ಸೋಮವಾರ, ಮೇ 23, 2022
20 °C

ಮಕ್ಕಳಿಂದಲೇ ಹಸಿರು ಕ್ರಾಂತಿ

ಹ.ಸ.ಬ್ಯಾಕೋಡ Updated:

ಅಕ್ಷರ ಗಾತ್ರ : | |

ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರತಿ ಶಾಲೆಯಲ್ಲಿಯೂ (ವರ್ಷಕ್ಕೊಮ್ಮೆ ಮಾತ್ರ) ಮಕ್ಕಳು ಶಾಲಾ ಆವರಣದಲ್ಲಿ ಗಿಡ ನೆಟ್ಟು ವನ ಮಹೋತ್ಸವ ಆಚರಿಸುವುದು ಸಾಮಾನ್ಯ. ಆದರೆ ನಗರದ ಹೊರವಲಯದ ಇಮ್ಮಡಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಪ್ರಸಕ್ತ ಬೇಸಿಗೆಯಲ್ಲಿ ಐನೂರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು. ಅಷ್ಟೇ ಅಲ್ಲ ನೆಟ್ಟ ಸಸಿ ಬೆಳೆಸುವ ಹೊಣೆ ಸಹ ಹೊತ್ತು ಹಸಿರು ಕ್ರಾಂತಿಗೆ ಕಾರಣಕರ್ತರಾದರು. ವಿಶೇಷವೆಂದರೆ ಇದೇಸಂದರ್ಭದಲ್ಲಿ ಎಲ್ಲಾ ಮಕ್ಕಳು ಶಾಲೆಯಲ್ಲಿ ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಪ್ರತಿಜ್ಞೆಯನ್ನೂ ಮಾಡಿ ಪ್ಲಾಸ್ಟಿಕ್ ಮುಕ್ತ ಶಾಲೆಯನ್ನಾಗಿಸುವತ್ತ ಮೊದಲ ಹೆಜ್ಜೆ ಇಟ್ಟರು.ಇದಕ್ಕೆಲ್ಲಾ ಮೂಲ ಕಾರಣಕರ್ತ ಪರಿಸರವಾದಿ ಹಾಗೂ ನಟ ಸುರೇಶ ಹೆಬ್ಳಿಕರ್. 1998ರಲ್ಲಿ ಇಕೋ ವಾಚ್ ಎಂಬ ‘ಪರಿಸರ’ ಸಂಸ್ಥೆ ಹುಟ್ಟು ಹಾಕಿ ಅದರ ಮೂಲಕ ಪರಿಸರ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಸಕ್ತ ವರ್ಷ ಮೊಟ್ಟ ಮೊದಲ ಬಾರಿಗೆ ಸಂಸ್ಥೆಯ ಮೂಲಕ ‘ಹಸಿರು ಶಾಲೆ’ ಎಂಬ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಅದಕ್ಕೆ ಇಮ್ಮಡಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯನ್ನು ಆಯ್ಕೆ ಮಾಡಿಕೊಂಡು ದತ್ತು ತೆಗೆದುಕೊಂಡಿದ್ದಾರೆ.ಇದರ ಅಡಿ ಶಾಲಾ ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸುವ ಮಹತ್ತರ ಕಾರ್ಯ ಜತೆಗೆ ಅದೇ ಮಕ್ಕಳಿಂದಲೇ ಸಸಿ ನೆಡುವ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ವಿವಿಧ ಬಗೆಯ ಒಟ್ಟು 500 ಸಸಿಗಳನ್ನು ನೆಡಿಸಿದ್ದಾರೆ. ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ಪ್ರಾಯೋಗಿಕವಾಗಿ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಶಾಲೆಯಲ್ಲಿ ಮಳೆ ನೀರು ಸಂಗ್ರಹ ಹಾಗೂ ಸೌರ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಕುರಿತು ಮಾಹಿತಿ ನೀಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾಲೆಯ ಮಧ್ಯ ಭಾಗದಲ್ಲಿ ಮಳೆ ನೀರು ಸಂಗ್ರಹದ ತೊಟ್ಟಿ ನಿರ್ಮಿಸಿದ್ದಾರೆ. ಸುಮಾರು 10 ಎಕರೆ ವಿಸ್ತೀರ್ಣವುಳ್ಳ ಇಮ್ಮಡಿಹಳ್ಳಿ ಶಾಲೆ ಆವರಣದಲ್ಲಿ ಪ್ರತಿ ವರ್ಷ 4500 ಸಾವಿರ ಲೀಟರ್ ಮಳೆ ನೀರನ್ನು ಸಂಗ್ರಹಿಸುವ ಗುರಿಯೊಂದಿಗೆ ಅಂತಜರ್ಲವನ್ನು ಹೆಚ್ಚಿಸುವ ಪ್ರಯತ್ನವನ್ನು ಮಕ್ಕಳ ಮೂಲಕವೇ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ ಹೆಬ್ಳಿಕರ್.ಶಾಲಾ ಆವರಣದಲ್ಲಿ ಮಾತ್ರವಷ್ಟೇ ಅಲ್ಲ ಊರಿನಾಚೆಯೂ ಶಾಲಾ ಮಕ್ಕಳಿಂದಲೇ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಲ್ಲದೆ ಕಿರು ನಂದನವನ ನಿರ್ಮಿಸುವತ್ತಲೂ ಮನಸ್ಸು ಮಾಡಿರುವ ಅವರು ಉದ್ಯಾನವನ್ನು ಹೇಗೆ ನಿರ್ವಹಣೆ ಮಾಡುವುದು ಎಂಬುದರ ಕುರಿತು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.ಈಗಾಗಲೇ ಇಕೋವಾಚ್ ಧಾರವಾಡ, ಹಾವೇರಿ, ಬೆಳಗಾವಿ, ಕಾರವಾರ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯ ವಿವಿಧೆಡೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದೆ. ಬೆಂಗಳೂರು ನಗರದ ಹಳೆ ವಿಮಾನಪುರ ಮುಖ್ಯ ರಸ್ತೆಗೆ ಹೊಂದಿಕೊಂಡು ‘ಸೇನಾ ಅರಣ್ಯ’ ನಿರ್ಮಿಸಿದೆ. ಇದಕ್ಕೆ ಸೇನಾಪಡೆ ಇಕೋವಾಚ್‌ಗೆ 200 ಎಕರೆ ಭೂಮಿ ನೀಡಿತ್ತು. ಆ ಭೂಪ್ರದೇಶದಲ್ಲಿ ಪರಿಸರ ತಜ್ಞರಾದ ಪ್ರೊ. ಸುಭಾಷಚಂದ್ರ, ಪ್ರೊ. ಹರೀಶ, ಮಾಧುರಿ ದೇವಧರ ಹಾಗೂ ಅಕ್ಷಯ ಹೆಬ್ಳಿಕರ್ ಅವರುಗಳ ಸಹಕಾರದೊಂದಿಗೆ 130 ಪ್ರಭೇದದ ಸುಮಾರು 50 ಸಾವಿರ ಗಿಡಗಳನ್ನು ನೆಟ್ಟು ಹಸಿರು ಕ್ರಾಂತಿ ಮಾಡಿದ್ದಾರೆ.ದೊಡ್ಡಬಳ್ಳಾಪುರ ಹಾಗೂ ನೆಲಂಗಲ ಹೆದ್ದಾರಿಗಳ ಉದ್ದಕ್ಕೂ ಸುಮಾರು 500 ಎಕರೆ ಭೂಮಿಯಲ್ಲಿ ಒಟ್ಟು 25 ಸಾವಿರ ಸಸಿಗಳನ್ನು ನೆಡಲಾಗಿದೆ. ಅಲ್ಲದೆ ಅವುಗಳನ್ನು ಬೆಳೆಸುವತ್ತವೂ ಗಮನ ನೀಡುತ್ತಿದೆ. ಸ್ವತಃ ಹೆಬ್ಳಿಕರ್ ವಾರದಲ್ಲಿ ಮೂರು - ನಾಲ್ಕು ಬಾರಿ ಅಲ್ಲಿ ಹೋಗಿ ಸಸಿ ನೋಡಿಕೊಂಡು ಬರುತ್ತಾರೆ. ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಕೂಡ್ಲು ಗ್ರಾಮದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಪಡೆಯ ಭೂ ಪ್ರದೇಶದಲ್ಲಿ ‘ಇಕೋ ಪಾರ್ಕ್’ ಮಾಡಲು ಮುಂದಾಗಿದ್ದಾರೆ.ಮುಂಬರುವ ಎರಡು ವರ್ಷಗಳ ಕಾಲಾವಧಿಯಲ್ಲಿ ಬೆಂಗಳೂರು ಸುತ್ತಮುತ್ತಲೂ ಸುಮಾರು 1.5 ಲಕ್ಷ ಗಿಡಗಳನ್ನು ನೆಡಬೇಕು, ಕಾಂಕ್ರೀಟ್ ಕಾಡನ್ನು ನಗರ ಅರಣ್ಯವಾಗಿ ಮಾಡಬೇಕು ಎಂಬುದು ಇಕೋವಾಚ್ ಗುರಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.