ಸೋಮವಾರ, ಜೂನ್ 14, 2021
27 °C

ಮಕ್ಕಳ ಅಪೌಷ್ಟಿಕತೆ ತಗ್ಗಿಸಲು ಕ್ರಮ,ಬಜೆಟ್‌ನಲ್ಲಿ ಆದ್ಯತೆ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳ ಅಪೌಷ್ಟಿಕತೆಯನ್ನು ತಗ್ಗಿಸಲು ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಮಕ್ಕಳ ಅಪೌಷ್ಟಿಕತೆ ನಿರ್ಮೂಲನಾ ವೇದಿಕೆಯು ಒತ್ತಾಯಿಸಿದೆ.



ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ವೇದಿಕೆ ಯ ಸಂಚಾಲಕ ಮ್ಯಾಥ್ಯೂಸ್ ಫಿಲಿಪ್ಸ್, `ರಾಜ್ಯದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದ್ದರೂ ಸರ್ಕಾರ ಈ ಬಗ್ಗೆ ಗಮನ ನೀಡುತ್ತಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಪೌಷ್ಟಿತೆಯಿಂದ ಬಳಲುತ್ತಿರುವ ಮಕ್ಕಳಿದ್ದಾರೆ. ಆದರೆ ಸರ್ಕಾರ ಸುಳ್ಳು ಅಂಕಿ ಅಂಶಗಳನ್ನು ಪ್ರದರ್ಶಿಸುತ್ತಿದೆ. ಅಂಗನವಾಡಿಗಳಿಗೆ ಕಳಪೆಯ ಪೌಷ್ಟಿಕ ಆಹಾರ ಪೂರೈಕೆ ಮಾಡುತ್ತಿರುವ ಕಂಪೆನಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು~ ಎಂದು ಅವರು ಒತ್ತಾಯಿಸಿದರು.



`ಅಪೌಷ್ಟಿಕತೆ ಇರುವ ಮಕ್ಕಳ ಗುರುತಿಸುವಿಕೆಯಲ್ಲಿ ಸರ್ಕಾರ ಸೋಲುತ್ತಿದೆ. ಅಪೌಷ್ಟಿಕತೆಯ ಬಗ್ಗೆ ಮಾಧ್ಯಮಗಳು ಹೆಚ್ಚಿನ ಆಸಕ್ತಿ ವಹಿಸಿದ ಕಾರಣಕ್ಕೆ ರಾಯಚೂರಿನಲ್ಲಿ ಮಕ್ಕಳ ಮರು ಸಮೀಕ್ಷೆ ಮಾಡಲಾಗುತ್ತಿದೆ.



ಆದರೆ ಆ ಸಮೀಕ್ಷೆಯ ಅಂಕಿ ಅಂಶಗಳೂ ತಪ್ಪಾಗಿವೆ. ರಾಯಚೂರು ಜಿಲ್ಲೆಯೊಂದರಲ್ಲೇ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳಿದ್ದಾರೆ. ಆದರೆ ಸರ್ಕಾರ ಸುಮಾರು ನಾಲ್ಕು ಸಾವಿರ ಅಪೌಷ್ಟಿಕ ಮಕ್ಕಳ ಅಂಕಿ ಅಂಶವನ್ನು ತೋರುತ್ತಿದೆ. ಇದು ಸರ್ಕಾರವೇ ಮಾಡುತ್ತಿರುವ ಪ್ರಾದೇಶಿಕ ಅಸಮಾನತೆ~ ಎಂದು ಅವರು ಆರೋಪಿಸಿದರು.



ಸಾಮಾಜಿಕ ಪರಿವರ್ತನಾ ಜನಾಂದೋಲನದ ರಾಜ್ಯ ಸಂಘಟಕ ವೈ.ಮರಿಸ್ವಾಮಿ ಮಾತನಾಡಿ, `ರಾಜ್ಯದಲ್ಲಿ ಒಟ್ಟು 71,605 ಮಕ್ಕಳು ತೀವ್ರ ಹಂತದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆರು ವರ್ಷದೊಳಗಿನ ಸುಮಾರು 68,55,801 ಮಕ್ಕಳಲ್ಲಿ ಕೇವಲ 37,74,267 ಮಕ್ಕಳನ್ನು ಮಾತ್ರ ಅಂಗನವಾಡಿಗಳಿಗೆ ಸೇರಿಸಲಾಗಿದೆ. ಈ ಅಂಶ ಸರ್ಕಾರಕ್ಕೆ ತಿಳಿದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ದುರಂತ~ ಎಂದರು.



`ಪಕ್ಕದ ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿನ ಸರ್ಕಾರಗಳು ಪ್ರತಿ ಮಗುವಿಗೆ ಸುಮಾರು 11 ರೂ.ಗಳ ವರೆಗೆ ಹಣವನ್ನು ಮೀಸಲಿಡುತ್ತಿವೆ. ಆದರೆ ರಾಜ್ಯದಲ್ಲಿ ಕೇವಲ ನಾಲ್ಕು ರೂ.ಗಳನ್ನು ಮಾತ್ರ ಆರು ವರ್ಷದೊಳಗಿನ ಮಕ್ಕಳಿಗಾಗಿ ಮೀಸಲಿಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಪ್ರತಿ ಮಗುವಿಗೆ ಕನಿಷ್ಠ 10 ರೂ. ಮೀಸಲಿಡಬೇಕು. ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಲು ಇನ್ನಾದರೂ ರಾಜ್ಯ ಸರ್ಕಾರ ಮುಂದಾಗಬೇಕು~ ಎಂದು  ಒತ್ತಾಯಿಸಿದರು.



ಪತ್ರಿಕಾಗೋಷ್ಠಿಯಲ್ಲಿ ಬಾಲ ಕಾರ್ಮಿಕ ವಿರೋಧಿ ಆದೋಲನದ ಬೆಂಗಳೂರು ಜಿಲ್ಲಾ ಸಂಚಾಲಕ ನಾಗಸಿಂಹರಾವ್, ಜನಾರೋಗ್ಯ ಆಂದೋಲನ ಕರ್ನಾಟಕದ ರಾಜ್ಯ ಸಹ ಸಂಚಾಲಕಿ ಡಾ.ಆಶಾ ಕಿಲಾರೊ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.