ಗುರುವಾರ , ಏಪ್ರಿಲ್ 15, 2021
22 °C

ಮಕ್ಕಳ ಅನ್ನಕ್ಕೆ ಕನ್ನ: ನಿರ್ದಾಕ್ಷಿಣ್ಯ ಕ್ರಮ; ಟಿ. ರವಿಕುಮಾರ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹಾಸ್ಟೆಲ್‌ಗಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯ ಪೂರೈಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ. ರವಿಕುಮಾರ್ ಅಧಿಕಾರಿಗೆ ಸೂಚಿಸಿದರು.

ಸೋಮವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ ಎಲ್ಲ ಹಾಸ್ಟೆಲ್‌ಗಳಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಬೇಕು. ಇದು ಟೆಂಡರ್‌ನಲ್ಲಿ ಗುತ್ತಿಗೆ ಪಡೆದವರ ಜವಾಬ್ದಾರಿ ಎಂದು ತಿಳಿಸಿದರು.

ಇತ್ತೀಚೆಗೆ ಮಾರಘಟ್ಟ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದಾಗ, ಕಳಪೆ ದವಸ ಧಾನ್ಯ ಬಳಸುತ್ತಿರುವುದು ಕಂಡುಬಂತು. ಅಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ. ಸರ್ಕಾರ ಅನುದಾನ ನೀಡುತ್ತಿದ್ದರೂ ಸದ್ಬಳಕೆಯಾಗುತ್ತಿಲ್ಲ. ಬೊಮ್ಮನಕಟ್ಟೆಯಲ್ಲೂ ಇದೇ ಪರಿಸ್ಥಿತಿ. ಮನೆಯಲ್ಲೂ ತಮ್ಮ ಮಕ್ಕಳಿಗೆ ಇಂತಹ ಕಳಪೆ ಆಹಾರ ಧಾನ್ಯವನ್ನು ಗುತ್ತಿಗೆದಾರರು ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.

ಆಹಾರ ಧಾನ್ಯ ವಾರ್ಡನ್‌ಗಳು ಪರಿಶೀಲಿಸಬೇಕು. ಕಳಪೆಯಾಗಿದ್ದರೆ ಸ್ವೀಕರಿಸದೇ ಹಿಂತಿರುಗಿ ಕಳುಹಿಸಬೇಕು ಎಂದು ಸೂಚಿಸಿದ ಅವರು, ಕಳಪೆ ಆಹಾರಧಾನ್ಯ ಪೂರೈಸುವ ಗುತ್ತಿಗೆದಾರರಿಗೆ ಹಣ ನೀಡಬಾರದು ಎಂದು  ಸೂಚಿಸಿದರು.

ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದಾಗ ಜಿ.ಪಂ. ಸದಸ್ಯರು ಸೇರಿದಂತೆ ಯಾವುದೇ ಜನಪ್ರತಿನಿಧಿ ಹಸ್ತಕ್ಷೇಪ ಮಾಡಬಾರದು. ಅಧಿಕಾರಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಹೇಳಿದರು.

ಒಂದಿಬ್ಬರನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಮಾತ್ರ ಸುಧಾರಣೆ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟರು.

ಹೊಸದುರ್ಗ ತಾಲ್ಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ `ಡಿ~ ಗ್ರೂಪ್ ನೌಕರರಿಗೆ ಸಮರ್ಪಕವಾಗಿ ವೇತನ ನೀಡದೆ ವಂಚನೆ ಮಾಡಲಾಗುತ್ತಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಬಸವರಾಜ್ ಸಭೆಯಲ್ಲಿ ದೂರಿದರು.

ನಿಯಮಗಳ ಪ್ರಕಾರ, ್ಙ 5,121 ವೇತನ ನೀಡಬೇಕು. ಆದರೆ, ಶ್ರೀರಾಂಪುರ ಸೇರಿದಂತೆ ವಿವಿಧೆಡೆ ್ಙ 2 ಸಾವಿರ ಮಾತ್ರ ನೀಡಲಾಗುತ್ತಿದೆ. ಇನ್ನೂ ಕೆಲವೆಡೆ 6 ತಿಂಗಳಿಂದ ವೇತನ ನೀಡಿಲ್ಲ ಎಂದು ದೂರಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷರು ಸೂಚಿಸಿದರು.

