ಸೋಮವಾರ, ಮೇ 17, 2021
26 °C

ಮಕ್ಕಳ ದುಡಿಮೆ ನಿಲ್ಲಿಸಿ: ನ್ಯಾ.ರೇಣುಕಾ ಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಮಕ್ಕಳ ದುಡಿಮೆ ನಿಲ್ಲಿಸಬೇಕು. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ವರ್ಷವಿಡೀ ಆಂದೋಲನ ನಡೆಯಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ರೇಣುಕಾಪ್ರಸಾದ್ ಹೇಳಿದರು.ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಮನೆ ಕೆಲಸಕ್ಕೆ, ಗ್ಯಾರೇಜ್, ಹೋಟೆಲ್, ಅಂಗಡಿಗಳಲ್ಲಿ ಕೆಲಸಕ್ಕೆ ನೆಮಕ ಮಾಡಿಕೊಂಡಿರುವವರ ವಿರುದ್ಧ ಕೂಡಲೇ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಜನ ಮಾಹಿತಿ ನೀಡಬೇಕು. ಪೋಷಕರು ಹಣಕ್ಕಾಗಿ ಮಕ್ಕಳನ್ನು ದುಡಿಮೆಗೆ ಕಳುಹಿಸದೆ ಶಾಲೆಗೆ ಕಳುಹಿಸಿ ಶಿಕ್ಷಿತರನ್ನಾಗಿಸಬೇಕು ಎಂದರು.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ವಿ.ರೇಣುಕಾ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸರ್ಕಾರ ಹಲ ಯೋಜನೆಗಳನ್ನು ರೂಪಿಸಿದೆ. ಅವುಗಳ ಅನುಷ್ಠಾನಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆ, ಕಾರ್ಮಿಕ ಇಲಾಖೆ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.ಮಕ್ಕಳನ್ನು ಅಪಾಯಕಾರಿ ಕೆಲಸಕ್ಕೆ ತಳ್ಳಿ ದುಡಿಸಿಕೊಳ್ಳುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಸಿಬ್ಬಂದಿ ತೀವ್ರವಾಗಿ ತಪಾಸಣೆ ಮಾಡಿ ಬಾಲಕಾರ್ಮಿಕರನ್ನು ಗುರುತಿಸಿ ರಕ್ಷಿಸಬೇಕು ಎಂದರು.ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಂ.ಝುಲ್ಫಿಕರ್ ಉಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ವೆಂಕಟೇಶಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಟಿ.ಎಂ.ಶಿವಣ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಜಗೋಪಾಲ್, ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವಿಜಯಲಕ್ಷ್ಮಿ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ನಡೆದ ಜಾಗೃತಿ ಮೆರವಣಿಗೆಗೆ ಎಸ್.ಎಂ.ಝುಲ್ಫಿಕರ್ ಉಲ್ಲಾ ಚಾಲನೆ ನೀಡಿದರು.ಛಾಯಾಚಿತ್ರ ಪ್ರದರ್ಶನ: ದಿನಾಚರಣೆ ಪ್ರಯುಕ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ವಕೀಲರ ಸಂಘ ಮತ್ತು ಜಾಗೃತಿ ಸೇವಾ ಸಂಸ್ಥೆ ಆಶ್ರಯದಲ್ಲಿ ಬುಧವಾರ ಸಂಜೆ ನಗರದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಬಾಲ ಕಾರ್ಮಿಕರ ಛಾಯಾಚಿತ್ರ ಪ್ರದರ್ಶಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸೇರಿದಂತೆ ಎಲ್ಲ ಗಣ್ಯರೂ ವೀಕ್ಷಿಸಿದರು. ಸಾರ್ವಜನಿಕರು ಪ್ರದರ್ಶನ ವೀಕ್ಷಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.