ನಾಪೋಕ್ಲು: ಇಲ್ಲಿಂದ ಬೇತು ಮಾರ್ಗವಾಗಿ ಎರಡು ಕಿ.ಮೀ. ಕ್ರಮಿಸಿದರೆ ಸಿಗುವುದು ಮಕ್ಕಿಶಾಸ್ತಾವು ದೇವಸ್ಥಾನ. ಈ ನಿಶ್ಯಬ್ದ ತಾಣದಲ್ಲಿ ಸಾವಿರಾರು ನಾಯಿಗಳು!

ಇದೊಂದು ಸುಂದರ ಪರಿಸರ. ಭಕ್ತಿಯ ಅಲೆಗಳನ್ನು ಹೊಮ್ಮಿಸುವ ಸುಂದರ ದೇಗುಲವಿರುವುದು ಪ್ರಶಾಂತ ತಾಣದಲ್ಲಿ.
ದೇಗುಲ ಎಂದೊಡನೆ ಗುಡಿಗೋಪುರಗಳ ಕಲ್ಪನೆ ಮಾಡಿಕೊಳ್ಳಬೇಡಿ. ಮೆಟ್ಟಿಲುಗಳನ್ನೇರಿ ಎತ್ತರದ ಸಮತಟ್ಟು ಸ್ಥಳಕ್ಕೆ ಬಂದರೆ ಸುಮಾರು ಐದಡಿ ಎತ್ತರದ ವೃತ್ತಾಕಾರದ ಕಟ್ಟೆ ಕಾಣಸಿಗುತ್ತದೆ.

ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿಯೇ ಶಾಸ್ತಾವು ದೇವರು. ದೇವರಿಗೆ ಕೊಡೆ ಹಿಡಿದಂತೆ ತೋರುವ ಒಂದು ಹಲಸಿನ ಮರವಿದೆ. ಸುತ್ತಲೂ ಸಹಸ್ರಾರು ಹರಕೆಯ ನಾಯಿಗಳು ನಿಮ್ಮನ್ನು ಅಚ್ಚರಿಯಲ್ಲಿ ಮುಳುಗಿಸುತ್ತವೆ.
ಮಕ್ಕಿಶಾಸ್ತಾವು ನಿಸರ್ಗ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಅಲ್ಲಿನ ಪ್ರಮುಖ ಆಕರ್ಷಣೆ. ಅಸಂಖ್ಯ ಭಕ್ತರು ಸೇರಿ ಸಂಭ್ರಮಿಸುವ ಭಿನ್ನ ಆಚರಣೆಗಳ ಹಬ್ಬವು ಒಮ್ಮೆ ಮೇ ತಿಂಗಳಿನಲ್ಲಿ ಜರುಗಿದರೆ ಮತ್ತೊಮ್ಮೆ ಡಿಸೆಂಬರ್ನಲ್ಲಿ ನಡೆಯುತ್ತದೆ.

ಎತ್ತು ಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ಮೇಲೆರಿ ಮುಂತಾದ ಹಲವು ಆಚರಣೆಗಳೊಂದಿಗೆ ಶ್ರೀ ಶಾಸ್ತಾವು ಹಬ್ಬ ನಡೆಯುತ್ತದೆ.

ಡಿಸೆಂಬರ್ ತಿಂಗಳ ಹಬ್ಬದಲ್ಲಿ ನಾಯಿ ಹರಕೆ ವಿಶೇಷ. ಧನು ಸಂಕ್ರಮಣದ ದಿನ ನಾಯಿ ಹಾಕುವ ಕಾರ್ಯಕ್ರಮ ಜರುಗುತ್ತದೆ.

ಹಬ್ಬಕ್ಕಿಂತ ಒಂದು ತಿಂಗಳ ಮೊದಲು ವೃಶ್ಚಿಕ ಮಾಸದಲ್ಲಿ ಹರಕೆಯ ನಾಯಿಗಳನ್ನು ತಯಾರಿಸಲಾಗುತ್ತದೆ. ಹಲವಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ.

ಬೇತು ಗ್ರಾಮಕ್ಕೆ ಸಂಬಂಧಿಸಿದ 12 ಕುಳದವರು 12 ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಪ್ರತಿ ವರ್ಷ ಸಲ್ಲಿಸಲೇ ಬೇಕು ಎನ್ನುವುದು ಇಲ್ಲಿ ಬೆಳೆದು ಬಂದಿರುವ ನಂಬಿಕೆ.

ಉಳಿದಂತೆ ಗ್ರಾಮದ ಮಂದಿಯೂ ಹರಕೆ ಹೇಳಿಕೊಂಡು ನಾಯಿ ಒಪ್ಪಿಸುತ್ತಾರೆ. ಒಂದು ಜೊತೆ ನಾಯಿ ತಯಾರಿಸಲು ರೂ300 ನೀಡಬೇಕು. ಪ್ರತಿವರ್ಷ ಡಿಸೆಂಬರ್ ಹಬ್ಬದಲ್ಲಿ ಈ ಆಚರಣೆಯನ್ನು ವಿಶೇಷವಾಗಿ ನಡೆಸುತ್ತ ಬಂದಿರುವುದನ್ನು ಕಾಣಬಹುದು.

ಹಾಗಾಗಿ ದೇವಾಲಯದ ಸುತ್ತಲೂ ಹರಕೆ ರೂಪದಲ್ಲಿ ಸಲ್ಲಿಸಿದ ನಾಯಿಗಳ ಪ್ರತಿಕೃತಿ ಈ ತಾಣಕ್ಕೆ ವಿಶಿಷ್ಟ ಮೆರುಗು ನೀಡಿದೆ. ಈ ವರ್ಷ ಡಿ. 15 ರಂದು ಹಬ್ಬ ನಡೆಯಲಿದೆ.

ಇದು ನನ್ನ ವೃತ್ತಿ
‘30 ವರ್ಷಗಳಿಂದ ನಾಯಿ ತಯಾರಿಸುವುದು ನನ್ನ ವೃತ್ತಿ. ಸಮೀಪದ ಬಲಮುರಿ ಗ್ರಾಮದಿಂದ ಮಣ್ಣು ತರುತ್ತೇನೆ. ತಯಾರಿಸಿದ ಮೂರ್ತಿಗಳನ್ನು ನೆರಳಿನಲ್ಲಿ ಒಣಗಿಸಬೇಕು. ಶಾಸ್ತ್ರ ಪ್ರಕಾರ ಊರಿನ ಮಂದಿ 24 ನಾಯಿಗಳನ್ನು ಒಪ್ಪಿಸುತ್ತಾರೆ.
– ಡಿ.ಆರ್. ಶಂಕರ, ನಾಯಿ ತಯಾರಕ, ಕೊಳಕೇರಿ

ದೇಗುಲ ವತಿಯಿಂದ ಜಾಗ
‘ಹಲವು ವರ್ಷಗಳಿಂದ ನಾಯಿ ಹರಕೆ ಶಾಸ್ತ್ರೋಕ್ತವಾಗಿ ನಡೆದುಕೊಂಡು ಬಂದಿದೆ. ಹರಕೆಯ ನಾಯಿಗಳನ್ನು ತಯಾರಿಸಲು ದೇವಾಲಯದ ವತಿಯಿಂದ ವಿಶೇಷ ಸ್ಥಳ ನಿಗದಿಪಡಿಸಲಾಗಿದೆ‘
– ಕೊಂಡೀರ ಪೊನ್ನಣ್ಣ, ತಕ್ಕ ಮುಖ್ಯಸ್ಥರು, ಮಕ್ಕಿಶಾಸ್ತಾವು ದೇವಾಲಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.