ಶುಕ್ರವಾರ, ಏಪ್ರಿಲ್ 23, 2021
24 °C

ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರಿಗೆರೆ: ಸಹಸ್ರಾರು ವರ್ಷಗಳ ಹಿಂದೆ ಹಲವಾರು ದೇಶಗಳಿಗೆ ಜ್ಞಾನ, ಸಭ್ಯತೆ, ಸಂಸ್ಕೃತಿ ಹೇಳಿಕೊಟ್ಟ ರಾಷ್ಟ್ರ ನಮ್ಮದು. ಶಿಕ್ಷಣದಿಂದ ಮಾತ್ರ ಅಂತಹ ಸಭ್ಯತೆ ದೊರೆಯಲು ಸಾಧ್ಯ. ಅಂತಹ ಶಿಕ್ಷಣವನ್ನು ಮಕ್ಕಳಿಗೆ ನೀಡಿ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಕರೆ ನೀಡಿದರು.ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ರಾಜ್ಯದ ವಿವಿಧ 14 ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವತಿಯಿಂದ ನಡೆಯುತ್ತಿರುವ 34 ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಮಾಗಮ ಹಾಗೂ ವಿಶೇಷ ಮಕ್ಕಳ ದಿನಾಚರಣೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.ಶಿಕ್ಷಣ ಕೇವಲ ಪರೀಕ್ಷೆಗಾಗಿ ಅಲ್ಲ. ಅದು ಮಾನವೀಯ ಮೌಲ್ಯ, ಸ್ವಾವಲಂಬನೆ, ಸೌಜನ್ಯ ಮೂಡಿಸುವಂತೆ ಇರಬೇಕು. `ಬಿತ್ತಿದಂತೆ ಬೆಳೆ~ ಎಂಬಂತೆ ಮಕ್ಕಳದು ಮುಗ್ಧ ಮನಸ್ಸು. ಅಂತಹ ಮಕ್ಕಳ ಮನಸ್ಸಿನಲ್ಲಿ ಸದ್ಭಾವನೆ ಬಿತ್ತಬೇಕು. ಭವಿಷ್ಯದ ರೂವಾರಿಗಳಾದ ಮಕ್ಕಳ ಮನಸ್ಸನ್ನು ಉತ್ತಮ ರಾಷ್ಟ್ರ ನಿರ್ಮಾಣದ ಕಡೆಗೆ ಹರಿಸುವಂತೆ ಪ್ರೋತ್ಸಾಹಿಸಬೇಕು. ಅದೇ ರೀತಿ ತಮ್ಮ ಒಡನಾಟಕ್ಕೆ ಬರುವ ಎಲ್ಲರನ್ನೂ ಒಳ್ಳೆಯವರನ್ನಾಗಿ ಮಾಡುವ ಶಕ್ತಿ ಮಕ್ಕಳಲ್ಲಿದೆ. ಮಕ್ಕಳಿಗಾಗಿ ಆಸ್ತಿ ಮಾಡದೆ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದರೆ ಭವ್ಯ ಭಾರತ ಕಾಣಬಹುದು ಎಂದು ಅಭಿಪ್ರಾಯಪಟ್ಟರು.ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಕ್ಕಳಲ್ಲಿ ಅನುಕರಣಾ ಸ್ವಭಾವ ಹೆಚ್ಚು. ಹಿಂದಿನ ದಿನಮಾನದ ಮಕ್ಕಳಿಗಿಂತ ಈಗಿನ ಮಕ್ಕಳ ಬಾಲ್ಯ ಜೀವನಶೈಲಿ ಬಹಳಷ್ಟು ಬದಲಾಯಿಸಿದೆ. ಆದ್ದರಿಂದ ಅವರಿಗೆ ಉತ್ತಮವಾದುದನ್ನು ಪ್ರದರ್ಶಿಸಿ, ಬೋಧಿಸಿದರೆ ಪೂರಕವಾದ ವಾತಾವರಣ ನಿರ್ಮಿಸಿದಂತಾಗುತ್ತದೆ. ಪಠ್ಯದ ಜತೆಗೆ ಪಠ್ಯಪೂರಕ ಬೋಧನೆಯೂ ಉತ್ತಮ, `ಮಕ್ಕಳು ಯಾವುದನ್ನು ಆಲೋಚಿಸಬೇಕು ಎನ್ನುವುದಕ್ಕಿಂತ ಹೇಗೆ ಆಲೋಚಿಸಬೇಕು~ ಎಂಬುದನ್ನು ಬೋಧಿಸುವುದು ಉತ್ತಮ ಶಿಕ್ಷಕರ ಕರ್ತವ್ಯ ಆಗಿದೆ ಎಂದರು.ಹರಿಹರದ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಎನ್.ಜಿ. ಚಿನ್ಮಯಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ ಕಾರ್ಯದರ್ಶಿ ಜಿ. ಕುಮಾರನಾಯ್ಕ, ಚಿತ್ರದುರ್ಗ ಡಿಡಿಪಿಐ ಎಚ್. ಮಂಜುನಾಥ, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಬಿ. ರಂಗನಾಥ್, ಪ್ರಾಥಮಿಕ ಶಿಕ್ಷಣ ಸಮಿತಿ ಅಧ್ಯಕ್ಷ ಕೆ. ಮೌನೇಶ್ವರಾಚಾರ್, ಪ್ರಾಂಶುಪಾಲರಾದ ಪ್ರೊ.ಟಿ. ನೀಲಾಂಬಿಕೆ, ಆರ್. ಕುಮಾರಸ್ವಾಮಿ, ಸಿ.ಎಲ್. ಬಸವರಾಜ್, ಟಿ. ಗೌರಮ್ಮ, ಮುಖ್ಯಶಿಕ್ಷಕಿ ಎಂ.ಎನ್. ಶಾಂತಾ ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿ, ಶಿಕ್ಷಕ ವೃಂದದವರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿ ಕಲಾವಿದರು ಜನಪದ ಮತ್ತು ವಚನ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.ತರಳಬಾಳು ಸಂಗೀತ ಶಾಲೆ ಮಕ್ಕಳು ನಾಡಗೀತೆ ಹಾಡಿದರು. ಕೆ.ಎನ್. ಅರ್ಪಿತಾ ಸ್ವಾಗತಿಸಿದರು. ಡಿ.ಎನ್. ಎಸ್.ಎನ್. ಪ್ರಕೃತಿ ಮತ್ತು ಕೆ.ಎನ್. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.  ವಿನಯ್ ವಂದಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.