ಬುಧವಾರ, ಏಪ್ರಿಲ್ 14, 2021
26 °C

ಮಂದಾ ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸರ್ವಭಾಷಿಕ ಸಮವಿಚಾರ ವೇದಿಕೆಯ ಅಭ್ಯರ್ಥಿ ಮಂದಾ ಬಾಳೇಕುಂದ್ರಿ ಅವರು ಗುರುವಾರ ಮೇಯರ್ ಸ್ಥಾನಕ್ಕೆ ನಾಲ್ಕನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.ಅನಿರೀಕ್ಷಿತ ಬೆಳವಣಿಗೆಯಲ್ಲಿ ವೇದಿಕೆ ಅಭ್ಯರ್ಥಿ ಮಂದಾ ಬಾಳೇಕುಂದ್ರಿ ಅವರ ವಿರುದ್ಧ ಸ್ಪರ್ಧಿಸಿದ್ದ ಬೆಳಗಾವಿ ಅಭಿವೃದ್ಧಿ ವೇದಿಕೆಯ ವಂದನಾ ಬೀಳಗಿ ಅವರು ನಾಮಪತ್ರ ಪರಿಶೀಲನೆ ನಂತರ ಸ್ಪರ್ಧೆಯಿಂದ ಹಿಂದೆ ಸರಿದರು.ಮೇಯರ್ ಸ್ಥಾನಕ್ಕೆ ನಡೆದಿರುವ ಚುನಾವಣಾ ಕಣದಲ್ಲಿ ಮಂದಾ ಬಾಳೇಕುಂದ್ರಿ ಮಾತ್ರ ಉಳಿದಿರುವುದರಿಂದ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎಂ. ಶಿರೋಳ ಘೋಷಿಸಿದರು.ಚುನಾವಣಾಧಿಕಾರಿ ಘೋಷಣೆ ಮಾಡುತ್ತಿದ್ದಂತೆಯೇ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ‘ಝಾಲಾಚ ಪಾಯಿಜೇ’ ಎಂದು ಘೋಷಣೆ ಕೂಗಿದರು.58 ಸದಸ್ಯರನ್ನೊಳಗೊಂಡಿರುವ ಮಹಾನಗರ ಪಾಲಿಕೆಯಲ್ಲಿ ಸರ್ವಭಾಷಿಕ ಸಮವಿಚಾರ ವೇದಿಕೆಯಲ್ಲಿ 36 ಜನ ಸದಸ್ಯರಿದ್ದಾರೆ. ಜತೆಗೆ ನಾಲ್ವರು ಶಾಸಕರ ಹಾಗೂ ಒರ್ವ ಸಂಸದರೂ ವೇದಿಕೆ ಬೆಂಬಲಕ್ಕೆ ಇದ್ದರು. ಅಭಿವೃದ್ಧಿ ವೇದಿಕೆ ಹಾಗೂ ಎಂಇಎಸ್ ಸೇರಿ ಪ್ರತಿಪಕ್ಷದಲ್ಲಿ 22 ಜನರಿದ್ದಾರೆ.ಆಡಳಿತಾರೂಢ ಗುಂಪಿನಿಂದ ಮಂದಾ ಬಾಳೇಕುಂದ್ರಿ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದರೆ, ಪ್ರತಿಪಕ್ಷದಿಂದ ವಂದನಾ ಬೀಳಗಿ ಅವರನ್ನು ಕಣಕ್ಕೆ ಇಳಿಸಲಾಗಿತ್ತು.ಎರಡು ದಿನಗಳ ಹಿಂದೆ ವಂದನಾ ಅವರು ‘ನಾನು ಕನ್ನಡ ಭಾಷಿಕ ಅಭ್ಯರ್ಥಿ’ ಎಂಬ ಪ್ರಕಟಣೆ ನೀಡಿದ್ದ ಕಾರಣಕ್ಕೆ ಮಹಾರಾಷ್ಟ್ರ ಏಕೀಕರಣ ಸದಸ್ಯರ ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದರು. ಸೋಲುವುದು ಖಚಿತವಾದ ಹಿನ್ನೆಲೆಯಲ್ಲಿ ವಂದನಾ ಬೀಳಗಿ ಅವರು ನಾಮಪತ್ರ ಹಿಂತೆಗೆದುಕೊಂಡರು.ಶಾಸಕರ ಆಕ್ಷೇಪ

ಇದಕ್ಕೂ ಮೊದಲು ಚುನಾವಣೆಯ ಪ್ರಕ್ರಿಯೆ ಆರಂಭದ ನಂತರವೂ ಸದಸ್ಯರಿಗೆ ಒಳ ಬರಲು ಅವಕಾಶ ನೀಡಿದ್ದಕ್ಕೆ ಶಾಸಕ ಅಭಯ ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು.‘ಹಾಜರಾತಿ ತೆಗೆದುಕೊಳ್ಳಲಾಗುತ್ತಿದೆ. ಅದು ಪೂರ್ಣಗೊಂಡ ಕೂಡಲೇ ಪ್ರವೇಶ ದ್ವಾರ ಬಂದ್ ಮಾಡಲಾಗುವುದು’ ಎಂದು ಚುನಾವಣಾಧಿಕಾರಿ ತಿಳಿಸಿದರು.‘ಮೇಯರ್ ಚುನಾವಣೆ ಜತೆಗೆ ಉಪಮೇಯರ್ ಚುನಾವಣೆಯನ್ನೂ ಮಾಡಬೇಕು. ಉಪಮೇಯರ್ ಚುನಾವಣೆ ಮಾಡದೇ ಅನ್ಯಾಯ ಮಾಡಲಾಗುತ್ತಿದೆ’ ಎಂದು ಸದಸ್ಯ ನೇತಾಜಿ ಜಾಧವ ಆಕ್ಷೇಪ ವ್ಯಕ್ತಪಡಿಸಿದರು.‘ರಾಜ್ಯ ಸರ್ಕಾರಕ್ಕೆ ಈ ಬಗೆಗೆ ಸ್ಪಷ್ಟೀಕರಣ ಕೇಳಲಾಗಿತ್ತು. ಉಪಮೇಯರ್ ಅವಧಿ ಪೂರ್ಣಗೊಳ್ಳುವವರೆಗೂ ಆ ಹುದ್ದೆಗೆ ಚುನಾವಣೆ ಮಾಡುವ ಅವಶ್ಯಕತೆ ಇಲ್ಲ ಎಂದು ಲಿಖಿತವಾಗಿ ಉತ್ತರ ಬಂದಿದೆ. ಆದ್ದರಿಂದ ಅವಧಿ ಮುಗಿದಿರುವ ಮೇಯರ್ ಚುನಾವಣೆ ಮಾತ್ರ ಮಾಡಲಾಗುತ್ತಿದೆ’ ಎಂದು ಸಿ.ಎಂ. ಶಿರೋಳ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.