ಶುಕ್ರವಾರ, ಮೇ 20, 2022
18 °C

`ಮಕ್ಕಳ ಸರ್ವಾಂಗೀಣ ವಿಕಾಸ ಸಮಾಜದ ಹೊಣೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬಡತನ, ಅನಕ್ಷರತೆ ಹಾಗೂ ಸುತ್ತಲ ಪರಿಸರದ ಕಾರಣದಿಂದ ಮಕ್ಕಳು ದಾರಿ ತಪ್ಪುತ್ತಿದ್ದು, ಅವರನ್ನು ಸರಿದಾರಿಗೆ ಕರೆತರುವ ಜವಾಬ್ದಾರಿ ಪೋಷಕರು ಹಾಗೂ ನಾಗರಿಕ ಸಮಾಜದ ಮೇಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಎಂ.ಶೆಟ್ಟರ್ ಹೇಳಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಶುಕ್ರವಾರ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ `ಬಾಲನ್ಯಾಯ ಕಾಯ್ದೆ ಹಾಗೂ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಕಾನೂನು ಶಿಬಿರ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೂರಕ ವಾತಾವರಣ ನಿರ್ಮಿಸುವುದು ಮತ್ತು ಅವರ ರಕ್ಷಣೆಗೆ ಸೂಕ್ತ ವಾತಾವರಣ ನಿರ್ಮಾ ಣವಾಗಬೇಕಾಗಿರುವುದು ಇಂದಿನ ಅಗತ್ಯಗಳಲ್ಲಿ ಒಂದು ಎಂದ ಅವರು, ಬಾಲಾಪರಾಧಿಗಳನ್ನು ವಯಸ್ಕ ಅಪರಾಧಿಗಳ ನಡೆಸಿಕೊಳ್ಳುವಂತಿಲ್ಲ, ಅಲ್ಲದೇ ಅವರನ್ನು ಜೈಲಿನಲ್ಲಿಡುವುದು ಸರಿಯಾದ ವಿಧಾನವಲ್ಲ; ಬದಲಾಗಿ ಅವರಿಗೆ ಪ್ರತ್ಯೇಕ ಸ್ಟೇ ಹೋಂಗಳಲ್ಲಿ ಉಳಿಸಬೇಕು ಎಂದರು.ಕಾರ್ಯಾಗಾರದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ನಾಗೇಶನ್ ಮಾತನಾಡಿ, ದಾರಿತಪ್ಪಿದ ಮಕ್ಕಳಿಗೆ ಶಿಕ್ಷೆ ನೀಡುವುದರಿಂದ ಉತ್ತಮ ಸಮಾಜ ನಿರ್ಮಾಣವಾಗುವುದಿಲ್ಲ; ಬದಲಾಗಿ ಮಕ್ಕಳ ಮನಸ್ಸಿನಲ್ಲಿ ಸೇಡು, ದ್ವೇಷ-ಅಸೂಯೆಯ ಭಾವನೆ ಹೆಚ್ಚುತ್ತದೆ. ಆದ್ದರಿಂದ ಅವರ ಪ್ರಚೋದನಾತ್ಮಕ ಕಾರಣಗಳ ಬಗ್ಗೆ ಹಾಗೂ ಅವರ ಮಿತ್ರರ ಒಡನಾಟಗಳನ್ನು ಗಮನಿಸಿ, ಸಕಾಲಿಕವಾಗಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.ಈ ಕಾಯ್ದೆಯ ಅನುಷ್ಠಾನದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದ ಅವರು, ಪೋಷಕರು ಕೂಡ ಮಕ್ಕಳನ್ನು ನೈತಿಕವಲ್ಲದ ಚಟುವಟಿಕೆಗಳಿಗೆ ಉತ್ತೇಜಿಸುತ್ತಿದ್ದಾರೆ. ಪೋಷಕರು ಇಂತಹ ಅಚಾತುರ್ಯಗಳಿಗೆ ಅವಕಾಶ ನೀಡುವ ಮೊದಲು ಒಮ್ಮೆ ಗಂಭೀರವಾಗಿ ಆಲೋಚಿಸುವುದು ಒಳಿತು ಎಂದು ಸಲಹೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಲಕ್ಷ್ಮೀಕಾಂತಮ್ಮ, ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಬಿ.ದಯಾಳು ಉಪಸ್ಥಿತರಿದ್ದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ರವಿ ಎಂ.ನಾಯ್ಕ ಉಪನ್ಯಾಸ ನೀಡಿದರು. ಶಕುಂತಲಾ ಪ್ರಾರ್ಥಿಸಿದರು. ಇನ್ಸ್‌ಪೆಕ್ಟರ್ ಚನ್ನಕೇಶವ ಸ್ವಾಗತಿಸಿದರು. ಹಿರಿಯ ಮಕ್ಕಳ ಕಲ್ಯಾಣಾಧಿಕಾರಿ ಓಂಕಾರನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.