ಗುರುವಾರ , ಮೇ 13, 2021
24 °C

`ಮಕ್ಕಳಿಗೆ ಶಿಕ್ಷಣದಿಂದ ದೇಶದ ಉನ್ನತಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ದೇಶದ ಉನ್ನತಿಯಾಗಬೇಕಾದರೆ ಮಕ್ಕಳನ್ನು ವಿದ್ಯಾವಂತರಾಗಿ ಬೆಳೆಸಬೇಕಾಗಿದೆ ಎಂದು ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಟಿ.ಜಿ.ಶಿವಶಂಕರೇ ಗೌಡ ಹೇಳಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಪುತ್ತೂರು, ಕಾರ್ಮಿಕ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಂಜೆ ಪುತ್ತೂರಿನ ಹಾರಾಡಿಯ ಸಾರ್ವಜನಿಕ ವಿದ್ಯಾರ್ಥಿನಿ ನಿಲಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೆಲಸಗಾರರ ಅಲಭ್ಯತೆ, ವಿದ್ಯಾಭ್ಯಾಸದ ತಿಳಿವಳಿಕೆಯ ಕೊರತೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡದಿರುವುದು ಮಕ್ಕಳು ಬಾಲಕಾರ್ಮಿಕರಾಗುವಂಥ ಅಪಾಯಕಾರಿ ಬೆಳವಣಿಗೆಗೆ ಕಾರಣವಾಗುತ್ತಿದೆ. ಮಕ್ಕಳನ್ನು ದುಡಿಮೆಗೆ ಇಳಿಸದೆ ಅವರ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸುವ ಮೂಲಕ  ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಕೆಲಸ ಆಗಬೇಕಿದೆ ಎಂದರು.ಮಕ್ಕಳನ್ನು ದುಡಿಮೆಗೆ ಇಳಿಸದೆ ವಿದ್ಯಾವಂತರನ್ನಾಗಿಸಬೇಕು. ಮಕ್ಕಳನ್ನು ಹೋಟೆಲ್, ಅಂಗಡಿ ಮತ್ತು ಕಾರ್ಖಾನೆಗಳಲ್ಲಿ ದುಡಿಸುವುದು ಅಪಾಯಕಾರಿಯಾಗಿದೆ ಎಂದ ಅವರು ಮಕ್ಕಳು ಕೂಡ ದುಡಿಮೆಯ ಕಡೆಗೆ ಗಮನ ಹರಿಸದೆ ವಿದ್ಯಾಭ್ಯಾಸ ಮತ್ತು ತಮ್ಮ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕೆಂದು ಕರೆಯಿತ್ತರು.ಪುತ್ತೂರಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಶರವಣನ್ ಎಸ್ ಅವರು ಮಾತನಾಡಿ, ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡಿ ಚಿಗುರಿನಲ್ಲೇ ಭವಿಷ್ಯ ಚಿವುಟಿ ಹಾಕಿದರೆ ಮಾನವ ಸಂಪನ್ಮೂಲ ನಾಶವಾಗುತ್ತದೆ ಎಂದು ಎಚ್ಚರಿಸಿದರು.ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಎಲ್ಲರೂ ಕೈಜೋಡಸಬೇಕು ಎಂದು ಅವರು ಕರೆಯಿತ್ತರು.ಪುತ್ತೂರಿನ ಸಹಾಯಕ ಸರ್ಕಾರಿ ಅಭಿಯೋಜಕ ಸಿ.ತಮ್ಮಣ್ಣ ಅವರು ಮಾತನಾಡಿ ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿದ್ದು, ಅದನ್ನು ತೊಡೆದು ಹಾಕಲು ಸಂಘ ಸಂಸ್ಥೆಗಳು ಹಾಗೂ ಸಮಾಜದ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ದಯಾನಂದ ಪಿ ಅವರು ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ನ್ಯಾಯಾಧೀಶೆ ಪ್ರೀತ್.ಜೆ , ಪುತ್ತೂರು ವಕೀಲರ ಸಂಘದ ಅಧ್ಯಕ್ಷ ದೇವಾನಂದ ಕೆ, ವಕೀಲರ ಸಂಘದ ಕಾರ್ಯದರ್ಶಿ ಜಿ.ಜಗನ್ನಾಥ ರೈ ಮುಖ್ಯ ಅತಿಥಿಗಳಾಗಿದ್ದರು.ಪುತ್ತೂರಿನ ವಕೀಲ ಶ್ಯಾಮ್ ಪ್ರಸಾದ್ ಕೈಲಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಬಾಲಕಾರ್ಮಿಕ ನಿಷೇಧ ಕಾಯ್ದೆಯ ಕುರಿತು ಮಾಹಿತಿ ನೀಡಿದರು. ಕಾರ್ಮಿಕ ಇಲಾಖೆಯ ಚಿದಾನಂದ ಕಾಮತ್ ಸ್ವಾಗತಿಸಿ ವಂದಿಸಿದರು.ಹಾರಾಡಿ ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕಿ ಶಶಿರೇಖಾ, ಕೊಂಬೆಟ್ಟು ಬಿಸಿಎಂ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ  ಕೃಷ್ಣ, ವಕೀಲ ಜನಾರ್ಧನ್ ಬೆಟ್ಟಂಪಾಡಿ , ವಕೀಲೆ ಸ್ವಾತಿ ಜೆ.ರೈ, ವಿದ್ಯಾರ್ಥಿ ನಾಯಕಿ ನಯನಾ ಶ್ವೇತಾ ಎಚ್.ಆರ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.