್ರ ಅಧಿಕಾರಿ- ರಾಜಕಾರಣಿ ಆಗಿ ಲಂಚ ಪಡೆಯಲು ಸಾಧ್ಯ ಎಂದು ವಿವರಿಸಿದರು.ರಾಜ್ಯದ ಇತ್ತೀಚಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಉನ್ನತ ಅಧಿಕಾರದಲ್ಲಿರುವವರು ಒಂದೋ ಜೈಲ್‌ನಲ್ಲಿದ್ದಾರೆ, ಇಲ್ಲದಿದ್ದರೆ `ಬೇಲ್~ನಲ್ಲಿದ್ದಾರೆ. ಸಮಾಜವನ್ನು ಆವರಿಸುವ ಅತಿಯಾಸೆ ಎಂಬ ಕಾಯಿಲೆ ಎಲ್ಲರ ಕಣ್ಣಿಗೂ ಕಾಣಿಸುತ್ತಿದೆ. ಅದರ ಮೂಲ ಹುಡುಕದೆ ಪರಿಹಾರ ಕಂಡುಕೊಳ್ಳು ವುದು ಅಸಾಧ್ಯ ಎಂದು ಪ್ರತಿಪಾದಿಸಿದರು.ಬ್ರಿಟಿಷರಿಗೆ ತಮ್ಮ ಆಡಳಿತ ಸುಸೂತ್ರವಾಗಿ ನಡೆಯಲು ಗುಮಾಸ್ತರು ಬೇಕಾಗಿತ್ತು. ಅದಕ್ಕೆ ಪೂರಕವಾದ ಶಿಕ್ಷಣ ಪದ್ಧತಿಯನ್ನು ಅವರು ರೂಪಿಸಿದರು. ಆ ಕಾಲದ ಭಾರತೀಯರಿಗೆ ಉದ್ಯೋಗ ಬೇಕಾಗಿತ್ತು. ಅವರು ಪೂರ್ವಾಪರ ಯೋಚಿಸದೆ ಅದೇ ಶಿಕ್ಷಣ ಪದ್ಧತಿ ಒಪ್ಪಿಕೊಂಡರು. ಈಗ ಸ್ವಾತಂತ್ರ್ಯ ಬಂದ ಮೇಲಾದರೂ ವಿಚಾರ ಶಕ್ತಿ ಪ್ರಜ್ವಲಿಸುವ ಹಾಗೂ ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುವ ಸ್ವತಂತ್ರ ಶಿಕ್ಷಣ ಪದ್ಧತಿ ರೂಪಿಸಲಿಲ್ಲ ಎಂದು ವಿಷಾದಿಸಿದರು.ನಮ್ಮ ಶಿಕ್ಷಣ ಪದ್ಧತಿ ದೋಷಪೂರಿತವಾಗಿದೆ ಎಂದು ಸ್ವತಃ ಕೇಂದ್ರ ಶಿಕ್ಷಣ ಸಚಿವೆ ಪುರಂದರೇಶ್ವರಿಯೇ ಒಪ್ಪಿಕೊಂಡಿದ್ದಾರೆ. ವ್ಯಕ್ತಿತ್ವ ನಿರ್ಮಾಣದ ವಿದ್ಯೆಯನ್ನು ನಾವು ನೀಡಬೇಕಿತ್ತು. ಚಾರಿತ್ರ್ಯವಂತ ವಿದ್ಯಾವಂತರನ್ನು ರೂಪಿಸುವಲ್ಲಿ ನಾವು ವಿಫಲರಾಗಿದ್ದೇವೆ. ಒಮ್ಮಮ್ಮೆ  ದೇಶ ಉಳಿಯುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಧರ್ಮವೇ ಈ ದೇಶದ ಆತ್ಮ. ಧರ್ಮಕ್ಕೂ ಮತಕ್ಕೂ ಸಾಕಷ್ಟ ಅಂತರವಿದೆ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನೊಂದಿಗೆ ಹೇಗೆ ನಡೆದು ಕೊಳ್ಳಬೇಕು ಎನ್ನುವುದನ್ನು ಧರ್ಮ ತಿಳಿಸುತ್ತದೆ. ಎಲ್ಲರೂ ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ವಿವರಿಸಿದರು.ಕಾನೂನಿನಿಂದ ದೇಶವನ್ನು ಆವರಿಸಿರುವ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಿಲ್ಲ. ಧರ್ಮದಿಂದ ಈ ಕಾರ್ಯ ಖಂಡಿತ ಸಾಧ್ಯವಿದೆ. ಯೋಗ್ಯ ಮಾರ್ಗದಲ್ಲಿ ಸಂಪತ್ತುಗಳಿಸಿ, ಯೋಗ್ಯ ಮಾರ್ಗದಲ್ಲಿಯೇ ಸುಖ ಅನುಭವಿಸಿ ಎಂಬ ಧರ್ಮದ ಮಾತು ಕೇಳಿಸಿಕೊಳ್ಳುವ ವ್ಯವಧಾನ ಯುವಜನತೆಯಲ್ಲಿ ಮೂಡಿದರೆ ಭ್ರಷ್ಟಾಚಾರ ತಾನಾಗಿಯೇ ಮಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಶಿಕ್ಷಣ ಪದ್ಧತಿಯಲ್ಲಿ ಧರ್ಮವನ್ನು ಒಂದು ವಿಷಯವಾಗಿ ಸೇರಿಸಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಧರ್ಮದ ಸಂದೇಶಗಳನ್ನು ತಿಳಿ ಹೇಳಬೇಕು ಎಂದು ಕರೆ ನೀಡಿದರು.ಸಂಸದ ಜಿ.ಎಸ್.ಬಸವರಾಜ್ ಮತ್ತು ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿದರು. ಹಿರಿಯ ವಕೀಲ ಟಿ.ಎಸ್.ವೆಂಕಟನಂಜಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.