ಗುರುವಾರ , ಜನವರಿ 30, 2020
18 °C

ಮಕ್ಕಳ ಮನಸ್ಸಿನ ವರ್ಣಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಮನಸ್ಸು ಕಲ್ಪನೆಗಳ ಗೂಡು. ಚಿಕ್ಕ ಪುಟ್ಟ ಸಂಗತಿಯೂ ಅವರಿಗೆ ಬೆರಗು ಹುಟ್ಟಿಸುತ್ತದೆ. ಅವರ ಕ್ರಿಯಾಶೀಲತೆ ಎಂಥವರಲ್ಲೂ ಅಚ್ಚರಿ ತರುವಂಥದ್ದು. ಆದರೆ ಈಗಿನ ಜೀವನಶೈಲಿಯಿಂದಾಗಿ ಬಣ್ಣದ ಕಡ್ಡಿ ಹಿಡಿಯಬೇಕಿದ್ದ ಮಕ್ಕಳು ಟಚ್‌ಸ್ಕ್ರೀನ್‌ ಮೊಬೈಲ್‌ಗಳಲ್ಲಿ ಮುಳುಗಿಹೋಗಿದ್ದಾರೆ. ಅವರ ಕ್ರಿಯಾಶೀಲತೆ ಆಧುನಿಕ ಯಂತ್ರಗಳಲ್ಲಿ ಕಳೆದುಹೋಗಿದೆ.ಆದರೆ ಇದಕ್ಕೆ ಅವಕಾಶ ಕೊಡದೆ ಮಕ್ಕಳ ಒತ್ತಡವನ್ನು ಕಲೆಯ ಮೂಲಕ ನಿವಾರಿಸಬೇಕು, ಅವರಲ್ಲಿನ ಪುಟ್ಟ ಕಲಾವಿದರನ್ನು ಗುರುತಿಸಬೇಕು ಎಂಬ ಉದ್ದೇಶದಿಂದ ಕೊಕುಯೊ ಕ್ಯಾಮ್ಲಿನ್‌ ಲಿಮಿಟೆಡ್‌ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ.

ಸತತ ನಲವತ್ತು ವರ್ಷಗಳಿಂದ ಸ್ಪರ್ಧೆ ನಡೆಯುತ್ತಿರುವುದು ವಿಶೇಷ. ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ನಿಟ್ಟಿನಿಂದ ಪ್ರತಿವರ್ಷವೂ ಚಿತ್ರಕಲಾ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿರುವುದು ಸಂಸ್ಥೆಯ ಹೆಗ್ಗಳಿಕೆ.2011ರಲ್ಲಿ ದೇಶದ 6,601 ಶಾಲೆಗಳ ನಲವತ್ತು ಲಕ್ಷದ ಎಂಬತ್ತೈದು ಸಾವಿರ ಮಕ್ಕಳು ಭಾಗವಹಿಸಿದ್ದು, ‘ಅತಿ ದೊಡ್ಡ ಕಲಾ ಸ್ಪರ್ಧೆ’ ಎಂದು ಗಿನ್ನೆಸ್‌ ದಾಖಲೆಗೆ ಸೇರಿದ್ದು ಇನ್ನೊಂದು ಗರಿಮೆ.‘ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಪ್ರತಿಯೊಂದು ಘಟನೆಯೂ ಅವರ ಮನಸ್ಸಿನಾಳಕ್ಕೆ ಇಳಿಯುತ್ತದೆ. ಅವರ ಮನಸ್ಸು ಅರಳುವುದು ಆಗಲೇ. ಆದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಮೇಲಿನ ಒತ್ತಡ ಹೆಚ್ಚುತ್ತಿದೆ. ಈ ಒತ್ತಡ ಇಳಿಸಲು ಇರುವ ಮಾರ್ಗ ಒಂದೇ; ಅದೇ ಕಲೆ. ಅವರ ಬೌದ್ಧಿಕ ಮಟ್ಟ ಹಾಗೂ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸುವಲ್ಲಿ ಕಲೆಯ ಪಾತ್ರ ಹಿರಿದು. ಅವರೊಳಗಿನ ಕ್ರಿಯಾಶೀಲತೆ ಗುರುತಿಸುವುದು ಪೋಷಕರ ಮತ್ತು ಶಿಕ್ಷಕರ ಕೆಲಸ. ಆದ್ದರಿಂದ ಪ್ರತಿ ವರ್ಷವೂ ಮಕ್ಕಳಿಗೆಂದೇ ರಾಷ್ಟ್ರೀಯ ಮಟ್ಟದಲ್ಲಿ ಕಲಾಸ್ಪರ್ಧೆ ಏರ್ಪಡಿಸುತ್ತಾ ಬಂದಿದ್ದೇವೆ’ ಎಂದು ಮಾಹಿತಿ ನೀಡಿದರು ಸಂಸ್ಥೆಯ ಚಂದ್ರಶೇಖರ್‌ ಓಜಾ.ಒಂದನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳಿಗೆ ಅವರ ಬುದ್ಧಿಮತ್ತೆಗೆ ಅನುಗುಣವಾಗಿ ಚಿತ್ರಕಲೆಯ ಪರಿಕಲ್ಪನೆಯನ್ನು ನೀಡಿ ಸ್ಪರ್ಧೆ ನಡೆಸಲಾಗುತ್ತದೆ.ಸಕಾರಾತ್ಮಕ ಕಲೆ

