ಸೋಮವಾರ, ಜನವರಿ 20, 2020
27 °C
ಮಳ್ಳೂರಿನಲ್ಲಿ ಮಕ್ಕಳ ಗ್ರಾಮಸಭೆ

ಮಕ್ಕಳ ಪ್ರಶ್ನೆಗಳಿಗೆ ಅಧಿಕಾರಿಗಳು ದಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಈಚೆಗೆ ಮಕ್ಕಳ ಗ್ರಾಮಸಭೆ ನಡೆಯಿತು. ಮಳ್ಳೂರು ಸುತ್ತ­ಮುತ್ತ­ಲಿನ 6 ಸರ್ಕಾರಿ ಶಾಲೆಗಳಿಂದ ಪಾಲ್ಗೊಂಡಿದ್ದ 297 ಮಕ್ಕಳು ಪಂಚಾ­ಯತಿ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ­ಗೈದರು. ಚುನಾ­ಯಿತ ಜನಪ್ರತಿನಿಧಿ­ಗಳಂತೆಯೇ ವಿವಿಧ ಕ್ಷೇತ್ರಗಳ ಕುರಿತು ಪ್ರಶ್ನೆಗಳನ್ನು ಕೇಳಿದ ಮಕ್ಕಳು, ಅಧಿಕಾರಿ­ಗಳನ್ನು ದಂಗು ಬಡಿ­ಸಿದರು. ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳಿಗೆ ಕಷ್ಟವಾಯಿತು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನೂರು ವರ್ಷಗಳಷ್ಟು ಹಳೆಯದಾಗಿದೆ. ಕಟ್ಟಡವನ್ನು ಯಾಕೆ ಇದುವರೆಗೆ ಪುನರ್‌ನಿರ್ಮಿಸಿಲ್ಲ, ಶಾಲೆಯ ಬಳಿ ಒಳಚರಂಡಿ ಏಕೆ ನಿರ್ಮಿಸಿಲ್ಲ, ವಿಷಯುಕ್ತ ಫ್ಲೋರೈಡ್ ಅಂಶವುಳ್ಳ ಕುಡಿಯುವ ನೀರು ಪೂರೈಕೆಯಾಗುವ ಕಡೆ ಫಿಲ್ಟರ್ ವ್ಯವಸ್ಥೆ ಯಾಕೆ ಮಾಡಿಲ್ಲ, ಶಾಲೆಗೆ ಯಾವಾಗ ಮೂಲ ಸೌಕರ್ಯ ಕಲ್ಪಿಸುವಿರಿ ಎಂದು ತಮ್ಮ ಶಾಲೆಗಳ ಹಲವು ಸಮಸ್ಯೆ ಕುರಿತು ಪ್ರಶ್ನೆಗಳನ್ನು ಕೇಳಿದರು.ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿದೆ ಎಂದು ಕೆಲ ವಿದ್ಯಾರ್ಥಿಗಳು ಹೇಳಿದರೆ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಿ ಎಂದು ಕೆಲವರು ಒತ್ತಾಯಿಸಿದರು. ಭಿಕ್ಷಾಟನೆ­ಯಲ್ಲಿ ತೊಡಗಿರುವ ಮಕ್ಕಳನ್ನು ಶಾಲೆಗೆ ಸೇರಿಸಿ. ಎಲ್ಲ ಶಾಲೆಗಳಲ್ಲೂ ಕಂಪ್ಯೂಟರ್‌ ತರಬೇತಿ ದೊರೆಯುವಂತೆ ಮಾಡಿ ಎಂದು ಬೇಡಿಕೆ ಮುಂದಿಟ್ಟರು.ಮಳ್ಳೂರು, ಮೇಲೂರು, ಕಾಚಹಳ್ಳಿ ಮತ್ತು ಮುತ್ತೂರು ಗ್ರಾಮಗಳ 6 ಶಾಲೆಗಳಿಂದ ಒಟ್ಟು 297 ಮಕ್ಕಳು ಗ್ರಾಮಸಭೆಯಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಗಿಡವೊಂದನ್ನು ನೆಡುವುದರ ಮೂಲಕ ಗ್ರಾಮಸಭೆಗೆ ಚಾಲನೆ ನೀಡಲಾಯಿತು. ಕಳೆದ ವರ್ಷ ನಡೆದ ಗ್ರಾಮಸಭೆಯ ವಿವರಣೆ ನೀಡಿದ ಕಾರ್ಯಕ್ರಮದ ಆಯೋಜಕರು, ‘ಕಳೆದ ವರ್ಷದ ಗ್ರಾಮಸಭೆಯಲ್ಲಿ ಮಕ್ಕಳು ಪ್ರಶ್ನಿಸಿದ್ದ 14 ಸಮಸ್ಯೆಗಳ ಪೈಕಿ 9 ಬಗೆಹರಿದಿವೆ. ಇನ್ನೂ 5 ಸಮಸ್ಯೆಗಳು ಬಾಕಿಯಿವೆ’ ಎಂದರು.ಜಿಲ್ಲಾ ಪಂಚಾಯತಿ ಮುಖ್ಯ­ಕಾರ್ಯನಿರ್ವಹಣಾಧಿಕಾರಿ ನೀಲಾ ಮಂಜುನಾಥ್‌ ಮಾತನಾಡಿ, ‘ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಗ್ರಾಮಸಭೆಗಳು ಉಪಯುಕ್ತವಾಗುತ್ತವೆ. ಮಕ್ಕಳು ತಮ್ಮ ಶಾಲೆಗೆ ಸಂಬಂಧಿಸಿದ ಸಮಸ್ಯೆಗಳ ಜೊತೆಗೆ ತಮ್ಮ ಗ್ರಾಮಗಳ ಸಮಸ್ಯೆಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ. ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲಾಗು­ವುದು ಎಂದು ಭರವಸೆ ನೀಡಿದರು.ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ವೆಂಕಟರಮಣಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯ­ನಿರ್ವಹಣಾಧಿಕಾರಿ ದೇವರಾಜೇಗೌಡ, ಲೋಕೋಪಯೋಗಿ ಕಾರ್ಯ­ನಿರ್ವಾ­ಹಕ ಎಂಜಿನಿಯರ್‌ ಸುಂದರ್‌ರಾಜ್‌, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತ ರಮೇಶ್‌, ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಾರ್ಯ­ಕರ್ತ ಶ್ರೀಧರ್‌, ಶಿಕ್ಷಣ ಸಂಯೋಜಕ ಬೈರಾರೆಡ್ಡಿ, ಮಳ್ಳೂರು ಗ್ರಾಮ ಪಂಚಾ­ಯತಿ ಅಧ್ಯಕ್ಷ ಆರ್‌.ನಿಶಾಂತ್‌ ಮತ್ತಿ­ತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)