ಶಿಕ್ಷಣ ಇಲಾಖೆ ವ್ಯಾಪಾರದ ಕೇಂದ್ರವಾಗುತ್ತಿದೆ. ಹೆಚ್ಚುವರಿ ಶಿಕ್ಷಕರನ್ನು ಡಮ್ಮಿ ಕೌನ್ಸೆಲಿಂಗ್ ಮಾಡಿ ವ್ಯಾಪಾರೀಕರಣ ಮಾಡುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಗೆ `ಛೀ ಥೂ~ ಎಂದು ಸಾರ್ವಜನಿಕರು ಉಗಿಯುತ್ತಿದ್ದಾರೆ. ಇಲಾಖೆ ಮುಖ್ಯಸ್ಥರು ಸರಿ ಇದ್ದರೆ ಇಂತಹ ವ್ಯವಸ್ಥೆಯಾಗುತ್ತಿಲ್ಲ. ಮೊಳಕಾಲ್ಮುರು ತಾಲ್ಲೂಕಿನ ಶಿಕ್ಷಕರನ್ನು ಚಿತ್ರದುರ್ಗ ತಾಲ್ಲೂಕಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಚಂದ್ರಪ್ಪ ದೂರಿದರು.

ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಜನಪ್ರತಿನಿಧಿಗಳನ್ನು ಯಾವುದೇ ರೀತಿ ಪರಿಗಣಿಸುತ್ತಿಲ್ಲ. ಹಾಗಿದ್ದರೆ ನಾವೇಕೆ ಈ ಸಭೆಗೆ ಬರಬೇಕು. ಜಿ.ಪಂ. ಅಧ್ಯಕ್ಷರು ಮತ್ತು ಸಿಇಒ ಏನು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಡಿಪಿಐ ಎಚ್. ಮಂಜುನಾಥ್ ಜಿಲ್ಲೆಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ಕೌನ್ಸೆಲಿಂಗ್  ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯೋಜಿಸಿದ್ದಾರೆ. ಚಳ್ಳಕೆರೆಯಲ್ಲಿ 15 ಮತ್ತು ಚಿತ್ರದುರ್ಗದಲ್ಲಿ 34 ಶಿಕ್ಷಕರನ್ನು ಕೌನ್ಸೆಲಿಂಗ್ ಮಾಡಿ ಅಗತ್ಯವಿರುವ ಶಾಲೆಗಳಿಗೆ ನಿಯೋಜಿಸಲಾಗಿದೆ. ಜಿಲ್ಲಾ ಹಂತದಲ್ಲಿ ನಾಲ್ವರು ಶಿಕ್ಷಕರನ್ನು ತಾವು ಕೌನ್ಸೆಲಿಂಗ್ ಮಾಡಿದ್ದೇನೆ. ಎಲ್ಲವನ್ನೂ ಕಾನೂನು ಪ್ರಕಾರ ಮಾಡಲಾಗಿದ್ದು, ದಾಖಲೆ ಪರಿಶೀಲಿಸಬಹುದು ಎಂದು ಸವಾಲು ಹಾಕಿದರು.

ಹೊಸದುರ್ಗ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರು ಶಿಷ್ಟಾಚಾರ ಪಾಲಿಸದೇ ತಮಗೆ ಅವಮಾನ ಮಾಡಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಬಸವರಾಜ್ ದೂರಿದರು.

ನೀರು ಪೂರೈಸಿ

ಹಿರಿಯೂರು ತಾಲ್ಲೂಕಿನ ಪಿಲ್ಲಾಜನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸ್ವಾತಂತ್ರ್ಯ ದಿನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ. ತಕ್ಷಣ ಈ ಸಮಸ್ಯೆ ಬಗೆಹರಿಸುವಂತೆ ಅಧ್ಯಕ್ಷ ರವಿಕುಮಾರ್ ಸೂಚಿಸಿದರು.

ವಿಳಂಬಕ್ಕೆ ಸನ್ಮಾನ!

ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಯಾವುದೇ ಮಾಹಿತಿಯನ್ನು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನೀಡುತ್ತಿಲ್ಲ. ಹಲವು ಬಾರಿ ಮಾಹಿತಿ ಕೇಳಿದ್ದರೂ ಕೊಟ್ಟಿಲ್ಲ. ಅವರ ವಿಳಂಬತನಕ್ಕೆ ಸನ್ಮಾನ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಉಪಾಧ್ಯಕ್ಷೆ ಭಾರತಿ ಕಲ್ಲೇಶ್, ಸಿಇಒ ಪಿ.ಎ. ಗೋಪಾಲ್, ಯೋಜನಾಧಿಕಾರಿ ಚಂದ್ರಪ್ಪ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.