ಚಿಕ್ಕವರಿದ್ದಾಗಲೇ ಮಕ್ಕಳಲ್ಲಿ ನಕಾರಾತ್ಮಕ ಚಿಂತನೆಗಳು ತುಂಬಿಕೊಳ್ಳದಂತೆ ತಡೆಯಬೇಕೆಂಬ ಉದ್ದೇಶದಿಂದ ಸಕಾರಾತ್ಮಕ ವಿಷಯಗಳನ್ನು ಚಿತ್ರಕಲಾ ಸ್ಪರ್ಧೆಗೆ ನೀಡಲಾಗುತ್ತದೆ. ‘ನನ್ನ ಕುಟುಂಬ’, ‘ನಮ್ಮ ಸಾಂಸ್ಕೃತಿಕ ವೈಭವ’, ‘ನನ್ನ ಗೆಳೆಯ’, ‘ರಜಾ ದಿನಗಳ ಮಜಾ’, ‘ವನ್ಯ ಜೀವಿಗಳು’, ಹೀಗೆ ಮಕ್ಕಳನ್ನು ಹುರಿದುಂಬಿಸುವ ವಿಷಯಗಳನ್ನು ನೀಡುವ ಮೂಲಕ ಅವರಲ್ಲಿ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶ ಸಂಸ್ಥೆಯದ್ದು.  ‘ಈ ಬಾರಿಯ ಸ್ಪರ್ಧೆಯಲ್ಲೂ ಕರ್ನಾಟಕ ರಾಜ್ಯವೊಂದರಿಂದಲೇ 20,000 ಮಕ್ಕಳು ಭಾಗವಹಿಸಿದ್ದಾರೆ. ಇಂತಹ ಯೋಜನೆಗಳು ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಜಾಗೃತಗೊಳಿಸುತ್ತವೆ. ಈ ಬಾರಿ ಬೆಂಗಳೂರಿನ ಮಕ್ಕಳಿಗೆ ‘ಮೈ ಸಿಟಿ’ ಎಂಬ ವಿಷಯ ನೀಡಲಾಗಿದೆ. ಅವರ ಕಲ್ಪನೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ’ ಎನ್ನುತ್ತಾರೆ ಕ್ಯಾಮ್ಲಿನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ. ಶ್ರೀಕಾಂತ್.  ಪ್ರತಿ ವರ್ಷವೂ ನಡೆಯುವ ಈ ಸ್ಪರ್ಧೆಯಲ್ಲಿ ‘ಬೆಸ್ಟ್‌ ಎಂಟ್ರೀಸ್‌’, ‘ಬೆಸ್ಟ್‌ ಪರ್ಫಾಮಿಂಗ್‌ ಸ್ಕೂಲ್ಸ್‌ ಆಫ್‌ ದಿ ಇಯರ್‌’ ಪ್ರಶಸ್ತಿ ನೀಡಲಾಗುತ್ತದೆ. ಶಾಲಾ ಹಂತ, ಪ್ರಾದೇಶಿಕ ಹಂತ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ನೀಡಲಾಗುತ್ತದೆ. ಚಿತ್ರ ಕಲಾವಿದರು ಹಾಗೂ ಮಕ್ಕಳ ಮನೋವೈದ್ಯರು ಸ್ಪರ್ಧೆಯಲ್ಲಿ ಬಹುಮಾನಿತರನ್ನು ಆಯ್ಕೆ ಮಾಡಲಿದ್ದಾರೆ.ಒಂದು ವಿಷಯದ ಕುರಿತು ಮಕ್ಕಳಲ್ಲಿರುವ ಸ್ಪಷ್ಟತೆ, ಗ್ರಹಿಕಾ ಸಾಮರ್ಥ್ಯ, ಅನುಭವ, ಅನ್ವೇಷಣೆ, ಆಯ್ಕೆ, ಹೋಲಿಕೆ, ಪ್ರಯೋಗ, ವಿನ್ಯಾಸ, ಏಕಾಗ್ರತೆ, ಕ್ರಿಯಾಶೀಲತೆ ಎಲ್ಲವೂ ಅನಾವರಣಗೊಳ್ಳುವುದು ಕಲೆಯ ಮೂಲಕ ಎಂಬುದನ್ನು ಸಮರ್ಥಿಸುವ ಕ್ಯಾಮ್ಲಿನ್ ಈ ವರ್ಷ ಅಕ್ಟೋಬರ್‌ನಲ್ಲಿ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯ ಕುರಿತು ಇನ್ನಷ್ಟು ವಿವರಗಳಿಗೆ www.kokuyocamlin.comಗೆ ಭೇಟಿ ನೀಡಬಹುದು.

ಪ್ರತಿಕ್ರಿಯಿಸಿ (+)